ಕಾಡಿನ ಮಕ್ಕಳಿಂದ ಮರಳಿ ಪ್ರಯತ್ನ

Update: 2024-05-17 07:13 GMT

ಸಾಂದರ್ಭಿಕ ಚಿತ್ರ Photo: PTI

ಚಾಮರಾಜನಗರ: ಮೊದಲನೇ ಹಂತದ ಎಸೆಸೆಲ್ಸಿ ಪರೀಕ್ಷೆ ಬರೆದು ಅನುತ್ತೀರ್ಣರಾಗಿದ್ದ ಸೋಲಿಗ ವಿದ್ಯಾರ್ಥಿಗಳು ಇದೀಗ ಎರಡನೇ ಹಂತದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಜಿಲ್ಲಾಡಳಿತದ ವಿಶೇಷ ಪರಿಶ್ರಮದಿಂದ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ 28 ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಅವರಲ್ಲಿ ಅನುತ್ತೀರ್ಣರಾಗಿರುವ 26 ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಎದುರಿಸಲು ಮತ್ತೊಮ್ಮೆ ಸಿದ್ಧತೆ ನಡೆಸುತ್ತಿದ್ದಾರೆ. ಶಿಕ್ಷಣದಿಂದ ವಂಚಿತರಾಗಿದ್ದ ಇವರನ್ನು ಜಿಲ್ಲಾಡಳಿತ ಗುರುತಿಸಿ ಮಾರ್ಚ್‌ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಗೆ ಸಜ್ಜುಗೊಳಿಸಿತ್ತು. ಆದರೆ ಪರೀಕ್ಷೆಯಲ್ಲಿ ಫೇಲ್ ಆಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜೂ.7ರಿಂದ 14ವರೆಗೆ ನಡೆಯಲಿರುವ ಪರೀಕ್ಷೆಯನ್ನು ಮತ್ತೆ ಬರೆಯಲಿದ್ದಾರೆ.

ಮತ್ತೆ ವಿಶೇಷ ತರಬೇತಿ: ಜೂ.7ರಿಂದ 14ವರೆಗೆ ನಡೆಯಲಿರುವ ಎರಡನೇ ಹಂತದ ಎಸೆಸೆಲ್ಸಿ ಪರೀಕ್ಷೆಗೆ ಈ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಎರಡನೇ ಹಂತದ ಪರೀಕ್ಷೆಗೆಂದು ತಯಾರಿ ನಡೆಸಲು ಜಿಲ್ಲೆಯ ಚಾಮರಾಜನಗರ-24, ಹನೂರು-19, ಗುಂಡ್ಲುಪೇಟೆ-18, ಕೊಳ್ಳೇಗಾಲ-9, ಯಳಂದೂರಿನ 4 ಸಹಿತ ಒಟ್ಟು 74 ಶಾಲೆಗಳನ್ನು ಗುರುತಿಸಲಾಗಿದ್ದು, ಸೋಲಿಗರ ವಿದ್ಯಾರ್ಥಿಗಳಿಗೂ ತರಬೇತಿ ನೀಡಲಾಗುತ್ತದೆ.

ಮೊದಲ ಹಂತದ ಪರೀಕ್ಷೆಗೂ ಮುನ್ನ ಸೋಲಿಗ ವಿದ್ಯಾರ್ಥಿಗಳಿಗೆ ತಾಲೂಕಿನ ಹರದನಹಳ್ಳಿಯ ವಸತಿ ಶಾಲೆಯಲ್ಲಿ ಮೂರು ತಿಂಗಳು ವಿಶೇಷ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಹತ್ವದ ಕಾರ್ಯ ನಡೆದಿತ್ತು. ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದವರು, ಮನೆಯಲ್ಲಿದ್ದವರು ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಇವರಲ್ಲಿ ಶೈಕ್ಷಣಿಕ ಮನೋಭಾವ ಮೂಡಿಸಿ ಪರೀಕ್ಷೆಗೆ ತಯಾರು ಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ವಿದ್ಯಾರ್ಥಿಗಳನ್ನು ಶಾಲಾ ವಾತಾವರಣಕ್ಕೆ ಒಗ್ಗಿಸಲು ಸಿನೆಮಾ ತೋರಿಸುವುದು, ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಕ್ರೀಡಾಕೂಟ ಆಯೋಜಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡಲಾಗಿತ್ತು. ಶಿಕ್ಷಣ ಇಲಾಖೆಯ 16 ಶಿಕ್ಷಕರು ಪಾಠ ಮಾಡಿದರು. ವಿವಿಧ ಹಂತಗಳಲ್ಲಿ ಪರೀಕ್ಷೆಗಳನ್ನು ನೀಡಿ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ಸಜ್ಜುಗೊಳಿಸಿದ್ದರು. ಈ ಸಲ ಸೋಲಿಗ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುವ ಇತರ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.

ಫಲಿತಾಂಶ ಹೆಚ್ಚಿಸುವ ಸವಾಲು

ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆ ಹಿನ್ನಡೆ ಕಂಡಿದೆ. ಕಳೆದ ವರ್ಷ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದ್ದ ಚಾಮರಾಜನಗರ ಈ ಸಲ 24ಕ್ಕೆ ಇಳಿದಿದೆ.

2023ರಲ್ಲಿ ಒಟ್ಟು 11,146 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. 10,468 ವಿದ್ಯಾರ್ಥಿಗಳು ಉತ್ತೀರ್ಣರಾದರು. ಒಟ್ಟು ಶೇ.93.92ರಷ್ಟು ಫಲಿತಾಂಶ ಬಂದಿತ್ತು. ಈ ಸಲ 11,239 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇವರಲ್ಲಿ 7,300 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ.73ರಷ್ಟು ಫಲಿತಾಂಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಪರೀಕ್ಷೆ ಬರೆಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಬೇಕಾದ ಸವಾಲು ಶಿಕ್ಷಣ ಇಲಾಖೆ ಮುಂದಿದೆ.

ಗರಿಗೆದರಿದ ಕನಸು

ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ 28 ಸೋಲಿಗರ ಮಕ್ಕಳು ಶಾಲೆ ಬಿಟ್ಟಿದ್ದವರು. ಇವರಲ್ಲಿ 7 ಹೆಣ್ಣು ಮಕ್ಕಳು, 21 ಗಂಡು ಮಕ್ಕಳು ಇದ್ದರು. ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದ ರಾಜೇಶ್ ಮತ್ತು ಹನೂರಿನ ಕಾನಮೋಳೆದೊಡ್ಡಿಯ ಪ್ರಶಾಂತ ಮಾತ್ರ ಪಾಸ್ ಆಗಿದ್ದಾರೆ. ಇವರೂ ಸೇರಿ ಅನುತ್ತೀರ್ಣರಾಗಿರುವ ಮಕ್ಕಳಿಗೆ ಕೂಲಿ ಮಾಡುವುದೇ ಜೀವನ. ಪರೀಕ್ಷೆಯಲ್ಲಿ ಪಾಸ್ ಆಗಿರುವ ಇಬ್ಬರಿಗೆ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಕನಸು ಚಿಗುರಿದೆ. ಇವರಂತೆಯೇ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೂ ಶಿಕ್ಷಣವೇ ತಳಪಾಯವಾಗಬೇಕಾದರೆ ಮುಂದಿನ ಎಸೆಸೆಲ್ಸಿ ಪರೀಕ್ಷೆ ಮಹತ್ವದ್ದಾಗಿದೆ.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಸೋಲಿಗ ವಿದ್ಯಾರ್ಥಿಗಳು ಕೆಲವೊಂದು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಇವರಿಗೆ ಮತ್ತೆ ಪರೀಕ್ಷೆ ಬರೆಸಲು ಜೂನ್ ಮೊದಲ ವಾರದಲ್ಲಿ ಪರೀಕ್ಷೆ-2 ಇದೆ. ಇವರಿಗೆ ಈ ಪರೀಕ್ಷೆಗೆ ನೋಂದಣಿ ಮಾಡಿಸುತ್ತೇವೆ. ಅನುತ್ತೀರ್ಣರಾಗಿರುವ ಬೇರೆ ಮಕ್ಕಳಿಗೂ 43 ಸೆಂಟರ್‌ಗಳಲ್ಲಿ ವಿಶೇಷ ತರಗತಿ ಮಾಡುತ್ತಿದ್ದೇವೆ. ಇವರನ್ನೂ ಅಲ್ಲಿಗೆ ಸೇರಿಸುತ್ತೇವೆ. ಶೇ.100ರಷ್ಟು ಫಲಿತಾಂಶ ಬಂದಿರುವ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ತೆಗೆದುಕೊಂಡು ಶನಿವಾರ ಮತ್ತು ರವಿವಾರವೂ ತರಬೇತಿ ನೀಡುತ್ತೇವೆ.

-ಶಿಲ್ಪಾನಾಗ್, ಜಿಲ್ಲಾಧಿಕಾರಿ -ಚಾಮರಾಜನಗರ

ನಾನು 7 ವರ್ಷಗಳ ಹಿಂದೆ 5ನೇ ತರಗತಿ ಓದುತ್ತಿದ್ದಾಗ ಶಾಲೆ ಬಿಟ್ಟಿದ್ದೆ. ಇತ್ತೀಚಿಗೆ ಅಧಿಕಾರಿಗಳನ್ನು ನನ್ನನ್ನು ಗುರುತಿಸಿ ಮೂರು ತಿಂಗಳು ತರಬೇತಿ ನೀಡಿ ಎಸೆಸೆಲ್ಸಿ ಪರೀಕ್ಷೆ ಬರೆಸಿದರು. ಎಷ್ಟೋ ವರ್ಷಗಳ ಬಳಿಕ ಮರಳಿ ಶಿಕ್ಷಣ ಪಡೆದೆ. ಸೀಮಿತ ಅವಧಿಯಲ್ಲಿ ಕಲಿಯಬೇಕಾದ ಸವಾಲು ಇತ್ತು. ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ. ನನಗೆ ಓದುವ ಆಸಕ್ತಿ ಇರುವುದರಿಂದ ಮತ್ತೆ ಪರೀಕ್ಷೆ ಬರೆಯುತ್ತೇನೆ. ಹಿಂದಿನ ಪರೀಕ್ಷೆ ವೇಳೆಯಲ್ಲಿ ಅಧಿಕಾರಿಗಳಿಂದ ಸಿಕ್ಕಿದ್ದ ನೆರವು, ಶಿಕ್ಷಕರ ಮಾರ್ಗದರ್ಶನವನ್ನು ಈ ಸಲವೂ ಪಡೆದುಕೊಳ್ಳಲು ಬಯಸುತ್ತೇನೆ.

-ಸಿದ್ದರಾಜು, ಬೂದಿಪಡಗ, ಚಾಮರಾಜನಗರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅಶ್ವತ್ ಕುಮಾರ್

contributor

Similar News