ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಾರವಾರದ ಯುದ್ಧ ವಿಮಾನ ಮೂಸ್ಯಿಯಂ
ಯುದ್ಧ ವಿಮಾನದ ಮೂಲ ಸೌಕರ್ಯ ಅಭಿವೃದ್ಧಿಗೆ ಸರಕಾರದಿಂದ 2 ಕೋಟಿ ರೂ. ಬಿಡುಗಡೆಯಾಗಿದೆ. ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು.
-ಜೆ.ಜಯಂತ್ , ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದರೂ ಕಾರವಾರ ನಗರದ ಟ್ಯಾಗೋರ್ ಕಡಲತೀರದಲ್ಲಿ ತಂದಿಡಲಾಗಿರುವ ಟುಪೊಲೆವ್ ನಿವೃತ್ತ ಯುದ್ಧ ವಿಮಾನ ಮ್ಯೂಸಿಯಂ ಪ್ರವಾಸಿಗರ ಹಾಟ್ ಸ್ಪಾಟ್ ಆಗುತ್ತಿದೆ. ಜೊತೆಗೆ ಪ್ರವಾಸೋದ್ಯಮ ಇಲಾಖೆಗೆ ಆದಾಯ ವೃದ್ಧಿಸುವ ಕೇಂದ್ರವೂ ಆಗಿದೆ.
1988ರಲ್ಲಿ ಭಾರತೀಯ ನೌಕಾ ಸೇನೆ ಸೇರಿದ ರಶ್ಯ ಮೂಲದ ಟುಪೊಲೆವ್ 142 ಯುದ್ಧ ವಿಮಾನಗಳು 29 ವರ್ಷ ಸೇವೆ ಸಲ್ಲಿಸಿದ ನಂತರ 2017ರಲ್ಲಿ ನಿವೃತ್ತಿಯಾಗಿತ್ತು. ಜಲಾಂತರ್ಗಾಮಿಗಳನ್ನು ಹೊಡೆದುರುಳಿಸಬಹುದಾದ ಸಾಮರ್ಥ್ಯ ಹೊಂದಿದ ವಿಶೇಷ ಯುದ್ಧ ವಿಮಾನ ಇದಾಗಿವೆ. ನಿವೃತ್ತಿಯ ಬಳಿಕ ಯುದ್ಧ ವಿಮಾನ ಅಥವಾ ನೌಕೆಗಳನ್ನು ಒಡೆದು ನಾಶ ಮಾಡಲಾಗುತ್ತದೆ. ಆದರೆ, ಟಪೊಲೆವ್ 2 ವಿಮಾನಗಳನ್ನು ವಸ್ತು ಸಂಗ್ರಹಾಲಯವಾಗಿ ಮಾಡಲು ನಿರ್ಧರಿಸಿದ ನೌಕಾಸೇನೆ ಒಂದನ್ನು ಕರ್ನಾಟಕಕ್ಕೂ ಇನ್ನೊಂದನ್ನು ಆಂಧ್ರ ಪ್ರದೇಶಕ್ಕೂ ನೀಡಿತ್ತು. ಆಂಧ್ರ ಪ್ರದೇಶ ರಾಜ್ಯದಲ್ಲಿ 2017ರಲ್ಲಿಯೇ ಅದು ವಸ್ತು ಸಂಗ್ರಹಾಲಯವಾಗಿದೆ.
ಸಾಕಷ್ಟು ಪತ್ರ ವ್ಯವಹಾರದ ಬಳಿಕ ರಕ್ಷಣಾ ಇಲಾಖೆಯ ವೆಚ್ಚದಲ್ಲಿ ಭಾರತೀಯ ನೌಕಾಸೇನೆಯಿಂದ ವಿಮಾನವನ್ನು ಕಾರವಾರಕ್ಕೆ ಸಾಗಿಸಿ 2023ರ ಅಕ್ಟೋಬರ್ನಿಂದ ಮರು ಜೋಡಣೆ ಕಾರ್ಯ ಪ್ರಾರಂಭಿಸಲಾಗಿತ್ತು. ಸುಮಾರು 8 ತಿಂಗಳು ಕಾದ ಬಳಿಕ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿದೆ. ದೇಶದಲ್ಲಿರುವ ಎರಡೇ ನಿಜವಾದ ಯುದ್ಧ ವಿಮಾನ ವಸ್ತು ಸಂಗ್ರಹಾಲಯಗಳಲ್ಲಿ ಇದೂ ಒಂದಾಗಿರುವುದು ವಿಶೇಷ. ಸಾಕಷ್ಟು ದಿನಗಳ ಬಳಿಕ ಜೂನ್ 29ರಿಂದ ಟುಪೊಲೆವ್ ಯುದ್ಧ ವಿಮಾನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಬಿಟ್ಟಿದ್ದರೂ ಇನ್ನೂ ಕೆಲವು ಸೌಲಭ್ಯಗಳು ಬೇಕಾಗಿವೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ಗೋವಾಕ್ಕೆ ತೆರಳುವವರು ಹಾಗೂ ಗೋವಾದಿಂದ ಆಗಮಿಸುವ ನೂರಾರು ಪ್ರವಾಸಿಗರಿಗೆ ಟುಪೊಲೆವ್ ನಿವೃತ್ತ ಯುದ್ಧ ವಿಮಾನ ಮ್ಯೂಸಿಯಂ ಪ್ರವಾಸಿಗರ ಸೆಲ್ಫಿ ಪಾಯಿಂಟ್ ಆಗಿದೆ.
ಕಾರವಾರದಲ್ಲಿ ಟುಪೊಲೆವ್ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪನೆಯಾದ ಬಳಿಕ 5,500 ಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ವೀಕ್ಷಣೆಗೆ ಪ್ರವೇಶ ಶುಲ್ಕ ಪಡೆಯಲಾಗುತ್ತಿದ್ದು, ಕೇವಲ ಒಂದೂವರೆ ತಿಂಗಳಲ್ಲಿ 1,06,475 ರೂ. ಆದಾಯವಾಗಿದೆ. ಮಳೆಗಾಲದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ. ಅದರಂತೆ ನಿರ್ಮಿತಿ ಕೇಂದ್ರ ಪ್ರಾಥಮಿಕವಾಗಿ ಪ್ಲಾಟ್ ಫಾರ್ಮ್ ಮಾತ್ರ ಮಾಡಿದೆ. ಕೆಫೆಟೇರಿಯಾ, ಗಾರ್ಡನ್ ಸೇರಿ ಇನ್ನಷ್ಟು ಪ್ರವಾಸಿಗರ ಆಕರ್ಷಣೆಯ ಕಾರ್ಯ ಮಾಡಲು ಯೋಜಿಸಲಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.