ಉ.ಕನ್ನಡ: ಅಂಗಾಂಗ ದಾನಕ್ಕೆ 483 ಜನರು ನೋಂದಣಿ; ಮಹಿಳೆಯರ ಸಂಖ್ಯೆಯೇ ಅಧಿಕ

Update: 2024-08-19 07:31 GMT

ಕಾರವಾರ: ಪ್ರತೀ ವರ್ಷ ಅನೇಕ ಜನರು ಅಂಗಾಂಗ ವೈಫಲ್ಯದಿಂದ ಮರಣ ಹೊಂದುತ್ತಿದ್ದು, ಭಾರತದಾದ್ಯಂತ ಪ್ರತೀ ವರ್ಷ ಅಂದಾಜು 5 ಲಕ್ಷ ಅಂಗಾಂಗಗಳ ಅಗತ್ಯವಿದೆ. ಆದರೆ ಪ್ರಸಕ್ತ ಕೇವಲ 2-3 ಪ್ರತಿಶತದಷ್ಟು ಬೇಡಿಕೆಯನ್ನು ಮಾತ್ರ ಪೂರೈಸಲಾಗುತ್ತಿದೆ. ಮೆದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಅಂಗಾಂಗ ದಾನ ಮಾಡಬಹುದಾಗಿದ್ದು, ಇದು ಕಾನೂನು ಬದ್ಧವಾಗಿದೆ. ಯಾವುದೇ ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಅಂಗಾಂಗ ದಾನ ಮಾಡಬಹುದಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯಂತೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾಂಗ ದಾನ ಮಾಡಲು ಇದುವರೆಗೆ 483 ಜನ ನೋಂದಾಯಿಸಿಕೊಂಡಿದ್ದು, ಇದರಲ್ಲಿ 18 ವರ್ಷದಿಂದ 60 ವರ್ಷ ಮೇಲ್ಪಟ್ಟ ವಯೋಮಿತಿಯವರೂ ಇದ್ದು, ನೋಂದಣಿ ಮಾಡಿದವರಲ್ಲಿ ಮಹಿಳೆಯರ ಸಂಖ್ಯೆಯೇ ಅತ್ಯಧಿಕವಾಗಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ 283 ಸಂಖ್ಯೆಯ ಹೃದಯ, 209 ಕರುಳು, 278 ಕಿಡ್ನಿ, 243 ಲಿವರ್, 221 ಶ್ವಾಸಕೋಶ, 211 ಮೇದೋಜಿರಕ ಗ್ರಂಥಿಗಳನ್ನು ದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ಅಂಗಗಳ ಅಂಗಾಂಗಗಳಾದ ರಕ್ತನಾಳಗಳು 179, ಮೂಳೆ 167, ಕಾರ್ಟಿಲೇಜ್ 167, ಎರಡು ಕಣ್ಣುಗಳ ಕಾರ್ನಿಯಾ 433, ಹೃದಯದ ಕವಾಟಗಳು 188 ಮತ್ತು 177 ಸಂಖ್ಯೆಯ ಚರ್ಮವನ್ನೂ ದಾನವಾಗಿ ನೀಡಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.

ಮೂತ್ರಪಿಂಡ ಮತ್ತು ಯಕೃತ್ತನ್ನು ಜೀವಂತ ದಾನಿಗಳ ಮೂಲಕ ಮತ್ತೊಬ್ಬರಿಗೆ ಕಸಿ ಮಾಡಬಹುದಾಗಿದ್ದು, ಹೃದಯ, ಶ್ವಾಸಕೋಶ ಮತ್ತು ಮೇದೋಜಿರಕ ಗ್ರಂಥಿಗಳನ್ನು ಮೆದುಳು ನಿಷ್ಕ್ರಿಯ ಹೊಂದಿದ ದಾನಿಗಳ ಮೂಲಕ ಮಾತ್ರ ಪಡೆಯಬಹುದಾಗಿದೆ.

ಜೀವಂತ ದಾನಿಯು, ತನ್ನ ಹತ್ತಿರದ ಸಂಬಂಧಿ ಅಥವಾ ದೂರದ ಸಂಬಂಧಿ, ಸಂಗಾತಿ, ಮಗ-ಮಗಳು, ಸಹೋದರ-ಸಹೋದರಿ, ಪೋಷಕರು, ಅಜ್ಜಿ-ತಾತ ಮತ್ತು ಮೊಮ್ಮಕ್ಕಳು ಮತ್ತು ನಿಕಟ ಸ್ನೇಹಿತರಿಗೆ ಮಾತ್ರ ಅಂಗಾಂಗ ದಾನ ಮಾಡಬಹುದಾಗಿದ್ದು, ಇವರು ತಮ್ಮ ಅಂಗಾಂಗ ದಾನ ಮಾಡಲು ರಾಜ್ಯ ಅಧಿಕಾರ ಸಮಿತಿಯಿಂದ ಅನುಮೋದನೆ ಪಡೆಯಬೇಕು.

ಮೃತ ದಾನಿಯು ಸಾಮಾನ್ಯವಾಗಿ ತಲೆಗೆ ಮಾರಣಾಂತಿಕ ಗಾಯವನ್ನು ಅನುಭವಿಸಿ, ಅವನ/ ಅವಳ ಮೆದುಳು ಮರಣ ಹೊಂದಿದೆ ಎಂದು ಘೋಷಿಸಿದರೆ, ದಾನಿಗಳ ಕುಟುಂಬವು ದಾನಕ್ಕೆ ಒಪ್ಪಿಗೆ ನೀಡಲು ಆಯ್ಕೆ ಮಾಡಬಹುದು. ಅಂಗಾಂಗಗಳನ್ನು ಪಡೆದ ನಂತರ ದಾನಿಯ ದೇಹವನ್ನು ಗೌರವಯುತವಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಮತ್ತು ದಾನಿಯ ಅಂಗಗಳನ್ನು, ಅದನ್ನು ಸ್ವೀಕರಿಸುವ ರೋಗಿ ದಾಖಲಾಗಿರುವ ಆಸ್ಪತ್ರೆಗಳಿಗೆ ನಿಗದಿತ ಅವಧಿಯೊಳಗೆ ತಲುಪುವಂತೆ ಸುರಕ್ಷಿತವಾಗಿ ಸಾಗಿಸಲಾಗುತ್ತದೆ.

ಯಾವುದೇ ವ್ಯಕ್ತಿ ತನ್ನ ಮರಣದ ನಂತರವೂ ಅಂಗಾಂಗ ದಾನದ ಮೂಲಕ ಹಲವರ ಜೀವ ಉಳಿಸುವ ಮತ್ತು ಹಲವು ಮಂದಿಯ ಜೀವಕ್ಕೆ ಬೆಳಕಾಗಬಹುದಾದ ಕಾರ್ಯಕ್ಕೆ ಪ್ರತಿಜ್ಞೆ ಮಾಡುವ ಮೂಲಕ ಮಣ್ಣಲ್ಲಿ ಮಣ್ಣಾಗುವ ತನ್ನ ದೇಹವನ್ನು, ಹಲವಾರು ಜೀವಗಳನ್ನು ಉಳಿಸುವ ಸಾರ್ಥಕ ಬದುಕನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಇಲಾಖೆಯ 24x7 ಕಾರ್ಯ ನಿರ್ವಹಿಸುವ ಜೀವ ಸಾರ್ಥಕತೆ ಮೊ.ಸಂಖ್ಯೆ 98450 06768 ನ್ನು ಅಥವಾ ಸಮೀಪದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ ಕಡಿಮೆ ಇದೆ. ಆರೋಗ್ಯ ಇಲಾಖೆಯ ಮೂಲಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭಗೊಂಡು ಜಿಲ್ಲಾಸ್ಪತ್ರೆಯವರೆಗೂ ಅಂಗಾಂಗ ದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಮೂಢನಂಬಿಕೆಗಳಿಗೆ ಒಳಪಟ್ಟು ಅಂಗಾಂಗ ದಾನದಂತಹ ಮಹಾನ್ ಕಾರ್ಯದಿಂದ ಹಿಂದೆ ಸರಿಯಬಾರದು. ವ್ಯಕ್ತಿಯು ಸಹಜ ಸಾವಿನ ನಂತರ ಅತನ ಅಂಗಾಂಗಗಳಿಂದ 8 ಜನರ ಜೀವ ಉಳಿಸಬಹುದು ಮತ್ತು ಅಂದಾಜು 50 ಜನರ ಜೀವಕ್ಕೆ ಬೆಳಕಾಗಬಹುದು.

-ಡಾ.ಅರ್ಚನಾ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News