ಕಡಲ ಮೀನುಗಾರಿಕೆಯಲ್ಲಿ 'ಪ್ರಾಪ್ತಿ'ಯ ದಿಟ್ಟ ಹೆಜ್ಜೆ
ಮಂಗಳೂರು: ಅಲೆಗಳ ಏರಿಳಿತದ ಅಬ್ಬರದ ಜತೆ ಸೆಣಸಾಡುತ್ತಾ ನಡೆಸುವ ಕಡಲ ಮೀನುಗಾರಿಕೆ ಸಾಹಸಮಯ ವೃತ್ತಿಯಾಗಿ ಗುರುತಿಸಿಕೊಂಡಿದೆ. ಆ ಕಾರಣದಿಂದಲೇ ಮೀನುಗಾರ ಸಮುದಾಯವನ್ನು ಸಾಹಸಿಗಳೆಂದೇ ಗುರುತಿಸಲಾಗುತ್ತದೆ. ಇಂತಹ ಸಾಹಸಮಯ, ಪುರುಷ ಪ್ರಧಾನ ವೃತ್ತಿಯಾಗಿಯೇ ಗುರುತಿಸಲ್ಪಟ್ಟಿರುವ ಕಡಲ ಮೀನುಗಾರಿಕೆಯಲ್ಲಿ ಮಂಗಳೂರಿನ ಮೊಗವೀರ ಸಮುದಾಯದ ಯುವತಿ ಪ್ರಾಪ್ತಿ ಮೆಂಡನ್ ತನ್ನ ಸಾಹಸದ ಛಾಪನ್ನು ಮೂಡಿಸಿದ್ದಾರೆ.
ಬೆಂಗ್ರೆಯ ಮತ್ಸ್ಯೋದ್ಯಮಿ ಜಯಪ್ರಕಾಶ್ ಮೆಂಡನ್ ಮತ್ತು ಕಲಾವತಿ ದಂಪತಿಯ ಪುತ್ರಿ ಪ್ರಾಪ್ತಿ ತನ್ನ 13ನೇ ವಯಸ್ಸಿನಲ್ಲಿಯೇ ಕಡಲ ಮೀನುಗಾರಿಕಾ ಬೋಟ್ ಹತ್ತಿದವರು. ಶಾಲಾ ರಜಾ ವೇಳೆಯಲ್ಲಿ ತಂದೆ ಜೊತೆ ಪರ್ಸಿನ್ ಬೋಟ್‌ನಲ್ಲಿ ತೆರಳುತ್ತಿದ್ದ ದೀಪ್ತಿಗೆ ಕಡಲ ಅಲೆಗಳ ಅಬ್ಬರದ ಭಯ ಕಿಂಚಿತ್ತೂ ಇಲ್ಲವಾಗಿದೆ. ಮಳೆಯಿರಲಿ, ಬಿರು ಬಿಸಿಲೇ ಇರಲಿ, ಕಡಲ ನಡುವೆ ಮೀನುಗಾರಿಕಾ ದೋಣಿ, ಬೋಟುಗಳಲ್ಲಿ ನೀರಿನ ಅಲೆಯ ಅಬ್ಬರಗಳಿಗೆ ಎದೆಯೊಡ್ಡಿ ಬಲೆ ಬೀಸಿ ಮೀನು ಹಿಡಿಯುವುದನ್ನು ಇದೀಗ 23ರ ಹರೆಯದ ದೀಪ್ತಿ ಕರಗತ ಮಾಡಿಕೊಂಡಿದ್ದಾರೆ.
ತನ್ನ ತಂದೆಯ ಕಡಲ-ಸಾಗರದಾಳದ ಒಡನಾಟ ಹಾಗೂ ಪ್ರೋತ್ಸಾಹದಿಂದ ಕಡಲ ಮೀನುಗಾರಿಕೆಯೆಂಬ ಅಪಾಯಕಾರಿ ವೃತ್ತಿಯ ಆಳ ಅಗಲಗಳನ್ನು ಬಾಲ್ಯದಿಂದಲೇ ಅರಿತುಕೊಂಡಿರುವ ಪ್ರಾಪ್ತಿ, ಪಿಯುಸಿ ಬಳಿಕ ಸಿಇಟಿ ಪರೀಕ್ಷೆ
ಬರೆದು ಮೀನುಗಾರಿಕೆ ಶಿಕ್ಷಣವನ್ನು ಆಯ್ದುಕೊಂಡರು. ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಇದೀಗ ಅದೇ ಕಾಲೇಜಿನಲ್ಲಿ ಫಿಶರೀಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿದ್ದಾರೆ.
ಪ್ರಾಪ್ತಿಯ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತ ತಂದೆ ಜಯಪ್ರಕಾಶ್ ಮೆಂಡನ್, ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಮೊದಲಾದೆಡೆ ಸಮುದ್ರದಲ್ಲಿ ಮೀನುಗಾರಿಕಾ ಹಡಗಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನೈಜಿರೀಯಾದ ಫ್ಯಾಕ್ಟರಿ ಹಡಗಿನಲ್ಲಿ ಕ್ಯಾಪ್ಟನ್ ಸೇವೆ ಸಲ್ಲಿಸಿದ ಅನುಭವ ಹೊಂದಿರುವವರು. ಮಾತ್ರವಲ್ಲದೆ ಮೀನುಗಾರಿಕಾ ಕಾಲೇಜಿನಲ್ಲಿ ಸೀ ಮ್ಯಾನ್ ಶಿಪ್ ನೇವಿಗೇಶನ್ ಬಗ್ಗೆ ಗುತ್ತಿಗೆಯಡಿ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
‘ನನ್ನ ತಂದೆ ಪರ್ಸೀನ್, ಟ್ರಾಲ್‌ಬೋಟ್ ಹೊಂದಿದ್ದರಿಂದ ನಾನು ಪರ್ಸೀನ್ ಬೋಟ್‌ನಲ್ಲಿ ತಂದೆ ಜೊತೆ ಹೋಗುತ್ತಿದೆ. ಸಮುದ್ರ ಮಧ್ಯೆ ಬಲೆ ಹಾಕಿ ಮೀನು ಹಿಡಿಯುವ ಪ್ರಕ್ರಿಯೆ ಅರಿತುಕೊಂಡಿದ್ದೇನೆ.
ಇದೀಗ ಮಳೆಗಾಲದಲ್ಲಿಯೂ ಸಾಗಬಹುದಾದ ರಾಣಿಬಲೆ ಮೀನುಗಾರಿಕೆಯನ್ನೂ ಕರಗತ ಮಾಡಿಕೊಂಡಿದ್ದೇನೆ. ಹೆಣ್ಣು ಗಂಡಿಗೇನು ಕಡಿಮೆ ಇಲ್ಲ ಎಂಬಂತೆ ನನ್ನ ತಂದೆ ಪ್ರೋತ್ಸಾಹಿಸಿದ ಹಾಗೂ ನನ್ನ ತಂದೆಯ ಸ್ನೇಹಿತರು ನನಗೆ ಬೆಂಗಾವಲಾಗಿ ನಿಂತ ಕಾರಣ ಕಡಲ ಮೀನುಗಾರಿಕೆ ನಡೆಸುವ ಧೈರ್ಯ ನನಗೆ ಬಂದಿದೆ’ ಎನ್ನುತ್ತಾರೆ ಪ್ರಾಪ್ತಿ.
ಕಡಲಿನ ಜತೆಗೆ ಬಾಲ್ಯದಿಂದಲೇ ಒಡನಾಟ ಹೊಂದಿರುವ ಪ್ರಾಪ್ತಿ ಕಡಲ ನೀರಿನಲ್ಲಿ ಈಜಬಲ್ಲ ಪ್ರಾಪ್ತಿ ಮೆಂಡನ್, ಸ್ಕೂಬಾ ಡೈವಿಂಗ್‌ನಲ್ಲೂ ತರಬೇತಿ ಪಡೆದಿದ್ದಾರೆ. ಮಾಡಬೇಕೆಂಬ ಛಲವಿದ್ದರೆ ಯಾವುದೇ ರೀತಿಯ ಅಡ್ಡಿ ಆತಂಕಗಳನ್ನು ಮೀರಿ ಬೆಳೆಯಲು ಸಾಧ್ಯ ಎಂಬುದಕ್ಕೆ ಕುಡ್ಲದ ಕುವರಿ ಪ್ರಾಪ್ತಿ ಮೆಂಡನ್ ದಿಟ್ಟ ಉದಾಹರಣೆ.
ಹೈ ಸ್ಕೂಲ್‌ನಲ್ಲಿದ್ದಾಗಲೇ ರಜೆಯ ಸಂದರ್ಭದಲ್ಲಿ ಕಡಲಿನಲ್ಲಿ ಮೀನುಗಾರಿಕೆಗೆ ತೆರಳುವುದನ್ನು ಹವ್ಯಾಸವಾಗಿಸಿದ್ದೆ. ಆ ಸಂದರ್ಭದಲ್ಲಿಯೇ ನಾನು ಮೀನುಗಾರಿಕಾ ಕ್ಷೇತ್ರದಲ್ಲಿಯೇ ನನ್ನ ಶಿಕ್ಷಣವನ್ನು ಮುಂದುವರಿಸಲು ಇಚ್ಚಿಸಿದ್ದೆ. ಈಗ ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿದ್ದು, ಸದ್ಯ ಸಂಶೋಧನಾ ಕಾರ್ಯ ನಡೆಯುತ್ತಿದೆ. ನಾನು ನನ್ನ ಅಧ್ಯಯನಕ್ಕೆ ರಾಣಿ ಬಲೆ ವಿಷಯವನ್ನೇ ಆಯ್ದುಕೊಂಡು ಇದೀಗ ಮಳೆಗಾಲದ ಅವಧಿಯಿಂದ ರಾಣಿ ಬಲೆ ದೋಣಿಗಳಲ್ಲಿ ನಿತ್ಯ ಮೀನುಗಾರಿಕೆಗೆ ತೆರಳುತ್ತಿದ್ದೇನೆ.
-ಪ್ರಾಪ್ತಿ ಮೆಂಡನ್.ಕಡಲ ಮೀನುಗಾರಿಕೆಯಲ್ಲಿ 'ಪ್ರಾಪ್ತಿ'ಯ ದಿಟ್ಟ ಹೆಜ್ಜೆ
ಪುರುಷರೇ ಹಿಂಜರಿಯುವ ಕಡಲ ಮೀನುಗಾರಿಕೆಯಲ್ಲಿ ನನ್ನ ಮಗಳ ಆಸಕ್ತಿಯನ್ನು ಕಂಡು ಪ್ರೋತ್ಸಾಹಿಸಿದ್ದೇನೆ. ಸಣ್ಣ ವಯಸ್ಸಿನಿಂದಲೇ ಕಡಲ ನೀರಿನ ಆಳ, ಅಪಾಯಗಳನ್ನು ಆಕೆ ಅರಿತುಕೊಂಡಿರುವುದರಿಂದ ಚಳಿ, ಬಿಸಿಲು, ಮಳೆ ಎನ್ನದೆ ದೋಣಿ ಅಥವಾ ಬೋಟ್‌ಗಳಲ್ಲಿ ತೆರಳಿ ಮೀನುಗಾರಿಕೆ ಮಾಡುವ ಧೈರ್ಯ ಪ್ರಾಪ್ತಿಗೆ ಸಾಧ್ಯವಾಗಿದೆ.
-ಜಯಪ್ರಕಾಶ್ ಮೆಂಡನ್, ಪ್ರಾಪ್ತಿ ತಂದೆ