ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕನ್ನಡಿಯೊಳಗಿನ ಗಂಟು?

ಸಚಿವ ಸಂಪುಟ ಅನುಮೋದನೆ ನೀಡಿ, ಇನ್ನೇನು ಮಸೂದೆ ಮಂಡಿಸಬೇಕು ಎಂದಿದ್ದ ಸರಕಾರ ಒಂದೇ ದಿನದಲ್ಲಿ ಅದನ್ನು ಬದಿಗೆ ಸರಿಸಿಬಿಟ್ಟಿದೆ. ಮತ್ತಷ್ಟು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

Update: 2024-07-19 07:14 GMT

ಅಂತೂ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಎಂಬುದು ಮತ್ತೊಮ್ಮೆ ನನೆಗುದಿಗೆ ಬಿದ್ದಂತಾಗಿದೆ.

ಬೆಳಗ್ಗೆ ಶುಭ ಸುದ್ದಿಯಿಂದ ಶುರುವಾಗಿ ಸಂಜೆಯಾಗುವಾಗ ಈ ಸುದ್ದಿ ಮಂಜಿನಂತೆ ಕರಗಿಹೋಗಿದೆ.

ರಾಜ್ಯದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಕಂಪೆನಿಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆಗೆ ಸರಕಾರ ತಾತ್ಕಾಲಿಕ ತಡೆ ನೀಡಿದೆ.

ಸಚಿವ ಸಂಪುಟ ಅನುಮೋದನೆ ನೀಡಿ, ಇನ್ನೇನು ಮಸೂದೆ ಮಂಡಿಸಬೇಕು ಎಂದಿದ್ದ ಸರಕಾರ ಒಂದೇ ದಿನದಲ್ಲಿ ಅದನ್ನು ಬದಿಗೆ ಸರಿಸಿಬಿಟ್ಟಿದೆ. ಮತ್ತಷ್ಟು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಅಲ್ಲಿಗೆ, ಡಾ.ಸರೋಜಿನಿ ಮಹಿಷಿ ವರದಿಯ ಪ್ರಸ್ತಾಪ ಮತ್ತೊಮ್ಮೆ ನೆಲೆ ಕಾಣಲಾರದ ಹಾಗಾಯಿತೆ? ಅಲ್ಲಿಗೆ, ಉದ್ಯಮಿಗಳ ಆಕ್ಷೇಪದ ನಡುವೆಯೂ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾದವೂ ಹಿಂದಕ್ಕೆ ಸರಿದುಹೋಯಿತೇ?

ಹಾಗೆ ನೋಡಿದರೆ, ರಾಜ್ಯದಲ್ಲಿನ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಬಗ್ಗೆ ಸರಕಾರ ಮಸೂದೆ ಮಂಡಿಸಲು ಮುಂದಾಗಿದೆ ಎಂಬುದರ ಘೋಷಣೆ ಬೆನ್ನಲ್ಲೇ ಅದು ಮಂಡನೆಯಾಗುವುದರ ಬಗ್ಗೆ ಅನುಮಾನಗಳೂ ಎದ್ದಿದ್ದವು. ಉದ್ಯಮ ವಲಯದ ವಿರೋಧ ಈ ವಿಚಾರದಲ್ಲಿ ಸರಕಾರವನ್ನು ಪ್ರಭಾವಿಸಲಿದೆಯೇ ಎಂಬ ಪ್ರಶ್ನೆಯೂ ಎದುರಾಗಿತ್ತು. ಯಾಕೆಂದರೆ, ಸಿಎಂ ಸಿದ್ದರಾಮಯ್ಯ ಶೇ.100 ಮೀಸಲಾತಿ ಎಂಬ ಟ್ವೀಟ್ ಅನ್ನು ಕೆಲವೇ ಗಂಟೆಗಳಲ್ಲಿ ಅಳಿಸಿಹಾಕಿ, ಬದಲಿ ಪೋಸ್ಟ್ ಹಾಕಿದ್ದರು. ಅದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬುದು 37 ವರ್ಷಗಳಷ್ಟು ಹಿಂದಿನ ಪ್ರಸ್ತಾಪ ಮತ್ತು ಆ ಪ್ರಸ್ತಾಪವನ್ನು ಮುಂದಿಟ್ಟದ್ದು ಡಾ.ಸರೋಜಿನಿ ಮಹಿಷಿ ವರದಿ.

1986ರ ಡಿಸೆಂಬರ್ 20ರಂದು ಸಲ್ಲಿಕೆಯಾಗಿದ್ದ ಆ ವರದಿಯನ್ವಯ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಮಸೂದೆಗೆ ಈಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಂಪುಟ ಸಭೆ ಒಪ್ಪಿತ್ತು.

ಕರ್ನಾಟಕದಲ್ಲಿನ ಖಾಸಗಿ ವಲಯದ ಕಂಪೆನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.50ರಿಂದ ಶೇ.75ರಷ್ಟು ಮೀಸಲಾತಿ ಸಿಗಬೇಕೆಂಬ ಪ್ರಸ್ತಾಪ ಅದರಲ್ಲಿತ್ತು. ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ‘ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024’ನ್ನು ವಿಧಾನಸಭೆಯಲ್ಲಿ ಮಂಡಿಸುವುದಕ್ಕೂ ತಯಾರಿ ನಡೆದಿತ್ತು. ಆದರೆ ಮಸೂದೆಗೆ ಉದ್ಯಮಿಗಳ ವಿರೋಧ ವ್ಯಾಪಕ ಮಟ್ಟದಲ್ಲಿ ವ್ಯಕ್ತವಾಗುತ್ತಿದ್ದಂತೆ ಸರಕಾರ ಹಿಂದೆ ಸರಿದಿದೆ ಮತ್ತು ಮಸೂದೆಗೆ ತಾತ್ಕಾಲಿಕ ತಡೆ ನೀಡಿದೆ.

ಮಸೂದೆಯಲ್ಲಿ ಏನೆಲ್ಲ ಪ್ರಸ್ತಾಪಗಳಿದ್ದವು?

1.ಕರ್ನಾಟಕದಲ್ಲಿ ಖಾಸಗಿ ವಲಯದ ಕಂಪೆನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50ರಿಂದ ಶೇ.75ರವರೆಗೆ ಮೀಸಲಾತಿ ನೀಡಬೇಕು.

2.ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50ರಷ್ಟು ಮತ್ತು ಆಡಳಿತೇತರ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ಸಿಗಬೇಕು.

3. ಕರ್ನಾಟಕದಲ್ಲಿ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು, ಕನ್ನಡ ಭಾಷೆಯಲ್ಲಿ ಮಾತನಾಡಲು, ಓದಲು ಹಾಗೂ ಬರೆಯಲು ಬರುವವರು ಉದ್ಯೋಗ ಮೀಸಲಾತಿಗೆ ಅರ್ಹರಾಗಿರುತ್ತಾರೆ.

4.ಎಸೆಸೆಲ್ಸಿಯಲ್ಲಿ ಕನ್ನಡ ಅಭ್ಯಸಿಸದವರು ನೋಡಲ್ ಏಜೆನ್ಸಿಗಳು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಅಂಥವರಿಗೆ ಮಾತ್ರ ಈ ಮೀಸಲಾತಿ ಸಿಗಲಿದೆ.

5.ಖಾಸಗಿ ವಲಯದಲ್ಲಿ ಹುದ್ದೆಗೆ ಅರ್ಹ ಅಭ್ಯರ್ಥಿ ಸಿಗದಿದ್ದರೆ ಕಂಪೆನಿಗಳು, ಕೈಗಾರಿಕೆಗಳು ಸರಕಾರ ಅಥವಾ ಇತರ ಸಂಸ್ಥೆಗಳ ಜೊತೆ ಸೇರಿ ಸ್ಥಳೀಯ ಅಭ್ಯರ್ಥಿಗೆ ಮೂರು ವರ್ಷದೊಳಗೆ ಕೆಲಸಕ್ಕೆ ಅಗತ್ಯವಾಗುವ ತರಬೇತಿ ನೀಡಿ ಹುದ್ದೆಯಲ್ಲಿ ಮುಂದುವರಿಸಬೇಕು.

6.ಅಷ್ಟಾಗಿಯೂ ಯಾವುದೇ ಸ್ಥಳೀಯ ಅಭ್ಯರ್ಥಿ ಆ ಹುದ್ದೆಗೆ ಅರ್ಹತೆ ಪಡೆಯದಿದ್ದರೆ ಕಂಪೆನಿಗಳು ಮೀಸಲಾತಿ ವಿನಾಯಿತಿಗಾಗಿ ಸೂಕ್ತ ದಾಖಲೆಗಳೊಂದಿಗೆ ಸರಕಾರಕ್ಕೆ ಅರ್ಜಿ ಸಲ್ಲಿಸಬಹುದು. ಸರಕಾರ ಸೂಕ್ತ ವಿಚಾರಣೆ ನಡೆಸಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.25 ಹಾಗೂ ಆಡಳಿತೇತರ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕಡಿತಗೊಳಿಸಬಹುದು.

7.ಉದ್ಯೋಗ ಮೀಸಲಾತಿ ಕಾನೂನನ್ನು ಉಲ್ಲಂಘಿಸಿದರೆ ಕಂಪೆನಿಗಳಿಗೆ ಸರಕಾರ ಭಾರೀ ಮೊತ್ತದ ದಂಡ ವಿಧಿಸಬಹುದು.

ಆದರೆ ಈ ಮಸೂದೆಗೆ ಉದ್ಯಮ ವಲಯದಿಂದ ವಿರೋಧ ವ್ಯಕ್ತವಾಯಿತು.

ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ ಅವರು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದರು. ಉದ್ಯಮಿಗಳ ತೀವ್ರ ವಿರೋಧದ ಬಳಿಕ ಅವರು ಬೇರೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದರು.

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಬರೆದುಕೊಂಡಿದ್ದರು. ಅಲ್ಲಿಗೆ, ಉದ್ಯೋಗ ಮೀಸಲಾತಿ ವಿಚಾರವಾಗಿ ಸರಕಾರ ನಿಲುವು ಬದಲಿಸಿದ್ದು ಸ್ಪಷ್ಟವಾಗಿತ್ತು. ಆಗಲೇ ಉದ್ಯಮ ವಲಯದವರ ಒತ್ತಡಕ್ಕೆ ಸರಕಾರ ಮಣಿದ ಬಗ್ಗೆ ಅನುಮಾನಗಳು ಮೂಡಿದ್ದವು.

ಮೀಸಲಾತಿ ಮಸೂದೆ ಜಾರಿಗೆ ಬಂದರೆ ಕಂಪೆನಿಗಳ ಪ್ರೊಡಕ್ಟಿವಿಟಿ ಮತ್ತು ಬೆಳವಣಿಗೆಗೆ ಹೊಡೆತ ಬೀಳಲಿದೆ ಎಂಬ ತಕರಾರನ್ನು ಉದ್ಯಮ ವಲಯ ತೆಗೆದಿತ್ತು. ಹುದ್ದೆಗೆ ಅರ್ಹರಾದವರು, ಕೌಶಲ್ಯ ಹೊಂದಿದವರು ಸಿಗದಿದ್ದರೆ ಅವರಿಗೆ ತರಬೇತಿ ನೀಡಬೇಕಾಗಿರುವುದರಿಂದ ಇದು ಅನಗತ್ಯ ಹೊರೆಯಾಗಿದ್ದು, ಕಂಪೆನಿಯ ಉತ್ಪಾದನೆ ಕುಂಠಿತಗೊಳ್ಳಲಿದೆ ಎಂಬ ಆಕ್ಷೇಪಗಳು ಕೇಳಿಬಂದಿದ್ದವು.

ಪೂರ್ತಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವುದಿದ್ದರೆ, ಅದಕ್ಕೆ ತಕ್ಕಂತೆ ಸರಕಾರವೇ ತರಬೇತಿ ಕೊಡಲಿ. ಉನ್ನತ ಶಿಕ್ಷಣಕ್ಕೆ ಹಣ ಖರ್ಚು ಮಾಡಲಿ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ವೆಚ್ಚ ಮಾಡಲಿ ಎಂದು ಇನ್‌ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

‘‘ಕನ್ನಡದ ಪರೀಕ್ಷೆ ಪಾಸು ಮಾಡಿದವರಿಗೆ ಮಾತ್ರವೇ ಉದ್ಯೋಗ ಎಂದರೆ, ಹೆಚ್ಚಿನ ಸೌಕರ್ಯ ಇರುವ ಹೈದರಾಬಾದ್ ಹಾಗೂ ತಮಿಳುನಾಡಿಗೆ ಕಂಪೆನಿಗಳು ಹೋಗುತ್ತವೆ. ಇಲ್ಲಿಗೆ ಬಂಡವಾಳ ಹರಿದು ಬರುವುದಿಲ್ಲ’’ ಎಂದು ಅವರು ಹೇಳಿದ್ಧರು.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ, ‘‘ಇಲ್ಲಿ ಕೌಶಲ್ಯಕ್ಕೆ ಆದ್ಯತೆ. ಸ್ಥಳೀಯರಿಗೆ ಉದ್ಯೋಗ ನೀಡುವ ಭರದಲ್ಲಿ ಕಂಪೆನಿಯ ಅಗ್ರ ಸ್ಥಾನಕ್ಕೆ ಧಕ್ಕೆಯಾಗಬಾರದು. ಕೌಶಲ್ಯವುಳ್ಳವರ ಆಯ್ಕೆಗೆ ಅವಕಾಶವಿರಬೇಕು’’ ಎಂದಿದ್ದರು.

ಅಸೋಚಾಮ್ ಅಧ್ಯಕ್ಷ ಆರ್.ಕೆ ಮಿಶ್ರಾ, ‘‘ಇದು ಇಲ್ಲಿನ ಐಟಿ ಉದ್ಯಮವನ್ನು ಓಡಿಸುತ್ತದೆ. ಇದೊಂದು ದೂರದೃಷ್ಟಿಯಿಲ್ಲದ ನಡೆ’’ ಎಂದು ಟೀಕಿಸಿದ್ದರು.

ಸ್ಥಳೀಯರಿಗೆ ಉದ್ಯೋಗ ಒದಗಿಸುವ ಸರಕಾರದ ಗುರಿ ಸ್ವಾಗತಾರ್ಹವಾದರೂ, ತಾಂತ್ರಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಮತ್ತು ರಾಷ್ಟ್ರದ ಪ್ರಮುಖ ಕೈಗಾರೀಕರಣಗೊಂಡ ರಾಜ್ಯವಾಗಲು ನಮಗೆ ನುರಿತ ಪ್ರತಿಭಾವಂತರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಎಫ್‌ಕೆಸಿಸಿಐ ಮನವಿ ಮಾಡಿತ್ತು.

ಆದರೆ, ಉದ್ಯಮವಲಯದ ಟೀಕೆಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, ‘‘ತಾಂತ್ರಿಕ ಸಮಸ್ಯೆಗಳನ್ನು ನಾವೂ ಅರ್ಥ ಮಾಡಿಕೊಳ್ಳುತ್ತೇವೆ. ತಾಂತ್ರಿಕತೆ ವಿಚಾರ ಬಂದಾಗ ಅಗತ್ಯವಿದ್ದೆಡೆ ರಿಯಾಯಿತಿ ನೀಡಲಾಗುವುದು’’ ಎಂದಿದ್ದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಂತೂ ಅತ್ಯಂತ ಪ್ರಬಲವಾಗಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದರು. ‘‘ಕರ್ನಾಟಕದಲ್ಲಿ ಪ್ರತಿಭೆಗಳಿಲ್ಲ ಎಂದು ಮಾತಾಡುವುದನ್ನು ಖಾಸಗಿ ಸಂಸ್ಥೆಗಳು ಮೊದಲು ನಿಲ್ಲಿಸಬೇಕು’’ ಎಂದು ಲಾಡ್ ಹೇಳಿದ್ದರು.

ಉದ್ಯಮಗಳು ಕರ್ನಾಟಕದ ಕೈತಪ್ಪಬಹುದು ಎಂಬ ಆತಂಕವಿಲ್ಲವೇ ಎಂಬ ಪ್ರಶ್ನೆಗೆ ಅವರು, ‘‘ಉದ್ಯಮದವರೇನೂ ಇಲ್ಲಿ ಸಮಾಜಸೇವೆ ಮಾಡಲು ಬರುತ್ತಿಲ್ಲ. ಅವರಿಂದ ನಮಗೆ ಆಗುವ ಅನುಕೂಲಕ್ಕಿಂತಲೂ ನಮ್ಮಿಂದ ಅವರು ಪಡೆದುಕೊಳ್ಳುವುದೇ ಹೆಚ್ಚು’’ ಎಂದಿದ್ದರು.

‘‘ನಾವು ಒದಗಿಸುವ ಭೂಮಿ, ನಾವು ಒದಗಿಸುವ ಸೌಕರ್ಯ, ಸೌಲಭ್ಯಗಳಿಗೆ ಪ್ರತಿಯಾಗಿ ನಮ್ಮವರಿಗೆ ಉದ್ಯೋಗ ಕೇಳುತ್ತಿದ್ದೇವೆ. ನೂರಕ್ಕೆ ನೂರನ್ನೂ ಕೊಡಿ ಎಂದೇನೂ ಕೇಳುತ್ತಿಲ್ಲ. ನಾವು ಕೇಳುತ್ತಿರುವುದು ನ್ಯಾಯಯುತವಾಗಿದೆ’’ ಎಂದಿದ್ದರು.

ಸರಕಾರವೇ ತರಬೇತಿ ನೀಡಲಿ ಎಂಬ ಮಾತಿಗೂ ಖಡಕ್ ಉತ್ತರ ಕೊಟ್ಟಿದ್ದ ಲಾಡ್,

‘‘ದಿನವೂ ಬದಲಾಗುತ್ತಿರುವ ತಾಂತ್ರಿಕತೆಯಲ್ಲಿ ಯಾವ ರೀತಿಯ ಕೌಶಲ್ಯದ ಅಗತ್ಯವಿದೆ ಎಂದು ಹೇಳಬೇಕಾದವರು ಉದ್ಯಮದವರು. ಅವರು ಮುಂದೆ ಬರಲಿ, ಸರಕಾರ ಎಲ್ಲ ನೆರವನ್ನೂ ನೀಡುತ್ತದೆ’’ ಎಂದಿದ್ದರು.

ಈಗ ಇದ್ದಕ್ಕಿದ್ದಂತೆ ಸರಕಾರವೇ ಮಸೂದೆಗೆ ತಾತ್ಕಾಲಿಕ ತಡೆ ನೀಡುವುದರೊಂದಿಗೆ, ಲಾಡ್ ಅವರ ಸಮರ್ಥನೆಯೂ ವ್ಯರ್ಥವಾಗಿ ಹೋಗಿದೆ.

ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಇಂಥದೊಂದು ಕಾನೂನನ್ನು ಸರಕಾರ ತಂದರೆ ಅದು ಸಂವಿಧಾನ ಬಾಹಿರ ಎನ್ನಿಸಿಕೊಳ್ಳುತ್ತದೆಯೇ ಎಂಬುದು.

2020ರಲ್ಲಿ ಹರ್ಯಾಣ ಸರಕಾರ ಜಾರಿಗೆ ತಂದಿದ್ದ ಇಂಥದೇ ಕಾನೂನನ್ನು ಕೋರ್ಟ್ ರದ್ದುಗೊಳಿಸಿತ್ತು.

ವಾಸ ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂವಿಧಾನ ವಿರೋಧಿ. ಉದ್ಯೋಗಗಳನ್ನು ಕೊಡುವುದು ಸರಕಾರದ ಜವಾಬ್ದಾರಿಯಾಗಿದ್ದು, ಅದನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಿ ಕಡ್ಡಾಯ ಮಾಡುವುದು ಸಂವಿಧಾನ ವಿರೋಧಿ. ಖಾಸಗಿ ವ್ಯಕ್ತಿಗಳು ತಮಗಿಷ್ಟ ಬಂದ ಕಡೆ ಇಷ್ಟ ಬಂದ ಉದ್ಯಮವನ್ನು ನಡೆಸಬಹುದಾಗಿದ್ದು, ಈ ಹಕ್ಕಿನ ಮೇಲೆ ಸರಕಾರ ನಿಯಂತ್ರಣ ತರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬ ಅಂಶಗಳನ್ನು ಆಗ ಹರ್ಯಾಣ ಹೈಕೋರ್ಟ್ ಪರಿಗಣಿಸಿತ್ತು.

ಇದೇ ಕಾರಣಕ್ಕೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಅಧಿಕೃತವಾಗಿ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಅಂಶಗಳಿಗೆ ಉತ್ತರ ಕೊಡುವ ರೀತಿಯಲ್ಲಿ ಕರ್ನಾಟಕದ ಮಸೂದೆ ಯಾವುದೇ ಪ್ರತಿವಾದವನ್ನು ಹೊಂದಿದ ಹಾಗಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೇ ವೇಳೆ ಇನ್ನೊಂದು ವಾದವೇನೆಂದರೆ, ಬಂಡವಾಳ ವಲಸೆಯನ್ನು ಸ್ವಾಗತಿಸುವವರು, ಕಾರ್ಮಿಕ ವಲಸೆಯನ್ನು ಹೇಗೆ ತಿರಸ್ಕರಿಸುತ್ತಾರೆ ಎಂಬುದು. ಹಾಗಾಗಿ, ಸ್ಥಳೀಯರಿಗೆ ಆದ್ಯತೆ ಎಂಬುದು ವಲಸಿಗ ವಿರೋಧಿ ಎಂದಾಗದಂತೆ ಎಚ್ಚರ ಅಗತ್ಯ.

‘‘ಸಾಮಾಜಿಕ ನ್ಯಾಯದ ನೀತಿಗಳನ್ನು ಅನುಸರಿಸುವುದು ಉದ್ಯಮಿಗಳ ಸಾಂವಿಧಾನಿಕ ಜವಾಬ್ದಾರಿಯೂ ಆಗಿದೆ ಎಂದು ತಾಕೀತು ಮಾಡಬಲ್ಲ ಹೋರಾಟಗಳು ಬೇಕು. ಜೊತೆಗೆ, ಕಾರ್ಪೊರೇಟ್ ಬಂಡವಾಳಶಾಹಿ ಪರ ಆರ್ಥಿಕತೆಯನ್ನು ಬದಲಿಸಿ, ಸಂವಿಧಾನದ ಆಶಯಕ್ಕೆ ಒತ್ತು ಕೊಡುವ ಆರ್ಥಿಕತೆಯನ್ನು ರೂಪಿಸುವ ಜರೂರು ಇದೆ’’ ಎನ್ನುತ್ತಾರೆ ವಿಶ್ಲೇಷಕ ಶಿವ ಸುಂದರ್ ಅವರು.

ಹೀಗೆ ಇದು ತೀರಾ ಸರಳ ವಿಚಾರವಲ್ಲ.

ಒಂದೆಡೆ ಕನ್ನಡಿಗರು ಉದ್ಯೋಗ ವಂಚಿತರಾಗಬಾರದು ಎಂಬ ಕಾಳಜಿಯನ್ನು ಸರಕಾರ ವ್ಯಕ್ತಪಡಿಸುವಾಗಲೇ, ಐಟಿ ಕಂಪೆನಿಗಳಂಥ ಖಾಸಗಿ ವಲಯದ ಸಂಸ್ಥೆಗಳು ಇದೇ ನೆಪ ಮಾಡಿ ರಾಜ್ಯದಿಂದ ಕಾಲ್ಕೀಳುವ ಮಾತಾಡುತ್ತಿರುವುದೇಕೆ ಎಂಬ ಪ್ರಶ್ನೆ ಏಳುತ್ತದೆ.

ಅವು ತಮ್ಮ ಲಾಭವನ್ನಷ್ಟೇ ನೋಡುವುದು ಮತ್ತು ಸರಕಾರಗಳು ಬಹಳ ಸಲ ಕಾರ್ಪೊರೇಟ್ ಪರ ಧೋರಣೆಗೇ ಕಟ್ಟುಬೀಳುವುದು ಸಾಮಾನ್ಯವಾಗಿಬಿಡುತ್ತಿದೆ. ಸರಕಾರಗಳ ದೌರ್ಬಲ್ಯವನ್ನು ಚೆನ್ನಾಗಿಯೇ ಬಲ್ಲ ಕಾರ್ಪೊರೇಟ್ ವಲಯ ಲಗಾಮನ್ನು ತನ್ನ ಕೈಯಲ್ಲಿಯೇ ಇಟ್ಟುಕೊಳ್ಳಲು ನೋಡುತ್ತದೆ.

ಇದೇ ಕಂಪೆನಿಗಳು ಸರಕಾರದಿಂದ ತಮಗೆ ಬೇಕಿರುವುದಕ್ಕಿಂತಲೂ ಬಹಳ ಹೆಚ್ಚು ಭೂಮಿಯನ್ನೂ, ರಿಯಾಯಿತಿಗಳನ್ನೂ ಪಡೆಯುವಾಗ ಆ ಕಂಪೆನಿಗಳಿಗೆ ನೀತಿ, ನಿಯಮ, ಸ್ಪರ್ಧಾತ್ಮಕತೆ - ಇವೆಲ್ಲ ಯಾವುದೂ ನೆನಪಾಗುವುದಿಲ್ಲ.

ಈಗ ಮಾತಾಡುತ್ತಿರುವ ಮೋಹನ್ ದಾಸ್ ಪೈ ಅವರೇ ಇದ್ದ ಇನ್‌ಫೋಸಿಸ್ ರಾಜ್ಯ ಸರಕಾರದಿಂದ ತನ್ನ ಅಗತ್ಯಕ್ಕಿಂತ ಹೆಚ್ಚು ನೂರಾರು ಎಕರೆ ಭೂಮಿ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು.

ಉದ್ಯಮಕ್ಕೆ ಪ್ರೋತ್ಸಾಹ, ಉದ್ಯೋಗ ಸೃಷ್ಟಿ, ಬೇರೆ ರಾಜ್ಯಕ್ಕೆ ಹೋಗುತ್ತಾರೆ - ಇತ್ಯಾದಿ ಗುಮ್ಮ ಸೃಷ್ಟಿಸಿ ಇವರು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಾರೆ.

ಆಗ ಯಾವುದೇ ನೀತಿ, ನಿಯಮಗಳ ಮಾತಾಡದೆ, ಭರ್ಜರಿ ರಿಯಾಯಿತಿ, ವಿನಾಯಿತಿ ಎರಡನ್ನೂ ಪಡೆಯುವ ಕಂಪೆನಿಗಳು ಉದ್ಯೋಗ ಕೊಡುವಾಗ ಮಾತ್ರ ಸ್ವಲ್ಪ ವಿನಾಯಿತಿ, ರಿಯಾಯಿತಿ ಕೊಡಲು ಹೇಳಿದರೆ ಆಕಾಶವೇ ಕಳಚಿ ಬಿದ್ದ ಹಾಗೆ ಮಾಡುತ್ತವೆ.

ಇಂಥ ಸನ್ನಿವೇಶದಲ್ಲಿ, ರಾಜ್ಯ ಸರಕಾರ ಮಸೂದೆಗೆ ತಾತ್ಕಾಲಿಕ ತಡೆ ನೀಡಿರುವುದು ಒಂದು ಅಧ್ಯಾಯದ ಮುಕ್ತಾಯದ ಹಾಗೆಯೇ ಕಾಣಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News