ಹೆಚ್ಚುತ್ತಿರುವ ಅಸಮಾನತೆ ಏಕೆ ಚುನಾವಣಾ ವಿಷಯವಾಗುತ್ತಿಲ್ಲ?

Update: 2024-04-12 17:54 GMT

ಸಾಂದರ್ಭಿಕ ಚಿತ್ರ


ಹೊಸದಿಲ್ಲಿ : ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಅಗಾಧ ಅಂತರವಿದೆ. ಕೋಟ್ಯಂತರ ಜನರು ಈಗಲೂ ಬಡತನದಲ್ಲಿ ನರಳುತ್ತಿದ್ದಾರೆ ಮತ್ತು 80 ಕೋಟಿ ಜನರು ತಮ್ಮ ತುತ್ತಿನ ಚೀಲಗಳನ್ನು ತುಂಬಿಕೊಳ್ಳಲು ಸರಕಾರದ ಉಚಿತ ಆಹಾರ ಧಾನ್ಯಗಳನ್ನೇ ನಂಬಿಕೊಂಡಿದ್ದಾರೆ, ಆದರೆ ಶ್ರೀಮಂತರ ಸಂಪತ್ತು ನಾಗಾಲೋಟದಲ್ಲಿ ಹೆಚ್ಚುತ್ತಿದೆ.

2022ರಲ್ಲಿ ಭಾರತದಲ್ಲಿ 30 ಮಿ.ಡಾ. ಅಥವಾ ಅದಕ್ಕೂ ಹೆಚ್ಚಿನ ನಿವ್ವಳ ಸಂಪತ್ತು ಹೊಂದಿದ್ದ 12,495 ವ್ಯಕ್ತಿಗಳಿದ್ದರು. 2023ರಲ್ಲಿ ಈ ಸಂಖ್ಯೆ 13,263ಕ್ಕೇರಿತ್ತು. 2028ರ ವೇಳೆಗೆ ಈ ಸಂಖ್ಯೆ 19,908ನ್ನು ತಲುಪುವ ನಿರೀಕ್ಷೆಯಿದೆ(2023ಕ್ಕೆ ಹೋಲಿಸಿದರೆ ಶೇ.50ರಷ್ಟು ಹೆಚ್ಚಳ). ಇದು ಜಾಗತಿಕ ಸರಾಸರಿ ಶೇ.28.1ಕ್ಕಿಂತ ಹೆಚ್ಚು.

ಸ್ಪಷ್ಟವಾಗಿ ಭಾರತದ ಕುಬೇರರು ಸಂಭ್ರಮಿಸಲು ಬಹಳಷ್ಟನ್ನು ಹೊಂದಿದ್ದಾರೆ. ಗಮನಾರ್ಹವಾಗಿ, ಪ್ಯಾರಿಸ್ ಮೂಲದ ವರ್ಲ್ಡ್ ಇನ್‌ಈಕ್ವಾಲಿಟಿ ಲ್ಯಾಬ್(ಡಬ್ಲ್ಯುಐಎಲ್)ಗೆ ಸಂಬಂಧಿಸಿದ ಸಂಶೋಧಕರು ತಮ್ಮ ಅಧ್ಯಯನ ಪ್ರಬಂಧದಲ್ಲಿ ಭಾರತದಲ್ಲಿ 2014-15 ಮತ್ತು 2022-23ರ ನಡುವೆ ಅಸಮಾನತೆಯು ಗಗನಕ್ಕೇರಿದೆ ಎನ್ನುವುದನ್ನು ಸೂಚಿಸಿದ್ದಾರೆ. 2022-23ರ ವೇಳೆಗೆ ದೇಶದ ಅಗ್ರ ಶೇ.1ರಷ್ಟು ಜನಸಂಖ್ಯೆ ದೇಶದ ಆದಾಯದ ಶೇ.22.6 ಮತ್ತು ಸಂಪತ್ತಿನ ಶೇ.40.1ರಷ್ಟು ಪಾಲನ್ನು ಹೊಂದಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಭಾರತದ ಅಗ್ರ ಶೇ.1ರಷ್ಟು ಜನಸಂಖ್ಯೆಯ ಆದಾಯವು ವಿಶ್ವದಲ್ಲೇ ಅದೇ ವರ್ಗದ ಅತ್ಯಂತ ಅಧಿಕ ಆದಾಯಗಳಲ್ಲಿ ಒಂದಾಗಿದೆ. ಅದು ದಕ್ಷಿಣ ಆಫ್ರಿಕಾ, ಬ್ರಝಿಲ್ ಮತ್ತು ಅಮೆರಿಕವನ್ನೂ ಹಿಂದಿಕ್ಕಿದೆ.

ಡಬ್ಲ್ಯೂಐಎಲ್‌ನೊಂದಿಗೆ ಗುರುತಿಸಿಕೊಂಡಿರುವ ಅರ್ಥಶಾಸ್ತ್ರಜ್ಞರಾದ ನಿತಿನ್ ಕುಮಾರ್ ಭಾರ್ತಿ,ಲುಕಾಸ್ ಚಾನ್ಸೆಲ್,ಥಾಮಸ್ ಪಿಕೆಟಿ ಮತ್ತು ಅನ್ಮೋಲ್ ಸೋಮಾಂಚಿ ಅವರು ಸಿದ್ಧಪಡಿಸಿರುವ ‘ಭಾರತದಲ್ಲಿ ಆದಾಯ ಮತ್ತು ಸಂಪತ್ತು ಅಸಮಾನತೆ, 2022-23 : ಬಿಲಿಯನೇರ್ ರಾಜ್‌ನ ಉದಯ ’ಶೀರ್ಷಿಕೆಯ ಪ್ರಬಂಧವು ದೇಶದಲ್ಲಿ ಆದಾಯ ಅಸಮಾನತೆಯನ್ನು ಬೆಟ್ಟು ಮಾಡಿದೆ. ಅಗ್ರ ಶೇ.1ರಷ್ಟು ಜನರು ಸರಾಸರಿ 5.3 ಮಿ.ರೂ.ಗಳನ್ನು ಗಳಿಸುತ್ತಿದ್ದಾರೆ ಮತ್ತು ಇದು ಸರಾಸರಿ ಭಾರತೀಯರ ಆದಾಯ (0.23 ಮಿ.ರೂ.)ಕ್ಕಿಂತ 23 ಪಟ್ಟು ಅಧಿಕವಾಗಿದೆ. ಇದೇ ವೇಳೆ ಶೇ.50ರಷ್ಟು ತಳವರ್ಗದ ಮತ್ತು ಶೇ.40ರಷ್ಟು ಮಧ್ಯಮ ವರ್ಗದ ಜನಸಂಖ್ಯೆಯ ಸರಾಸರಿ ಆದಾಯವು ಅನುಕ್ರಮವಾಗಿ 71,000 ರೂ.(ರಾಷ್ಟ್ರೀಯ ಸರಾಸರಿಯ 0.3 ಪಟ್ಟು) ಮತ್ತು 1,65,000 ರೂ.(ರಾಷ್ಟ್ರೀಯ ಸರಾಸರಿಯ 0.7 ಪಟ್ಟು)ಗಳಷ್ಟಿದೆ. 92 ಕೋಟಿ ಭಾರತೀಯ ವಯಸ್ಕರ ಪೈಕಿ ಅತ್ಯಂತ ಮೇಲ್ಭಾಗದಲ್ಲಿರುವ ಅಂದಾಜು 10,000 ಕುಬೇರರು ಸರಾಸರಿ 480 ಮಿಲಿಯನ್ ಡಾಲರ್ ಆದಾಯವನ್ನು ಗಳಿಸುತ್ತಿದ್ದು, ಇದು ಸರಾಸರಿ ಭಾರತೀಯ ಆದಾಯದ 2,069 ಪಟ್ಟು ಹೆಚ್ಚಿದೆ ಎಂದು ಪ್ರಬಂಧವು ವಿವರಿಸಿದೆ.

ಭಾರತದಲ್ಲಿ ಅಸಮಾನತೆ ಒಂದು ಸುದ್ದಿಯೇ ಅಲ್ಲ. ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ ಅಸಮಾನತೆಯು ಉಲ್ಬಣಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. ಪ್ರಮುಖ ಭಾರತೀಯ ಗಾರ್ಮೆಂಟ್ ಕಂಪನಿಯ ಅತ್ಯುನ್ನತ ಕಾರ್ಯ ನಿರ್ವಾಹಕ ಅಧಿಕಾರಿಯ ಒಂದು ವರ್ಷದ ವೇತನದ ಮೊತ್ತವನ್ನು ಗಳಿಸಲು ಗ್ರಾಮೀಣ ಭಾರತದಲ್ಲಿನ ಕನಿಷ್ಠ ದಿನಗೂಲಿ ಕಾರ್ಮಿಕ 941 ವರ್ಷಗಳ ಕಾಲ ದುಡಿಯಬೇಕಾಗುತ್ತದೆ ದೇಶದ ಪ್ರಮುಖ ಎನ್‌ಜಿಒ ಆಕ್ಸ್‌ಫಾಮ್ ಹೇಳಿದೆ.

ಭಾರತದ ಏಳಿಗೆಯ ನಿರೂಪಣೆಯು ಎಲ್ಲರಿಗೂ ಅನ್ವಯವಾಗುವುದಿಲ್ಲವಾದರೂ ಅಷ್ಟೊಂದು ಭಾರತೀಯರು ಅದನ್ನೇಕೆ ಒಪ್ಪಿಕೊಳ್ಳುತ್ತಿದ್ದಾರೆ? ವಿಶ್ವಬ್ಯಾಂಕ್ ಪ್ರಕಾರ,ವಾಸ್ತವದಲ್ಲಿ ಸರಾಸರಿ ವಯಸ್ಸು 28 ವರ್ಷಗಳಾಗಿರುವ ಭಾರತದಲ್ಲಿ ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸಬಲ್ಲ ತಯಾರಿಕೆ ಕ್ಷೇತ್ರದ ಪಾಲು ಒಟ್ಟು ಜಿಡಿಪಿಯ ಶೇ.13ಕ್ಕೆ ಕುಸಿದಿದೆ, ಅದೇ ನೆರೆಯ ಚೀನಾದಲ್ಲಿ ಇದು ಶೇ.28ರಷ್ಟಿದೆ. ಶತಕೋಟ್ಯಾಧಿಪತಿಗಳಿಗೆ ಅಚ್ಛೇ ದಿನ್‌ಗಳು ಬಂದಿವೆಯಾದರೂ ವಿಶ್ವ ಅಭಿವೃದ್ಧಿ ಕಾರ್ಯಕ್ರಮದ ಪ್ರಕಾರ, ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ)ದಲ್ಲಿ ಭಾರತವು 193 ದೇಶಗಳ ಪೈಕಿ 134ನೇ ಶ್ರೇಯಾಂಕವನ್ನು ಹೊಂದಿದೆ. ಕಳೆದ ದಶಕದಲ್ಲಿ ಮತ್ತು ಅದಕ್ಕೂ ಹಿಂದಿನ ಅವಧಿಯಲ್ಲಿ ಹಲವಾರು ಸರಕಾರಿ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಈ ಸ್ಥಿತಿಯಿದೆ. ಬಾಂಗ್ಲಾದೇಶ(129),ಭೂತಾನ(125) ಮತ್ತು ಶ್ರೀಲಂಕಾ(78)ದಂತಹ ಭಾರತದ ನೆರೆಯ ರಾಷ್ಟ್ರಗಳು ಉತ್ತಮ ಶ್ರೇಯಾಂಕಗಳನ್ನು ಹೊಂದಿವೆ.

ಅಸಮಾನತೆ ಕುರಿತು ಬೆಚ್ಚಿ ಬೀಳಿಸುವ ದತ್ತಾಂಶಗಳು ತಳಮಟ್ಟದಲ್ಲಿಯ ಸಂಕಷ್ಟವನ್ನು ಸೂಚಿಸುತ್ತಿವೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ಸನ್ನಿಹಿತವಾಗಿದ್ದು,ದೇಶದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಹೆಚ್ಚುತ್ತಿರುವ ಅಸಮಾನತೆಯು ಪ್ರಬಲ ರಾಜಕೀಯ ವಿಷಯವಾಗಿಲ್ಲ.

ಅನೇಕ ಭಾರತೀಯರು ಅಂತಿಮವಾಗಿ ತಮ್ಮ ಸ್ಥಿತಿಯೂ ಉತ್ತಮಗೊಳ್ಳಬಹುದು ಎಂಬ ಭರವಸೆಯಲ್ಲಿ ಬೃಹತ್ ಅಸಮಾನತೆಯನ್ನು ಸಹಿಸಿಕೊಳ್ಳುತ್ತಿದ್ದಾರೆ. ಭಾರತವು ಸಾರ್ವತ್ರಿಕ ಚುನಾವಣೆಗಳತ್ತ ಸಾಗುತ್ತಿರುವಾಗ ನ್ಯಾಯಸಮ್ಮತ ಪ್ರಶ್ನೆಯು ಆಳವಾದ ಅಸಮಾನತೆಯ ದೇಶದಲ್ಲಿ ಕಡಿಮೆ ಸಂಬಳ ಮತ್ತು ಅನೌಪಚಾರಿಕ ಕೆಲಸದ ಪರಿಧಿಯಿಂದ ಹೊರಬರಲಾಗದೆ ಫುಟ್‌ಪಾತ್‌ಗಳಿಂದ ಗಗನಚುಂಬಿ ಐಷಾರಾಮಿ ಕಟ್ಟಡಗಳ ಪೆಂಟ್ ಹೌಸ್‌ಗಳನ್ನು ದಿಟ್ಟಿಸುತ್ತಿರುವವರ ಭವಿಷ್ಯದ ಕುರಿತಾಗಿದೆ. ನಾವು ಚುನಾವಣಾ ಭಾಷಣಗಳಿಂದ ಅವರನ್ನು ಅಳಿಸಬಾರದು. ಹೆಚ್ಚುತ್ತಿರುವ ಅಸಮಾನತೆಯು ಪ್ರಮುಖ ಚುನಾವಣಾ ವಿಷಯವಾಗುವ ಅಗತ್ಯವಿದೆ.

 ✍ ಪತ್ರಲೇಖಾ ಚಟರ್ಜಿ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಪತ್ರಲೇಖಾ ಚಟರ್ಜಿ

contributor

Similar News