ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ವಕ್ಫ್ ತಿದ್ದುಪಡಿ ಮಸೂದೆ

Update: 2024-08-08 18:06 GMT

Photo: Sansad TV via PTI

ಹೊಸದಿಲ್ಲಿ : ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಸರಕಾರವು ಗುರುವಾರ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದೆ. ಪ್ರತಿಪಕ್ಷಗಳ ತೀವ್ರ ಆಕ್ಷೇಪದ ಬಳಿಕ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಸಲ್ಲಿಸಲಾಗಿದೆ.

1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದು ಈ ಮಸೂದೆಯ ಉದ್ದೇಶವಾಗಿದೆ.

ನಿಬಂಧನೆಗೆ ಪ್ರತಿಪಕ್ಷಗಳ ತೀವ್ರ ಆಕ್ಷೇಪದ ಬಳಿಕ ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಉಲ್ಲೇಖಿಸುವುದಾಗಿ ತಿಳಿಸಿದರು. ಮುಸಲ್ಮಾನ್ ವಕ್ಫ್ (ರದ್ದು) ಮಸೂದೆ 2024ನ್ನೂ ರಿಜಿಜು ಮಂಡಿಸಿದರು. 1995ರಲ್ಲಿ ವಕ್ಫ್ ಕಾಯ್ದೆಯು ಜಾರಿಗೊಂಡ ಬಳಿಕ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿರುವ ಮುಸಲ್ಮಾನ್ ವಕ್ಫ್ ಕಾಯ್ದೆ, 1923ನ್ನು ರದ್ದುಗೊಳಿಸುವುದು ಅಗತ್ಯವಾಗಿದೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದರು.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಿದಾಗ ಪ್ರತಿಪಕ್ಷಗಳ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಮಸೂದೆಯು ‘‘ಸಂವಿಧಾನ ಮತ್ತು ಜನರ ಧಾರ್ಮಿಕ ಹಕ್ಕಿನ ಮೇಲೆ ನಡೆಸಲಾಗಿರುವ ನೇರ ದಾಳಿಯಾಗಿದೆ’’ ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಬಣ್ಣಿಸಿದರು. ‘‘ನಾವು ಹಿಂದೂಗಳು, ಆದರೆ, ಅದೇ ವೇಳೆ ನಾವು ಇತರರ ಧರ್ಮಗಳನ್ನು ಗೌರವಿಸುತ್ತೇವೆ. ಈ ಮಸೂದೆಯನ್ನು ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರತದ ಜನರು ನಿಮಗೆ ಒಂದು ಒಳ್ಳೆಯ ಪಾಠವನ್ನು ಕಲಿಸಿದ್ದಾರೆ. ಆದರೆ ಅದರಿಂದ ನೀವು ಪಾಠ ಕಲಿತಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ’’ ಎಂದು ವೇಣುಗೋಪಾಲ್‌ ಹೇಳಿದರು. ಇದಕ್ಕೂ ಮೊದಲು, ಈ ಮಸೂದೆ ಸಂಸತ್‌ನಲ್ಲಿ ಮಂಡನೆಯಾಗದಂತೆ ತಡೆಯಲು ವೇಣುಗೋಪಾಲ್ ಮತ್ತು ಕಾಂಗ್ರೆಸ್ ಸಂಸದ ಹಿಬಿ ಈಡನ್ ನೋಟಿಸ್ ನೀಡಿದ್ದರು.

ಈ ಮಸೂದೆಯು ‘ಅಸಾಂವಿಧಾನಿಕ’ವಾಗಿರುವುದರಿಂದ ಅದರ ಮಂಡನೆಯನ್ನು ವಿರೋಧಿಸುವುದಾಗಿ ತನ್ನ ನೋಟಿಸ್‌ನಲ್ಲಿ ಈಡನ್ ಹೇಳಿದ್ದಾರೆ. ಅದೂ ಅಲ್ಲದೆ, ಮಸೂದೆಯು ಸಂವಿಧಾನದ 300ಎಯಲ್ಲಿ ನೀಡಲಾಗಿರುವ ಆಸ್ತಿ ಹೊಂದುವ ಹಕ್ಕಿಗೆ ವಿರುದ್ಧವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಹಲವು ಕಾನೂನು ರಕ್ಷಣೆಗಳನ್ನು ನಿರಾಕರಿಸುವ ಈ ಮಸೂದೆಯು, ವ್ಯಕ್ತಿಗಳು ಮತ್ತು ಧಾರ್ಮಿಕ ಸಂಸ್ಥೆಗಳ ಆಸ್ತಿ ಹಕ್ಕುಗಳನ್ನು ನಿರಾಕರಿಸುವ ಸಾಧ್ಯತೆಯಿದೆ. ಸಂವಿಧಾನದ 25ನೇ ವಿಧಿಯಡಿಯಲ್ಲಿ ಬರುವ ಮೂಲಭೂತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಮಸೂದೆಯನ್ನು ಮಂಡಿಸಿರುವುದಕ್ಕಾಗಿ ಎಐಎಮ್‌ಐಎಮ್ ಮುಖ್ಯಸ್ಥ ಹಾಗೂ ಲೋಕಸಭಾ ಸಂಸದ ಅಸದುದ್ದೀನ್ ಉವೈಸಿ ಬಿಜೆಪಿಯ ವಿರುದ್ಧ ಕೆಂಡಕಾರಿದರು. ಈ ಮಸೂದೆಯು ಭಾರತದ ‘ಮುಸ್ಲಿಮರ ಶತ್ರು’ವಾಗಿದೆ ಎಂದು ಬಣ್ಣಿಸಿದರು.‘‘ನೀವು (ಬಿಜೆಪಿ) ದೇಶವನ್ನು ವಿಭಜಿಸುತ್ತಿದ್ದೀರಿ. ನೀವು ಮುಸ್ಲಿಮರ ಶತ್ರುಗಳು’’ ಎಂದು ಉವೈಸಿ ಹೇಳಿದರು.

ಬಿಜೆಪಿಯ ಸ್ಥಾಪಿತ ಹಿತಾಸಕ್ತಿಗಳಿಗೆ ಪೂರಕವಾಗಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು. ‘‘ವಕ್ಫ್ (ತಿದ್ದುಪಡಿ) ಮಸೂದೆಯು ಬಿಜೆಪಿ ಸದಸ್ಯರ ಹಿತಾಸಕ್ತಿಗಳಿಗೆ ಅನುಗುಣವಾಗಿ ಜಮೀನು ಮಾರಾಟ ಮಾಡಲು ಒಂದು ನೆಪವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಮಸೂದೆಯು ಸಂವಿಧಾನದ ನೇರ ಉಲ್ಲಂಘನೆಯಾಗಿದೆ ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದರು. ‘‘ಮಸೂದೆಯು ಅಲ್ಪಸಂಖ್ಯಾತರು ತಮ್ಮ ಸಂಸ್ಥೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಸಂವಿಧಾನದ 30ನೇ ವಿಧಿಯ ನೇರ ಉಲ್ಲಂಘನೆಯಾಗಿದೆ. ಅದು ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸಿದೆ’’ ಎಂದು ಅವರು ಆರೋಪಿಸಿದರು.

► ಜನರನ್ನು ತಪ್ಪುದಾರಿಗೆಳೆಯುತ್ತಿರುವ ಪ್ರತಿಪಕ್ಷಗಳು: ಕಿರಣ್ ರಿಜಿಜು

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದು ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

‘‘ಈ ಮಸೂದೆಯು ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ಯಾವುದೇ ವ್ಯಕ್ತಿಯ ಹಕ್ಕುಗಳನ್ನು ಕಸಿದುಕೊಳ್ಳುವುದು ಬಿಡಿ, ಹಕ್ಕುಗಳನ್ನೇ ಹೊಂದಿರದವರಿಗೆ ಹಕ್ಕುಗಳನ್ನು ನೀಡಲು ಈ ಮಸೂದೆಯನ್ನು ತರಲಾಗಿದೆ’’ ಎಂದು ಅವರು ಹೇಳಿದರು.

► ವಕ್ಫ್ ತಿದ್ದುಪಡಿ ಕಾಯ್ದೆಯ ಮುಖ್ಯಾಂಶಗಳು

ವಕ್ಫ್ ಮಂಡಳಿಗಳ ಅಧಿಕಾರಗಳನ್ನು ನಿಯಂತ್ರಿಸುವ ಉದ್ದೇಶವನ್ನು ವಕ್ಫ್ ತಿದ್ದುಪಡಿ ಮಸೂದೆ ಹೊಂದಿದೆ. ತಿದ್ದುಪಡಿ ಮಸೂದೆಯ ಪ್ರಕಾರ, ಯಾವುದೇ ಜಮೀನನ್ನು ತನ್ನ ಸೊತ್ತು ಎಂಬುದಾಗಿ ವಕ್ಫ್ ಮಂಡಳಿಗಳು ಘೋಷಿಸುವ ಮುನ್ನ ಸರಕಾರಿ ಪ್ರಾಧಿಕಾರವೊಂದು ಅದನ್ನು ಪರಿಶೀಲನೆ ನಡೆಸುವುದು ಕಡ್ಡಾಯವಾಗಿರುತ್ತದೆ.

ಹಾಲಿ ಕಾನೂನಿನ 40ನೇ ವಿಧಿಯನ್ನು ತಿದ್ದುಪಡಿ ಮಸೂದೆಯು ತೆಗೆದುಹಾಕಿದೆ. ಈ ವಿಧಿಯು, ಜಮೀನೊಂದು ವಕ್ಫ್‌ನ ಸೊತ್ತೇ ಎನ್ನುವುದನ್ನು ನಿರ್ಧರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗಳಿಗೆ ನೀಡುತ್ತದೆ. ತಿದ್ದುಪಡಿ ಮಸೂದೆಯು ಮುಸ್ಲಿಮೇತರರು ಮತ್ತು ಮುಸ್ಲಿಮ್ ಮಹಿಳೆಯರಿಗೂ ವಕ್ಫ್ ಮಂಡಳಿಯಲ್ಲಿ ಪ್ರಾತಿನಿಧ್ಯ ಕಲ್ಪಿಸುತ್ತದೆ. ಅದೂ ಅಲ್ಲದೆ, ಬೊಹ್ರಾ ಮತ್ತು ಆಘಾಖಾನ್ ಸಮುದಾಯಗಳಿಗೆ ಪ್ರತ್ಯೇಕ ಔಕಾಫ್ ಮಂಡಳಿಯೊಂದನ್ನು ರಚಿಸುವ ಪ್ರಸ್ತಾವವನ್ನು ತಿದ್ದುಪಡಿ ಮಸೂದೆ ಹೊಂದಿದೆ. ವಕ್ಫ್ ಮಂಡಳಿಗಳಲ್ಲಿ ಶಿಯಾಗಳು, ಸುನ್ನಿಗಳು, ಬೊಹಾರಗಳು, ಆಘಾಖಾನ್‌ಗಳು ಮತ್ತು ಮುಸ್ಲಿಮ್ ಸಮುದಾಯಗಳಲ್ಲಿರುವ ಇತರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಲೂ ನೂತನ ಮಸೂದೆ ಮುಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News