ಆಕ್ರಮಣಕ್ಕಿಂಥ ರಕ್ಷಣೆ ಅತಿದೊಡ್ಡ ಸಾಧನೆ

Update: 2024-08-19 06:28 GMT

ಸೌಥಿ ಎಂಬ ಕವಿಯ After Blenheim ಎಂಬ ಪದ್ಯವನ್ನು ಬಿ.ಎಂ.ಶ್ರೀ ಬ್ಲೆನ್ ಹೀಮ್ ಕದನ ಎಂದು ಮರುಸೃಷ್ಟಿಸಿದ್ದಾರೆ. ಅದರ ಕೆಲವು ಸಾಲುಗಳಿವು;

ಬೆಂಕಿಯ, ಕತ್ತಿಯ ಬಾಯಿಗೆ ಬಲಿಯಾಗಿ

ದೇಶವೆ ಹಾಳಾಯಿತೆಲ್ಲ.

ತುಂಬು ಬಸಿರಿಯರು, ಹಾಲು ಮಕ್ಕಳು ಸತ್ತ

ಲೆಕ್ಕವ ದೇವರೆ ಬಲ್ಲ

ಆದರಂತಹುದೆಷ್ಟೊ ಆಗಲೇಬೇಕಲ್ಲ

ಲೋಕ ಪ್ರಸಿದ್ಧಿಯ ಜಯದಲಿ ಎಂದ.

ನೋಡಲು ಬಾರದು ಎಂಬರು ಘೋರವ

ಗೆದ್ದ ಮೇಲಾರಣದಲ್ಲಿ.

ಸಾವಿರಗಟ್ಟಳೆ ಹೆಣಗಳು ಕೊಳೆಯುತ

ಬಿಸಿಲಲಿ ಬಿದ್ದಿದ್ದುವಲ್ಲಿ....

ಇದು ಯುದ್ಧ. ಅಜ್ಜ ಮೊಮ್ಮಕ್ಕಳಿಬ್ಬರಿಗೆ ಯಾ ರದೋ ತಲೆಬು ರುಡೆಯ ನಿಡಿದು ಹೇಳುವ ಕತೆ. ಅಜ್ಜ ಲೋಕ ಪ್ರಸಿದ್ಧಿಯ ಯುದ್ಧದ ಕುರಿತು ಸರಿಯೋ ತಪ್ಪೋ ಎಂದು ನಿರ್ಣಯಿಸಲಾಗದ ರಾಷ್ಟ್ರವಾದಿ. ರಾಷ್ಟ್ರವೆಂಬುದು ನಿಶ್ಯಬ್ದಗೊಳಿಸುವ ಶಕ್ತಿ. ಫ್ರೆಂಚ್ ಪಡೆಯನ್ನು ಬ್ರಿಟಿಷರು ಮುರಿದರು ಎಂದು ತನ್ನಜ್ಜ ತನಗೆ ಹೇಳುತ್ತಿದ್ದ ಎಂದು ಮೊಮ್ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಾನೆ. ಮಕ್ಕಳು ಛೀ ಎನ್ನುತ್ತಾರೆ. ಯುದ್ಧದಿಂದ ಕಡೆಗಾದುದೇನು? ಮೊಮ್ಮಗ ಕೇಳುತ್ತಾನೆ. ಅಜ್ಜನಲ್ಲಿ ಉತ್ತರವಿಲ್ಲ. ರಾಷ್ಟ್ರವೆಂದರೆ ನಿರುತ್ತರ. ಲೋಕ ಪ್ರಸಿದ್ಧಿಯ ಯುದ್ಧ ಎಲ್ಲ ಪ್ರಶ್ನೆಗಳಾಚೆಗಿನದು.

ಇದೇ ಮೊಮ್ಮಕ್ಕಳು ಇಂದು ಯುದ್ಧೋನ್ಮಾದದಲ್ಲಿದ್ದಾರೆ. ನಮ್ಮಲ್ಲೂ ಸಹ. ರಣಧಾರಿಣಿಯು ಪ್ರತಿ ತಲೆಮಾರುಗಳಿಂದಲೂ ನೆತ್ತರು ಬಯಸುತ್ತದೋ ಏನೋ. ಜಗದ ಬಹುಪಾಲು ನೆಲದ ಜನ ಯುದ್ಧ ದಾಹಿಗಳಾಗಿಬಿಟ್ಟಿದ್ದಾರೆಯೆ? ಕಳೆದೆರಡು ಮಹಾಯುದ್ಧಗಳ ನೆತ್ತರ ಸೂತಕ ಇಷ್ಟು ಬೇಗ ಕಳೆಯಿತೆ?

ಹೊಸ ತಲೆಮಾರು ಯಾಕಿಷ್ಟು ಬೇಗ ವಿವೇಕ ಕಳೆದು ಕೊಂಡಿತು?

ಯುದ್ಧ ಎಂದರೆ ಸರಳ ಸಂಗತಿಯೇ? ಗೆದ್ದವರ ಗೆಲುವು ಗೆಲುವಲ್ಲ. ಸತ್ತವರ ಸಾವು ನ್ಯಾಯವಲ್ಲ ಎಂಬುದನ್ನು ಚರಿತ್ರೆ ಮತ್ತು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ. ಕೇಳುವ ಸ್ಥಿತಿಯಲ್ಲಿ ಯಾರಿದ್ದಾರೆ?

2. ವ್ಯಾಸರು ಮಹಾಭಾರತ ಕೃತಿಯಲ್ಲಿ ಸ್ತ್ರೀ ಪರ್ವ ಎಂಬ ಹೃದಯ ವಿದ್ರಾವಕ ಭಾಗವನ್ನು ಚಿತ್ರಿಸಿದ್ದಾರೆ. ಗಾಂಧಾರಿ, ಕುಂತಿ, ದ್ರೌಪದಿಯರ ದುಃಖದ ಕಡಲ ತಳ ಕುಸಿದು ಬೀಳುವ ಭಾಗ ಇದು. ಯುದ್ಧದ ಭೀಕರತೆ ಮತ್ತೆ ಮತ್ತೆ ಎದ್ದು ಕೂತು ಭೀಷ್ಮ, ದ್ರೋಣ, ಕೃಷ್ಣರನ್ನು ನ್ಯಾಯಸ್ಥಾನದಲ್ಲಿ ನಿಲ್ಲಿಸುವ ಭಾಗವೂ ಇದೆ.

ಗದಾಯುದ್ಧದ ಸನ್ನಿವೇಶವಿರುವ ಶಲ್ಯ ಪರ್ವ ಮುಗಿದ ನಂತರ ಬದುಕಿನ ಭೀಕರ ದರ್ಶನ ಎದುರಾಗುತ್ತದೆ. ಮಹಾಭಾರತದ ನಿಜ ಸತ್ವವಿರುವುದು ಈ ಭಾಗಕ್ಕೇನೆ. ಮನುಷ್ಯನನ್ನು ದೀರ್ಘ ಮೌನಕ್ಕೆ ದೂಡುವುದು ಇದೇ ಭಾಗಗಳೇ. ಹುಟ್ಟಿನಿಂದ ಕುರುಕ್ಷೇತ್ರ ಯುದ್ಧದ ವರೆಗೆ 9 ಪರ್ವಗಳಿದ್ದರೆ, ಅಲ್ಲಿಂದಾಚೆಗೆ ಸ್ವರ್ಗಾರೋಹಣದವರೆಗೆ 9 ಪರ್ವಗಳಿವೆ. ಪಂಪ, ರನ್ನ, ಕುಮಾರವ್ಯಾಸರಂಥ ಮೇರು ಕವಿಗಳೇ ಈ ಭಾಗಗಳನ್ನು ಮುಟ್ಟಲು ದಿಗಿಲು ಬಿದ್ದ ಹಾಗೆ ಕಾಣುತ್ತದೆ.

ಯುದ್ಧ ಮುಗಿದ ನಂತರ 36 ವರ್ಷಗಳ ಕಾಲ ಪಾಂಡವರು ರಾಜ್ಯಭಾರ ಮಾಡಿದರೆಂದು ಉಲ್ಲೇಖ ಬರುತ್ತದೆ. ಅವರು ಬದುಕಿದ್ದ ಪ್ರತಿ ದಿನವೂ ನರಕದ ದರ್ಶನವೇ. ಎಮ್ಮೆ ಕೊಂಬನ್ನು ಜಗಿದ ಹಾಗೆ ಎಂಬ ಮಾತನ್ನು ವಿದುರ ಹೇಳುತ್ತಾನೆ. ಬದುಕು ನಿಸ್ಸಾರ, ರಾಜ್ಯಭಾರವೂ ನಿಸ್ಸಾರ. ಯುದ್ಧಾನಂತರ ಮಾಡುವ ಅಶ್ವಮೇಧ ಯಾಗವೂ ಕೃತಕ ಎನ್ನಿಸುತ್ತದೆ. ಸತ್ತ ರಾಜರ ದೇಶಗಳ ಮೇಲೆ ಓಡಿಸುವ ಕುದುರೆ ಅದು. ಅನೇಕ ಸಾರಿ ಪಾಂಡವರಿಗೆ ಮುಜುಗರ ಎನ್ನಿಸುತ್ತದೆ. ಬ್ರಾಹ್ಮಣರ ಒತ್ತಾಯಕ್ಕೆ ಯಾಗದ ತೀರ್ಮಾನ ಮಾಡುತ್ತಾರೆ. ಬಹುಶಃ ದುಃಖವಿಲ್ಲದ ದಿನವಿಲ್ಲ. ಚೈತನ್ಯ ಮರೆತೇ ಹೋಗುತ್ತದೆ. ಆರ್ಗೆ ತೋರಿ ರಾಜ್ಯವನ್ನಾಳಬೇಕು ಎಂದು ಧರ್ಮರಾಯ ಗೋಳಾಡುತ್ತಾನೆ. ಮನುಷ್ಯನಿಗೆ ಒಬ್ಬ ಎದುರಾಳಿ ಬೇಕು. ಶತ್ರುವೊಬ್ಬ ಇರಲೇಬೇಕು. ಆಧುನಿಕ ರಾಷ್ಟ್ರಪ್ರಭುತ್ವಗಳೂ ತನ್ನ ರಾಷ್ಟ್ರಿಕರಿಗೆ ಕಲ್ಪಿತ ಶತ್ರುವನ್ನು ಕಟ್ಟಿಕೊಡಲು ಯತ್ನಿಸುತ್ತವೆ. ಗಡಿಯಾಚೆ ಇರುವವರನ್ನೆಂದೂ ನೋಡಿರದಿದ್ದರೂ ಆತ/ಆಕೆ ಶತ್ರುವಾಗಿರುತ್ತಾನೆ. ಸರೀಕರೆದುರು ತಲೆ ಎತ್ತಿ ಬಾಳುವುದಕ್ಕೆ ಎಂದು ಲಂಕೇಶರು ಅವ್ವನನ್ನು ಚಿತ್ರಿಸುವಾಗಿನ ಸ್ಥಾಯೀಭಾವ ಪಾಂಡವರದೂ ಕೂಡ. ಸರೀಕರಿಲ್ಲ. ಮಕ್ಕಳಿಲ್ಲ. ನಾಡ ತುಂಬೆಲ್ಲ ಅನಾಥ ಮಕ್ಕಳು, ಹರೆಯದ ವಿಧವೆಯರು, ಆಸರೆ ಕಳಕೊಂಡ ವೃದ್ಧರು; ರಾಜ್ಯ ಬೆಳೆವುದೆಂತು, ಆಸೆ, ಕನಸು, ಯೌವನ ಇಲ್ಲದ ಯಾವುದಾದರೂ ನಾಡು ಉದ್ಧಾರವಾಗಲು ಸಾಧ್ಯವೆ?

ಆಳುವ ಧರ್ಮರಾಯನಿಗೆ ಎಂದಿಗೆ ಮುಗಿದೀತು ಈ ರಗಳೆ ಎನ್ನಿಸುತ್ತದೆ.

ಯುದ್ಧೋತ್ತರದ ಪರ್ವಗಳು ಜಗತ್ತಿನ ಸಾಹಿತ್ಯದಲ್ಲೇ ಮೇರು ಭಾಗಗಳು. ಒಡಿಸ್ಸಿ ಮಹಾಕಾವ್ಯದಲ್ಲೂ ದುಃಖವಿದೆ. ಆದರೆ ಅಲ್ಲಿನ ಪಾತ್ರಗಳು ಮಹಾ ಅಸ್ತಿತ್ವವಾದಿ ನಿಲುವಿನವು. ಟ್ರೋಜನ್ ಯುದ್ಧ ಮುಗಿದ ನಂತರ ಒಡಿಸ್ಯೂಸ್‌ನ ಪಾಳಯದಲ್ಲಿ ಸಂಭ್ರಮ ನೆಲೆಸುತ್ತದೆ. ಸೈಕ್ಲೋಪರ ದಾಳಿಯಿಂದ ಅಸಂಖ್ಯಾತರು ಸಾಯುತ್ತಾರೆ. ಯುದ್ಧ ಗೆದ್ದ ನಂತರ ಆಗುವ ಹಾನಿ ದೊಡ್ಡ ದುಃಖದ ಮೂಟೆಯಾಗುತ್ತದೆ. ಆದರೆ ನಾವು ಬದುಕಿದ್ದೇವೆ. ದುಃಖ ಪಟ್ಟು ಪ್ರಯೋಜನವಿಲ್ಲ ಎಂದು ದೋಣಿಗಳಿಗೆ ಹುಟ್ಟು ಹಾಕುತ್ತಾರೆ.

ಆದರೆ ದ್ರೌಪದಿಗೆ, ಪಾಂಡವರಿಗೆ ಅದು ಸಾಧ್ಯವಿಲ್ಲ. ಯುದ್ಧ ಮುಗಿದು ದಣಿವಾರಿಸಿಕೊಳ್ಳಲು ಮಲಗಿದ್ದರೆ ಅಶ್ವತ್ಥಾಮ ಬಂದು ದ್ರೌಪದಿಯ ಎಲ್ಲ ಮಕ್ಕಳನ್ನೂ ಸೋದರನಾದ ದುಷ್ಟದ್ಯುಮ್ನನನ್ನೂ ಕೊಂದು ಹಾಕುತ್ತಾನೆ. ಈ ದುಃಖ ಶಾಶ್ವತ ವೇದನೆಯಾಗಿ ಕಾಡುತ್ತದೆ. ಲಂಕಾದಹನ ಮತ್ತು ಲಂಕೆಯ ನಾಶದ ನಂತರ ಅಲ್ಲಿನ ಜನರ ದುಃಖದ ಪರಿ ಎಂಥದು ಎಂದು ಬರೆಯಲು ವಾಲ್ಮೀಕಿ ಹಿಂದೇಟು ಹಾಕಿದ ಹಾಗೆ ಕಾಣುತ್ತದೆ. ಮಹಾಭಾರತ ಅತಿದೊಡ್ಡ ಜೀವನದರ್ಶನ. ಕಳೆದೆರಡು ಸಾವಿರ ವರ್ಷಗಳಿಂದ ಕವಿ ಗೆದ್ದು ದಾರ್ಶನಿಕ ಮರೆಗೆ ಹೋಗಿದ್ದಾನೆ. ರಾಮನ ದುಃಖ, ಪ್ರೇಮ ಮಧುರ. ಪ್ರೇಮ ವಿರಹಗಳ ಮಹಾ ಯಾತ್ರೆ ಅದು.

ಸೀತೆ ಪದೇ ಪದೇ ಮೂರ್ಛೆ ಹೋಗುವ ಕೋಮಲೆ. ದ್ರೌಪದಿ ಹೇಳಿ ಕೇಳಿ ಯಾಜ್ಞಸೇನಿ. ಉರಿವ ಕೆಂಡ. ಕೃಷ್ಣನ ಸಮ ಸಮಕ್ಕೆ ನಿಲ್ಲುವ ಮಹಾಪ್ರಭೆ ಅವಳು. ಆದರೆ ಮಕ್ಕಳ, ಸೋದರನ, ಬಂಧು ಬಾಂಧವರ ಸಾವು ಅವಳನ್ನು ಛಿದ್ರಗೊಳಿಸಿಬಿಡುತ್ತವೆ.

ಮಹಾದುಃಖಿಯಾದ ಗಾಂಧಾರಿಯೇ ದ್ರೌಪದಿಯ ಕಡಲಿನಂಥ, ಮುಗಿಲಿನಂಥ ರೋದನವನ್ನು ನೋಡಿ ಅಳಬೇಡ ತಾಯಿ! ನನ್ನನ್ನು ನೋಡಿ ನೀನು ಸಮಾಧಾನ ಮಾಡಿಕೊ ಎಂದು ಸಂತೈಸುತ್ತಾಳೆ. ಗಾಂಧಾರಿ, ಕುಂತಿ, ದ್ರೌಪದಿಯರ ದುಃಖ, ಮನುಷ್ಯಕುಲವನ್ನು ಎಡೆಬಿಡದೆ ಕಾಡಬೇಕಾದ ದುಃಖ, ಅರಿವಿನ ವಿವೇಕ ಹುಟ್ಟಿಸಬೇಕಾದ ದುಃಖ ಅದು.

ಆದರೆ, ಒಮ್ಮೆ ಭೀಮನಂಥ ಪ್ರವೃತ್ತಿಗಳ ಪರ್ವತವೇ ಯುದ್ಧ ಬೇಡ ಕೃಷ್ಣ ಹೇಗಾದರೂ ಸಂಧಾನ ಸಾಧಿಸು ಎನ್ನುತ್ತಾನೆ. ಇದನ್ನು ಕೇಳಿ ದ್ರೌಪದಿ ಸಿಡಿದೆದ್ದು ಹಾಗಾದರೆ ಭೀಮಾರ್ಜುನ ಪರಾಕ್ರಮಕ್ಕೆ ಧಿಕ್ಕಾರವಿರಲಿ ಎಂದು ಬಿಡುತ್ತಾಳೆ. ಕುಂತಿಯೂ ಯುದ್ಧ ಆಗಿಯೇ ತೀರಬೇಕೆಂದು ಒತ್ತಾಯಿಸುತ್ತಾಳೆ.

ಕಡೆಗೆ ಯುದ್ಧ ಮುಗಿದ ಮೇಲೆ ಭೀಕರ ದುಃಖದಲ್ಲಿ ಅದ್ದಿ ಹೋಗುತ್ತಾರೆ. ಇವರೆಲ್ಲ ಕೇವಲ ಮನುಷ್ಯರು. ನರಕದ ದರ್ಶನ ಪಡೆದು ಸ್ವರ್ಗಕ್ಕೇರುವವರು. ಶಾಪ ತೀರಿಸಿಕೊಳ್ಳಲು ನೆಲಕ್ಕೆ ಬಂದ ದೇವರಲ್ಲ. ದೇವರಾಗಬೇಕೆಂಬ ಹಂಬಲವೂ ಇಲ್ಲ. ಯುಧಿಷ್ಠಿತನನ್ನು ಬಿಟ್ಟು. ದೇವರ ಅಂಶಗಳಾದರೂ ರಾಗ ದ್ವೇಷಗಳಲ್ಲಿ ತೊಳಲಾಡುವವರೇ. ಈ ವಿಚಾರದಲ್ಲಿ ಗ್ರೀಕ್ ವೀರರಂತೆ ಕಾಣುತ್ತಾರೆ. ಅಖಿಲಸ್ಸಿನಂತೆ ಇವರೂ ಸಹ.

ಧೃತರಾಷ್ಟ್ರನಂಥವನೂ ಒಮ್ಮೆ ಹೀಗನ್ನುತ್ತಾನೆ ಛೀ,ಈ ಮಾನವ ಜನ್ಮ ದುಃಖದಿಂದ ತುಂಬಿ ಹೋಗಿದೆ! ಈ ಮಾನವ ದೇಹಕ್ಕೆ ಧಿಕ್ಕಾರ. ನನ್ನ ಈ ಸ್ಥಿತಿಗಿಂತ ಸಾವೇ ಲೇಸು. ಓ ಮಹರ್ಷಿಗಳೇ, ನಾನು ನನ್ನ ಜೀವವನ್ನು ಕೊನೆಗಾಣಿಸುವೆನು ಎಂದು ವ್ಯಾಸರ ಬಳಿ ಗೋಳಾಡುತ್ತಾನೆ. ಅವನೂ ಪ್ರವೃತ್ತಿಗಳ ಪರ್ವತವೇ. ಪುತ್ರಮೋಹದಿಂದ ಹೊರಬರಲಾರ. ಅಪಕೀರ್ತಿಗೆ ಹೆದರದೆ ಇರಲಾರ.

ಜನರಾದರೂ ಎಂಥವರು?

ಯುದ್ಧಕ್ಕೆ ಮೊದಲು ದುರ್ಯೋಧನನ ಅನ್ಯಾಯವನ್ನು ಜರಿದು ಪಾಂಡವರ ನೋವಿಗೆ, ಅವಮಾನಕ್ಕೆ ಮರುಗುತ್ತಿದ್ದ ಪುರದ ಜನರು ಯುದ್ಧದ ನಂತರ ಪಾಂಡವರನ್ನು ಇನ್ನಿಲ್ಲದಂತೆ ನಿಂದಿಸುತ್ತಾರೆ. ಗೋಳಾಡುತ್ತಾರೆ. ಈ ರಾಜನ ಧರ್ಮ- ಅಹಿಂಸೆ ಎಲ್ಲಿ ಹೋದವು ಎಂದು ಎದುರು ನಿಂತು ಬೈಯುತ್ತಾರೆ. ಇದು ಯುದ್ಧದ ಪರಿಣಾಮ. ನವ ಮಾಧ್ಯಮಗಳಲ್ಲಿ ಮತಿಗೆಟ್ಟು ಕೂಗಾಡುವ ಮಿತ್ರರು ಈ ಭಾಗಗಳನ್ನು ಓದಬೇಕು.

ದುರ್ಯೋಧನನ ಸೊಂಟದ ಕೆಳಗೆ ಯಾಕೆ ಹೊಡೆದೆ? ದುಶ್ಯಾಸನನ ನೆತ್ತರು ಯಾಕೆ ಕುಡಿದೆ ಎಂಬ ಗಾಂಧಾರಿಯ ಪ್ರಶ್ನೆಗಳಿಗೆ ಭೀಮನ ಬಳಿ ಉತ್ತರ ಇದ್ದವು.

ಆದರೆ

ಮಗೂ, ನನ್ನ ಒಬ್ಬ ಮಗನನ್ನಾದರೂ ನೀನು ಏಕೆ ಉಳಿಸಲಿಲ್ಲ? ಕಡಿಮೆ ಅಪರಾಧ ಮಾಡಿದ ಒಬ್ಬ ಮಗನನ್ನಾದರೂ ಉಳಿಸಬಹುದಿತ್ತಲ್ಲ? ಒಬ್ಬ ಮಗ. ಈ ವೃದ್ಧ ದಂಪತಿ ಊರುಗೋಲಾಗಲು ಒಬ್ಬನನ್ನಾದರೂ ಉಳಿಸಬಹುದಿತ್ತಲ್ಲ? ಎಂಬ ಆಕೆಯ ಪ್ರಶ್ನೆಗಳಿಗೆ ಭೀಮನಲ್ಲಿ ಉತ್ತರವಿರಲಿಲ್ಲ. ಬಹುಶಃ ವ್ಯಾಸರಲ್ಲೂ ಇರಲಿಕ್ಕಿಲ್ಲ.

ಗಾಂಧಾರಿ ಯುಧಿಷ್ಠಿರನೆಲ್ಲಿ? ಎಂದರೆ ಆತ ಗಡ ಗಡ ನಡುಗುತ್ತ ಮುಂದೆ ಬಂದು ಇಲ್ಲಿದ್ದೇನೆ ತಾಯಿ, ಸಂಪತ್ತಿಗಾಗಿ ನಿಮ್ಮ ಮಕ್ಕಳೆಲ್ಲರನ್ನೂ ಕೊಂದಿರುವ ನಾನು ಎನ್ನುತ್ತಾನೆ. ಗಾಂಧಾರಿ ತನ್ನ ಕಣ್ಣ ಪಟ್ಟಿಯನ್ನು ಸಡಿಲಿಸಿ ಧರ್ಮರಾಯನ ಕಾಲಿನ ಉಗುರು ನೋಡಿದಳಂತೆ ಕೂಡಲೇ ಅವನ ಉಗುರುಗಳು ಕೊಳೆತು ಹುಣ್ಣಾದವಂತೆ. ಇದು ಮಹಾಭಾರತ. ಮನುಷ್ಯನ ಎಲ್ಲ ಅಹಂಕಾರವನ್ನು ಕೊಚ್ಚಿಹಾಕುವ, ಮನುಷ್ಯತ್ವದ ಕಡೆಗೆ ದೂಡುವ ಜಗತ್ತಿನ ಮೇರು ಕೃತಿ.

ಬ್ರಾಹ್ಮಣರನ್ನು ದೇವರ ಜೊತೆ ಕೂರಿಸಿ ನೋಡುವ ಅನೇಕ ಸಂದರ್ಭಗಳಿದ್ದರೂ ಅವನ್ನು ಚರಿತ್ರೆಯ ಚಲನೆಯ ಮೂಲಕ ನೋಡಬೇಕಷ್ಟೆ. ಇದರ ಹೊರತಾಗಿ ಇದು ಬದುಕಿನ ಮಹಾ ದರ್ಶನ.

ಈ ಕೃತಿ ಎಷ್ಟು ವಾಸ್ತವಕ್ಕೆ ಹತ್ತಿರವೆಂದರೆ ಧೃತರಾಷ್ಟ್ರ ವಿದುರನನ್ನು ಕೇಳುತ್ತಾನೆ. ಮನುಷ್ಯರು ನೂರು ವರ್ಷ ಬದುಕುತ್ತಾರಂತಲ್ಲ ಅದು ಹೇಗೆ ಎಂದು.

ಇನ್ನೊಮ್ಮೆ ಧರ್ಮರಾಯ ಸೋದರರಿಗೆ, ಬ್ರಾಹ್ಮಣರಾಗಿ ಹುಟ್ಟಿದ್ದರೆ ಎಷ್ಟು ಚೆಂದವಿತ್ತು. ಯುದ್ಧದ ಗೊಡವೆಯೇ ಇರುತ್ತಿರಲಿಲ್ಲ ಎನ್ನುತ್ತಾನೆ.

ಮಹಾಭಾರತದ ಆದಿಪರ್ವದಿಂದ ಅಂತ್ಯದವರೆಗೂ ಅಹಿಂಸೆಯ ಬಗ್ಗೆ ಧ್ಯಾನವಿದೆ. ಆದರೆ ಹಿಂಸೆ ಧುಮು ಧುಮು ಎಂದು ಧುಮುಕಿ ಬರುತ್ತದೆ. ಅಹಿಂಸೆಯ ಅಭಾವ ಅಹಿಂಸೆಯನ್ನು, ಜೂಜು, ಬೇಟೆಗಳನ್ನು ತಿರಸ್ಕರಿಸಲು ಒತ್ತಾಯಿಸುತ್ತದೆ. ಆದರೆ ಅದಾಗುವುದೇ ಇಲ್ಲ. ನಮ್ಮಲ್ಲೂ ಅನೇಕರಿಗೆ ರಾಷ್ಟ್ರಪ್ರೇಮದ ಬಗ್ಗೆ ಅಭಾವವಿದೆಯೆನ್ನಿಸುತ್ತದೆ.

3. ಟಾಲ್ಸ್ಟಾಯ್‌ರ ವಾರ್ ಆ್ಯಂಡ್ ಪೀಸ್ ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಮೈನಸ್ ಹದಿನೆಂಟು ಡಿಗ್ರಿಯ ಕೊರೆವ ಚಳಿಯ ರಾತ್ರಿಯಲ್ಲಿ , ಬೆಚ್ಚನೆಯ ಬೂಟಿಲ್ಲದೆ ಕುರಿಯ ಚರ್ಮದ ಕೋಟಿಲ್ಲದೆ, ತಲೆಯ ಮೇಲೆ ಸೂರಿಲ್ಲದೆ, ಹೊಟ್ಟೆ ತುಂಬುವಷ್ಟು ಅನ್ನವಿಲ್ಲದೆ ಸುರಿವ ಮಂಜಿಗೆ ಮೈಯೊಡ್ಡಿ ರಶ್ಯನ್ ಸೈನಿಕರು ಸಾವು ನೋವಿನ ಸಂತೆಯಲ್ಲೂ ಬೆಂಕಿ ಕಾಯಿಸುತ್ತಾ ಕೂತಿರುತ್ತಾರೆ.

ಒಬ್ಬ ಸೈನಿಕ, ‘ಅಮ್ಮಾ! ಹಿಮ ಥಂಡಿ, ಕೊರೆಯುವುದಮ್ಮಾ... ನನ್ನ ಪುಣ್ಯ ಸೈನಿಕನಾದೆನಮ್ಮಾ..’ ಎಂದು ಬಿಕ್ಕಳಿಸುತ್ತಾನೆ. ಅಷ್ಟೊತ್ತಿಗೆ ಶತ್ರು ಪಾಳೆಯಕ್ಕೆ ಸೇರಿದ ಇಬ್ಬರು ಫ್ರೆಂಚ್ ಸೈನಿಕರು (ಆಫೀಸರು ರಾಮ್ಬೆಲ್, ಆರ್ಡರ್ಲಿ ಮೋರೆಲ್) ಸುರಿದ ಹಿಮದ ಮೇಲೆ ಚಳಿ ತಡೆಯಲಾಗದೆ ತಟ್ಟಾಡಿಕೊಂಡು ಇವರ ಬಳಿ ಬರುತ್ತಾರೆ. ದಣಿದ ಅವರನ್ನು ಶತ್ರುವೆನ್ನುವುದನ್ನು ಮರೆತು ನೆಂಟರೆಂಬಂತೆ ಭಾವಿಸಿ ನೆಲದ ಮೇಲೆ ನಿಲುವಂಗಿ ಹಾಸುತ್ತಾರೆ. ಗೋಧಿ ಗಂಜಿ, ವೋಡ್ಕ ಕೊಡುತ್ತಾರೆ. ತಮಗೆ ಇಲ್ಲದಿದ್ದರೂ!

ಕೊನೆಗೆ ರಾಮ್ ಬೆಲ್ ನನ್ನು ತಮ್ಮ ಮೇಲಧಿಕಾರಿಯ ಬಳಿಗೆ ಹೊತ್ತೊಯ್ಯುವಾಗ, ಆತ ಅವರ ಕೊರಳುಗಳಿಗೆ ಕೈ ಹಾಕಿ, ‘ಅಯ್ಯೊ ನೀವೂ ಮನುಷ್ಯರೆ! ನಿಮಗೂ ಕರುಣೆ ಇದೆ! ನೀವೂ ಸ್ನೇಹಿತರು! ಎನ್ನುತ್ತಾ ಸೈನಿಕನೊಬ್ಬನ ಭುಜಕ್ಕೆ ತಲೆ ಒರಗಿಸಿ ಮಗುವಿನಂತೆ ಅತ್ತುಬಿಡುತ್ತಾನೆ.

ರಣಧಾರಿಣಿಯ ಭೀಬತ್ಸತೆಯನ್ನು ಅನೇಕ ಕಡೆ ಟಾಲ್ಸ್ಟಾಯ್ ಚಿತ್ರಿಸುತ್ತಾನೆ. ಆದರೆ ಯುದ್ಧದ ಮಧ್ಯದ ಮಾನವೀಯ ಎಳೆಗಳನ್ನು ಸಾಧ್ಯವಾದ ಕಡೆಗಳಲ್ಲೆಲ್ಲ ಹುಡುಕಿ ಹುಡುಕಿ ಕಟ್ಟುತ್ತಾನೆ. ಮುಂದೆ ಇದು ಯುರೋಪಿನ ಫಿಲಾಸಫಿಯಾಗುತ್ತದೆ. ಬ್ರೆಕ್ಟ್ ಗೆಲಿಲಿಯೊ ನಾಟಕದಲ್ಲೂ ಇಂಥ ದೃಶ್ಯಗಳನ್ನು ಚಿತ್ರಿಸುತ್ತಾನೆ. ಕಡೆಗೆ ತನ್ನದೊಂದು ಪದ್ಯದಲ್ಲಿ

‘ಮುಂದಿನ ಸಾಲಿನಲ್ಲಿ ನಿಂತು ಶತ್ರು ಶತ್ರು ಎಂದು ಅರಚುತ್ತಿರುವವನೆ ನಿಜವಾದ ಶತ್ರು’ ಎಂದು ಸಂಪೂರ್ಣ ಯುದ್ಧ ವಿರೋಧಿ ನಿಲುವು ತಾಳಿಬಿಡುತ್ತಾನೆ. ಚಾಪ್ಲಿನ್ ಸರ್ವಾಧಿಕಾರಿಗಳನ್ನು ಗೇಲಿ ಮಾಡಿ ಗಂಜಳದಲ್ಲಿ ಮುಳುಗಿಸಿಬಿಡುತ್ತಾನೆ. ವೀರ ಕಾವ್ಯಗಳಲ್ಲಿ ಮುಳುಗಿ ಹೋಗಿದ್ದ ಯುರೋಪು 2,500 ವರ್ಷಗಳಲ್ಲಿ ಮಾನವ ಕಲ್ಯಾಣಕ್ಕೆ ಯುದ್ಧವೇ ದೊಡ್ಡ ಶತ್ರು ಎಂಬ ನಿಲುವಿಗೆ ಬರುತ್ತದೆ. (ಆದರೆ ಮತ್ತೆ ಯುದ್ಧೋನ್ಮಾದ ಕೊಳಚೆ ನೀರಲ್ಲಿ ಬೆಳೆವ ಹೈಸಿಂಥಿನಂತೆ ಆವರಿಸಿಕೊಳ್ಳುತ್ತಿದೆ).

ಮಹಾಭಾರತ ಕೃತಿ ಇದನ್ನು ಕನಿಷ್ಠ 2,500 ವರ್ಷಗಳ ಹಿಂದೆಯೇ ಮಾಡಿದೆ. ಭಾರತದ ಬುದ್ಧ ಧರ್ಮ ಅಶೋಕನಂತಹ ರಾಜನನ್ನು ಯುದ್ಧ ಭೂಮಿಯ ಕುಲುಮೆಯಲ್ಲಿ ಅರಳಿಸುತ್ತದೆ.

ಹೊಸ ತಲೆಮಾರು ಇವುಗಳಿಂದ ವಿವೇಕ ಕಲಿಯಬೇಕು. ಆಕ್ರಮಣಕ್ಕಿಂತ ರಕ್ಷಣೆ ಅತಿದೊಡ್ಡ ಸಾಧನೆ ಎಂದು ಕೃಷ್ಣ ಪದೇ ಪದೇ ಹೇಳುತ್ತಾನೆ. ಕ್ಯೂಬಾ ಅದನ್ನು ಪದೇ ಪದೇ ಸಾಬೀತು ಮಾಡಿ ಜಗತ್ತಿನ ಕುರುಡು ಕಣ್ಣಿಗೆ ಲಾಟೀನು ಹಿಡಿದಿದೆ.

ಯುದ್ಧದ ಮೊದಲ ಬಲಿ ಸತ್ಯ. ನಂತರ ಹೆಂಗಸರು, ಮಕ್ಕಳು, ವೃದ್ಧರು. ಸತ್ತು ಹೋಗುವ ಅಥವಾ ಬದುಕನ್ನು ಮೂರಾಬಟ್ಟೆ ಮಾಡಿಕೊಳ್ಳುವ ಯುವಕರು. ಇದು ಚೀನಾಕ್ಕೂ ಅನ್ವಯವಾಗುವ ಮಾತು. ಎಲ್ಲರಿಗೂ ಅನ್ವಯವಾಗುವ ಮಾತು.

ಮಹಾಭಾರತ ಮನುಷ್ಯರ ದರ್ಶನ. ಅದಕ್ಕೆ ಗಡಿ ನುಡಿಗಳ ಹಂಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ನೆಲ್ಲುಕುಂಟೆ ವೆಂಕಟೇಶ್

contributor

Similar News