ನನೆಗುದಿಗೆ ಬಿದ್ದ ದಾವಣಗೆರೆಯ ಅಂಬೇಡ್ಕರ್ ಭವನ
ದಾವಣಗೆರೆ, ಜ.19: ಕರ್ನಾಟಕದ ಮ್ಯಾಂಚೆಸ್ಟರ್, ವಿದ್ಯಾ ಕಾಶಿ, ಬೆಣ್ಣೆನಗರಿ ಎಂದು ಕರೆಯುವ ದಾವಣಗೆರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಮಂಜೂರಾಗಿ ದಶಕ ಸಂದಿವೆ. ಆದರೆ, ಇಂದಿಗೂ ಸೂಕ್ತ ಸ್ಥಳ ಸಿಗದೆ ನನೆಗುದಿಗೆ ಬಿದ್ದಿದೆ.
ದಲಿತ, ಕಾರ್ಮಿಕ ಚಳವಳಿಗೆ ಕಿಡಿ ಹೊತ್ತಿಸಿದಂತಹ ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಬೇಡುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ವಿಪರ್ಯಾಸದ ಸಂಗತಿ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಎರಡು ವರ್ಷದ ಸಾಧನೆಗಳನ್ನು ಬಿಂಬಿಸಲು 2012ರಲ್ಲಿ ನಗರದ ಪ್ರೌಢಶಾಲಾ ಮೈದಾನದಲ್ಲಿ ಸಾಧನಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ದಲಿತಪರ ಮುಖಂಡರು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹಿಸಿದ್ದರು.
ಇದಕ್ಕೆ ಸ್ಪಂದಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೇಡಿಕೆ ಈಡೇರಿಸಿ ಅಂಬೇಡ್ಕರ್ ಭವನ ಮಂಜೂರು ಮಾಡಿಸಿ ಅನುದಾನವನ್ನೂ ಬಿಡುಗಡೆ ಮಾಡಿಸಿದ್ದರು. ಆದರೆ, ಇಂದಿಗೂ ಜಿಲ್ಲಾಡಳಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗದ ನೆಪ ಹೇಳಿ ದಿನಗಳನ್ನು ದೂಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
5 ಕೋಟಿ ರೂ. ಅನುದಾನ ಮಂಜೂರು: 2012ರಲ್ಲಿ ಅಂದಿನ ರಾಜ್ಯ ಸರಕಾರ 3 ಕೋಟಿ ರೂ. ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ 2 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಅನುದಾನದಲ್ಲಿ ದಾವಣಗೆರೆಗೆ ಅಂಬೇಡ್ಕರ್ ಭವನ ಮಂಜೂರು ಮಾಡಿ 2012ರ ಜುಲೈ 4ರಂದು 1.50 ಕೋಟಿ ರೂ. ರಾಜ್ಯ ಸರಕಾರ ಬಿಡುಗಡೆ ಮಾಡಿತ್ತು. ಇದಕ್ಕೆ ಶೇ.24.17ರ ಯೋಜನೆ ಅಡಿಯಲ್ಲಿ ಮಹಾನಗರ ಪಾಲಿಕೆ ಹಂತ ಹಂತವಾಗಿ ಅನುದಾನ ನೀಡುವುದಾಗಿ ಒಪ್ಪಿಕೊಂಡಿತ್ತು.
ದಾವಣಗೆರೆ ನಗರಕ್ಕೆ ಹೊಂದಿಕೊಂಡಂತೆ ದೊಡ್ಡ ಬೂದಿಹಾಳ ಗ್ರಾಮದ ಸರ್ವೇ ನಂಬರ್ ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ ಶಂಕುಸ್ಥಾಪನೆಗೆ ಸಿದ್ಧತೆ ನಡೆಸಿತ್ತು. ಆದರೆ, ಹಳೇ ದಾವಣಗೆರೆ ಭಾಗದಲ್ಲಿ ಅಂಬೇಡ್ಕರ್ ಭವನ ಬೇಡ, ಹೊಸ ಭಾಗದಲ್ಲಿ ಭವನ ನಿರ್ಮಾಣ ಮಾಡಬೇಕೆಂದು ದಲಿತ ಸಂಘಟನೆಯ ಮುಖಂಡರಿಂದ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದೊಡ್ಡ ಬೂದಿಹಾಳ ಗ್ರಾಮದ ಜಾಗ ಬಿಟ್ಟು ಹೊಸ ಭಾಗದಲ್ಲಿ ಭವನ ನಿರ್ಮಾಣಕ್ಕೆ ಜಾಗ ಹುಡುಕಾಟ ಆರಂಭಿಸಿತ್ತು.
ಜಿಪಂ ಎದುರುಗಡೆ ಇರುವ ಸರ್ಕ್ಯೂಟ್ ಹೌಸ್ ಬಳಿ, ಮಹಾನಗರ ಪಾಲಿಕೆಯ ಆವರಣದ ಹಿಂಬದಿಯ ಜಾಗದಲ್ಲಿ, ದೃಶ್ಯಕಲಾ ಕಾಲೇಜು, ಸರಕಾರಿ ಐಟಿಐ ಕಾಲೇಜ್, ಕೆಪಿಟಿಸಿಎಲ್, ತೋಟಗಾರಿಕೆ ಇಲಾಖೆ, ನೀರಾವರಿ ಇಲಾಖೆ, ಬೆಸ್ಕಾಂ ಕಚೇರಿ ಖಾಲಿ ಇರುವ ಜಾಗದಲ್ಲಿ ಭವನ ನಿರ್ಮಿಸಲು ಪ್ರಯತ್ನಿಸಿತ್ತು. ಆದರೆ, ಈ ಎಲ್ಲ ಪ್ರಯತ್ನಗಳಿಗೆ ಸಂಬಂಧಿಸಿದ ಇಲಾಖೆಯವರು ನಾನಾ ಕಾರಣ ಹೇಳಿ ಜಾಗ ನೀಡಲಾಗುವುದಿಲ್ಲ ಎಂದು ತಿಳಿಸಿದ್ದು, ಹೀಗಾಗಿ ಇದು ಜಿಲ್ಲಾಡಳಿತಕ್ಕೆ ಇಂದು ಕಗ್ಗಂಟಾಗಿ ಪರಿಣಮಿಸಿದೆ.
ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಸೂಕ್ತ ಸ್ಥಳ ಸಿಗದೇ ಇರುವುದರಿಂದ ಒಂದು ದಶಕದ ಹಿಂದೆ ಮಂಜೂರಾದ ಭವನ ನನೆಗುದಿಗೆ ಬಿದ್ದಿದ್ದು, ಜಿಲ್ಲಾಡಳಿತ ತಕ್ಷಣ ಜಾಗ ಗುರುತಿಸಿ ಭವನ ನಿರ್ಮಾಣಕ್ಕೆ ಕಾರ್ಯ ಪ್ರವೃತ್ತರಾಗಬೇಕೆಂದು ದಲಿತಪರ ಸಂಘಟನೆಯ ಮುಖಂಡರು, ಅಂಬೇಡ್ಕರ್ ಅನುಯಾಯಿಗಳು, ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಲು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಅದರಂತೆ ದಲಿತ ಸಂಘಟನೆಯ ಮುಖಂಡರು ಸೂಚಿಸುವ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಚಿಸಿದ್ದಾರೆ. 1 ಎಕರೆ ಜಾಗದಲ್ಲಿ ನಿರ್ಮಾಣ ಮಾಡುವ ಉದ್ದೇಶವಿದೆ. ಸೂಕ್ತ ಸ್ಥಳ ಸಿಕ್ಕಿದ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು.
ನಾಗರಾಜ,
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ದಾವಣಗೆರೆ
ಡಾ.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ, ದಮನಿತರ, ಶೋಷಿತರ, ಕಾರ್ಮಿಕರ, ಸ್ತ್ರೀಯರ ಪರವಾದ ಗಟ್ಟಿ ಧ್ವನಿಯಾದ ಮಹಾನ್ ನಾಯಕ. ಇಂತಹ ಮಹಾನ್ ನಾಯಕನ ಭವನ ನಿರ್ಮಾಣ ನನೆಗುದಿಗೆ ಬಿದ್ದಿರುವುದು ನೋವಿನ ಸಂಗತಿಯಾಗಿದೆ. ಜಿಲ್ಲಾಡಳಿತವು ಯಾವುದೇ ಸಬೂಬುಗಳನ್ನು ಹೇಳದೆ ಶೀಘ್ರವೇ ಭವನ ನಿರ್ಮಾಣಕ್ಕೆ ಕಾರ್ಯ ಪ್ರವೃತವಾಗಬೇಕಾಗಿದೆ.
ಲಕ್ಷ್ಮೀ ನಾಗರಾಜ್, ಸ್ಥಳೀಯರು
2005ರಿಂದಲೂ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಇದುವರೆಗೂ ಭವನ ನಿರ್ಮಾಣ ಸಾಧ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರಗಳು ನಿರ್ಲಕ್ಷ್ಯ ವಹಿಸಿವೆ. ಅಗ್ನಿಶಾಮಕ ಕಚೇರಿ ಬಳಿ 6 ಎಕರೆ ಜಾಗವಿದೆ. ಪಿಡಬ್ಲ್ಯೂಡಿ ಕ್ವಾರ್ಟ್ಸ್, ಮಹಾನಗರ ಪಾಲಿಕೆಯ ಹಿಂಬದಿಯ ಜಾಗವಿದೆ. ತೋಟಗಾರಿಕೆ ಇಲಾಖೆಯ ಜಾಗವಿದೆ. ಈಜುಕೊಳದ ಪಕ್ಕದಲ್ಲಿ ಪಾಲಿಕೆಯ ಜಾಗವಿದೆ. 3-4 ತಿಂಗಳಲ್ಲಿ ಜಾಗ ಗುರುತಿಸಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ದಾವಣಗೆರೆಗೆ ಮುಖ್ಯಮಂತ್ರಿಯವರು ಬಂದಾಗ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು
ಕುಂದವಾಡ ಮಂಜುನಾಥ
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ (ಕೃಷ್ಣಪ್ಪ ಸ್ಥಾಪಿತ ಬಣ), ದಾವಣಗೆರೆ