ಕಡಬದಲ್ಲಿ ಸರಕಾರಿ ಆ್ಯಂಬುಲೆನ್ಸ್ ಗೇ ಅನಾರೋಗ್ಯ!
ಆ್ಯಂಬುಲೆನ್ಸ್ ಸ್ಥಗಿತಗೊಂಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ವಾರದೊಳಗೆ ಹೊಸ ಟಯರ್ ಹಾಕಿಸಿ ಸಮಸ್ಯೆಯನ್ನು ಸರಿಪಡಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್‌ನ್ನು ಉಪಯೋಗಿಸಲು ಸೂಚನೆ ನೀಡುತ್ತೇನೆ. -ಡಾ.ತಿಮ್ಮಯ್ಯ ಜಿಲ್ಲಾ ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ
ಕಡಬ, ಜ.3: ತುರ್ತು ಸಂದರ್ಭಗಳಲ್ಲಿ ಜನರ ಆರೋಗ್ಯ ಕಾಪಾಡಿ ಸಾವಿರಾರು ಜನರಿಗೆ ಆಸರೆಯಾಗಿದ್ದ ಕಡಬದ 108 ಆ್ಯಂಬುಲೆನ್ಸ್ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಬಲಿಯಾಗಿ ಕಳೆದೊಂದು ತಿಂಗಳಿನಿಂದ ಮೂಲೆಗುಂಪಾಗಿದೆ. ಇದರಿಂದ ಇಲ್ಲಿನ ಜನರು ತುರ್ತು ಆರೋಗ್ಯ ಸೇವೆಗಳಿಗೆ ಪಕ್ಕದ ಊರುಗಳ ಆ್ಯಂಬುಲೆನ್ಸ್‌ನ್ನು ಅನಿವಾರ್ಯ ಎದುರಾಗಿದೆ.
ಕಳೆದೊಂದೂವರೆ ದಶಕದಿಂದ ಕಡಬದಲ್ಲಿ 108 ಆಂಬ್ಯುಲೆನ್ಸ್ ಉಚಿತ ಸೇವೆ ನೀಡುತ್ತಿದ್ದು, ಈ ಹಿಂದೆ 2012 ನವೆಂಬರ್‌ನಲ್ಲಿ ಕುಂಟು ನೆಪವೊಡ್ಡಿ ಆಂಬ್ಯುಲೆನ್ಸ್‌ನ್ನು ಹೊರ ಜಿಲ್ಲೆಗೆ ಕಳುಹಿಸಲಾಗಿತ್ತು. ತಿಂಗಳುಗಳ ಕಾಲ ಕಾದ ಕಡಬದ ಜನತೆ 2013ರ ಜ.7ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಮತ್ತೆ ಕಡಬಕ್ಕೆ ಹೊಸ ಆಂಬ್ಯುಲೆನ್ಸ್‌ನ್ನು ನೀಡಲಾಗಿತ್ತು. ಗ್ರಾಮೀಣ ಪ್ರದೇಶವಾದ ಕಡಬವನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಆ್ಯಂಬುಲೆನ್ಸ್‌ನಲ್ಲಿ 2020ರಲ್ಲಿ ಟಯರ್ ಸಮಸ್ಯೆಯಿಂದ ವಾರಗಟ್ಟಲೆ ಮೂಲೆಗೆ ಸರಿದು ನಿಂತಾಗ ‘ವಾರ್ತಾಭಾರತಿ’ಯಲ್ಲಿ ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ಇದರಿಂದ ಆ್ಯಂಬುಲೆನ್ಸ್ ಮತ್ತೆ ರಸ್ತೆಗೆ ಇಳಿದಿತ್ತು. 2023 ಎಪ್ರಿಲ್‌ನಲ್ಲಿ ಕಡಬಕ್ಕೆ ಅತ್ಯಾಧುನಿಕ ವೆಂಟಿಲೇಟರ್ ಇರುವ ಹೊಸ ಆ್ಯಂಬುಲೆನ್ಸ್ ವಾಹನ ವನ್ನು ನೀಡಲಾಗಿತ್ತು. ಸುಮಾರು 40 ಸಾವಿರಕ್ಕೂ ಅಧಿಕ ಕಿಲೋಮೀಟರ್ ಸಂಚರಿಸಿ ದ್ದರಿಂದ ಟಯರ್ ಸವೆದಿದ್ದು, ಟಯರ್ ಬದಲಾವಣೆ ಮಾಡದ ಕಾರಣ 2023 ಡಿ.6ರಿಂದ ಆ್ಯಂಬ್ಯುಲೆನ್ಸ್‌ನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಿಲ್ಲಿಸಲಾಗಿದೆ. ಇದೀಗ ತುರ್ತು ಸಂದರ್ಭದಲ್ಲಿ ಪಕ್ಕದ ಆಲಂಕಾರು, ಬೆಳ್ಳಾರೆ, ಶಿರಾಡಿ, ಸುಬ್ರಹ್ಮಣ್ಯದಿಂದ ಆ್ಯಂಬುಲೆನ್ಸ್ ಬರುವವರೆಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಡಬದಲ್ಲಿ ಸುಸಜ್ಜಿತ ಸಮುದಾಯ ಭವನ ಆಸ್ಪತ್ರೆ ನಿರ್ಮಿಸಲಾಗಿದ್ದರೂ, ಖಾಯಂ ವೈದ್ಯರ ಕೊರತೆಯಿಂದ ತುರ್ತು ಸಂದರ್ಭದಲ್ಲಿ ಪುತ್ತೂರು ಅಥವಾ ಮಂಗಳೂರಿನ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಹೊಸ ಟಯರ್‌ಗಳನ್ನು ನೀಡುವ ಮೂಲಕ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
108 ಸಿಬ್ಬಂದಿಯನ್ನು ಪಕ್ಕದ ಸುಳ್ಯ, ಬೆಳ್ಳಾರೆ, ಶಿರಾಡಿ, ಆಲಂಕಾರು, ಕೊಕ್ಕಡದ ಆ್ಯಂಬುಲೆನ್ಸ್‌ಗಳಿಗೆ ನಿಯೋಜಿಸಲಾಗಿದ್ದು, ಕಳೆದೊಂದು ವಾರದಿಂದ ಸುಳ್ಯದ ಆ್ಯಂಬುಲೆನ್ಸ್ ಸಂಚಾರವನ್ನು ಕೂಡಾ ಟಯರ್ ಸವೆದ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ.