ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಶಾಶ್ವತ ತತ್ವಗಳ ಕುರಿತು ಚಿಂತನೆಯಾಗಲಿ

ಭಾರತವು ಬಹುತ್ವವನ್ನು ಪ್ರತಿನಿಧಿಸುವ, ಹಲವು ಭಾಷೆ, ಧರ್ಮ, ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣದ ವ್ಯವಸ್ಥೆಯಿಂದ ನಿರೂಪಿಸಲ್ಪಟ್ಟ ರಾಷ್ಟ್ರವಾಗಿದೆ. ಒಂದು ಭಾಷೆ, ಒಂದು ಪಕ್ಷ, ಒಂದು ಚುನಾವಣೆ ಈ ದೇಶದ ಬಹುತ್ವವನ್ನು ನಿರಾಕರಿಸುವುದರ ಜೊತೆಗೆ ಸರ್ವಾಧಿಕಾರವನ್ನು ಸೂಚಿಸುತ್ತದೆ. ಭಾರತವು ಈಗ ಇಂತಹ ಅನೇಕ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ.

Update: 2024-09-15 05:39 GMT

ಚರಿತ್ರೆಯುದ್ದಕ್ಕೂ ನಿರಂಕುಶ ಪ್ರಭುತ್ವ, ಸೇನಾಡಳಿತ ಮತ್ತು ರಾಜರಾಡಳಿತವನ್ನು ಕಂಡ ನಾವು ಸಂವೇದನಾಶೀಲ ಪ್ರಜಾಪ್ರಭುತ್ವದ ಮಾದರಿ ಅಳವಡಿಸಿಕೊಂಡಿದ್ದೇವೆ. ಪ್ರಜಾಪ್ರಭುತ್ವವು ಸಂವಿಧಾನದರಿವಿನಡಿ ಜನಸರಕಾರದ ಮುಖ್ಯ ಯಶಸ್ಸು ಚುನಾವಣೆ. ಇದರಲ್ಲಿ ರಾಷ್ಟ್ರದ ನಾಗರಿಕರು ಚುನಾವಣಾ ಪ್ರಕ್ರಿಯೆಯ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಪ್ರಜಾಪ್ರಭುತ್ವದ ಪ್ರಗತಿಯು ಮಾನವ ಇತಿಹಾಸದಲ್ಲಿ ಅತ್ಯಂತ ಪ್ರಶಂಸನೀಯ ಪ್ರಸಂಗಗಳಲ್ಲೊಂದು. ನಿಜವಾದ ಪ್ರಜಾಪ್ರಭುತ್ವದ ಅಭಿವೃದ್ಧಿಯು ಎಲ್ಲಾ ಜನರ ಒಳಗೊಳ್ಳುವಿಕೆಗೆ ಅಗತ್ಯವಾಗಿದೆ. ಇದು ಸಂಸತ್ತಿನ ಕಾರ್ಯವನ್ನು ಒತ್ತಿಹೇಳಲು ಮತ್ತು ನ್ಯಾಯ, ಶಾಂತಿ, ಸಮಾನತೆ ಮತ್ತು ನ್ಯಾಯಕ್ಕಾಗಿ ಅವಕಾಶಗಳ ಪ್ರಗತಿಪರ ವಿಸ್ತರಣೆ, ಜನಾಂಗ, ಲಿಂಗ, ಲೈಂಗಿಕ ದೃಷ್ಟಿಕೋನ, ಲಿಂಗ ಅಭಿವ್ಯಕ್ತಿ, ಧರ್ಮ, ಸಾಮರ್ಥ್ಯ, ಇತರ ಸಂರಕ್ಷಿತ ಗುಣಲಕ್ಷಣಗಳಿಂದ ಸ್ವತಂತ್ರವಾಗಿ, ಪ್ರಜಾಪ್ರಭುತ್ವ ಸರಕಾರಗಳು ತನ್ನ ಅಭಿವೃದ್ಧಿ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಖಾತರಿಪಡಿಸಬೇಕು.

ಪ್ರಜಾಪ್ರಭುತ್ವದ ಅಡಿಗಲ್ಲುಗಳಾದ ನ್ಯಾಯ, ಸ್ವಾಂತಂತ್ರ್ಯ, ಸಮತೆ ಮತ್ತು ಬಂಧುತ್ವ ಭಾರತೀಯ ಸಂವಿಧಾನದಲ್ಲಿ ಅಳವಡಿಸಿದ ಸಂವಿಧಾನ ಕರ್ತೃ ಭಾರತೀಯರ ಜೀವನದ ತತ್ವಗಳೆಂದು ಕರೆದಿದ್ದಾರೆ. ಪ್ರಜಾಪ್ರಭುತ್ವವು ಕಾನೂನುಗಳು, ಕಾರ್ಯನೀತಿಗಳು, ನಾಯಕತ್ವ ಮತ್ತು ಸರಕಾರದ ಯೋಜನೆಗಳು ಮತ್ತಿತರ ನಾಗರಿಕ ಆಡಳಿತ ವ್ಯವಸ್ಥೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನತೆಯೇ ನಿರ್ಧರಿಸುವ ಸರಕಾರದ ಒಂದು ವ್ಯವಸ್ಥೆಯಾಗಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ಮಾಡ್ಯೂಲ್‌ಗಳ ಅನುಪಸ್ಥಿತಿಯು ಪ್ರಜಾಪ್ರಭುತ್ವ ವಿರೋಧಿ ವಿದ್ಯಮಾನವನ್ನು ಪ್ರತಿನಿಧಿಸುತ್ತದೆ. ವಿಶ್ವ ಸಂಸ್ಥೆಯು ಸೆಪ್ಟಂಬರ್ 15ರಂದು ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ 2007ರಲ್ಲಿ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ್ದು, ಎಲ್ಲಾ ಸದಸ್ಯ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ. ಈ ಸಭೆಯು ರಾಜ್ಯಗಳ ನಡುವೆ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಇದನ್ನು ರಚಿಸಿದೆ.

ಕರ್ನಾಟಕ ಸರಕಾರವು ಸೆಪ್ಟಂಬರ್ 15, 2024ರಂದು ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿಗೆ ಕೈ ಜೋಡಿಸಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಜಾಗತಿಕವಾಗಿ ಪ್ರಜಾಪ್ರಭುತ್ವದ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಮತ್ತು ಸಾರ್ವತ್ರಿಕ ಮಾನವ ಹಕ್ಕುಗಳ ಮತ್ತು ಅಭಿವ್ಯಕ್ತಿ ಸೇರಿದಂತೆ ಪ್ರಜಾಪ್ರಭುತ್ವದ ಆದರ್ಶಗಳಿಗಾಗಿ ಪ್ರತಿಪಾದಿಸುವುದು ಈ ದಿನದ ಉದ್ದೇಶವಾಗಿದೆ.

ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಚರ್ಚೆಗಳು, ಸಮ್ಮೇಳನಗಳು ಮತ್ತು ಶೈಕ್ಷಣಿಕ ಉಪನ್ಯಾಸಗಳಂತಹ ಪ್ರಜಾಪ್ರಭುತ್ವದ ಕೇಂದ್ರಿತ ಚಟುವಟಿಕೆಗಳನ್ನು ಸಂಘಟಿಸಲು ಸಹಕರಿಸುತ್ತವೆ. ಈ ದಿನದಂದು, ಸಾರ್ವಜನಿಕ ಪ್ರಜ್ಞೆಯನ್ನು ಹೆಚ್ಚಿಸಲು ಪ್ರಜಾಪ್ರಭುತ್ವದ ವಿಚಾರಗಳನ್ನು ಒತ್ತಿಹೇಳುವ ಹಲವಾರು ಚಟುವಟಿಕೆಗಳನ್ನು ವಿಶ್ವಾದ್ಯಂತ ಆಯೋಜಿಸಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆ, ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಗೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವದ ಮಹತ್ವ, ನಾಗರಿಕರ ಧ್ವನಿ ವರ್ಧನೆ, ಸಂವಾದ ಮತ್ತು ಒಳಗೊಳ್ಳುವಿಕೆಯ ಪ್ರಚಾರ, ಹೊಣೆಗಾರಿಕೆಯನ್ನು ಬೆಳೆಸುವುದು ಮತ್ತು ರಾಜಕೀಯ ಸಹಿಷ್ಣುತೆಯನ್ನು ಬೆಳೆಸುವುದು ಸೇರಿವೆ.

ವೈಚಾರಿಕ ಕ್ರಾಂತಿಯಿಂದಲೇ ದೇಶದ ಉದ್ಧಾರ ಸಾಧ್ಯವೆಂದು ನುಡಿದ ಗೌತಮ ಬುದ್ಧರ ವಿಚಾರಧಾರೆ ಸಾರ್ವಕಾಲಿಕ ಪ್ರಸ್ತುತತೆ ಹೊಂದಿದೆ. ನಮ್ಮ ರಾಷ್ಟ್ರದ ಬಹುತ್ವವನ್ನು ಎತ್ತಿಹಿಡಿದು ಬಹುಜನ ಮೂಲನಿವಾಸಿಗಳ ಬದುಕನ್ನು ಸುಧಾರಿಸಲು ಭಗವಾನ್ ಬುದ್ಧ, ಸಂತ ಕಬೀರ, ಚೋಕಾಮೇಳಾ, ಸಂತ ಘಾಷಿದಾಸ, ಸಂತ ರವಿದಾಸ, ಸಂತ ಜ್ಞಾನದೇವ, ಸಂತ ನಾಮದೇವ, ಸಂತ ತುಕಾರಾಮ, ಜ್ಯೋತಿ ಬಾ ಫುಲೆ, ಪೆರಿಯಾರ್, ನಾರಾಯಣ ಗುರು, ಬಾಬಾ ಸಾಹೇಬ್ ಅಂಬೇಡ್ಕರ್, ಕಾನ್ಷಿರಾಮ್ ಮೊದಲಾದ ಸಂತರು ಮತ್ತು ಮುತ್ಸದ್ದಿಗಳು ಬದುಕಿನುದ್ದಕ್ಕೂ ಹೋರಾಟ ನಡೆಸಿದ್ದಾರೆ. ಇವರೆಲ್ಲರೂ ಬಹುತ್ವದ ಬೇರುಗಳನ್ನು ಭಾರತದ ಸಂಸ್ಕೃತಿಯಲ್ಲಿ ಗಟ್ಟಿಗೊಳಿಸಲು ನಡೆಸಿರುವ ಹೋರಾಟಗಳು ಪ್ರಜಾಪ್ರಭುತ್ವದ ಯಶಸ್ಸಿಗೆ ಐತಿಹಾಸಿಕ ಮಹತ್ವ ಹೊಂದಿದೆ.

ಪ್ರಸಕ್ತ, ಕೆಲವು ದೇಶಗಳು ಪ್ರಜಾಪ್ರಭುತ್ವದ ನೆಪದಲ್ಲಿ ನಿರಂಕುಶ ಆಡಳಿತವನ್ನು ಜಾರಿಗೊಳಿಸುತ್ತಿವೆ. ಚುನಾಯಿತ ನಾಯಕರು ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಅನುಸರಿಸಲು ಸತತವಾಗಿ ವಿಫಲರಾಗಿದ್ದಾರೆ. ಜನರಿಂದ ಮತ್ತು ಜನರಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಪ್ರಜಾಸತ್ತಾತ್ಮಕ ತತ್ವವು ಅಂಚಿನಲ್ಲಿದೆ. ಇಂದು ಪ್ರಜಾಪ್ರಭುತ್ವದ ತತ್ವಗಳ ಮಹತ್ವವನ್ನು ಪುನರುಚ್ಚರಿಸುವುದು ಅನಿವಾರ್ಯವಾಗಿದೆ. ವಿಶ್ವಾದ್ಯಂತ ಪ್ರತಿಯೊಬ್ಬರೂ ನಿಜವಾದ ಪ್ರಜಾಪ್ರಭುತ್ವ ಕ್ಕಾಗಿ ಶ್ರಮಿಸಬೇಕು. ಮಾನವ ಹಕ್ಕುಗಳ ಕಾರ್ಯಕರ್ತರು ಸಾರ್ವಭೌಮತ್ವದ ಪ್ರಾಮುಖ್ಯತೆ ಎತ್ತಿ ಹಿಡಿಯಬೇಕು. ವಿಶ್ವಾದ್ಯಂತ ಪ್ರಾಬಲ್ಯ ಸಾಧಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ವ್ಯಾಪಕವಾದ ಜನಾಂದೋಲನದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಭಾರತವು ಬಹುತ್ವವನ್ನು ಪ್ರತಿನಿಧಿಸುವ, ಹಲವು ಭಾಷೆ, ಧರ್ಮ, ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣದ ವ್ಯವಸ್ಥೆಯಿಂದ ನಿರೂಪಿಸಲ್ಪಟ್ಟ ರಾಷ್ಟ್ರವಾಗಿದೆ. ಒಂದು ಭಾಷೆ, ಒಂದು ಪಕ್ಷ, ಒಂದು ಚುನಾವಣೆ ಈ ದೇಶದ ಬಹುತ್ವವನ್ನು ನಿರಾಕರಿಸುವುದರ ಜೊತೆಗೆ ಸರ್ವಾಧಿಕಾರವನ್ನು ಸೂಚಿಸುತ್ತದೆ. ಭಾರತವು ಈಗ ಇಂತಹ ಅನೇಕ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಜನ ವಿರೋಧಿ ಕಾನೂನುಗಳು, ಮುಕ್ತ ಮಾಧ್ಯಮಗಳ ನಿರ್ಬಂಧ, ಶಾಸಕರ ಖರೀದಿ, ತನಿಖಾ ಸಂಸ್ಥೆಗಳ ದುರ್ಬಳಕೆ, ಜನರ ಪ್ರತಿಭಟಿಸುವ ಹಕ್ಕನ್ನು ಕಸಿಯುವಿಕೆ, ವಿರೋಧ ವ್ಯಕ್ತಪಡಿಸಿದ ಅಥವಾ ಸರಕಾರದ ನೀತಿ ನಿಯಮಗಳ ಬಗ್ಗೆ ಅವಲೋಕನ, ಅಭಿಪ್ರಾಯ ವ್ಯಕ್ತಪಡಿಸಿದವರನ್ನು ಜೈಲಿಗಟ್ಟಲಾಗುತ್ತಿದೆ. ಪ್ರಜಾಸತ್ತಾತ್ಮಕ ಮತ್ತು ಸಮಾಜವಾದಿ ಆದರ್ಶಗಳನ್ನು ದುರ್ಬಲಗೊಳಿಸುವ ಅಧಿಕಾರಶಾಹಿ ಜಾರಿಗೆ ತಂದ ಕ್ರಮಗಳಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಮೂಲಕ ವ್ಯಕ್ತಿಗಳು ಸಂವಿಧಾನದಲ್ಲಿ ನಿಗದಿಪಡಿಸಿದ ತತ್ವಗಳನ್ನು ರಕ್ಷಿಸಬೇಕಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ವಿಚಾರಗಳು ಮತ್ತು ಆದರ್ಶಗಳನ್ನು ಮರುಸ್ಥಾಪಿಸುವುದು ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸುವುದು ಮತ್ತು ಮುನ್ನಡೆಸುವುದು ಇದರ ಉದ್ದೇಶವಾಗಿದೆ. ಬಹುಮುಖ್ಯವಾಗಿ ಪ್ರಜಾಸತ್ತೆಯಲ್ಲಿ ಸಿದ್ಧಾಂತ, ಸಂಸ್ಕೃತಿ, ನೀತಿನಿಯಮಾವಳಿಗಳು, ವಿಚಾರಧಾರೆ ಪರಿಪೂರ್ಣವಲ್ಲ, ಪ್ರಶ್ನಾತೀತವೂ ಅಲ್ಲ. ಇವು ಸಾರ್ವಕಾಲಿಕವೂ ಎನ್ನಲಾಗುವುದಿಲ್ಲ. ಕಾಲದೊಟ್ಟಿಗೆ ಚಲನಶೀಲತೆಯಿಂದಿರಬೇಕು. ಯಾವುದೇ ಪ್ರಕ್ರಿಯೆಗಳು ಪ್ರತಿಕ್ರಿಯೆಗೆ ಒಗ್ಗಿಕೊಳ್ಳಬೇಕು. ಇಲ್ಲದಿದ್ದರೆ ಸರ್ವಾಧಿಕಾರವು ತಲೆದೋರುತ್ತದೆ. ಉತ್ತರದಾಯಿತ್ವ ಮತ್ತು ಸಹಭಾಗಿತ್ವ ಚಿಂತನೆಯು ಬಲಗೊಳ್ಳುತ್ತಿರಬೇಕು. ಆಗ ಮಾತ್ರ ನಾವಂದುಕೊಂಡ ಪ್ರಜಾಪ್ರಭುತ್ವ ಉಳಿದೀತು. ಕಲ್ಯಾಣ ರಾಜ್ಯದ ಪರಿಕಲ್ಪನೆ ಸಾಕಾರವಾದೀತು. ಈ ವರ್ಷದ ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವತ್ತ ಹೆಜ್ಜೆ ಇಡಲಿ. ಆ ಸಾಧನೆಗೆ ಜಾಗತಿಕ ಸಮುದಾಯ, ರಾಷ್ಟ್ರೀಯ ಸರಕಾರಗಳು, ನಾಗರಿಕ ಸಮಾಜ ಮತ್ತು ಜನರ ದೃಢವಾದ ಒಳಗೊಳ್ಳುವಿಕೆ ಮತ್ತು ಬೆಂಬಲದ ಅಗತ್ಯವಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಆದರ್ಶಗಳನ್ನು ಆಧರಿಸಿದ ಪ್ರಜಾಪ್ರಭುತ್ವವು ಮಾನವ ಹಕ್ಕುಗಳ ರಕ್ಷಣೆ ಮತ್ತು ರಾಷ್ಟ್ರದ ಪ್ರಗತಿಗೆ ನಿರ್ಣಾಯಕವಾಗಿದೆ. ಈ ಮಹತ್ವದ ದಿನದಲ್ಲಿ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಶಾಶ್ವತ ತತ್ವಗಳ ಕುರಿತು ಚಿಂತನೆಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಡಿ. ಶ್ರೀನಿವಾಸ ಮಣಗಳ್ಳಿ

contributor

Similar News