ಟ್ವಿಟರ್ ಖರೀದಿಸಿದ ನಂತರ ಪ್ರಥಮ ಬಾರಿಗೆ ಎಲಾನ್ ಮಸ್ಕ್‌ರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ

Update: 2023-06-20 13:13 GMT

ಹೊಸದಿಲ್ಲಿ: ಇಂದಿನಿಂದ ಪ್ರಾರಂಭವಾಗಲಿರುವ ತಮ್ಮ ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟೆಸ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಟ್ವಿಟರ್ ಮಾಲಕ ಎಲಾನ್ ಮಸ್ಕ್ (Elon Musk) ಅವರನ್ನು ಭೇಟಿಯಾಗಲಿದ್ದಾರೆ ಎಂದು ndtv.com ವರದಿ ಮಾಡಿದೆ.

ಇದಕ್ಕೂ ಮುನ್ನ 2015ರಲ್ಲಿ ಕ್ಯಾಲಿಫೋರ್ನಿಯಾದಲ್ಲಿನ ಟೆಸ್ಲಾ ಕಾರ್ಖಾನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲಾನ್ ಮಸ್ಕ್‌ರನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಎಲಾನ್ ಮಸ್ಕ್ ಟ್ವಿಟರ್ ಮಾಲಕರಾಗಿರಲಿಲ್ಲ.

ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಕಾರ್ಖಾನೆಯನ್ನು ಸ್ಥಾಪಿಸಲು ಸ್ಥಳ ಹುಡುಕಾಟ ನಡೆಸುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲಾನ್ ಮಸ್ಕ್ ಅವರ ಭೇಟಿ ನಡೆಯುತ್ತಿದೆ.

'ದಿ ವಾಲ್ ಸ್ಟ್ರೀಟ್ ಜರ್ನಲ್' ಪತ್ರಿಕೆಯು ನಡೆಸಿರುವ ಸಂದರ್ಶನದಲ್ಲಿ 'ನೀವೇನಾದರೂ ಭಾರತದ ಮಾರುಕಟ್ಟೆಯ ಬಗ್ಗೆ ಆಸಕ್ತಿ ಹೊಂದಿದ್ದೀರಾ?' ಎಂದು ಕೇಳಲಾಗಿರುವ ಪ್ರಶ್ನೆಗೆ 'ಖಂಡಿತ' ಎಂದು ಎಲಾನ್ ಮಸ್ಕ್ ಉತ್ತರಿಸಿದ್ದಾರೆ. ಅಲ್ಲದೆ ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ಟೆಸ್ಲಾ ಕಾರ್ಖಾನೆಯನ್ನು ಸ್ಥಾಪಿಸಲಿರುವ ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದೂ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇಂದು ನ್ಯೂಯಾರ್ಕ್‌ಗೆ ಬಂದಿಳಿದ ನಂತರ ವಿವಿಧ ಕ್ಷೇತ್ರಗಳ ಇಪ್ಪತ್ತಕ್ಕೂ ಹೆಚ್ಚು ಬುದ್ಧಿಜೀವಿ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ನಾಯಕರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿಗಳು, ಆರ್ಥಿಕ ತಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರು ಸೇರಿದ್ದಾರೆ.

ಈ ನಾಯಕರೊಂದಿಗೆ ಪ್ರಧಾನಿ ನಡೆಸಲಿರುವ ಸಮಾಲೋಚನೆಯು ಅಮೆರಿಕಾದ ಅಭಿವೃದ್ಧಿಯನ್ನು ಅರ್ಥ ಮಾಡಿಕೊಂಡು, ಅದರೊಂದಿಗೆ ಸಾಧ್ಯವಿರುವ ಸಹಭಾಗಿತ್ವವನ್ನು ಶೋಧಿಸುವ ಗುರಿ ಹೊಂದಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಎಲಾನ್ ಮಸ್ಕ್‌ರೊಂದಿಗೆ ಲೇಖಕ ಹಾಗೂ ಬಾಹ್ಯಾಕಾಶ ಭೌತವಿಜ್ಞಾನಿ ನೀಲ್ ಡಿಗ್ರಾಸ್ ಟೈಸನ್, ಅರ್ಥಶಾಸ್ತ್ರಜ್ಞ ಪೌಲ್ ರೋಮರ್, ಸಂಖ್ಯಾಶಾಸ್ತ್ರಜ್ಞ ನಿಕೊಲಸ್ ನಾಸಿಮ್ ತಲೆಬ್ ಹಾಗೂ ಹೂಡಿಕೆದಾರ ರೇ ಡಾಲಿಯೊ ಅವರನ್ನೂ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ತನ್ನ ನಿಕಟ ಮಿತ್ರರಾಷ್ಟ್ರಗಳಿಗೆಂದೇ ಅಮೆರಿಕಾ ಮೀಸಲಿಟ್ಟಿರುವ ಸರ್ಕಾರಿ ಪ್ರಾಯೋಜಿತ ಗೌರವಾರ್ಥ ಭೇಟಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಮೆರಿಕಾಗೆ ಪ್ರಯಾಣ ಬೆಳೆಸಿದರು. ಈ ಪ್ರವಾಸದ ಸಂದರ್ಭದಲ್ಲಿ ಅಮೆರಿಕಾದ ಜಂಟಿ ಅಧಿವೇಶ ಉದ್ದೇಶಿಸಿ ಭಾಷಣ, ವ್ಯಾಪಾರಿ ನಾಯಕರು ಹಾಗೂ ಅನಿವಾಸಿ ಭಾರತೀಯರೊಂದಿಗೆ ಸಭೆ ಹಾಗೂ ಶ್ವೇತಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಸರ್ಕಾರಿ ಪ್ರಾಯೋಜಿತ ಔತಣ ಕೂಟದಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪಾಲ್ಗೊಳ್ಳುವುದು ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News