ಪ್ರತಿಪಕ್ಷಗಳಲ್ಲಿ ಮೋದಿಗಿಂತ ಹೆಚ್ಚು ಅನುಭವಿಗಳಿದ್ದಾರೆ: ತೇಜಸ್ವಿ ಯಾದವ್

Update: 2023-06-22 13:34 GMT

Photo- PTI

ಪಾಟ್ನಾ: ವಿರೋಧ ಪಕ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಗಿಂತ ಹೆಚ್ಚು ಅನುಭವ ಹೊಂದಿರುವ ನಾಯಕರಿದ್ದು, ಅವರೆಲ್ಲ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರು ಜೂನ್ 23ರಂದು ನಡೆಯಲಿರುವ ಪ್ರಮುಖ ವಿರೋಧ ಪಕ್ಷಗಳ ಮಹಾಸಭೆಗೂ ಮುನ್ನ ಅಭಿಪ್ರಾಯ ಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೇಲೆ ಕಣ್ಣು ನೆಟ್ಟಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಹಾಮೈತ್ರಿ ಸ್ಥಾಪಿಸುವ ತಮ್ಮ ನಿರಂತರ ಪ್ರಯತ್ನದ ಭಾಗವಾಗಿ ಪ್ರಮುಖ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ಆಯೋಜಿಸಿದ್ದಾರೆ.

ಈ ಕುರಿತು ANI ಸುದ್ದಿ ಸಂಸ್ಥೆಗೆ ಗುರುವಾರ ಪ್ರತಿಕ್ರಿಯಿಸಿರುವ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, "ಪ್ರಧಾನಿ ನರೇಂದ್ರ ಮೋದಿಗಿಂತ ಹೆಚ್ಚು ಅನುಭವ ಹೊಂದಿರುವ ನಾಯಕರು ವಿರೋಧ ಪಕ್ಷಗಳಲ್ಲಿದ್ದಾರೆ ಎಂಬ ಸಂಗತಿಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಬುಧವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ತೇಜಸ್ವಿ ಯಾದವ್, ಮುಂದಿನ ವರ್ಷದ ಲೋಕಸಭಾ ಚುನಾವಣೆಯನ್ನು ಜನರ ಸಮಸ್ಯೆಗಳನ್ನು ಆಧರಿಸಿ ಎದುರಿಸಲಾಗುತ್ತದೆಯೇ ಹೊರತು ಮೋದಿ ಹೆಸರಿನ ಮೇಲಲ್ಲ" ಎಂದು ಹೇಳಿದ್ದರು.

"ಶುಕ್ರವಾರ ನಡೆಯಲಿರುವ ಸಭೆಯು ಮುಂದಿನ ದಿನಗಳಲ್ಲಿ ಅಧಿಕಾರಾರೂಢರನ್ನು ಬದಲಿಸುವ ಧ್ವನಿಯನ್ನು ನಿರ್ಧರಿಸಲಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಜನರ ಸಮಸ್ಯೆಗಳು ಮುನ್ನೆಲೆಗೆ ಬರಬೇಕಿರುವುದರಿಂದ ಬದಲಾವಣೆ ಈ ಹೊತ್ತಿನ ಅಗತ್ಯ. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳ ಮೇಲೆ ಎದುರಿಸಬೇಕಿದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಇದು ಮಹತ್ವದ ನಡೆಯಾಗಿದ್ದು, ನಾನು ಹಾಗೂ ನಿತೀಶ್ ಕುಮಾರ್ ಒಟ್ಟಾಗಿರುವುದರಿಂದ ಎಷ್ಟು ಸಾಧ್ಯವೊ ಅಷ್ಟು ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದೇವೆ" ಎಂದೂ ಹೇಳಿದ್ದಾರೆ.

ಈ ಸಭೆಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ತಳಮಟ್ಟದ ವೇದಿಕೆ ನಿರ್ಮಿಸುವ ಗುರಿ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News