ನಾಲ್ಕು ರಾಜ್ಯಗಳಲ್ಲಿ ನಾಲ್ಕು ದಿನ ನಕಲಿ ಗುರುತಿನ ಚೀಟಿ ಬಳಕೆ; ಕರ್ಣಿ ಸೇನಾ ಮುಖ್ಯಸ್ಥನ ಶೂಟರ್‌ಗಳು ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದದ್ದು ಹೇಗೆ?
ಜೈಪುರ: ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಸುಖ್‌ದೇವ್ ಸಿಂಗ್ ಗೊಗಮೇಡಿಯನ್ನು ಅವರ ನಿವಾಸದಲ್ಲೇ ಹತ್ಯೆಗೈದ ನಾಲ್ಕು ದಿನಗಳ ನಂತರ, ಅವರ ಹತ್ಯೆಯ ಆರೋಪಿಗಳಾಗಿದ್ದ ರೋಹಿತ್ ರಾಥೋರೆ ಹಾಗೂ ನಿತಿನ್ ಫೌಜಿಯನ್ನು ಶನಿವಾರ ಚಂಡೀಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರೊಂದಿಗೆ, ಉಧಮ್ ಸಿಂಗ್ ಎಂಬ ಮತ್ತೊಬ್ಬ ಸಹಚರನನ್ನೂ ಪೊಲೀಸರು ಬಂಧಿಸಿದ್ದು, ಆತ ಆರೋಪಿಗಳಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನದ ನೆರವು ಒದಗಿಸಿದ್ದ ಎಂದು ಹೇಳಲಾಗಿದೆ ಎಂದು indiatoday.in ವರದಿ ಮಾಡಿದೆ.
ಬಂಧನವನ್ನು ತಪ್ಪಿಸಿಕೊಳ್ಳಲು ನಾಲ್ಕು ದಿನಗಳಲ್ಲಿ ನಾಲ್ಕು ರಾಜ್ಯಗಳಿಗೆ ಪ್ರಯಾಣಿಸಿದ್ದ ರೋಹಿತ್ ರಾಥೋರೆ ಹಾಗೂ ನಿತಿನ್ ಫೌಜಿ, ಅಲ್ಲಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ನಕಲಿ ಗುರುತಿನ ಚೀಟಿಗಳನ್ನು ಬಳಸಿದ್ದಾರೆ. ಕೊನೆಗೆ ಚಂಡೀಗಢದ ಹೋಟೆಲೊಂದರಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.
ಡಿಸೆಂಬರ್ 5ರಂದು ಶೂಟರ್‌ಗಳು ಗೊಗಮೇಡಿಯನ್ನು ಅವರ ನಿವಾಸದಲ್ಲೇ ಹತ್ಯೆಗೈದ ಬೆನ್ನಿಗೇ ಪೊಲೀಸರು ಶೂಟರ್‌ಗಳ ಪತ್ತೆ ಕಾರ್ಯ ಪ್ರಾರಂಭಿಸಿದ್ದರು ಎಂದು ದಿಲ್ಲಿಯ ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಯಾದವ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಟ್ಯಾಕ್ಸಿ ಮೂಲಕ ಜೈಪುರದಿಂದ ದಿದ್ವಾನಾಗೆ ಪರಾರಿಯಾಗಿದ್ದ ರೋಹಿತ್ ರಾಥೋರೆ ಹಾಗೂ ನಿತಿನ್ ಫೌಜಿ, ಅಲ್ಲಿಂದ ಬಸ್ ಮೂಲಕ ದಿಲ್ಲಿಗೆ ಪ್ರಯಾಣಿಸಿದ್ದರು ಎಂದು ರಾಜಸ್ಥಾನ ಹೆಚ್ಚುವರಿ ಪೊಲೀಸರು ಮಹಾನಿರ್ದೇಶಕ ದಿನೇಶ್ ಎಂ.ಎನ್. ಅವರ ಮಾಹಿತಿಯನ್ನು ಉಲ್ಲೇಖಿಸಿ ಯಾದವ್ ಹೇಳಿದ್ದಾರೆ.
ಈ ಇಬ್ಬರು ಹರ್ಯಾಣದ ಧರುಹೇರಾ ಬಳಿ ಬಸ್ ಇಳಿದು, ಅಲ್ಲಿಂದ ಆಟೋರಿಕ್ಷಾ ಹತ್ತಿ ರೇವರಿ ರೈಲ್ವೆ ನಿಲ್ದಾಣ ತಲುಪಿದ್ದರು. ಅಲ್ಲಿಂದ ಅವರು ರೈಲಿನಲ್ಲಿ ಹಿಸಾರ್‌ಗೆ ಪ್ರಯಾಣಿಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಾದ ನಂತರ ಆ ಇಬ್ಬರು ಉಧಮ್ ಸಿಂಗ್ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದು, ಆತ ಅವರಿಗೆ ತಲೆ ಮರೆಸಿಕೊಳ್ಳಲು ನೆರವು ನೀಡಿದ್ದಾನೆ. ಉಧಮ್ ಸಿಂಗ್ ಹಾಗೂ ನಿತಿನ್ ಫೌಜಿ ನಾಲ್ಕು ವರ್ಷಗಳ ಹಿಂದೆ ಒಂದೇ ಕೇಂದ್ರದಲ್ಲಿ ಸೇನಾಪಡೆಯ ತರಬೇತಿ ವೇಳೆ ಪರಸ್ಪರ ಪರಿಚಿತರಾಗಿದ್ದರು.
ಉಧಮ್ ಸಿಂಗ್ ನೆರವಿನೊಂದಿಗೆ ಟ್ಯಾಕ್ಸಿಯೊಂದನ್ನು ಬಾಡಿಗೆ ಪಡೆದಿರುವ ಇಬ್ಬರು, ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿ ಅಲ್ಲಿ ಒಂದೆರಡು ದಿನ ತಂಗಿದ್ದಾರೆ. ನಂತರ ಅವರಿಬ್ಬರೂ ಡಿಸೆಂಬರ್ 9ರಂದು ಚಂಡೀಗಢಕ್ಕೆ ಮರಳಿದ್ದಾರೆ.
ಮೂವರೂ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ, ಚಂಡೀಗಢದ ಹೋಟೆಲ್ ಕಮಲ್ ಪ್ಯಾಲೇಸ್‌ನಲ್ಲಿ ಕ್ರಮವಾಗಿ ದೇವೇಂದ್ರ, ಜೈವೀರ್ ಹಾಗೂ ಸುಖಬೀರ್ ಹೆಸರಿನಲ್ಲಿ ಕೋಣೆಯೊಂದನ್ನು ಬಾಡಿಗೆ ಪಡೆದಿದ್ದಾರೆ.
ಮೂವರು ಸುಳಿವು ದೊರೆಯುತ್ತಿದ್ದಂತೆಯೇ ಚಂಡೀಗಢಕ್ಕೆ ಧಾವಿಸಿದ ದಿಲ್ಲಿ ಅಪರಾಧ ವಿಭಾಗದ ಪೊಲೀಸರು, ಶನಿವಾರ ಮೂವರನ್ನೂ ಬಂಧಿಸಿದ್ದಾರೆ.
ಉಧಮ್ ಸಿಂಗ್ ಹಾಗೂ ರೋಹಿತ್ ರಾಥೋರೆ ಅನ್ನು ದಿಲ್ಲಿ ಪೊಲೀಸರು ಕರೆದುಕೊಂಡು ಹೋಗಿದ್ದರೆ, ನಿತಿನ್ ಫೌಜಿಯನ್ನು ರಾಜಸ್ಥಾನದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ರವಿವಾರ ರೋಹಿತ್ ಹಾಗೂ ಉಧಮ್ ಅನ್ನೂ ರಾಜಸ್ಥಾನಕ್ಕೆ ಕರೆದೊಯ್ಯಲಾಗಿದೆ.
PTI ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಆ ಮೂವರೂ ಗೋವಾಗೆ ಪ್ರಯಾಣಿಸಿ, ಅಲ್ಲಿಂದ ದಕ್ಷಿಣ ಭಾರತವನ್ನು ಪ್ರವೇಶಿಸಲು ಯೋಜಿಸಿದ್ದರು ಎಂದು ಹೇಳಲಾಗಿದೆ.