ಅಡಿಕೆ ಧಾರಣೆ ಕುಸಿತ: ಕಂಗಾಲಾದ ಬೆಳೆಗಾರ

Update: 2024-08-26 07:11 GMT

ಶಿವಮೊಗ್ಗ: ಎಲೆಚುಕ್ಕಿ, ಕೊಳೆ ರೋಗ ದಿಂದ ಫಸಲು ಕಳೆದುಕೊಂಡು ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆಯ ಅಸ್ಥಿರತೆ ಕಾಡಲಾ ರಂಭಿಸಿದೆ. ಪ್ರಸಕ್ತ ವರ್ಷದ ಫಸಲು ಕೈ ಸೇರುವ ಮುನ್ನವೇ ನಷ್ಟದ ಭೀತಿಗೆ ಸಿಲುಕಿದ್ದಾನೆ ಅಡಿಕೆ ಬೆಳೆಗಾರ.

ಕಳೆದ ಹಲವು ತಿಂಗಳಿನಿಂದ ಮಲೆನಾಡಿನಲ್ಲಿ ರಾಶಿ ಅಡಿಕೆ ಧಾರಣೆ ಕುಸಿಯುತ್ತಿದೆ. ಕ್ವಿಂಟಾಲ್‌ಗೆ ಗರಿಷ್ಠ 54 ಸಾವಿರ ರೂ. ತಲುಪಿದ್ದ ಅಡಿಕೆ ಈಗ 49 ಸಾವಿರ ರೂ.ಗೆ ಇಳಿದಿದೆ. ಅರೆ ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಈಗಾಗಲೇ ಅಡಿಕೆ ಸಂಸ್ಕರಣೆ ಮುಗಿದು ಮಾರುಕಟ್ಟೆಗೆ ಪೂರೈಕೆಯಾಗಿದೆ. ಅಲ್ಲದೇ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಅಡಿಕೆ ಬೆಲೆ ಇಳಿಕೆಗೆ ಮೂಲ ಕಾರಣ ಎನ್ನಲಾಗುತ್ತಿದೆ.

ದೇಶಕ್ಕೆ ಇಷ್ಟು ದಿನ ಕಳಪೆ ಅಡಿಕೆ ಆಮದಾಗುತ್ತಿದೆ ಎಂಬ ಕೂಗು ಜೋರಾಗಿತ್ತು. ಆದರೆ ಈಗ ಮಲೆನಾಡಿನಿಂದ ಉತ್ತರ ಭಾರತದ ಗುಟ್ಕಾ ಕಂಪೆನಿಗಳಿಗೆ ಪೂರೈಕೆಯಾಗುತ್ತಿರುವ ಅಡಿಕೆಯೇ ಕಳಪೆ ಎಂಬ ಮಾತು ಕೇಳಿ ಬರುತ್ತಿದೆ.ಇದರಿಂದ ಮಲೆನಾಡಿನ ಅಡಿಕೆ ಬೆಳೆಗಾರರು ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಡಿಕೆ ಸಂಸ್ಕರಣೆಯಲ್ಲಿ ಯಾಂತ್ರೀಕರಣದ ಬಳಕೆಯಿಂದ ಸರಕು ಉತ್ಪಾದನೆ ಕುಸಿದಿರುವುದು ಇದಕ್ಕೆ ಮುಖ್ಯ ಕಾರಣ. ಈಗ ಮಲೆನಾಡಿನ ಅಡಿಕೆ ಎಂದರೆ ರಾಶಿ ಇಡಿ ಮಾತ್ರ ಎನ್ನುವಂತಾಗಿದೆ.

ಕಾನೂನಿನ ಕಟಕಟೆಯಲ್ಲಿ ಅಡಿಕೆ:

ಅಡಿಕೆ ಬೆಳೆ ಒಂದಲ್ಲ ಒಂದು ಸಮಸ್ಯೆಯ ಸುಳಿಗೆ ಸಿಲುಕಿಕೊಂಡಿದೆ. ಕೊಳೆರೋಗ,ಎಲೆಚುಕ್ಕಿರೋಗ ಸಮಸ್ಯೆಯ ನಡುವೆ ಕಾನೂನಿನ ಸಮಸ್ಯೆಯೂ ಎದುರಿಸುತ್ತಿದೆ. ಆರಂಭದಲ್ಲಿ ಗುಟ್ಕಾ ನಿಷೇಧ ಎಂಬ ವಿಷಯದಲ್ಲಿ ಅಡಿಕೆಯನ್ನು ಇನ್ನಿಲ್ಲದಂತೆ ಕಾಡಿತ್ತು. ಹತ್ತು ವರ್ಷಗಳ ಹಿಂದೆ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ. ಅದರ ನಡುವೆ ಸಾರ್ಕ್ ಒಪ್ಪಂದದ ಪರಿಣಾಮ ಅಪಾರ ಪ್ರಮಾಣದ ಕಳಪೆ ಅಡಿಕೆ ದೇಶಕ್ಕೆ ಆಮದಾಯಿತು. ಹೀಗೆ ನಿರಂತರವಾಗಿ ಮಾರುಕಟ್ಟೆ ಅಸ್ಥಿರಗೊಳ್ಳುವ ಸಂಗತಿಗಳು ಘಟಿಸಿದ ಪರಿಣಾಮ ಬೆಳೆಗಾರರು ಆತಂಕ ಎದುರಿಸುವಂತಾಗಿದೆ.

ಕೈ ಸುಡುವ ಪರಿಸ್ಥಿತಿ:

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಪ್ಪ, ಶೃಂಗೇರಿ ಭಾಗದ ಅಡಿಕೆ ಮಾರುಕಟ್ಟೆಗೆ ಬರಲು ಇನ್ನು ನಾಲ್ಕು ತಿಂಗಳು ಬೇಕು. ಅಷ್ಟರೊಳಗೆ ಧಾರಣೆ ಸ್ಥಿರತೆಯತ್ತ ಸಾಗಿದರೆ ಬೆಳೆಗಾರ ಆರ್ಥಿಕವಾಗಿ ಚೇತರಿಕೆ ಕಂಡುಕೊಳ್ಳಲು ಸಾಧ್ಯವಿದೆ. ಇಲ್ಲದೆ ಹೋದರೆ ಕೈ ಸುಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಈ ವರ್ಷದ ಮಳೆ ಪರಿಣಾಮ ಬಹುತೇಕ ಜಿಲ್ಲೆಗಳಲ್ಲಿ ಕೊಳೆ ರೋಗ ವ್ಯಾಪಕವಾಗಿ ಹರಡಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದ ಫಸಲು ಕೈ ಸೇರುವ ಸಾಧ್ಯತೆಗಳಿಲ್ಲ. ಇನ್ನೊಂದೆಡೆ ಅಡಿಕೆ ಮಾರುಕಟ್ಟೆಯಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲವು ದೊಡ್ಡ ವಹಿವಾಟುದಾರರನ್ನು ಹೊರತುಪಡಿಸಿದರೆ ಅನೇಕ ವರ್ತಕರು ಈಗಾಗಲೇ ಅಡಿಕೆ ಖರೀದಿ ಮೇಲೆ ಸಾಕಷ್ಟು ಹೂಡಿಕೆ ಮಾಡಿ ಕಂಗಾಲಾಗಿದ್ದಾರೆ.

ಮಿಕ್ಸಿಂಗ್-ಅಡಿಕೆ ತಿರಸ್ಕಾರ:

ಅಡಿಕೆ ಗುಣಮಟ್ಟದ ಕೊರತೆಯ ನೆಪ ಹೇಳಿ ಪಾನ್ ಮಸಾಲ-ಗುಟ್ಕಾ ಕಂಪೆನಿಗಳು ಖರೀದಿಸದೆ ತಿರಸ್ಕರಿಸಿವೆ. ಇದರಿಂದ ಅಡಿಕೆ ಮಾರಾಟ ಸಹಕಾರ ಸಂಘಗಳು ಮತ್ತು ಖಾಸಗಿ ಅಡಿಕೆ ವರ್ತಕರು ನಷ್ಟ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ.

20 ದಿನಗಳ ಹಿಂದೆ ದಿಲ್ಲಿಗೆ ಕಳುಹಿಸಿದ್ದ ಮೂರು ಲೋಡ್ ಅಡಿಕೆ ತಿರಸ್ಕೃತಗೊಂಡ ಕಾರಣ ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್) 10.5 ಲಕ್ಷ ರೂ. ನಷ್ಟ ಅನುಭವಿಸಿದೆ. ಹೀಗಾಗಿ ಪೂರೈಕೆ ಮಾಡುವ ಅಡಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ತನ್ನ ವ್ಯಾಪ್ತಿಯ 33,000 ಅಡಿಕೆ ಬೆಳೆಗಾರರಿಗೆ ಮ್ಯಾಮ್ಕೋಸ್ ಪತ್ರ ಬರೆದಿದೆ. ತೀರ್ಥಹಳ್ಳಿಯ ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಂಘವೂ ಬೆಳೆಗಾರರ ಗಮನ ಸೆಳೆಯಲು ಪತ್ರದ ಮೊರೆ ಹೋಗಿದೆ.

ಅಡಿಕೆಯ ಇಂದಿನ ದುಸ್ಥಿತಿಗೆ ಪಾಲಿಶ್ ಮೆಷಿನ್ ಕಾರಣವೇ?

ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಪಾಲಿಶ್ ಮೆಷಿನ್ ಆವಿಷ್ಕಾರಗೊಂಡಿತು. ಇದಾದ ಬಳಿಕ ಸಿಪ್ಪೆಗೋಟು ಅಡಿಕೆಯನ್ನು ಈ ಮೆಷಿನ್‌ನಲ್ಲಿ ಪಾಲಿಶ್ ಮಾಡಿ, ಬಣ್ಣ ಹಾಕಿ ಉತ್ತಮ ಗುಣ ಮಟ್ಟದ ರಾಶಿ ಇಡಿ ಎಂಬಂತೆ ಬಿಂಬಿಸಲಾಯಿತು. ಇದನ್ನು ಉತ್ತಮ ಗುಣಮಟ್ಟದ ರಾಶಿ ಇಡಿ ಅಡಿಕೆ ಮೂಟೆಗೆ ಮಿಕ್ಸ್ ಮಾಡಿ ಭಾರೀ ಲಾಭ ಮಾಡುವ ದಂಧೆಯೇ ಬೆಳೆದು ನಿಂತಿದೆ ಎಂದು ಹೇಳಲಾಗುತ್ತಿದೆ.

ಪೂರೈಕೆಯಾದ ಕಳಪೆ ಗುಣಮಟ್ಟದ ಅಡಿಕೆಯನ್ನು ಉತ್ತರ ಭಾರತದಿಂದ ವ್ಯಾಪಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ. ಇದು ಪ್ರಾಮಾಣಿಕವಾಗಿ ಅಡಿಕೆ ವ್ಯಾಪಾರಿ ವೃತ್ತಿಯಲ್ಲಿರುವ ಹಲವರನ್ನು ಕಂಗೆಡಿಸಿದೆ. ಕೋಟ್ಯಂತರ ರೂಪಾಯಿಗಳ ನಷ್ಟಕ್ಕೂ ಕಾರಣವಾಗಿದೆ. ಕಳಪೆ ಗುಣಮಟ್ಟದ ಅಡಿಕೆ ಪೂರೈಕೆಯಿಂದ ಅಡಿಕೆ ಉದ್ಯಮದ ಮೇಲೆ ಬೀಳುತ್ತಿರುವ ಪರಿಣಾಮ ಗಂಭೀರವಾಗಿದ್ದು, ಅಡಿಕೆ ಬೆಳೆಗಾರರು ಗುಣಮಟ್ಟದ ಅಡಿಕೆ ತಯಾರಿಕೆಯ ಮೇಲೆ ಗಮನ ಹರಿಸಬೇಕು.

-ಆರ್. ಎಂ. ಮಂಜುನಾಥಗೌಡ,ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶರತ್ ಪುರದಾಳ್

contributor

Similar News