ಹೇಮಂತ್ ಸೊರೇನ್ ಪ್ರಕರಣದಿಂದ ಈ.ಡಿ. ಇನ್ನಾದರೂ ಪಾಠ ಕಲಿತೀತೇ?

ಈ.ಡಿ.ಯ ತನಿಖೆಯೇನಿದ್ದರೂ ದೊಡ್ಡ ಪ್ರಮಾಣದಲ್ಲಿರುವುದು ವಿಪಕ್ಷಗಳ ನಾಯಕರ ವಿರುದ್ಧ ಎಂಬುದು ಕಳೆದ ೧೦ ವರ್ಷಗಳಿಂದ ಗೊತ್ತಿರುವ ವಿಚಾರ. ಶೇ.೯೦ರಷ್ಟು ಈ.ಡಿ. ಪ್ರಕರಣಗಳು ಪ್ರತಿಪಕ್ಷದವರ ವಿರುದ್ಧವೇ ಇವೆ. ವಿಪಕ್ಷದವರ ವಿರುದ್ಧ ಆಡಳಿತಾರೂಢ ಬಿಜೆಪಿಯ ಸೂಚನೆಯಂತೆ ಈ.ಡಿ. ಆಟವಾಡುತ್ತದೆ. ಈಗ ಸೊರೇನ್ ಬಿಡುಗಡೆಯಾಗುವ ಮೂಲಕ, ಪರದೆ ಸರಿದಿದೆ ಮತ್ತು ಅದರ ಆಟ ಬಯಲಾಗಿದೆ. ಈಗ ಈ ಪ್ರಕರಣದಿಂದಲಾದರೂ ಈ.ಡಿ. ಪಾಠ ಕಲಿತೀತೇ?

Update: 2024-06-30 06:45 GMT

ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಕಡೆಗೂ ಜೈಲುವಾಸದಿಂದ ಮುಕ್ತಿ ಸಿಕ್ಕಿದೆ. ಐದು ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಸೊರೇನ್ ಹೊರಬಂದಿದ್ದಾರೆ.

ಸೊರೇನ್ ಮೇಲೆ ಭ್ರಷ್ಟಾಚಾರದ ದೊಡ್ಡ ದೊಡ್ಡ ಆರೋಪಗಳನ್ನು ಮಾಡಿದ್ದ ಈ.ಡಿ.ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಭಾರೀ ಮುಖಭಂಗ ಅನುಭವಿಸಿದಂತಾಗಿದೆ.

ಮೇಲ್ನೋಟಕ್ಕೆ ಹೇಮಂತ್ ಸೊರೇನ್ ಅವರು ತಪ್ಪಿತಸ್ಥರು ಎಂದು ಸಾಬೀತಾಗುತ್ತಿಲ್ಲ. ಜಾಮೀನು ಅವಧಿಯಲ್ಲಿ ಆರೋಪಿ ಯಾವುದೇ ಲೋಪ ಎಸಗುವುದಿಲ್ಲ ಎಂದು ಕಂಡುಬರುತ್ತಿದೆ. ಹೀಗಾಗಿ ಜಾಮೀನು ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಈಗ ಹೇಮಂತ್ ಸೊರೇನ್ ಹೊರಬಂದಿರುವ ಮೂಲಕ, ಒಂದು ಸಂದೇಶವಂತೂ ಸ್ಪಷ್ಟವಾಗಿದೆ.

ಈ ದೇಶದಲ್ಲಿ ಹೇಗೆ ವಿಪಕ್ಷಗಳ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತದೆ. ಮತ್ತದರ ಪರಿಣಾಮವಾಗಿ ವಿನಾಕಾರಣ ದಂಡಿಸುವ, ಮಣಿಸಲು ನೋಡುವ ಹಿಕಮತ್ತು ನಡೆಯುತ್ತಿದೆ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳಬಹುದಾಗಿದೆ.

ಆದರೆ ಈ ಷಡ್ಯಂತ್ರಗಳನ್ನೂ ಮೀರಿ ಸತ್ಯ ಗೆಲ್ಲುತ್ತದೆ ಎಂಬುದನ್ನು ಸಾಬೀತುಪಡಿಸುವ ಹಾಗೆ ಸೊರೇನ್ ಈಗ ಬಿಡುಗಡೆಯಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಈ.ಡಿ. ಹೇಮಂತ್ ಸೊರೇನ್ ಅವರನ್ನು ಜನವರಿ ೩೧ರಂದು ಬಂಧಿಸಿತ್ತು.

ದಾಖಲೆಗಳನ್ನು ತಿದ್ದುಪಡಿ ಮಾಡುವ ಅಕ್ರಮ ದಂಧೆಯನ್ನು ಹೇಮಂತ್ ಸೊರೇನ್ ನಡೆಸುತ್ತಿದ್ದರು ಎಂದು ಈ.ಡಿ. ಆರೋಪ ಮಾಡಿತ್ತು.

ಅಷ್ಟೇ ಅಲ್ಲ, ರಾಂಚಿಯಲ್ಲಿ ೮.೮೬ ಕೋಟಿ ರೂ. ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಲಪಟಾಯಿಸಲು ನಕಲಿ ಹಣ ವರ್ಗಾವಣೆ ಹಾಗೂ ಖೋಟಾ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದರು ಎಂದೂ ಈ.ಡಿ. ಆಪಾದಿಸಿತ್ತು.

ನ್ಯಾಯಮೂರ್ತಿ ರೊಂಗೋನ್ ಮುಖೋಪಾಧ್ಯಾಯ ತಮ್ಮ ತೀರ್ಪಿನಲ್ಲಿ, ಸೊರೇನ್ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದು, ಅದರ ಒಡೆತನ ಹೊಂದಿರುವುದು ಅಥವಾ ಅದನ್ನು ಮರೆಮಾಡಿರುವುದು ನಿರ್ದಿಷ್ಟವಾಗಿ ಅಥವಾ ಪರೋಕ್ಷವಾಗಿ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ದೊಡ್ಡ ಸುಳ್ಳಿನ ಮೂಲಕ ತಮ್ಮನ್ನು ಜೈಲಿಗೆ ತಳ್ಳಿದ್ದ ಈ.ಡಿ.ಯ ವಿರುದ್ಧ ಹೋರಾಡಿ ಐದು ತಿಂಗಳ ಬಳಿಕ ಸೊರೇನ್ ಜೈಲಿನಿಂದ ಮನೆಗೆ ಬಂದಿದ್ದಾರೆ. ಮನಿ ಲಾಂಡರಿಂಗ್ ಆರೋಪವನ್ನು ಅವರ ಮೇಲೆ ಈ.ಡಿ. ಹೊರಿಸಿತ್ತು. ಆದರೆ ಅದಕ್ಕೆ ಪುರಾವೆಗಳೇ ಇರಲಿಲ್ಲ.

ಈ.ಡಿ.ಯಿಂದ ಬಂಧಿತರಾಗಿದ್ದ ಅವರು, ಜಾರ್ಖಂಡ್ ಸರಕಾರದ ವಿಶ್ವಾಸಮತ ಪರೀಕ್ಷೆ ವೇಳೆ ಕೋರ್ಟ್ ಅನುಮತಿಯೊಂದಿಗೆ ವಿಧಾನಸಭೆಗೆ ಬಂದಿದ್ದ ವೇಳೆ ತಮ್ಮ ಭಾಷಣದಲ್ಲಿ, ‘‘ನಾನು ಕಣ್ಣೀರು ಹಾಕುವುದಿಲ್ಲ, ಏಕೆಂದರೆ ಆದಿವಾಸಿಗಳ, ಹಿಂದುಳಿದವರ ಕಣ್ಣೀರಿಗೆ ಬೆಲೆಯಿಲ್ಲ’’ ಎಂದಿದ್ದರು. ಈಗಿನ ಷಡ್ಯಂತ್ರಕ್ಕೆ ಸಮಯ ಬಂದಾಗ ಸರಿಯಾದ ಉತ್ತರ ಕೊಡುವುದಾಗಿಯೂ ಅವರು ಹೇಳಿದ್ದರು.

ಸೊರೇನ್ ಬಂಧನ ಬಳಿಕ ಮಾಧ್ಯಮದಲ್ಲಿ ಮಾತನಾಡಿದ್ದ ಬಿಜೆಪಿ ವ್ಯಕ್ತಿಯೊಬ್ಬ, ಸಾವಿರ ಕೋಟಿ ರೂ. ಭ್ರಷ್ಟಾಚಾರ ಸೊರೇನ್ ಕಡೆಯಿಂದ ನಡೆದಿದೆ ಎಂದು ಬೇಕಾಬಿಟ್ಟಿ ಅರೋಪಿಸಿದ್ದೂ ಆಗಿತ್ತು. ಹಾಗಾದರೆ ಸಾವಿರ ಕೋಟಿ ರೂ.ಯ ಭ್ರಷ್ಟಾಚಾರ ಬಯಲಿಗೆ ಬರಬೇಕಿತ್ತಲ್ಲವೆ? ಈಗ ಬಿಜೆಪಿಯವರದಂತಿರುವ ತನಿಖಾ ಏಜನ್ಸಿ ಈ.ಡಿ.ಗೆ ಅದು ಕಾಣಿಸಬೇಕಿತ್ತಲ್ಲವೆ?

ಮೋದಿಯಂತೂ ಪ್ರತಿ ಸಂದರ್ಶನದಲ್ಲೂ ಈ.ಡಿ. ಮೇಲೆ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಅದು ಸ್ವತಂತ್ರವಾಗಿ ತನ್ನ ಕೆಲಸ ಮಾಡುತ್ತದೆ ಎಂದಿದ್ದರು. ಅದು ದೊಡ್ಡ ಸುಳ್ಳು ಎಂಬುದೂ ರಹಸ್ಯವೇನಾಗಿರಲಿಲ್ಲ.

ಈ.ಡಿ.ಯ ತನಿಖೆಯೇನಿದ್ದರೂ ದೊಡ್ಡ ಪ್ರಮಾಣದಲ್ಲಿರುವುದು ವಿಪಕ್ಷಗಳ ನಾಯಕರ ವಿರುದ್ಧ ಎಂಬುದು ಕೂಡ ಕಳೆದ ೧೦ ವರ್ಷಗಳಿಂದ ಗೊತ್ತಿರುವ ವಿಚಾರ. ಶೇ.೯೦ರಷ್ಟು ಈ.ಡಿ. ಪ್ರಕರಣಗಳು ಪ್ರತಿಪಕ್ಷದವರ ವಿರುದ್ಧವೇ ಇವೆ. ವಿಪಕ್ಷದವರ ವಿರುದ್ಧ ಆಡಳಿತಾರೂಢ ಬಿಜೆಪಿಯ ಸೂಚನೆಯಂತೆ ಈ.ಡಿ. ಆಟವಾಡುತ್ತದೆ. ಈಗ ಸೊರೇನ್ ಬಿಡುಗಡೆಯಾಗುವ ಮೂಲಕ, ಪರದೆ ಸರಿದಿದೆ ಮತ್ತು ಅದರ ಆಟ ಬಯಲಾಗಿದೆ.

ಚುನಾವಣಾ ಭಾಷಣಗಳಲ್ಲಿಯೂ ಈ.ಡಿ. ಬಂಧನವನ್ನು ಮೋದಿ ಸಮರ್ಥಿಸಿಕೊಳ್ಳುತ್ತಿದ್ದರು. ಈಗ ಹೈಕೋರ್ಟ್ ಸೊರೇನ್ ತಪ್ಪಿತಸ್ಥರಲ್ಲ ಎಂದಿದೆ. ಈಗ ಮೋದಿ ಏನು ಹೇಳುತ್ತಾರೆ? ಮೋದಿ ಈ ಬಗ್ಗೆ ಮಾತಾಡಬೇಕಲ್ಲವೆ?

ಜಮಿನು ಸ್ವಾಧೀನ ಆರೋಪಕ್ಕೆ ಅಂದು ಅಸೆಂಬ್ಲಿಯಲ್ಲಿ ಮಾತನಾಡಿದ್ದ ಸೊರೇನ್, ಜಮೀನು ತಮ್ಮ ಹೆಸರಿನಲ್ಲಿದೆ ಎಂದು ಸಾಬೀತು ಪಡಿಸಿದರೆ ರಾಜಕೀಯವನ್ನೇ ಬಿಡುವುದಾಗಿಯೂ ಸವಾಲು ಹಾಕಿದ್ದರು.

ಯಾವುದೇ ರಿಜಿಸ್ಟರ್‌ಗಳು, ಕಂದಾಯ ದಾಖಲೆಗಳು ಈ.ಡಿ. ಆರೋಪದಲ್ಲಿ ಉಲ್ಲೇಖಿಸಲಾದ ಭೂಮಿಯ ಸ್ವಾಧೀನ ಮಾಡಿಕೊಳ್ಳುವಲ್ಲಿ ಸೊರೇನ್ ಪಾತ್ರ ಇರುವುದನ್ನು ತೋರಿಸುತ್ತಿಲ್ಲ ಎಂದು ಕೊರ್ಟ್ ಹೇಳಿದೆ.

ಸೊರೇನ್ ವಿರುದ್ಧದ ಫೋರ್ಜರಿ ಆರೋಪ ಈ.ಡಿ.ಯ ಅಸ್ಪಷ್ಟ ಹೇಳಿಕೆಯಂತೆ ತೋರುತ್ತದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ.ಡಿ. ಕಪೋಲ ಕಲ್ಪಿತ ಕಥೆಗಳನ್ನೆ ಮುಂದಿಟ್ಟುಕೊಂಡು, ಒಂದು ರಾಜ್ಯದ ಸಿಎಂ ಸ್ಥಾನದಲ್ಲಿದ್ದವರನ್ನೂ ವಿಪಕ್ಷದವರು ಎಂಬ ಕಾರಣಕ್ಕೆ ಬಂಧಿಸಿ ಜೈಲಿಗೆ ಕಳಿಸುತ್ತದೆ ಎಂದಾದರೆ ಅದೆಷ್ಟು ಅನೈತಿಕವಲ್ಲವೆ?

ಒಬ್ಬ ಮುಖ್ಯಮಂತ್ರಿಯನ್ನು ಬಂಧಿಸುವಾಗ ತಯಾರಿ ಏನಿತ್ತು ಎಂಬುದರ ಬಗ್ಗೆ ಈ.ಡಿ. ಹೇಳಬೇಕಲ್ಲವೆ?

ಸೊರೇನ್ ವಿರುದ್ಧ ಸುಳ್ಳೇ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ ಈ.ಡಿ.ಅಧಿಕಾರಿಗಳ ವಿರುದ್ಧ ಈಗ ಕ್ರಮ ಜರುಗಿಸಬೇಕಲ್ಲವೆ?

ಈ.ಡಿ. ಮತ್ತು ಸಿಬಿಐಗಳ ಅನಾಚಾರದ ವಿರುದ್ಧ ಎಎಪಿ ನಡೆಸಿರುವ ಪ್ರತಿಭಟನೆ ಕೂಡ ಗಮನಾರ್ಹ.

ಯಾವ ಆಧಾರಗಳಿಲ್ಲದೆ ಒಬ್ಬ ಮುಖ್ಯಮಂತ್ರಿಯನ್ನು ಬಂಧಿಸಿ ಜೈಲಿಗೆ ಕಳಿಸಲಾಗುತ್ತದೆ ಮತ್ತು ತಪ್ಪಿತಸ್ಥರೆಂಬುದಕ್ಕೆ ಬಂಧಿತರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂಬುದು ನ್ಯಾಯಾಲಯದಲ್ಲಿಯೇ ಬಯಲಿಗೆ ಬರುತ್ತದೆ. ಹೀಗಿರುವಾಗ ಈ.ಡಿ.ಯನ್ನು ನೋಡಿಕೊಳ್ಳುವ ಅಧಿಕಾರಸ್ಥರು ಮಾತಾಡಬೇಕಲ್ಲವೆ? ಪ್ರಧಾನಿ ಮೋದಿ ಈ.ಡಿ.ಕಡೆಯಿಂದ ಆದ ತಪ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಬೇಕಲ್ಲವೆ?

ಸೊರೇನ್ ಮತ್ತು ಕೇಜ್ರಿವಾಲ್ ಜೈಲಿಗೆ ಹೋಗದೇ ಇರುತ್ತಿದ್ದರೆ ಚುನಾವಣೆಯ ಫಲಿತಾಂಶ ಹೇಗೆ ಬಿಜೆಪಿಗೆ ಇನ್ನೂ ಕಟುವಾಗಿ ಇರುತ್ತಿತ್ತು ಎಂಬುದನ್ನು ಊಹಿಸಬಹುದು. ಆದರೆ ಇಬ್ಬರು ಪ್ರಮುಖ ನಾಯಕರು ಜೈಲಿಗೆ ಹೋದ ಹಿನ್ನೆಲೆಯಲ್ಲಿ ಪಕ್ಷಗಳ ಮನೋಬಲ ಕೊಂಚ ಕುಸಿಯಿತು. ಅದರ ಲಾಭ ಖಂಡಿತವಾಗಿಯೂ ಬಿಜೆಪಿಗೆ ಆಗಿದೆ.

ದಿಲ್ಲಿಯಲ್ಲಿ ಬಿಜೆಪಿ ಎಲ್ಲ ಏಳು ಸೀಟು ಗೆದ್ದಿದೆ. ಜಾರ್ಖಂಡ್ ನಲ್ಲೂ ಹದಿನಾಲ್ಕರಲ್ಲಿ ಎಂಟು ಸೀಟು ಗೆದ್ದಿದೆ ಬಿಜೆಪಿ.

ನೀಟ್ ಹಗರಣ ಕುರಿತ ವಿಚಾರವನ್ನು ವಿಪಕ್ಷಗಳು ಸದನದಲ್ಲಿ ಎತ್ತಿದರೆ ಎರಡೂ ಸದನಗಳಲ್ಲಿ ರಾಹುಲ್ ಗಾಂಧಿ ಮತ್ತು ಖರ್ಗೆಯವರ ಮೈಕ್ ಬಂದ್ ಮಾಡಲಾಗುತ್ತದೆ. ಮತ್ತು ಸದನದ ಘನತೆಗೆ ಸರಿಯಲ್ಲದ ವಿಚಾರವನ್ನು ವಿಪಕ್ಷಗಳು ಚರ್ಚೆಗೆ ಎತ್ತಿವೆ ಎಂದು ದೂಷಿಸಲಾಗುತ್ತದೆ.

ವಿಪಕ್ಷಗಳು ಮಾತಾಡದಂತೆ ಸುಮ್ಮನಾಗಿಸುವುದು, ಬೆದರಿಸುವುದು, ಅವರ ವಿರುದ್ಧ ಈ.ಡಿ.ಯನ್ನು ಬಳಸಿ ಜೈಲಿಗೆ ಕಳಿಸುವುದು ಇದನ್ನು ಕಳೆದ ೧೦ ವರ್ಷಗಳಲ್ಲಿ ನಾವು ನೋಡುತ್ತಿದ್ದೇವೆ.

ಹಾಗಾಗಿಯೇ ಈಗ ಹೇಮಂತ್ ಸೊರೇನ್ ವಿಚಾರವಾಗಿ ಬಂದಿರುವ ಜಾರ್ಖಂಡ್ ಹೈಕೋರ್ಟ್ ತೀರ್ಪು ಸೊರೇನ್ ವಿಚಾರದ ತೀರ್ಪು ಮಾತ್ರವಲ್ಲ, ಮೋದಿ ಸರಕಾರದಿಂದ ಬಂಧಿತರಾಗಿರುವ ವಿಪಕ್ಷ ನಾಯಕರು, ಹೋರಾಟಗಾರರು, ನ್ಯಾಯವಾದಿಗಳು, ಅಧ್ಯಾಪಕರು, ಪತ್ರಕರ್ತರೆಲ್ಲರ ವಿಚಾರದಲ್ಲಿ ಮೋದಿ ಸರಕಾರ ನಡೆದುಕೊಂಡ ರೀತಿ ಎಂಥದ್ದಿರಬಹುದು ಎಂಬ ಸತ್ಯದ ಬಗ್ಗೆಯೂ ಯೋಚಿಸುವಂತೆ ಮಾಡಬಹುದಾದ ತೀರ್ಪಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಿ.ಎನ್. ಉಮೇಶ್

contributor

Similar News