ಉಮರ್ ಖಾಲಿದ್ ಇನ್ನೆಷ್ಟು ದಿನ ಜೈಲುಕಂಬಿಗಳ ಹಿಂದೆ ಕಳೆಯಬೇಕು?

ಭಾರತೀಯ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಹೊರಟ ಉಮರ್ ಖಾಲಿದ್ ಅವರ ನಿಸ್ವಾರ್ಥತೆಗೆ ಸಿಕ್ಕ ಏಕೈಕ ಪ್ರತಿಫಲ ಜೈಲು ಶಿಕ್ಷೆ, ಇದು ಈಗಾಗಲೇ ನಾಲ್ಕು ವರ್ಷಗಳನ್ನು ದಾಟಿದೆ. ಒಂದು ಕಡೆ ಜಾಮೀನು ನಿಯಮವನ್ನು ಸುಮ್ಮನೆ ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳುತ್ತಲೇ ಇದೆ, ಆದರೆ ಇನ್ನೊಂದು ಕಡೆ ಅಮಾಯಕರಿಗೆ ಜಾಮೀನು ನಿರಾಕರಣೆ ಆಗುತ್ತಲೇ ಇದೆ.

Update: 2024-09-15 06:20 GMT

ಭಾರತದ ಪ್ರಖರ ಯುವ ಮೇಧಾವಿಗಳಲ್ಲಿ ಒಬ್ಬರು ನಾಲ್ಕು ವರ್ಷಗಳಿಂದ ಕಂಬಿಗಳ ಹಿಂದೆ ಇದ್ದಾರೆ.

ದಿಲ್ಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್ ಜೈಲುಪಾಲಾಗಿ 2024ರ ಸೆಪ್ಟಂಬರ್ 13ಕ್ಕೆ ನಾಲ್ಕು ವರ್ಷಗಳಾಗಿವೆ.

ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕನನ್ನು 2020ರ ಸೆಪ್ಟಂಬರ್ 13ರಂದು ಬಂಧಿಸಲಾಗಿತ್ತು.

ವಿಚಾರಣಾ ನ್ಯಾಯಾಲಯ ಎರಡನೇ ಬಾರಿ ಜಾಮೀನು ನಿರಾಕರಿಸಿದ ಬಳಿಕ ಉಮರ್ ಜಾಮೀನು ಅರ್ಜಿ ಈಗ ದಿಲ್ಲಿ ಹೈಕೋರ್ಟ್‌ನಲ್ಲಿದೆ. ಅರ್ಜಿಯನ್ನು ಅಕ್ಟೋಬರ್ 7ರಂದು ಪರಿಶೀಲಿಸಲು ಹೈಕೋರ್ಟ್ ನಿರ್ಧರಿಸಿದೆ. ಈ ಮಧ್ಯೆ, ಪ್ರಕರಣದ ವಿಚಾರಣೆ ಮುಂದುವರಿಸಬೇಕೇ ಎಂಬುದರ ಕುರಿತು ಸೆಪ್ಟಂಬರ್ 20ರಂದು ವಿಚಾರಣಾ ನ್ಯಾಯಾಲಯ ವಾದಗಳನ್ನು ಆಲಿಸಲಿದೆ.

ಯುಎಪಿಎ ಪ್ರಕರಣಗಳಿಗೂ ಸಹ ಜಾಮೀನು ನಿಯಮ, ಜೈಲು ಅಪವಾದ ಎಂಬ ತತ್ವವನ್ನು ಪ್ರತಿಪಾದಿಸಿದ 2024 ಆಗಸ್ಟ್ 13ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮೇಲ್ಮನವಿ ಬಂದಿದೆ.

ನಿಷೇಧಿತ ಸಂಘಟನೆಯಾದ ಪಿಎಫ್‌ಐ ಸದಸ್ಯರಿಗೆ ತನ್ನ ಮನೆಯ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ಯುಎಪಿಎ ಆರೋಪ ಎದುರಿಸುತ್ತಿರುವ ಜಲಾಲುದ್ದೀನ್ ಖಾನ್ ಬಿಡುಗಡೆಗೆ ತೀರ್ಪು ನೀಡುವಾಗ, ಅರ್ಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸುವುದು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಜಾಮೀನಿಗೆ ಶರತ್ತುಗಳನ್ನು ಪೂರೈಸಿದರೆ, ಕಠಿಣ ಕಾನೂನುಗಳ ಅಡಿಯಲ್ಲಿಯೂ ಸಹ ನ್ಯಾಯಸಮ್ಮತವಿರುವಾಗ ನ್ಯಾಯಾಲಯಗಳು ಜಾಮೀನು ನೀಡಬೇಕು ಎಂದು ಒತ್ತಿ ಹೇಳಿತು. ಈ ನಿಲುವು ಮೂಲಭೂತ ಹಕ್ಕುಗಳು ಅಪಾಯದಲ್ಲಿರುವ ಪ್ರಕರಣಗಳಲ್ಲಿ ಜಾಮೀನು ನೀಡುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿದೆ.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಉಮರ್ ಖಾಲಿದ್‌ಗೆ ಜಾಮೀನು ನಿರಾಕರಣೆ ಮುಂದುವರಿದಿದೆ ಎಂದು ಟೀಕಿಸಿದ್ದಾರೆ. ವಸ್ತುನಿಷ್ಠ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ ಅವರು ಸುದೀರ್ಘ ಸಮಯದಿಂದ ಜೈಲಿನಲ್ಲಿರುವುದು ಅನ್ಯಾಯವನ್ನು ಎತ್ತಿ ತೋರಿಸುತ್ತದೆ. ಏನೂ ತಪ್ಪು ಮಾಡದವರೊಬ್ಬರು ನಾಲ್ಕು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವುದು ದುರದೃಷ್ಟಕರ ಎಂದು ಸಿಬಲ್ ಹೇಳಿದ್ದಾರೆ.

ನ್ಯಾಯಾಲಯ ಈ ಪರಿಸ್ಥಿತಿಯನ್ನು ನಿವಾರಿಸುವ ವಿಶ್ವಾಸವಿದೆ ಎಂದು ಸಿಬಲ್ ಹೇಳಿದ್ದಾರೆ.

2020 ಸೆಪ್ಟಂಬರ್ 13 ಉಮರ್ ಖಾಲಿದ್ ಬಂಧನ

2022 ಮಾರ್ಚ್ - ಮೊದಲ ಜಾಮೀನು ಅರ್ಜಿ ತಿರಸ್ಕೃತ

2024ರ ಮೇ 28 - ಕಾರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನಿಂದ ಉಮರ್ ಎರಡನೇ ಜಾಮೀನು ಅರ್ಜಿ ತಿರಸ್ಕೃತ.

ಮೇ 2023ರಿಂದ ಅರ್ಜಿಯನ್ನು 12 ಬಾರಿ ಮುಂದೂಡಲಾಗಿದೆ.

18 ಆರೋಪಿಗಳಲ್ಲಿ 12 ಆರೋಪಿಗಳನ್ನು ವಿಚಾರಣೆಯಿಲ್ಲದೆ ಇನ್ನೂ ಜೈಲಿನಲ್ಲಿ ಇರಿಸಲಾಗಿದೆ. ಖಾಲಿದ್ ಸೈಫಿ ಮತ್ತು ಗುಲ್ಫಿಶಾ ಫಾತಿಮಾ ಅವರಂತಹ ಕಾರ್ಯಕರ್ತರು ನಾಲ್ಕು ವರ್ಷ ಮತ್ತು ಐದು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಉಮರ್ ಇತಿಹಾಸಕಾರ. ಆ ಮೇಧಾವಿಯನ್ನು ಜೈಲಿನಲ್ಲಿಟ್ಟಿರುವುದರಿಂದ ವಿದ್ವತ್ ಜಗತ್ತಿಗೆ ನಷ್ಟವಾಗಿದೆ. ಜೆಎನ್‌ಯುನಲ್ಲಿ ಖಾಲಿದ್ ಮತ್ತು ಇತರರಿಗೆ ತಮ್ಮ ಪ್ರಬಂಧಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟ ಅದೇ ನ್ಯಾಯಾಧೀಶರು ನಂತರ ಅವರಿಗೆ ಜಾಮೀನು ನಿರಾಕರಿಸಿದ್ದು ವಿಪರ್ಯಾಸ.

ಉಮರ್ ಕೂಡ ಈ ಹೋರಾಟ ಎಂದೆಲ್ಲ ತಲೆಕೆಡಿಸಿಕೊಳ್ಳದೆ, ಇತರ ಪಿಎಚ್‌ಡಿ ವಿದ್ಯಾರ್ಥಿಗಳಂತೆ ಇರಬಹುದಿತ್ತು ಅಥವಾ ಮುಂದೆ ಬರುವಂತಾಗಲು ಜರ್ನಲ್‌ಗಳಲ್ಲಿ ಪ್ರಕಟಿಸಬಹುದಿತ್ತು. ಆದರೆ ಅವರು ಕಠಿಣ ಮಾರ್ಗವನ್ನು ಆರಿಸಿಕೊಂಡರು.

ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸಾರ್ವತ್ರಿಕ ಪೌರತ್ವಕ್ಕಾಗಿ ಹೋರಾಟದಲ್ಲಿ ತೊಡಗಿದರು.

ಸಾಮಾನ್ಯ ಊಹೆಗೆ ವ್ಯತಿರಿಕ್ತವಾಗಿ, ಎನ್‌ಆರ್‌ಸಿ ಕೇವಲ ಮುಸ್ಲಿಮರನ್ನು ಮಾತ್ರವಲ್ಲ, ಮಹಿಳೆಯರು, ಆದಿವಾಸಿಗಳು, ದಲಿತರು, ಬಡವರು - ದಾಖಲೆಗಳು ಅಥವಾ ಲಿಖಿತ ವಂಶಾವಳಿಗಳನ್ನು ಹೊಂದಿರದ ಎಲ್ಲರ ಹಕ್ಕುಗಳನ್ನೂ ರದ್ದುಪಡಿಸುತ್ತದೆ.

ಆದರೆ ಭಾರತೀಯ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಹೊರಟ ಉಮರ್ ಖಾಲಿದ್ ಅವರ ನಿಸ್ವಾರ್ಥತೆಗೆ ಸಿಕ್ಕ ಏಕೈಕ ಪ್ರತಿಫಲ ಜೈಲು ಶಿಕ್ಷೆ, ಇದು ಈಗಾಗಲೇ ನಾಲ್ಕು ವರ್ಷಗಳನ್ನು ದಾಟಿದೆ.

ಉಮರ್ ಖಾಲಿದ್ ನಾಲ್ಕು ವರ್ಷಗಳ ಸೆರೆವಾಸವನ್ನು ಅನುಭವಿಸುತ್ತಿರುವಾಗ, ಜಾಮೀನು ವಿಚಾರಣೆಗಾಗಿ ಕಾಯುತ್ತಿರುವಾಗ ಸಾಕ್ಷ್ಯಚಿತ್ರವೊಂದು ತಯಾರಾಗಿದೆ.

‘Prisoner No. 626710 is Present’ ಹೆಸರಿನ ಅದನ್ನು ಲಲಿತ್ ವಾಚಾನಿ ನಿರ್ದೇಶಿಸಿದ್ದಾರೆ. ನ್ಯಾಯಕ್ಕಾಗಿ ಉಮರ್ ಅವರ ಸುದೀರ್ಘ ಕಾಯುವಿಕೆಯನ್ನು ಅದು ವಿವರಿಸುತ್ತದೆ.

ಇಂದಿನ ರಾಜಕೀಯ ವಾತಾವರಣದಲ್ಲಿ, ಭಿನ್ನಾಭಿಪ್ರಾಯದ ವಿರುದ್ಧ ಹೆಚ್ಚಾಗಿ ಭಾರೀ ದಮನ ನೀತಿಯನ್ನೇ ಅನುಸರಿಸಲಾಗುತ್ತದೆ. ಉಮರ್ ಖಾಲಿದ್ ಸಂದರ್ಭ ಅನ್ಯಾಯದ ದೊಡ್ಡ ಮಾದರಿಯನ್ನು ಸೂಚಿಸುತ್ತದೆ.

ಅನ್ಯಾಯದ ವಿರುದ್ಧ ಪ್ರತಿಭಟಿಸುವ ಯುವ ಮುಸ್ಲಿಮ್ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಅಂಶವನ್ನು ನಿರಾಕರಿಸಲಾಗದು. ಬಂಧಿತರಾಗಿರುವ ಬಹುಪಾಲು ಜನರನ್ನು ನೋಡಿದರೆ, ಅವರು ಯುವ ಮುಸ್ಲಿಮರು ಎಂದು ಲಲಿತ್ ವಾಚಾನಿ ಹೇಳುತ್ತಾರೆ.

ಉಮರ ಖಾಲಿದ್ ಅಹಿಂಸೆಯನ್ನೇ ಪ್ರತಿಪಾದಿಸಿದವರು.

ಆದರೂ ಸತತವಾಗಿ ಹಿಂಸಾತ್ಮಕ ಪ್ರಚೋದಕ ಎಂದು ಹೇಗೆ ತಪ್ಪಾಗಿ ಬಿಂಬಿಸಲಾಗುತ್ತದೆ ಎಂಬುದರ ಮೇಲೆ ವಾಚಾನಿಯವರ ಸಾಕ್ಷ್ಯಚಿತ್ರ ಬೆಳಕು ಚೆಲ್ಲುತ್ತದೆ.

ಅವರ ಭಾಷಣಗಳನ್ನು ಗಮನಿಸಿದರೆ, ಅವರು ಅಹಿಂಸೆಯ ಬಗ್ಗೆ ಮಾತನಾಡುತ್ತಾರೆ, ಆದರೆ ಸರಕಾರ ಅವರ ವಿರುದ್ಧ ಹಿಂಸಾಚಾರದ ಆರೋಪ ಮಾಡುತ್ತದೆ ಎನ್ನುತ್ತಾರೆ ವಾಚಾನಿ.

2016 ರಿಂದ 2024 ರವರೆಗಿನ ಘಟನೆಗಳನ್ನು ಬೆಸೆಯಲಾಗಿರುವ ಈ ಸಾಕ್ಷ್ಯಚಿತ್ರ, ಉಮರ್ ಖಾಲಿದ್ ಅವರ ವೈಯಕ್ತಿಕ ಹೋರಾಟದ ವೃತ್ತಾಂತವಲ್ಲ.

ಆದರೆ ದೇಶದಲ್ಲಿ ಯುವ ರಾಜಕೀಯ ಕೈದಿಗಳು ಎದುರಿಸುತ್ತಿರುವ ಅನ್ಯಾಯದ ಕುರಿತ ವ್ಯಾಪಕ ಪ್ರತಿಬಿಂಬವಾಗಿದೆ.

ನ್ಯಾಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ನಂಬುವವರು ಇದನ್ನು ನೋಡಲೇಬೇಕು ಎನ್ನುತ್ತಾರೆ ವಾಚಾನಿ.

2016ರಲ್ಲಿ ಜೆಎನ್‌ಯು ಪಿಎಚ್‌ಡಿ ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಕೆಲ ಮಾಧ್ಯಮಗಳು ಅವರು ಜೈಶೆ ಮುಹಮ್ಮದ್ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿದಾಗ ಖಡಕ್ ಆದ ಪ್ರತ್ಯುತ್ತರ ಕೊಟ್ಟಿದ್ದರು ಉಮರ್.

ಆರೋಪ ಹಾಸ್ಯಾಸ್ಪದವಾಗಿದೆ ಎಂದಿದ್ದರು. ‘‘ನನ್ನ ಹೆಸರು ಉಮರ್ ಖಾಲಿದ್, ನಿಜ. ಆದರೆ ನಾನು ಭಯೋತ್ಪಾದಕನಲ್ಲ’’ ಎಂದಿದ್ದರು.

ತನ್ನ 14 ನಿಮಿಷಗಳ ಸುದೀರ್ಘ ಭಾಷಣದಲ್ಲಿ, ತನ್ನ ಬಗ್ಗೆ ಸುಳ್ಳುಗಳನ್ನು ಹರಡಿದ್ದಕ್ಕಾಗಿ ಮಾಧ್ಯಮವನ್ನು ತರಾಟೆಗೆ ತೆಗೆದುಕೊಂಡಿದ್ದರು ಉಮರ್. ತನ್ನ ವಿರುದ್ಧದ ಆರೋಪಗಳು ಎಷ್ಟು ಹಾಸ್ಯಾಸ್ಪದವಾಗಿದೆ ಎಂದು ತೋರಿಸಿದ್ದರು ಮತ್ತು ವಿದ್ಯಾರ್ಥಿಗಳು ಹಕ್ಕುಗಳಿಗಾಗಿ ಮಾತನಾಡಿದ ಕಾರಣ ವಿಶ್ವವಿದ್ಯಾಲಯವನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದ್ದರು.

‘‘ಅಂಚಿನಲ್ಲಿರುವ ಮತ್ತು ತುಳಿತಕ್ಕೊಳಗಾದವರ ಪರ ಮಾತನಾಡಿದರೆ ಅವರಿಗೆ ಆಗಿಬರುವುದಿಲ್ಲ. ಅವರು ನಮಗೆ ಭಯಪಡುತ್ತಾರೆ’’ ಎಂದು ಉಮರ್ ಸರಕಾರವನ್ನು ಉಲ್ಲೇಖಿಸಿ ಹೇಳಿದ್ದರು. ‘‘ಅವರು ನಮ್ಮ ಹೋರಾಟಗಳಿಗೆ ಹೆದರುತ್ತಾರೆ ಮತ್ತು ಅವರು ನಮಗೆ ಭಯಪಡುತ್ತಾರೆ, ಏಕೆಂದರೆ ನಾವು ಯೋಚಿಸುತ್ತೇವೆ’’ ಎಂದು ಮಾರ್ಮಿಕವಾಗಿ ಹೇಳಿದ್ದರು ಉಮರ್.

ಉಮರ್ ಜೈಲಿನಲ್ಲಿದ್ದು ಸತತ ನಾಲ್ಕು ವರ್ಷಗಳು ಕಳೆದುಹೋಗಿವೆ. ಈ ಸಲ ಬೇಸಿಗೆಯಂತೂ ಜೈಲಿನಲ್ಲಿ ಅವರಿಗೆ ಇನ್ನಿಲ್ಲದ ರೀತಿಯಲ್ಲಿ ಯಾತನಾಮಯವಾಗಿತ್ತು.

ಅದನ್ನು ಅವರು ತಮ್ಮ ಬಾಳ ಸಂಗಾತಿ ಬನೋಜ್ಯೋತ್ಸ್ನಾ ಲಾಹಿರಿ ಭೇಟಿ ವೇಳೆ ಕಷ್ಟ ಹೇಳಿಕೊಂಡಿದ್ದಾರೆ.

ಇಷ್ಟು ಭಯಂಕರ ಬೇಸಿಗೆಯ ಬೇಗೆಯನ್ನು ಕಂಡೇ ಇರಲಿಲ್ಲ. ಇದಾವುದನ್ನೂ ಅನುಭವಿಸಿದ್ದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಛಾವಣಿ ಬಹಳ ಎತ್ತರಕ್ಕಿರುವುದರಿಂದ ಫ್ಯಾನ್ ಗಾಳಿಯೂ ಸರಿಯಾಗಿ ಮುಟ್ಟುವುದಿಲ್ಲ. ಕೂಲರ್ ಬಳಸಲು ಅವಕಾಶವಿಲ್ಲ.

ಚಳಿಗಾಲದಲ್ಲಿ ಬ್ಲಾಂಕೆಟ್ ಹೊದೆಯಲು ಕೊಡುತ್ತಾರೆ. ಆದರೆ ಈ ಬೇಸಿಗೆಯಲ್ಲಿ ಕೂಲರ್ ಉಪಯೋಗಿಸಲು ಅವಕಾಶ ಕೊಡುತ್ತಿಲ್ಲ ಎಂದು ಅವರು ಕಷ್ಟ ಹೇಳಿಕೊಂಡಿದ್ದಾರೆ.

ಹೊರಗಿದ್ದು ವಿದ್ವತ್ ವಲಯದಲ್ಲಿ ಮಿಂಚಬೇಕಿದ್ದ ಖಾಲಿದ್ ಜೈಲಿನ ಕತ್ತಲಲ್ಲಿ ಕೊಳೆಯುವಂತಾಗಿದೆ.

ಒಂದು ಕಡೆ ಉನ್ನತ ಶಿಕ್ಷಣಕ್ಕಾಗಿ ದೇಶ ಬಿಟ್ಟು ಹೋಗುವವರು, ಇನ್ನೊಂದು ಕಡೆ ಇಲ್ಲೇ ಉನ್ನತ ಶಿಕ್ಷಣ ಪಡೆದ ಪ್ರತಿಭಾವಂತರು ಜೈಲಲ್ಲಿ ಕೊಳೆಯುತ್ತಿದ್ದಾರೆ

ಒಂದು ಕಡೆ ಕೊಲ್ಲಿರಿ, ಕಡಿಯಿರಿ ಅನ್ನುವವರು, ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವವರು ಜನಪ್ರತಿನಿಧಿಗಳಾಗಿ, ನಾಯಕರಾಗಿ ಮಿಂಚುತ್ತಿದ್ದಾರೆ, ಇನ್ನೊಂದು ಕಡೆ ಗಾಂಧೀಜಿಯ ಆದರ್ಶ ಪಾಲಿಸಿ ಎಂದು ಕರೆ ಕೊಡುವವರು ಜೈಲು ಸೇರುತ್ತಿದ್ದಾರೆ.

ಒಂದು ಕಡೆ ಕೊಲೆ, ಅತ್ಯಾಚಾರ ಆರೋಪಿಗಳು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಿ ಬಂದು ಸಂಭ್ರಮ ಆಚರಿಸುತ್ತಾರೆ, ಇನ್ನೊಂದು ಕಡೆ ಸುಳ್ಳಾರೋಪದಲ್ಲಿ ಬಂಧಿತರು ವರ್ಷಗಟ್ಟಲೆ ಜೈಲಲ್ಲೇ ಉಳಿಯುತ್ತಾರೆ.

ಒಂದು ಕಡೆ ಜಾಮೀನು ನಿಯಮವನ್ನು ಸುಮ್ಮನೆ ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳುತ್ತಲೇ ಇದೆ, ಆದರೆ ಇನ್ನೊಂದು ಕಡೆ ಅಮಾಯಕರಿಗೆ ಜಾಮೀನು ನಿರಾಕರಣೆ ಆಗುತ್ತಲೇ ಇದೆ.

ಇನ್ನೂ ಎಷ್ಟು ದಿನ ಇದೆಲ್ಲ ಹೀಗೆಯೇ ನಡೆಯಲಿದೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಚ್. ವೇಣುಪ್ರಸಾದ್

contributor

Similar News