ಸ್ವತಂತ್ರ ಭಾರತದ ಬೆಳವಣಿಗೆ ಪಥ: ಕಾರ್ಮಿಕ ವರ್ಗದ ಮುಂದಿರುವ ಸವಾಲುಗಳು

ರೈತರು, ಕೂಲಿಕಾರರು, ಸಾಮಾನ್ಯ ದುಡಿಯುವ ಜನತೆಯ ಜೊತೆಗೂಡಿದ ಕಾರ್ಮಿಕ ವರ್ಗದ ಹೋರಾಟಗಳಷ್ಟೇ ಈ ಶೋಷಣೆಯ ಲೂಟಿಗಳನ್ನು ಮತ್ತು ದಾಳಿಗಳನ್ನು ತಡೆಯಬಲ್ಲದು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಕಾರ್ಮಿಕ ವರ್ಗ ಅದನ್ನು ಉಳಿಸಿ ಸಂರಕ್ಷಿಸಲು ಮತ್ತೆ ತ್ಯಾಗ ಬಲಿದಾನಗಳನ್ನು ಮಾಡದೆ ಪರಿಹಾರವಿಲ್ಲ.

Update: 2024-08-15 09:04 GMT

ಭಾರತದ ಸ್ವಾತಂತ್ರ್ಯವು ಕಾರ್ಮಿಕರು ಸೇರಿದಂತೆ ಅಸಂಖ್ಯಾತ ಜನರ ತ್ಯಾಗ ಬಲಿದಾನಗಳಿಂದ ಗಳಿಸಿದ್ದಾಗಿತ್ತು. ಸ್ವಾತಂತ್ರ್ಯವೆಂದರೆ, ಕೇವಲ ಅಧಿಕಾರ ಹಸ್ತಾಂತರ ಮಾತ್ರವಲ್ಲ, ಶಿಕ್ಷಣ, ಆರೋಗ್ಯ, ಭೂಮಿ ಹಂಚಿಕೆ, ಕಾರ್ಮಿಕ ಹಕ್ಕುಗಳು, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಹೀಗೆ ಈ ದಿಕ್ಕಿನಲ್ಲಿ ನಾವು ಸಾಗಬೇಕಿತ್ತು. ಆದರೆ ಬ್ರಿಟಿಷರ ಗುಲಾಮಗಿರಿ ಮಾಡುತ್ತಿದ್ದ ಪಾಳೇಗಾರಿ ಜಮೀನ್ದಾರಿ ಶಕ್ತಿಗಳು ಮತ್ತು ಬೃಹತ್ ಬಂಡವಾಳದಾರರು ಒಟ್ಟಿಗೆ ಸೇರಿ ಪ್ರಭುತ್ವದ ಅಧಿಕಾರ ಹಿಡಿದರು. ಕಾಂಗ್ರೆಸ್ ಈ ಶಕ್ತಿಗಳ ಪ್ರತಿನಿಧಿಯಾಯಿತು. ಪರಿಣಾಮವಾಗಿ, ಬಂಡವಾಳಶಾಹಿ ಮತ್ತು ಗ್ರಾಮೀಣ ಜಮೀನ್ದಾರಿ ಶಕ್ತಿಗಳ ಹಿತಾಸಕ್ತಿಯನ್ನು ಕಾಪಾಡುವ ಬೆಳವಣಿಗೆ ಪಥವನ್ನು ಕಾಂಗ್ರೆಸ್ ಜಾರಿಗೊಳಿಸಿತು.

ಭಾರತವು ಅಪಾರವಾದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿದೆ. ಶ್ರಮಜೀವಿಗಳ ಬದುಕನ್ನು ಬಂಗಾರ ಮಾಡಬಹುದಾದ ಎಲ್ಲಾ ಅವಕಾಶಗಳು ಇಲ್ಲಿವೆ. ಆದರೆ ಇದುವರೆಗಿನ ಅನುಭವ ಬೇರೆ ಕಥೆ ಹೇಳುತ್ತಿದೆ. ಆರಂಭದ ಎರಡು ದಶಕಗಳಲ್ಲಿ ಜನರ ನಿರೀಕ್ಷೆಗಳ ಒತ್ತಾಯದ ಪರಿಣಾಮವಾಗಿ ಕಾರ್ಮಿಕರ ಪರವಾದ ಕೆಲವು ಅರೆಮನಸ್ಸಿನ ನೀತಿಗಳು ಜಾರಿಗೊಂಡವು. ಕೈಗಾರಿಕೆಗಳ ಬೆಳವಣಿಗೆ ಮತ್ತು ಪ್ರಭುತ್ವದ ಮಧ್ಯಪ್ರವೇಶದಂತಹ ಸೀಮಿತ ಪ್ರಯತ್ನಗಳು ನಡೆದವು. ಪರಿಣಾಮವಾಗಿ, ಒಂದು ಕಡೆ ಬಂಡವಾಳಶಾಹಿ ಕ್ರೋಡೀಕರಣಕ್ಕೆ ಮತ್ತೊಂದು ಕಡೆ ಕಾರ್ಮಿಕ ವರ್ಗದ ನಿರ್ದಯ ಶೋಷಣೆಗೆ ಇದು ಅವಕಾಶ ಮಾಡಿತು.

ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ ಇದ್ದ ಸ್ವಾವಲಂಬಿ ಮತ್ತು ಕಾರ್ಮಿಕರ ಪರವಾದ ಅಲ್ಪ ಪ್ರಮಾಣದ ನೀತಿಗಳನ್ನು ಸಂಪೂರ್ಣವಾಗಿ ಕೈಚೆಲ್ಲುವುದು ಆರಂಭವಾಯಿತು. ಕಾರ್ಮಿಕರ ನಿಜವಾದ ವೇತನಗಳು ಕುಸಿಯಲು ಆರಂಭವಾಯಿತು. ಕೈಗಾರಿಕೆಗಳ ಮುಚ್ಚುವಿಕೆ ಮತ್ತು ಕಾರ್ಮಿಕರ ಹೊರಹಾಕುವಿಕೆ ಹೆಚ್ಚಾಯಿತು. ದುರ್ಬಲವಾಗಿರುವ ಕಾರ್ಮಿಕ ಕಾಯ್ದೆಗಳು ಅವರ ಹಕ್ಕುಗಳನ್ನು ರಕ್ಷಿಸಲಿಲ್ಲ. ಬಂಡವಾಳಗಾರರಿಂದ ಇವುಗಳ ಉಲ್ಲಂಘನೆ ನಿತ್ಯ ನಿರಂತರವಾಯಿತು. ಕಾರ್ಮಿಕ ಸಂಘಗಳ ಮಾನ್ಯತೆ ಮತ್ತು ಸಾಮೂಹಿಕ ಚೌಕಾಸಿ ಹಕ್ಕಿನ ನಿರಾಕರಣೆ ತೀವ್ರಗೊಂಡಿತು. ಉದಾರೀಕರಣ ಮತ್ತು ಖಾಸಗೀಕರಣದ ದಾಳಿಯಿಂದಾಗಿ ಕೋಟ್ಯಂತರ ಕಾರ್ಮಿಕರು ಕೆಲಸಗಳನ್ನು ಕಳೆದುಕೊಂಡರು. ಖಾಯಂ ಕೆಲಸಗಳನ್ನು ಗುತ್ತಿಗೆ ಮತ್ತು ಖಾಯಮೇತರ ಕೆಲಸಗಳಾಗಿ ಪರಿವರ್ತಿಸಲಾಯಿತು. ದುಡಿಯುವ ಮಹಿಳೆಯರ ಶೋಷಣೆ ಹೆಚ್ಚಾಯಿತು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನವೂ ದೊರೆಯದ ಸ್ಥಿತಿ ನಿರ್ಮಾಣವಾಯಿತು. ಅತ್ಯಂತ ಕಡಿಮೆ ವೇತನಗಳು, ಅಮಾನವೀಯ ಕೆಲಸದ ಪರಿಸ್ಥಿತಿಗಳು, ದೀರ್ಘವಾದ ಕೆಲಸದ ಅವಧಿಗಳು, ಸಾಮಾಜಿಕ ಸುರಕ್ಷತೆ ನಾಶ, ಇಂತಹ ಲಕ್ಷಣಗಳು ವ್ಯಾಪಕವಾದವು. 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಬರುವುದರೊಂದಿಗೆ ಇಂತಹ ದಾಳಿಗಳು ತೀವ್ರಗೊಂಡವು.

ಈ ರೀತಿ ಬೆಳೆದು ಬಂದ ನೀತಿಗಳು ಬಿಜೆಪಿಯ ಮೋದಿ ಆಡಳಿತದಲ್ಲಿ ಪಡೆದುಕೊಂಡಿರುವ ಸ್ವರೂಪವನ್ನು ಹೀಗೆ ಗಮನಿಸಬಹುದು:

1. ಬಂಡವಾಳಶಾಹಿ ವರ್ಗವು ಲಾಭಕ್ಕಾಗಿ ಜಗತ್ತನ್ನು ಒಂದೇ ಮಾರುಕಟ್ಟೆ ಎಂದು ಭಾವಿಸಿ, ಅದಕ್ಕಾಗಿ ಬಂಡವಾಳ, ಕಾರ್ಮಿಕರು, ಉತ್ಪಾದನೆ ಮತ್ತು ಸರಕುಗಳ ಅನಿರ್ಬಂಧಿತ ಚಲನೆಯನ್ನು ಬಯಸುತ್ತಿದೆೆ. ಲಾಭದ ವಿಪರೀತ ಹೆಚ್ಚಳಕ್ಕಾಗಿ ‘ಶ್ರಮದ ಅನಮ್ಯತೆ’ (ಐಚಿbouಡಿ ಈಟexibiಟiಣಥಿ) ಒತ್ತಾಯಿಸುತ್ತಿದೆ. ಇದಕ್ಕಾಗಿಯೇ ಪ್ರಸಕ್ತ ಮೋದಿ ಸರಕಾರವು ‘ಭೂಮಿ, ಶ್ರಮ ಮತ್ತು ಬಂಡವಾಳ’ ವಲಯದಲ್ಲಿ ಬಂಡವಾಳಿಗರ ಲಾಭಕ್ಕೆ ಯಾವುದೇ ಅಡೆ-ತಡೆ ಇರಲಾರದಂತೆ ಬದಲಾವಣೆಗಳನ್ನು ಮಾಡುತ್ತಿದೆ. ಬಂಡವಾಳದ ಹಿತಾಸಕ್ತಿಗೆ ಪೂರಕವಾಗಿ ಕಾರ್ಮಿಕ ಕಾಯ್ದೆಗಳ ಸರಳೀಕರಣ, ಗುತ್ತಿಗೆ, ಹೊರಗುತ್ತಿಗೆ, ಸಾಂದರ್ಭಿಕ ಕೆಲಸ, ದಿನಗೂಲಿ, ತಾತ್ಕಾಲಿಕ, ತರಬೇತಿ, ಇತ್ಯಾದಿ ವಿಧಾನಗಳನ್ನು ಜಾರಿಗೊಳಿಸಲಾಗಿದೆ.

2. ಬಂಡವಾಳದ ಪ್ರಮುಖ ಪ್ರಶ್ನೆ ಲಾಭ, ಸೂಪರ್ ಲಾಭ, ಅಂಕೆಯಿಲ್ಲದ ಲಾಭ. ಪರಿಣಾಮವಾಗಿ ಕಾರ್ಮಿಕರ ವೇತನಗಳ ಪಾಲು ಕುಸಿಯುತ್ತಾ ಬಂಡವಾಳಿಗರ ಲಾಭದ ಪಾಲು ಹೆಚ್ಚುತ್ತಾ ಸಾಗಿದೆ. ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ ಪ್ರಕಾರ, ಸಂಘಟಿತ ವಲಯದ ನಿವ್ವಳ ಮೌಲ್ಯವರ್ಧನೆ (ಜಿವಿಎ) 1981-82ರಲ್ಲಿ ಕಾರ್ಮಿಕರ ವೇತನದ ಪಾಲು ಶೇ.30.3ರಷ್ಟಿದ್ದರೆ ಮಾಲಕರ ಲಾಭದ ಪಾಲು ಶೇ.23.4ರಷ್ಟಿತ್ತು. 2019-20ರಲ್ಲಿ ಕಾರ್ಮಿಕರ ವೇತನದ ಪಾಲು ಶೇ.18.9ಕ್ಕೆ ಇಳಿಕೆಯಾದರೆ ಮಾಲಕರ ಲಾಭದ ಪಾಲು ಶೇ.38.6ಕ್ಕೆ ಏರಿಕೆಯಾಗಿದೆ. ಕೋವಿಡ್ ನಂತರದಲ್ಲಿ ಈ ಅಂತರ ಇನ್ನೂ ಹೆಚ್ಚಾಗಿದೆ. ಈ ಸಂಘರ್ಷವೇ ಪ್ರಸಕ್ತ ಕಾಲಘಟ್ಟದ ಪ್ರಮುಖ ಪ್ರಶ್ನೆಯಾಗಿದೆ.

3. ಈ ಬಿಕ್ಕಟ್ಟಿನಿಂದ ಉತ್ಪಾದನಾ ಕ್ಷೇತ್ರದಲ್ಲಿ ಸ್ಥಗಿತತೆ ಮತ್ತು ಮುಖ್ಯವಾಗಿ ಉದ್ಯೋಗ ಸೃಷ್ಟಿಯು ತೀವ್ರವಾಗಿ ಕುಸಿತವಾಗಿದೆ. ಉತ್ಪಾದನಾ ವಲಯದ ಸರಕುಗಳ ಆಮದು ಹೆಚ್ಚಾಗಿದೆ. ಇದು ಆರ್ಥಿಕತೆಯ ಮತ್ತು ಉದ್ಯೋಗದ ಮೇಲೆ ದುಷ್ಪರಿಣಾಮ ಬೀರಿದೆ. ಬಿಕ್ಕಟ್ಟಿನಿಂದ ಹೊರಬರಲು ಮೋದಿ ಸರಕಾರ ಪಿಎಲ್‌ಐ (ಪ್ರೊಡಕ್ಟಿವಿಟಿ ಲಿಂಕ್ಡ್ ಇನ್ಸೆಂಟಿವ್)ಮತ್ತು ಇಎಲ್‌ಐ (ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿವ್) ಮೂಲಕ ಬಂಡವಾಳದಾರರಿಗೆ ಲಕ್ಷಾಂತರ ಕೋಟಿ ರೂ.ಗಳ ಇನ್ಸೆಂಟೀವ್ ನೀಡುತ್ತಿದೆ. ಪಿಎಲ್‌ಐ ಮತ್ತು ಇಎಲ್‌ಐಗಳಿಂದ ಕಾರ್ಮಿಕ ವರ್ಗಕ್ಕೆ ಪ್ರಯೋಜವಿಲ್ಲ. ಇದು ಬಂಡವಾಳದಾರರಿಗೆ ಲಕ್ಷಾಂತರ ಕೋಟಿ ರೂ. ಗಳನ್ನು ವರ್ಗಾಯಿಸುವ ಲೂಟಿ ಕಾರ್ಯಕ್ರಮ.

4. ಸ್ವಾತಂತ್ರ್ಯದ ಆರಂಭದಲ್ಲಿ ರೈಲು, ವಿಮಾನ, ಬಂದರು, ಸಂಪರ್ಕ, ಸಂವಹನ, ವಿದ್ಯುತ್, ಸಿಮೆಂಟ್, ಉಕ್ಕು, ಕಲ್ಲಿದ್ದಲು, ಖನಿಜ ಇತ್ಯಾದಿಗಳನ್ನು ಸರಕಾರವೇ ಮಾಡಬೇಕೆಂದು ಆಳುವ ವರ್ಗವೇ ಪ್ರತಿಪಾದಿಸಿತು. ಪರಿಣಾಮವಾಗಿ ಉದ್ಯೋಗವೂ ಸಾರ್ವಜನಿಕ ಮತ್ತು ಖಾಯಂ ಸ್ವರೂಪವನ್ನು ಪಡೆಯಿತು. ಇದನ್ನೇ ಭಾರತದ ಸ್ವಾವಲಂಬಿ ಆರ್ಥಿಕ ಬೆಳವಣಿಗೆ ಎನ್ನಲಾಯಿತು. ಅಸಲಿಗೆ ಇದು ಪ್ರಭುತ್ವ ಪ್ರಾಯೋಜಿತ ಬಂಡವಾಳಶಾಹಿ ಬೆಳವಣಿಗೆಯ ದಾರಿಯಾಗಿತ್ತು.

5. 1980ರ ಮಧ್ಯದಿಂದ ಆಳುವ ವರ್ಗವು ಇದಕ್ಕೆ ತದ್ವಿರುದ್ಧ ಪ್ರತಿಪಾದನೆಯನ್ನು ಆರಂಭಿಸಿತು. ಸರಕಾರದ ಕೆಲಸ ಉದ್ದಿಮೆ ನಡೆಸುವುದಲ್ಲ, ಸರಕಾರಿ ಉದ್ಯೋಗ ನೀಡುವುದಲ್ಲ ಮುಂತಾಗಿ ವಾದಿಸಿತು. ದೇಶದ ಕೈಗಾರಿಕೆ, ಕೃಷಿ, ಸೇವೆ ಎಲ್ಲಾ ವಲಯಗಳನ್ನೂ ಖಾಸಗೀಕರಿಸಬೇಕು ಮತ್ತು ಉದಾರೀಕರಿಸಬೇಕೆಂಬ ಬೇಡಿಕೆ ಮತ್ತು ಅದರ ಭಾಗವಾಗಿ ಕಾರ್ಮಿಕ ವರ್ಗದ ಹಕ್ಕುಗಳನ್ನು ಸರಳೀಕರಿಸಬೇಕೆಂಬ ನೀತಿಗಳನ್ನು ಜಾರಿಗೊಳಿಸಲಾಯಿತು. ಇದರ ಇತ್ತೀಚಿನ ರೂಪವೇ ರಾಷ್ಟ್ರೀಯ ನಗದೀಕರಣ ಯೋಜನೆ, ಕಾರ್ಮಿಕ ಸಂಹಿತೆಗಳು, ಹಣಕಾಸು ಕೊರತೆ ಕಡಿತ ಇತ್ಯಾದಿ.

6. ರಾಷ್ಟ್ರೀಯ ನಗದೀಕರಣ ಯೋಜನೆ ಮೂಲಕ ದೇಶದ ಸಾರ್ವಜನಿಕ ಸಂಪತ್ತನ್ನು ಪೂರ್ಣವಾಗಿ ಕೆಲವೇ ಕೆಲವು ಚಮಚಾ ಬಂಡವಾಳಶಾಹಿಗಳಿಗೆ ವರ್ಗಾಯಿಸಲಾಗುತ್ತಿದೆ. ಬಂದರು ಪ್ರಾಧಿಕಾರ ಕಾಯ್ದೆ ತಿದ್ದುಪಡಿ ಮೂಲಕ ಎಲ್ಲಾ ಬಂದರುಗಳನ್ನು ಅದಾನಿಯಂತಹ ಕಾರ್ಪೊರೇಟ್‌ಗಳಿಗೆ ನೀಡಲಾಗುತ್ತಿದೆ. ರೈಲ್ವೆ ಹಳಿಗಳು, ಬೋಗಿಗಳು, ನಿಲ್ದಾಣಗಳು, ಮಾರ್ಗಗಳು, ಎಲ್ಲವನ್ನು ಮೋದಿಯ ಮಿತ್ರಕೂಟಕ್ಕೆ ಮಾರಲಾಗುತ್ತಿದೆ. ರೈಲ್ವೆ ಆದಾಯ ಕುಸಿಯುತ್ತಿದೆ ಮತ್ತು ಸರಕು ಮತ್ತು ಪ್ರಯಾಣ ದರಗಳ ಸಬ್ಸಿಡಿ ಇಲ್ಲವಾಗುತ್ತಿದೆ. ಖಾಯಂ ಉದ್ಯೋಗಗಳು ಬಹುತೇಕ ಗುತ್ತಿಗೆ ಸ್ವರೂಪಕ್ಕೆ ಬದಲಾಗುತ್ತಿವೆ. ಕಾರ್ಮಿಕರ ಜೀವನವನ್ನು ಅಪಾಯಕ್ಕೆ ನೂಕಲಾಗುತ್ತಿದೆ.

7. ರಸ್ತೆ ಸಾರಿಗೆಯನ್ನು ಪೂರ್ಣವಾಗಿ ಕಾರ್ಪೊರೇಟ್ ಹಿಡಿತಕ್ಕೆ ಒಪ್ಪಿಸಲು 2019ರಲ್ಲಿ ಮೋಟರ್ ವಾಹನ (ತಿದ್ದುಪಡಿ) ಕಾಯ್ದೆ ಜಾರಿಗೊಳಿಸಲಾಗಿದೆ. ಇಂಧನ ನೀತಿ ಮತ್ತು ತೆರಿಗೆ ನೀತಿಗಳಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಾಶವಾಗುತ್ತಿದೆ. ನೂತನ ವಿದ್ಯುತ್ ವಾಹನಗಳ ನೀತಿಯ ಪರಿಣಾಮವು ಸರಕಾರಿ ಸಾರಿಗೆ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ. ಇದು ಪೂರ್ಣವಾಗಿ ಜಾರಿಯಾದರೆ ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳ ಕಾರ್ಮಿಕರು ಗುತ್ತಿಗೆ ಸ್ವರೂಪಕ್ಕೆ ಬರುತ್ತಾರೆ. ಅಸಂಘಟಿತ ಖಾಸಗಿ ಸಾರಿಗೆ ಕಾರ್ಮಿಕರಂತೂ ಯಾವುದೇ ಸಹಾಯ ಮತ್ತು ಸೌಲಭ್ಯಗಳು ಇಲ್ಲದೆ ನರಳುತ್ತಿದ್ದಾರೆ. ಆ್ಯಪ್ ಆಧಾರಿತ ಸಾರಿಗೆಯಿಂದಾಗಿ ಚಾಲಕರ ಆದಾಯಗಳು ಓಲಾ, ಉಬರ್‌ನಂತಹ ಕಾರ್ಪೊರೇಟ್ ಕಂಪೆನಿಗಳ ಜೇಬು ಸೇರುತ್ತಿವೆ. ಕೋಟ್ಯಂತರ ಅಸಂಘಟಿತ ಸಾರಿಗೆ ಕಾರ್ಮಿಕರು ತಮ್ಮ ಸ್ವ-ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ.

8. ಲಕ್ಷಾಂತರ ಕೋಟಿ ರೂ.ಗಳ ಆಸ್ತಿಯನ್ನು ಹೊಂದಿರುವ ಸರಕಾರಿ ವಿದ್ಯುತ್ ಉತ್ಪಾದನೆ, ಸಾಗಣೆ ಮತ್ತು ವಿತರಣಾ ಕಂಪೆನಿಗಳನ್ನು ಖಾಸಗಿಯವರಿಗೆ ವರ್ಗಾಯಿಸಲು ವಿದ್ಯುತ್ ತಿದ್ದುಪಡಿ ಕಾಯ್ದೆ 2022 ತರಲಾಗಿದೆ. ಕೃಷಿ, ಬಡವರು, ಅಸಂಘಟಿತ ಕಾರ್ಮಿಕರು ಮುಂತಾದವರಿಗೆ ಕಡಿಮೆ ದರದ ವಿದ್ಯುತ್ ಇರುವುದಿಲ್ಲ. ವಿದ್ಯುತ್ ರಂಗದ ಮೇಲೆ ಜನರ ಹಿಡಿತ ತಪ್ಪುವುದು ಮಾತ್ರವಲ್ಲ, ಅಲ್ಲಿ ಖಾಯಂ ಕಾರ್ಮಿಕರು ಕ್ಷೀಣಿಸುತ್ತಾ ಸಂಪೂರ್ಣವಾಗಿ ಗುತ್ತಿಗೆ ಕಾರ್ಮಿಕರೇ ಇರಲಿದ್ದಾರೆ.

9. ಸರಕಾರದ ಕೆಲಸಗಳಲ್ಲಿ ಬಹುತೇಕ ನೇಮಕಾತಿ ಇಲ್ಲವೇ ಇಲ್ಲ ಎನ್ನುವಷ್ಟು ಬದಲಾಗಿದೆ. ಬಂಡವಾಳಿಗರ ಪರವಾದ ವಾದಗಳನ್ನು ಸಮರ್ಥಿಸಲು ರೂಪಿಸಲಾದ ಆಡಳಿತ ಸುಧಾರಣಾ ಆಯೋಗಗಳ ವರದಿಗಳು ಸರಕಾರಿ ಖಾಯಂ ನೇಮಕಾತಿಗೆ ಬಹುತೇಕ ವಿರುದ್ಧವಾಗಿವೆ. ಉದ್ಯೋಗದ ಪಿರಮಿಡ್‌ನಲ್ಲಿ ಬೃಹತ್ ಸಂಖ್ಯೆಯ ಡಿ ಮತ್ತು ಸಿ ದರ್ಜೆಯ ಉದ್ಯೋಗಗಳ ನೇಮಕಾತಿಯನ್ನೇ ಕೈಬಿಡಲಾಗಿದೆ. ಪರಿಣಾಮವಾಗಿ, ಸರಕಾರಿ ಇಲಾಖೆಗಳ ಎಲ್ಲ ಕೆಲಸಗಳನ್ನೂ ಗುತ್ತಿಗೆ ಮತ್ತು ಹೊರಗುತ್ತಿಗೆ ಸ್ವರೂಪಕ್ಕೆ ತರಲಾಗಿದೆ.

10. ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ನೀಡುವುದು ಎಂಎಸ್‌ಎಂಇ ಕ್ಷೇತ್ರ. ಜಿಎಸ್‌ಟಿ ಮುಂತಾದ ಕ್ರಮಗಳಿಂದಾಗಿ ಲಕ್ಷಾಂತರ ಘಟಕಗಳು ಮುಚ್ಚಿಹೋಗಿವೆ. ಕೋಟ್ಯಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇವುಗಳ ಪುನಶ್ಚೇತನಕ್ಕೆ ಕ್ರಮಗಳಿಲ್ಲ. ಕಾರ್ಮಿಕರ ಕೊಳ್ಳುವ ಶಕ್ತಿ ತೀವ್ರವಾಗಿ ಕುಸಿದು ಹೋಗಿದೆ. ಆರ್ಥಿಕತೆಯನ್ನು ಇದು ಬಿಕ್ಕಟ್ಟಿಗೆ ನೂಕಿದೆ.

11. ಆಟೋಮೊಬೈಲ್, ಇಂಜಿನಿಯರಿಂಗ್, ಜವಳಿ, ಪ್ಲಾಂಟೇಷನ್, ಬೀಡಿ, ಕಟ್ಟಡ ಹೀಗೆ ಯಾವುದೇ ಕ್ಷೇತ್ರದಲ್ಲೂ ಕಾರ್ಮಿಕರ ಜೀವನದಲ್ಲಿ ಆಶಾದಾಯಕ ಚಿತ್ರಣ ಕಾಣುವುದಿಲ್ಲ. ಸೆಸ್ ಆಧಾರಿತ ಸಾಮಾಜಿಕ ಸುರಕ್ಷತಾ ಯೋಜನೆಗಳಿಂದ ಸ್ವಲ್ಪ ಪ್ರಯೋಜನ ಪಡೆಯುತ್ತಿದ್ದ ಬೀಡಿ ಮತ್ತು ಗಣಿ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟ ಮೋದಿ ಸರಕಾರ 2016 ಮತ್ತು 2017ರಲ್ಲಿ ಸೆಸ್ ಸಂಗ್ರಹ ರದ್ದುಗೊಳಿಸಿತು ಮತ್ತು ಯೋಜನೆಗಳನ್ನು ನಿಲ್ಲಿಸಿತು. ಲಕ್ಷಾಂತರ ಕಾರ್ಮಿಕರು ತಮ್ಮ ಸೌಲಭ್ಯಗಳನ್ನು ಕಳೆದುಕೊಂಡರು. ಕಟ್ಟಡ ಕಾರ್ಮಿಕರ ಸೆಸ್ ಕಾಯ್ದೆಯನ್ನೂ ಕಾರ್ಮಿಕ ಸಂಹಿತೆಗಳ ನೆಪದಲ್ಲಿ ರದ್ದು ಮಾಡಲಾಗಿದೆ. ಇದು ಜಾರಿಯಾದಲ್ಲಿ ಕೋಟ್ಯಂತರ ಕಟ್ಟಡ ಕಾರ್ಮಿಕರ ಸೌಲಭ್ಯಗಳು ನಾಶವಾಗಲಿವೆ.

12. ಈಗಾಗಲೇ ಉತ್ಪಾದನಾ ವಲಯದಲ್ಲಿ ಖಾಯಂ ಕಾರ್ಮಿಕರ ಸಂಖ್ಯೆ ಕುಸಿಯುತ್ತಿದೆ, ಗುತ್ತಿಗೆ ಹೊರಗುತ್ತಿಗೆ ಸಂಖ್ಯೆ ಹೆಚ್ಚುತ್ತಿದೆ. ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತಿದೆ ಮತ್ತು ಕೊಳ್ಳುವ ಶಕ್ತಿ ಕುಸಿಯುತ್ತಿದ್ದು ಬಡತನ ಹೆಚ್ಚುತ್ತಿದೆ. ಸಾರ್ವಜನಿಕ ಮತ್ತು ಇಂಜಿನಿಯರಿಂಗ್ ಉದ್ದಿಮೆಗಳಲ್ಲಿ ಗುತ್ತಿಗೆ ಕಾರ್ಮಿಕರ ಪ್ರಮಾಣ ಶೇ.60 ಕ್ಕಿಂತ ಹೆಚ್ಚಾಗಿದೆ. ಪೆಟ್ರೋಲಿಯಂ, ವಿದ್ಯುತ್, ಓಖಿPಅ, ಓಊPಅ ಮುಂತಾದ ವಲಯಗಳಲ್ಲಿ ಈ ಪ್ರಮಾಣ ಶೇ.75 ದಾಟಿದೆ. ಭಾರತ ಸರಕಾರದ ಸಾರ್ವಜನಿಕ ಉದ್ದಿಮೆಗಳ ಇಲಾಖೆ ವರದಿ ಪ್ರಕಾರ 2015-16 ಮತ್ತು 2019-20 ರ ನಡುವೆ ಗುತ್ತಿಗೆ ಕಾರ್ಮಿಕರು ಶೇ.86, ಇತರ ಖಾಯಮೇತರ ಕಾರ್ಮಿಕರು ಶೇ.178ರಷ್ಟು ಹೆಚ್ಚಾಗಿದ್ದರೆ, ಖಾಯಂ ಕಾರ್ಮಿಕರು ಶೇ.25ರಷ್ಟು ಕಡಿಮೆಯಾಗಿದ್ದಾರೆ.

13. ಆನ್ ಜಾಬ್ ಟ್ರೈನಿ, ಲಾಂಗ್ ಟರ್ಮ್ ಟ್ರೈನಿ ಎಂಪ್ಲಾಯೀಸ್, ಫಿಕ್ಸೆಡ್ ಟರ್ಮ್ ಎಂಪ್ಲಾಯೀಸ್, ನ್ಯಾಷನಲ್ ಎನ್ಹಾನ್ಸ್ಡ್ ಎಂಪ್ಲಾಯ್ಮೆಂಟ್ ಮಿಷನ್, ನ್ಯಾಷನಲ್ ಅಪ್ರೆಂಟಿಷಿಪ್ ಪ್ರೊಮೋಷನ್ ಸ್ಕೀಂ, ಲರ್ನ್ ವೈಲ್ ಯು ಅರ್ನ್, ಜೂನಿಯರ್ ಎಕ್ಸಿಕ್ಯೂಟಿವ್ಸ್ ಇತ್ಯಾದಿ ಹೆಸರುಗಳಲ್ಲಿ ಮೂಲ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಖಾಯಂ ಕಾರ್ಮಿಕರನ್ನು ಇಲ್ಲವಾಗಿಸಿ ತರಬೇತಿ ಹೆಸರಿನಲ್ಲಿ ಪೂರ್ಣ ಪ್ರಮಾಣದ ಉತ್ಪಾದನೆ ಮಾಡಿಸಿಕೊಳ್ಳಲು ಕಾನೂನಿನ ತಿದ್ದುಪಡಿಗಳನ್ನು ಮೋದಿ ಸರಕಾರ ಜಾರಿ ಮಾಡಿದೆ. ಇದರಿಂದ ಬಂಡವಾಳದಾರರಿಗೆ ಲೂಟಿಕೋರ ಲಾಭ ಮತ್ತು ತರಬೇತಿ ಕಾರ್ಮಿಕರಿಗೆ ಯಾವಾಗ ಬೇಕಾದರೂ ಕೆಲಸದಿಂದ ಕಿತ್ತೊಗೆಯುವ ಕಡಿಮೆ ಕೂಲಿಯ ಕೊಡುಗೆ ನೀಡಲಾಗಿದೆ.

14. ದೇಶದ ರಕ್ಷಣಾ ವಲಯದಲ್ಲೂ ಈ ನಿಗದಿತ ಅವಧಿಯ ಉದ್ಯೋಗವನ್ನು ‘ಅಗ್ನಿವೀರ್’ ಹೆಸರಲ್ಲಿ ಜಾರಿಗೊಳಿಸಲಾಗಿದೆ. ಇದು ಕೇವಲ ಉದ್ಯೋಗದ ಪ್ರಶ್ನೆ ಮಾತ್ರವಲ್ಲ, ಇಡೀ ರಕ್ಷಣಾ ವಲಯವನ್ನೇ ದೇಶೀಯ ಮತ್ತು ಜಾಗತಿಕ ಬಂಡವಾಳಿಗರಿಗೆ ವರ್ಗಾಯಿಸುವ ಯೋಜನೆಯ ಭಾಗವಾಗಿದೆ. ಅದಕ್ಕಾಗಿಯೇ ರಕ್ಷಣಾ ಸಲಕರಣೆಗಳನ್ನು ಉತ್ಪಾದಿಸುವ 41 ಆರ್ಡಿನೆನ್ಸ್ ಫ್ಯಾಕ್ಟರಿಗಳನ್ನು ಖಾಸಗೀಕರಿಸಲು ಮೋದಿ ಸರಕಾರ ಮುಂದಾಗಿದೆ. ಇಡೀ ರಕ್ಷಣಾ ಕ್ಷೇತ್ರವೇ ಖಾಸಗಿಯವರ ಕೈವಶವಾದಾಗ ಅಲ್ಲಿ ಕಡಿಮೆ ಕೂಲಿಯ ಖಾಯಂ-ಅಲ್ಲದ ಸೈನಿಕರೂ ಮತ್ತು ಕಾರ್ಮಿಕರೂ ಇರಬೇಕು!.

15. ಇದು ಸಾಲದೆಂಬಂತೆ ತರಬೇತಿ ಕಾರ್ಮಿಕರಿಗೆ ಬಂಡವಾಳದಾರರು ನೀಡಬೇಕಾದ ಸ್ಟೈಫಂಡ್ ಹಣದಲ್ಲಿ ಶೇ.25ರಷ್ಟನ್ನು ಸರಕಾರ ನೀಡುತ್ತದೆ. ಅಪ್ರೆಂಟಿಸ್ ಕಾಯ್ದೆ 1961ರಲ್ಲಿ ನೋಂದಣಿಯಾದ ಮಾಲಕರು ಇಎಸ್‌ಐ ಮತ್ತು ಪಿಎಫ್ ಹಣವನ್ನು ಕಟ್ಟಬೇಕಾಗಿಲ್ಲ ಮತ್ತು ಈ ಹಣವನ್ನು ಸಿ.ಎಸ್.ಆರ್. ನಿಧಿಯಿಂದ ತುಂಬಲು ಅವಕಾಶ ನೀಡಲಾಗಿದೆ. ಇಲ್ಲಿಯೂ ದುಡಿಯುವ ಕಾರ್ಮಿಕರಿಗೆ ಪ್ರಯೋಜನವಿಲ್ಲ.

16. ಗಿಗ್ ಅರ್ಥಿಕತೆ ಅಥವಾ ಪ್ಲಾಟ್ ಫಾರ್ಮ್ ಆರ್ಥಿಕತೆ ಎಂದು ಕರೆಯಲಾಗುವ ಸೇವಾ ವಲಯವು ಕಾರ್ಮಿಕರ ದೃಷ್ಟಿಯಿಂದ ಅತ್ಯಂತ ಅಭದ್ರತೆಯ ಕಾರ್ಪೊರೇಟ್ ಕಂಪೆನಿಗಳ ಲೂಟಿಕೋರ ವಿಧಾನವಾಗಿದೆ. ಸ್ವಿಗ್ಗಿ, ಜೊಮೊಟೊ, ಬ್ಲಿಂಕಿಟ್, ಓಲಾ, ಉಬರ್, ಅಮೆಝಾನ್ ಇತ್ಯಾದಿ ಆ್ಯಪ್ ಆಧಾರಿತ ಸೇವಾ ಕೆಲಸಗಳಲ್ಲಿ ದೊಡ್ಡ ಪ್ರಮಾಣದ ಕಾರ್ಮಿಕರು ದುಡಿಯುತ್ತಾರೆ. ಇವರಿಗೆ ಯಾವುದೇ ರಕ್ಷಣೆಯಿಲ್ಲದಂತಹ ಪರಿಸ್ಥಿತಿಯಿದೆ. ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿ, ಅತ್ಯಂತ ಕ್ರೂರವಾಗಿ ಲೂಟಿ ಮಾಡುವ ‘ಡಿಜಿಟಲ್ ಬಾಡಿಗೆ ಬಂಡವಾಳಶಾಹಿ’ ವಿಧಾನವಾಗಿದೆ.

17. ಕಾರ್ಮಿಕ ಕಾನೂನುಗಳ ಸಂಹಿತೆಗಳು ಕಾರ್ಮಿಕ ವರ್ಗವನ್ನು ಗುಲಾಮರನ್ನಾಗಿ ಮಾಡುವ ಹುನ್ನಾರವಾಗಿದೆ: ಸ್ವಾತಂತ್ರ್ಯ-ಪೂರ್ವ ಮತ್ತು ನಂತರದಲ್ಲಿ ಕಾರ್ಮಿಕ ವರ್ಗ ಹೋರಾಟಗಳ ಮೂಲಕ ಗಳಿಸಿದ್ದ 29 ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆಗಳನ್ನು (ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ವೃತ್ತಿಪರ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಮತ್ತು ಸಾಮಾಜಿಕ ಸುರಕ್ಷತೆ ಸಂಹಿತೆ) ಮೋದಿ ಸರಕಾರ ಜಾರಿಗೆ ತಂದಿದೆ. ಇವೆಲ್ಲವೂ ಅನುಮಾನವಿಲ್ಲದೆ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುತ್ತವೆ.

18. ಕೆಲಸದ ಪರಿಸ್ಥಿತಿಗಳು, ಕನಿಷ್ಠ ವೇತನ, ಕೆಲಸದ ಅವಧಿ, ಸಂಘ ಕಟ್ಟವುದು, ಚೌಕಾಸಿ ಮಾಡುವುದು, ಮುಷ್ಕರ ಮಾಡುವುದು ಹೀಗೆ ಎಲ್ಲಾ ಹಕ್ಕುಗಳನ್ನೂ ಈ ಸಂಹಿತೆಗಳಲ್ಲಿ ಹಲ್ಲು ಕಿತ್ತ ಹಾವಿನಂತೆ ಮಾಡಲಾಗಿದೆ. ಇದರ ಪರಿಣಾಮವಾಗಿಯೇ, ಕರ್ನಾಟಕದಲ್ಲಿ ಕೆಲಸದ ಅವಧಿಯನ್ನು 12 ಗಂಟೆಗೆ ವಿಸ್ತರಿಸಲಾಗಿದೆ. ಐಟಿ ರಂಗದಲ್ಲಿ 14 ಗಂಟೆಗಳ ಕೆಲಸದ ಅವಧಿಯನ್ನು ಪ್ರಸ್ತಾವಿಸಲಾಗಿದೆ.

19. ಕಾರ್ಮಿಕ ವರ್ಗದ ಸಂರಚನೆ ಮತ್ತು ಉದ್ಯೋಗ ಸಂಬಂಧಗಳಲ್ಲಿ ಮೂರು ರೀತಿಯ ಬದಲಾವಣೆಗಳು ಸಂಭವಿಸುತ್ತಿವೆ. ಮೊದಲನೆಯದು, ಔಪಚಾರಿಕ ಉದ್ಯೋಗಗಳನ್ನು ಅನೌಪಚಾರಿಕ ಮಾಡುವುದು. ಎರಡನೆಯದು, ಉತ್ಪಾದನೆ ಮತ್ತು ಸೇವಾ ಎರಡೂ ವಲಯಗಳಲ್ಲಿ ಆಟೋಮೇಷನ್, ಕೃತಕ ಬುದ್ಧಿಮತ್ತೆ ಮತ್ತು ರೋಬೋಟೀಕರಣಗಳ ಬಳಕೆಯನ್ನು ತೀವ್ರಗೊಳಿಸುವುದು. ಮೂರನೆಯದು, ಗಿಗ್ ಮತ್ತು ಸೇವಾ ವಲಯವನ್ನು ಆರ್ಥಿಕತೆಯ ಪ್ರಾಧಾನ್ಯತೆಗೆ ತರುವುದು. ಇವುಗಳ ಪರಿಣಾಮ ಉದ್ಯೋಗದಲ್ಲಿ ಅಪಾರವಾದ ಇಳಿಕೆ ಮತ್ತು ಉದ್ಯೋಗದಲ್ಲಿ ಯಾವುದೇ ಭದ್ರತೆ ಮತ್ತು ಸೌಲಭ್ಯಗಳು ಇಲ್ಲವಾಗುವುದು.

ಇಂತಹ ಪರಿಸ್ಥಿತಿಯು, ಭಾರತದ ಆಳುವ ವರ್ಗಗಳು ನಿರಂತರವಾಗಿ ಅನುಸರಿಸುತ್ತಿರುವ ಬಂಡವಾಳಶಾಹಿ ಬೆಳವಣಿಗೆಯ ಪಥದ ಪರಿಣಾಮವಾಗಿದೆ. ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ, ಈ ಪಥವು ಅಪಾರ ವೇಗವನ್ನು ಪಡೆದುಕೊಂಡಿದೆ. ಬ್ರಿಟಿಷ್ ಬಂಡವಾಳದ ದಾಳಿಗಳಿಗಿಂತಲೂ, ಇಂದಿನ ಬೃಹತ್ ಬಂಡವಾಳದ ದಾಳಿಗಳು ಮುಂದಿನ ಅವಧಿಯಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ. ಹೀಗಾಗಿ ಕಾರ್ಮಿಕ ವರ್ಗ ಗಳಿಸುತ್ತಾ ಬಂದಿದ್ದ ಸ್ವಾತಂತ್ರ್ಯದ ಆಶಯಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಪ್ರಕ್ರಿಯೆ ಮೋದಿ ಆಡಳಿತದಲ್ಲಿ ಉತ್ತುಂಗದಲ್ಲಿದೆ.

ಕಾರ್ಮಿಕ ವರ್ಗ ನಿರಂತರವಾಗಿ ಮುಷ್ಕರಗಳನ್ನು ನಡೆಸುವ ಮೂಲಕ ತನ್ನ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಲ್ಲದೆ, ದೇಶದ ರಕ್ಷಣೆ, ಸ್ವಾವಲಂಬನೆ ಮತ್ತು ಸಾರ್ವಭೌಮತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನಗಳು ವಿಸ್ತಾರವಾಗಬೇಕಾಗಿದೆ. ರೈತರು, ಕೂಲಿಕಾರರು, ಸಾಮಾನ್ಯ ದುಡಿಯುವ ಜನತೆಯ ಜೊತೆಗೂಡಿದ ಕಾರ್ಮಿಕ ವರ್ಗದ ಹೋರಾಟಗಳಷ್ಟೇ ಈ ಶೋಷಣೆಯ ಲೂಟಿಗಳನ್ನು ಮತ್ತು ದಾಳಿಗಳನ್ನು ತಡೆಯಬಲ್ಲದು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಕಾರ್ಮಿಕ ವರ್ಗ ಅದನ್ನು ಉಳಿಸಿ ಸಂರಕ್ಷಿಸಲು ಮತ್ತೆ ತ್ಯಾಗ ಬಲಿದಾನಗಳನ್ನು ಮಾಡದೆ ಪರಿಹಾರವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ಪ್ರಕಾಶ್ ಕೆ.

contributor

Similar News