ಸೆ.15 ಅಂತರ್‌ರಾಷ್ಟ್ರೀಯ ಸರಕಾರಿ ಪ್ರಜಾಪ್ರಭುತ್ವ ದಿನವೆಂಬ ಪ್ರಹಸನ!

Update: 2024-09-15 06:47 GMT

ವರ್ಷ ಪೂರ್ತಿ ಜಗತ್ತಿನಾದ್ಯಂತ ನಡೆಯುವ ಸರ್ವಾಧಿಕಾರಿ ದಮನಗಳ ಬಗ್ಗೆ ಕಣ್ಣು ಮುಚ್ಚಿ ಕೂರುವ ವಿಶ್ವ ಸಂಸ್ಥೆ ಸೆಪ್ಟಂಬರ್ 15 ಅನ್ನು ಮಾತ್ರ ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲು ಕರೆಕೊಡುತ್ತಾ ಬಂದಿದೆ.

ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವು ಅದನ್ನು ಒಂದು ಅದ್ದೂರಿ ಅಧಿಕೃತ ಸರಕಾರಿ ಕಾರ್ಯಕ್ರಮವನ್ನಾಗಿ ಮಾಡಲು ಹೊರಟಿದೆ. ಅದರ ಮೂಲಕ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವದ ಆಶಯಗಳನ್ನು ಬಿತ್ತಲು ಹೊರಟಿದೆಯೋ ಅಥವಾ ತನ್ನ democratic deficit ಅನ್ನು ಮರೆಮಾಚಲು ಹೊರಟಿದೆಯೋ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ... ಹುಟ್ಟಬೇಕು.

ಬಿಜೆಪಿ ಮತ್ತು ಸಂಘಿಗಳು ಫ್ಯಾಶಿಸ್ಟರು. ಪ್ರಜಾತಂತ್ರದ ವಿರೋಧಿಗಳು. ಇದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ, ಅಧಿಕಾರದಲ್ಲಿರುವ ಕಡೆ ಕಾಂಗ್ರೆಸ್ ಪ್ರಜಾತಂತ್ರವನ್ನು ರಕ್ಷಿಸುತ್ತಿದೆಯೇ ಅಥವಾ ಪ್ರಜಾತಾಂತ್ರಿಕ ಮೌಲ್ಯಗಳನ್ನು ಒಳಗಿಂದಲೇ ಟೊಳ್ಳುಗೊಳಿಸುತ್ತಿಲ್ಲವೇ? ಅದನ್ನು ಗುರುತಿಸಬಹುದಾದವರಿಗೆ ಹುಸಿ ನಿರಾಳದ ಅರಿವಳಿಕೆ ಕೊಟ್ಟು ಮಲಗಿಸಿಲ್ಲವೇ?

ವಾಸ್ತವದಲ್ಲಿ ದೇಶದಲ್ಲಿ ವಿರೋಧಿಗಳನ್ನು ಬಿಜೆಪಿ ಕೊಂದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಕಡೆಗಳಲ್ಲಿ ವಿರೋಧವನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ದಮನ ಮಾಡುತ್ತಾ ಬಂದಿದೆ. ಎರಡೂ ಒಂದೇ ಅಲ್ಲ. ಆದರೆ, ಪ್ರಜಾಪ್ರಭುತ್ವದ ಉಳಿವಿನ ದೃಷ್ಟಿಯಲ್ಲಿ ತುಂಬಾ ವ್ಯತ್ಯಾಸವೂ ಇಲ್ಲ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಫೆಲೆಸ್ತೀನ್ ವಿರೋಧಿ ಪ್ರದರ್ಶನಗಳ ಮೇಲೆ ನಿರ್ಬಂಧ ಹೇರಿದ್ದು ಮಾತ್ರವಲ್ಲ, ಬೆಂಗಳೂರು ನಗರದಲ್ಲಿ ಬಿಜೆಪಿ ಅನೌಪಚಾರಿಕವಾಗಿ ಪ್ರತಿಭಟನಾ ಪ್ರದರ್ಶನಗಳ ಮೇಲೇ ಹೇರಿದ್ದ ಹಲವಾರು ನಿರ್ಬಂಧಗಳನ್ನು ಅಧಿಕೃತಗೊಳಿಸಿದೆ... ಕಠಿಣಗೊಳಿಸಿದೆ.

ಅಭಿವ್ಯಕ್ತಿ ಮತ್ತು ಪ್ರತಿರೋಧ ಪ್ರಜಾಪ್ರಭುತ್ವ ಜೀವಿಸುವ ರೀತಿ, ಅವುಗಳ ಮೇಲೇನಿರ್ಬಂಧ ಹೇರಿದಾಗ ಉಳಿಯುವುದು ಪ್ರಜಾಪ್ರಭುತ್ವ ದ ರಥವಲ್ಲ. ಪ್ರಜಾಪ್ರಭುತ್ವದ ಚಟ್ಟ. ಹೀಗಾಗಿ ಕಾಂಗ್ರೆಸ್ ಸರಕಾರ ಅಭಿವ್ಯಕ್ತಿ ಮತ್ತು ಪ್ರತಿರೋಧಗಳ ಮೇಲಿನ ನಿರ್ಬಂಧವನ್ನು ಹಿಂದೆಗೆದುಕೊಳ್ಳಲು ಆಗ್ರಹಿಸದೆ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕತೆ ದಕ್ಕುವುದೇ? ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಲು ಆಗ್ರಹಿಸಿ ಹೋರಾ ಡದೇ ಪ್ರಜಾಪ್ರಭುತ್ವದ ಸರಕಾರಿ ಮೆರವಣಿಗೆಯಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವದ ಅವನತಿಗೆ ಪೂರಕವಾಗುವುದಿಲ್ಲವೇ?

ವಿಶ್ವ ಸಂಸ್ಥೆ 2008ರಲ್ಲಿ ಸೆಪ್ಟಂಬರ್ 15ನ್ನು ಪ್ರಜಾಪ್ರಭುತ್ವ ದಿನವಾಗಿ ಘೋಷಿಸಿದ್ದೆನೋ ನಿಜ. ಆದರೆ ವಿಶ್ವ ಸಂಸ್ಥೆಯೇ ಎಷ್ಟು ಪ್ರಜಾತಾಂತ್ರಿಕವಾಗಿದೆ? 193 ದೇಶಗಳ ಒಕ್ಕೂಟವಾದ ವಿಶ್ವ ಸಂಸ್ಥೆಯ ಯಾವುದೇ ಪರಿಣಾಮಕಾರಿ ನಡೆಯನ್ನು ಐದು ಬಲಿಷ್ಠ ರಾಷ್ಟ್ರಗಳ Security Council ವಿಟೊ ಮಾಡಿ ನಿರ್ಧರಿಸುತ್ತಿರುವಾಗ ಎಲ್ಲಿದೆ ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ?.

ಈ ಅಕ್ಟೋಬರ್ 8ಕ್ಕೆ ಫೆಲೆಸ್ತೀನ್‌ನಲ್ಲಿ ಇಸ್ರೇಲಿ ನವ ನಾಝಿಗಳು ನರಮೇಧವನ್ನು ಪ್ರಾರಂಭಿಸಿ ಒಂದು ವರ್ಷ. ಭಯೋತ್ಪಾದಕ ಇಸ್ರೇಲಿ ಸರಕಾರದ ಮೇಲೆ ವಿಶ್ವ ಸಂಸ್ಥೆ ಯಾವುದೇ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದಂತೆ ಅಮೆರಿಕ ವಿಟೊ ಮಾಡುತ್ತಿರುವಾಗ ಮೋದಿ ಸರಕಾರದಂತಹ ಮರಿ, ಕಿರಿ ಅಮೆರಿಕವಾದಿ ಸರಕಾರಗಳು, ಅದನ್ನು ವಿರೋಧಿಸುತ್ತೇವೆ ಎನ್ನುವ ಪಕ್ಷಗಳು ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುವುದು ಕುಚೋದ್ಯವಲ್ಲವೇ?

ಎಲ್ಲಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವದ ಆಚರಣೆ ಪ್ರಜೆಗಳ ಸ್ವಾಯತ್ತ, ನಾಗರಿಕತ್ವದ ಆಚರಣೆಯಾಗಬೇಕೆ ವಿನಃ ಸರಕಾರಿ ಹಾಗೂ ಸಾಂಕೇತಿಕ ಕಾರ್ಯಕ್ರಮವಾಗಬಾರದಲ್ಲವೇ? ಸರಕಾರದ ಪ್ರಜಾಪ್ರಭುತ್ವೀಕರಣ

ವಾಗಬೇಕೇ ವಿನಃ ಪ್ರಜೆಗಳ ಅಭಿವ್ಯಕ್ತಿಯ ಸರಕಾರೀಕರಣವಾಗಬಾರದು. ಸರಕಾರಗಳಿಂದ ಪ್ರಶ್ನಿಸುವ ಮತ್ತು ಪ್ರತಿರೋಧಿಸುವಷ್ಟು ನೈತಿಕ ನಾಗರಿಕ ಅಂತರವಿಟ್ಟುಕೊಳ್ಳದೇ ಪ್ರಜೆಗಳು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲಾಗದು. ಅಲ್ಲವೇ?.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News