ಸಮಗ್ರ ಕೃಷಿಯಿಂದ ರೈತರಿಗೆ ಮಾದರಿಯಾದ ಕಪನಪ್ಪ

Update: 2024-04-08 05:58 GMT

ಕುಶಾಲನಗರ: ಇಲ್ಲಿನ ಹುಲಸೆ ಗ್ರಾಮದ ಕಪನಪ್ಪ ಎಂಬವರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಯಶಸ್ಸನ್ನು ಕಂಡಿದ್ದು, ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಹಲವಾರು ರೈತರಿಗೆ ಮಾದರಿಯಾಗಿರುವ ಅವರು, ಕೃಷಿಯಿಂದ ಹೇಗೆ ಹೆಚ್ಚು ಆದಾಯಗಳಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇಂದು ರೈತರು ವ್ಯವಸಾಯ ಮಾಡಲು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ಕಪನಪ್ಪ ಸಮಗ್ರ ಕೃಷಿಯ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.

ಪಿಯುಸಿ ವ್ಯಾಸಂಗ ಮಾಡಿರುವ ಅವರು, ಐಟಿಐ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಡಿಮೆ ಸಂಬಳವನ್ನು ಪಡೆಯುತ್ತಿದ್ದ ಕಪನಪ್ಪ, ತಮ್ಮದೇ ಜಮೀನಿನಲ್ಲಿ ವ್ಯವಸಾಯ ಮಾಡಿ ಹೆಚ್ಚಿನ ಆದಾಯವನ್ನು ಗಳಿಸುವುದರ ಜೊತೆಗೆ ಇತರ ಕಾರ್ಮಿಕರಿಗೂ ಕೆಲಸ ನೀಡಬಹುದಲ್ಲವೇ ಎಂದು ಆಲೋಚಿಸಿ ತಾವು ನಿರ್ವಹಿಸುತ್ತಿದ್ದ ಕೆಲಸವನ್ನು ತ್ಯಜಿಸುತ್ತಾರೆ. ತಮ್ಮ 20ನೇ ವಯಸ್ಸಿನಲ್ಲಿ ತಮ್ಮದೇ ಜಮೀನಿನಲ್ಲಿ ವ್ಯವಸಾಯ ಮಾಡಲು ಪ್ರಾರಂಭಿಸಿ, ಇಂದು ತಿಂಗಳಿಗೆ 7-8 ಲಕ್ಷ ರೂ. ಆದಾಯವನ್ನು ಗಳಿಸುವಲ್ಲಿ ಯಶಸ್ಸನ್ನು ಕಂಡಿದ್ದಾರೆ.

30 ಎಕರೆ ಕೃಷಿ ಭೂಮಿಯಲ್ಲಿ ಏಕಕಾಲದಲ್ಲಿ ಹಲವು ಬಗೆಯ ಬೆಳೆಗಳನ್ನು ಬೆಳೆಯುತ್ತಾರೆ. ಹಿಂಗಾರು ಬೆಳೆ, ಮುಂಗಾರು ಬೆಳೆ, ಅಂತರಬೆಳೆಗಳನ್ನು ಬೆಳೆದು ವರ್ಷಕ್ಕೆ 17ಕ್ಕೂ ಹೆಚ್ಚಿನ ಬಗೆಯ ಬೆಳೆಗಳು ಕಪನಪ್ಪನವರ ಜಮೀನಿನಲ್ಲಿ ಕಾಣಸಿಗುತ್ತವೆ.

 ಸ್ವಂತ ಅಡಿಕೆ ನರ್ಸರಿಯಿಂದ ಹೆಚ್ಚಿನ ಗಳಿಕೆ:

ಕಪನಪ್ಪನವರು ಸ್ವತಃ ಅಡಿಕೆ ನರ್ಸರಿಯನ್ನು ಮಾಡಿ ವರ್ಷಕ್ಕೆ 2,000 ಗಿಡಗಳನ್ನು ಮಾರಾಟ ಮಾಡುತ್ತಾರೆ. 10 ಸಾವಿರ ರೂ. ಖರ್ಚು ಮಾಡಿ 70 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.

 ಹೈನುಗಾರಿಕೆಯಿಂದ ಮನೆ ನಿರ್ವಹಣೆ:

ಇಷ್ಟು ಮಾತ್ರವಲ್ಲದೇ 6 ಹಸುಗಳನ್ನು ಸಾಕುತ್ತಿರುವ ಕಪನಪ್ಪ, ಹೈನುಗಾರಿಕೆಯಿಂದ ತಿಂಗಳಿಗೆ 8 ರಿಂದ 10 ಸಾವಿರ ರೂ. ಗಳಿಸುತ್ತಾರೆ. ಇದನ್ನು ಮನೆಯ ನಿರ್ವಹಣೆಗೆ ಬಳಸುತ್ತಿದ್ದಾರೆ.

ತಮ್ಮ ಕೃಷಿ ಭೂಮಿಯಲ್ಲಿ ಮುಂಗಾರು ಬೆಳೆಗಳಾದ ಶುಂಠಿ, ಭತ್ತ, ಜೋಳ, ಕೆಸವಿನಗೆಡ್ಡೆ, ಸುವರ್ಣಗೆಡ್ಡೆ, ಮರಗೆಣಸು, ಬಾಳೆ, ತೆಂಗು, ಅಡಿಕೆ, ಕಾಫಿ ಹಾಗೂ ಹಿಂಗಾರು ಬೆಳೆಗಳಾದ ರಾಗಿ, ಎಳ್ಳು, ಚೆಂಡು ಹೂ, ಅಲಸಂಡೆ ಮತ್ತು ಇನ್ನಿತರ ಬೆಳೆಗಳನ್ನು ಆಯಾ ಕಾಲಕ್ಕೆ ತಕ್ಕಂತೆ ಬೆಳೆಯುತ್ತಿದ್ದಾರೆ.

ಭತ್ತದಲ್ಲಿ ರಾಜಮುಡಿ ಮತ್ತು ಕಪ್ಪುಅಕ್ಕಿಯನ್ನು ಬೆಳೆಯುತ್ತಿದ್ದಾರೆ. ಕಪ್ಪು ಅಕ್ಕಿಯಿಂದ ಹೆಚ್ಚು ಆದಾಯವನ್ನು ಗಳಿಸಬಹುದು ಎನ್ನುತ್ತಾರೆ ಕಪ್ಪನಪ್ಪನವರು.

 ಹಲವು ಪ್ರಶಸ್ತಿಗಳ ಗರಿ:

ಸಮಗ್ರ ಕೃಷಿಯಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತಿರುವ ಕಪನಪ್ಪರಿಗೆ 2018-19ರ ಸಾಲಿನಲ್ಲಿ ತಾಲೂಕು ಮಟ್ಟದ ‘ಅತ್ಯುತ್ತಮ ಕೃಷಿಕ’ ಪ್ರಶಸ್ತಿ, 2020-21 ಸಾಲಿನಲ್ಲಿ ಕೃಷಿ ಇಲಾಖೆಯಿಂದ ‘ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಶಸ್ತಿ’ ಹಾಗೂ ಕಳೆದ ವರ್ಷ ‘ವಿಕ ಸೂಪರ್ ಸ್ಟಾರ್ ರೈತ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

 ಕೃಷಿ ಅಧಿಕಾರಿಗಳಿಂದ ಸಲಹೆ ಪಡೆದುಕೊಳ್ಳಿ:

ಕಪನಪ್ಪನವರು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳಿಂದ ಸೂಕ್ತವಾದ ಸಲಹೆ ಸೂಚನೆಗಳನ್ನು ಪಡೆದು ವ್ಯವಸಾಯ ಮಾಡುತ್ತಿದ್ದರು. ಅಧಿಕಾರಿಗಳಿಂದ, ತಿಳಿದವರಿಂದ ಕೃಷಿಗೆ ಬೇಕಾದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು ಎಂದು ರೈತರಿಗೆ ಕಪನಪ್ಪನವರು ಸಲಹೆ ನೀಡಿದ್ದಾರೆ.

 ರೈತರಿಗೆ ಮಾದರಿ:

ವಿವಿಧ ರೀತಿಯ ಕಾರಣಗಳಿಂದ ಕೃಷಿಯಲ್ಲಿ ನಷ್ಟ ಹೊಂದುತ್ತಿರುವ ರೈತರಿಗೆ ಹಾಗೂ ಕೃಷಿಯಿಂದ ಅಲ್ಪಸ್ವಲ್ಪ ಆದಾಯವನ್ನು ಗಳಿಸುತ್ತಿರುವ ರೈತರಿಗೆ ಕಪನಪ್ಪ ಮಾದರಿಯಾಗಿದ್ದಾರೆ. ಕೃಷಿಯಲ್ಲಿ ಇವರ ಕಡಿಮೆ ಬಂಡವಾಳದಿಂದ ಹೆಚ್ಚಿನ ಗಳಿಕೆಯ ಯೋಜನೆಯನ್ನು ಅನುಕರಿಸುತ್ತಿರುವ ರೈತರು ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ. ಅಲ್ಲದೇ ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗಿಗಳಾಗಿರುವ ಯುವಕ, ಯುವತಿಯರು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಕಪನಪ್ಪನವರು ಕೃಷಿಯಲ್ಲಿ ಕಂಡಿರುವ ಯಶಸ್ಸು ಉತ್ತೇಜನವಾಗಿದೆ.

ಸೂಕ್ತ ಯೋಜನೆಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡಿದರೆ ರೈತರು ಯಶಸ್ಸನ್ನು ಕಾಣಬಹುದು. ರೈತರು ಕೃಷಿ ಬಗ್ಗೆ ಇಲಾಖೆಯಿಂದ ಸಲಹೆಗಳನ್ನು ಪಡೆದು ವ್ಯವಸಾಯ ಮಾಡಬೇಕು.

 ಕಪನಪ್ಪ, ಹುಲಸೆ ಗ್ರಾಮದ ರೈತ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಬಿ.ಶಂಶುದ್ದೀನ್

contributor

Similar News