ಅಸ್ಥಿರಂಧ್ರತೆ ವೃದ್ಧಾಪ್ಯದ ಶಾಪವೇ?

Update: 2024-10-20 06:05 GMT

ವಿಶ್ವದಾದ್ಯಂತ ಪ್ರತೀ ವರ್ಷ ಅಕ್ಟೋಬರ್ 20ರಂದು ವಿಶ್ವ ಅಸ್ಥಿರಂಧ್ರತೆ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಅಸ್ಥಿರಂಧ್ರತೆಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾಕಾಗಿ ಅಸ್ಥಿರಂಧ್ರತೆ ಬರುತ್ತದೆ, ಹೇಗೆ ತಡೆಯಬಹುದು, ಯಾವ ರೀತಿಯ ಆಹಾರ ಸೇವನೆ ಅವಶ್ಯಕ, ಅಸ್ಥಿರಂಧ್ರತೆಯ ಅಪಾಯಗಳು ಏನು ಮತ್ತು ಹೇಗೆ ಜೀವನ ಶೈಲಿ ಬದಲಾಯಿಸಬೇಕು ಮುಂತಾದವುಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಲಾಗುತ್ತದೆ. ಇದರ ಜೊತೆಗೆ ರೋಗದ ಚಿಕಿತ್ಸೆಯ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಿ ರೋಗಿಗೆ ಮಾನಸಿಕ ದೈರ್ಯ ಮತ್ತು ಸಾಂತ್ವನ ಹೇಳುವ ಕೆಲಸವನ್ನು ಮಾಡಲಾಗುತ್ತಿದೆ. 2016, 2017 ಮತ್ತು 2018ನೇ ಇಸವಿಯಲ್ಲಿ ‘‘ನಿಮ್ಮ ಎಲುಬನ್ನು ಪ್ರೀತಿಸಿ ನಿಮ್ಮ ಭವಿಷ್ಯವನ್ನು ರಕ್ಷಿಸಿ’’ ಎಂಬ ತಿರುಳನ್ನು ಇಟ್ಟು ಈ ದಿನವನ್ನು ಆಚರಿಸಲಾಗಿತ್ತು. 2024ರಲ್ಲಿ ‘‘ಅಸ್ಥಿರಂಧ್ರತೆಗೆ ವಿದಾಯ ಹೇಳಿ’’ ಘೋಷವಾಕ್ಯದೊಂದಿಗೆ ಈ ಅಸ್ಥಿರಂಧ್ರತೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಸ್ಥಿರಂಧ್ರತೆಯಿಂದ ಬರುವ ನೋವು, ಉಂಟಾಗುವ ದೈಹಿಕ ಅಂಗವಿಕಲತೆ, ಇತರರ ಮೇಲೆ ಅವಲಂಬಿತವಾಗುವುದು ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಿ ರೋಗ ಬರದಂತೆ ಸಾಕಷ್ಟು ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳುವಂತೆ ಜನರ ಮನ ಪರಿವರ್ತನೆ ಮಾಡುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಅಂತರ್‌ರಾಷ್ಟ್ರೀಯ ಅಸ್ಥಿರಂಧ್ರತೆ ಸಂಸ್ಥೆ ಈ ಕಾರ್ಯಾಚರಣೆಯನ್ನು 1996ರಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭಿಸಿದ್ದು ಈಗ ಸುಮಾರು 90 ರಾಷ್ಟ್ರಗಳಲ್ಲಿ ಈ ಆಂದೋಲನ ನಡೆಸಲಾಗುತ್ತಿದೆ. ಅಮೆರಿಕ ದೇಶವೊಂದರಲ್ಲಿಯೇ 50 ವರ್ಷ ದಾಟಿದ ಪ್ರತೀ ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಮತ್ತು ಪ್ರತೀ ಎಂಟು ಗಂಡಸರಲ್ಲಿ ಒಬ್ಬರಿಗೆ ಅಸ್ಥಿರಂಧ್ರತೆ ಕಾಡುತ್ತದೆ. ಇದಲ್ಲದೆ ಪ್ರತೀ 4ರಲ್ಲಿ ಒಬ್ಬರಿಗೆ ಬೆನ್ನುಹುರಿಯ ಮೂಳೆ ಮುರಿತ ಉಂಟಾಗುವ ಎಲ್ಲಾ ಸಾಧ್ಯತೆ ಇರುತ್ತದೆ ಎಂದು ಅಂಕಿಅಂಶಗಳಿಂದ ಸಾಬೀತಾಗಿದೆ.

ಅಸ್ಥಿರಂಧ್ರತೆ ಮತ್ತು ವೃದ್ಧಾಪ್ಯ

‘ಅಸ್ಥಿರಂಧ್ರತೆ’ ಎಂದರೆ ಟೊಳ್ಳು ಮೂಳೆ ರೋಗ ಅಥವಾ ‘ಓಸ್ಟಿಯೋ ಪೊರೋಸೊಸ್’ ಎಂಬ ರೋಗವಾಗಿದ್ದು ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಮತ್ತು ನಡುವಯಸ್ಕರಲ್ಲಿ ಕಂಡು ಬರುತ್ತದೆ. ಎಲುಬು ನಮ್ಮ ದೇಹದ ಅತ್ಯಂತ ಶಕ್ತಿಯುತವಾದ ಅಂಗವಾಗಿದ್ದು ದೇಹಕ್ಕೆ ಸ್ಥಿರತೆ ಮತ್ತು ಶಕ್ತಿಯನ್ನು ನೀಡುತ್ತದೆ. ಈ ಎಲುಬಿನ ಹೊರಭಾಗ ಅತ್ಯಂತ ಗಡುಸಾಗಿದ್ದು ಒಳಭಾಗದಲ್ಲಿ ಅಸ್ಥಿಮಜ್ಜೆ ಇರುತ್ತದೆ. ವಯಸ್ಸಾದಂತೆ ಮೂಳೆಯ ಒಳಗಿರುವ ಅಸ್ಥಿ ಪಂಜರದಲ್ಲಿರುವ ಕೊಲಾಜನ್ ಎಂಬ ಪ್ರೋಟಿನ್‌ನ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಖನಿಜಾಂಶಗಳ ಸಾಂದ್ರತೆಯೂ ಕಡಿಮೆಯಾಗುತ್ತದೆ ಇದರಿಂದ ಮೂಳೆ ತನ್ನ ಗಡಸುತನ ಮತ್ತು ಶಕ್ತಿಯನ್ನು ಕಳೆದುಕೊಂಡು ಟೊಳ್ಳಾಗುತ್ತದೆ. ಈ ಹಂತದಲ್ಲಿ ಸ್ವಲ್ಪ ಗಾಯವಾದರೂ ಮೂಳೆ ಮುರಿತವಾಗುವ ಸಂಭವವಿರುತ್ತದೆ. ಮೂಳೆಯ ಒಳಗಿನ ಖನಿಜದ ಸಾಂದ್ರತೆ ಕಡಿಮೆಯಾದಾಗ ಮೂಳೆಗಳು ತನ್ನಿಂತಾನೇ ಮುರಿತವಾಗುವ ಸಾಧ್ಯತೆ ಇರುತ್ತದೆ. ಈ ಹಂತದಲ್ಲಿ ವಯಸ್ಸಾದವರು ಅತಿಯಾದ ಭಾರ ಎತ್ತಿದರೆ ಅಥವಾ ಎಲ್ಲಾದರೂ ಮನೆಯೊಳಗೆ ಬಿದ್ದಲ್ಲಿ ಬೇಗನೆ ಮೂಳೆ ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಮೂಳೆಯು ಮುರಿಯುವ ಸಾಧ್ಯತೆಯೂ ಇರುತ್ತದೆ. ಈ ಕಾರಣದಿಂದಲೇ ಈ ರೋಗವನ್ನು ‘ಮೌನ ಮಾರಿ’ ಎಂದು ಕರೆಯುತ್ತಾರೆ. ಏಕೆಂದರೆ ಮೂಳೆ ಮುರಿಯುವ ತನಕ, ಇತರ ಯಾವುದೇ ರೋಗದ ಲಕ್ಷಣಗಳು ಮತ್ತು ಚಿಹ್ನೆಗಳು ಗೋಚರಿಸುವುದಿಲ್ಲ. ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಾಣುವ ಈ ರೋಗದಿಂದ ಸೊಂಟ, ಮುಂಗೈ ಮತ್ತು ಬೆನ್ನುಹುರಿ ಮೂಳೆಗಳಲ್ಲಿ ಹೆಚ್ಚಾಗಿ ಮುರಿತ ಕಂಡುಬರುತ್ತದೆ. ಸದ್ದಿಲ್ಲದೆ ಯಾವುದೇ ಮುನ್ಸೂಚನೆ ಇಲ್ಲದೆ ಕಾಣಿಸಿಕೊಳ್ಳುವ ಈ ಅಸ್ಥಿರಂಧ್ರತೆ, ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಋತುಚಕ್ರ ಕೊನೆಗೊಳ್ಳುವ ಪ್ರಕ್ರಿಯೆಯ ನಂತರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ರೋಗಕ್ಕೆ ಕಾರಣಗಳು

* ಅತಿಯಾದ ಸ್ಥಿರಾಯ್ಡ್‌ಗಳ ಸೇವನೆ.

* ಅತಿಯಾದ ಗರ್ಭನಿರೋಧಕ ಔಷಧಿಗಳ ಬಳಕೆ.

* ಧೂಮಪಾನ, ತಂಬಾಕು ಮತ್ತು ಅತಿಯಾದ ಆಲ್ಕೊಹಾಲ್ ಬಳಕೆಗಳಿಂದ ಕೂಡಿದ ಐಷಾರಾಮಿ ಜೀವನ ಶೈಲಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿರುವುದು.

* ಥೈರಾಯ್ಡ್ ಸಮಸ್ಯೆ.

* ರಸದೂತಗಳ ವೈಪರೀತ್ಯ (ಆಂಡ್ರೋಜೆನ್ ಮತ್ತು ಇಸ್ಟ್ರೋಜೆನ್)

* ಕಡಿಮೆ ಲವಣಯುಕ್ತ ಆಹಾರ, ಆಹಾರ ಸೇವನೆಯ ದೋಷಗಳು, ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಮಾಡದಿರುವುದು.

* ಬಿಸಿಲಿನಲ್ಲಿ ಹೋದರೆ ಚರ್ಮದ ಕಾಂತಿ ಹಾಳಾಗುತ್ತದೆಂದು ಹೆದರಿ ಮನೆಯಲ್ಲಿಯೇ ಉಳಿದು, ಹೊರ ಹೋಗದಿರುವುದು. ಹೊರಗಡೆ ಹೋದರೂ ಸನ್‌ಕ್ರೀಮ್ ಹಚ್ಚಿ, ಸೂರ್ಯನ ಶಾಖ ಮತ್ತು ಕಿರಣಗಳು ಕೊಂಚವೂ ತ್ವಚೆಗೆ ತಾಗದಂತೆ ಎಚ್ಚರ ವಹಿಸುವುದು, ಪೂರ್ತಿ ಮೈ ಮುಚ್ಚುವ ಬಟ್ಟೆ ಧರಿಸಿ, ಚರ್ಮಕ್ಕೆ ಬಿಸಿಲು ತಾಗದಂತೆ ಮಾಡುವುದು.

ತಡೆಗಟ್ಟುವುದು ಹೇಗೆ?

* ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ನಿಯಮಿತ ವ್ಯಾಯಾಮ ಮಾಡಿ ಕ್ಯಾಲ್ಸಿಯಂಭರಿತ ಪೌಷ್ಟಿಕ ಆಹಾರ ಸೇವಿಸಿದ್ದಲ್ಲಿ ವ್ಯಕ್ತಿಯ ಎಲುಬಿನ ಸಾಂದ್ರತೆ ಹೆಚ್ಚಿರುತ್ತದೆ. ಇಂತಹ ವ್ಯಕ್ತಿಯ ಮೂಳೆಗಳು ವಯಸ್ಸಾದ ಬಳಿಕವೂ ಆರೋಗ್ಯದಾಯಕವಾಗಿರುತ್ತದೆ. ಈ ಕಾರಣದಿಂದಲೇ ಅಸ್ಥಿರಂಧ್ರತೆಯನ್ನು ತಡೆಯಲು ನಿಯಮಿತವಾದ ಮತ್ತು ನಿರಂತರವಾದ ದೈಹಿಕ ವ್ಯಾಯಾಮ ಅತೀ ಅಗತ್ಯ.

* ವೈದ್ಯರ ಸಲಹೆ ಇಲ್ಲದೆ ಅತಿಯಾಗಿ ಗರ್ಭನಿರೋಧಕ ಔಷಧಿಗಳನ್ನು ಮಹಿಳೆಯರು ಬಳಸಲೇಬಾರದು.

* ಅತಿಯಾದ ಸ್ಥಿರಾಯ್ಡ್ ಸೇವನೆಯನ್ನು ನಿಯಂತ್ರಿಸಬೇಕು.

* ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆ ಮತ್ತು ಆಲ್ಕೊಹಾಲ್ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸಬೇಕು.ಇದು ಬರೀ ಎಲುಬಿನ ಸಾಂದ್ರತೆಯನ್ನು ಹೆಚ್ಚಿಸಲು ಮಾತ್ರವಲ್ಲದೆ ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕೆ ಅತೀ ಅಗತ್ಯ.

* ರಸದೂತಗಳ ವೈಪರೀತ್ಯ ಮತ್ತು ಥೈರಾಯ್ಡ್ ಸಂಬಂಧಿ ರೋಗವಿದ್ದಲ್ಲಿ ಸೂಕ್ತ ಚಿಕಿತ್ಸೆಯನ್ನು ನಿರಂತರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಎಲುಬಿನ ಸಾಂದ್ರತೆಯನ್ನು ಕಾಯ್ದುಕೊಳ್ಳುವ ರಸದೂತಗಳ ಸ್ರವಿಸುವಿಕೆ ಮತ್ತು ನಿಯಂತ್ರಣ ಅತೀ ಅಗತ್ಯ.

* ವಾತಾವರಣದ ಬದಲಾವಣೆಗಳನ್ನು ಗಮನಿಸುತ್ತಾ ಪ್ರತಿದಿನ ಕನಿಷ್ಠ ಪಕ್ಷ ಅರ್ಧ ಗಂಟೆಗಳ ಕಾಲ ತಿಳಿಬಿಸಿಲಿಗೆ ಮೈಯೊಡ್ಡುವುದು ಸೂಕ್ತ. ಬೆಳೆಯುವ ಮಕ್ಕಳಲ್ಲಿ ಇದರ ಅಗತ್ಯ ತುಂಬಾ ಇರುತ್ತದೆ. ಈ ರೀತಿ ಮಾಡುವುದರಿಂದ ನೈಸರ್ಗಿಕವಾಗಿ ಸೂರ್ಯನ ಬಿಸಿಲಿನಿಂದ ವಿಟಮಿನ್ ‘ಡಿ’ ದೇಹದಲ್ಲಿ ಉತ್ಪತ್ತಿಯಾಗಿ, ಪರೋ ಕ್ಷವಾಗಿ ಕ್ಯಾಲ್ಸಿಯಂ ಉತ್ಪಾದನೆ ಮತ್ತು ಹೀರುವಿಕೆಗೆ ಸಹಾಯ ಮಾಡಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗದಂತೆ ಮಾಡಿ ಎಲುಬಿನ ಸಾಂದ್ರತೆಯನ್ನು ಹತೋಟಿಯಲ್ಲಿಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಮುರಲೀ ಮೋಹನ್ ಚೂಂತಾರು

contributor

Similar News