ನಗು ಮುಖದ ಶಿಕ್ಷಕಿ ಕೆ.ಪಿ ಶಾಹಿದಾ ಮೇಡಂ ; ಒಂದು ನೆನಪು

Update: 2024-09-05 04:55 GMT

Photo : ಶಿಕ್ಷಕಿ ಕೆ.ಪಿ ಶಾಹಿದಾ 

"ಕಲಿಸುವುದು ಒಂದು ವೃತ್ತಿಯಲ್ಲ, ಸಮಾಜಕ್ಕೆ ಬೆಲೆ ಕಟ್ಟಲಸಾಧ್ಯವಾದ ಒಂದು ಸೇವೆ" ಎಂದು ನಿಷ್ಕಲ್ಮಶರಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆಯೆರೆಯುವ ಶಿಕ್ಷಕ/ಶಿಕ್ಷಕಿಯರನ್ನು ಜಗತ್ತು ಗುರುತ್ತಿಸುತ್ತದೆ ಮತ್ತು ನಿತ್ಯ ಸ್ಮರಿಸುತ್ತದೆ. ಆ ಉದಾತ್ತ ಮನೋಭಾವದ ಶಿಕ್ಷಕರ ಕೊರತೆಯಿಂದಲೇ ಸಮಾಜದಲ್ಲಿ ತೊಡಕುಗಳು ಹೆಚ್ಚಾಗುತ್ತಿದೆ. ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಇಂದಿನ ಅಗತ್ಯ ಜೊತೆಗೆ ಶಿಕ್ಷಕರೂ ಮೌಲ್ಯಯುತರಾಗಬೇಕಾದದ್ದೂ ಅಷ್ಟೇ ಅಗತ್ಯ. ತಾನು ಭೋಧಿಸಿದಂತೆ ಬದುಕಿದ ಬೆರಳೆಣಿಕೆಯ ಶಿಕ್ಷಕರಲ್ಲಿ ಒಬ್ಬರಾಗಿದ್ದರು. ಇತ್ತೀಚೆಗೆ ನಮ್ಮನ್ನು ಅಗಲಿದ ಎ.ಆರ್.ಕೆ. ಬೆಂಗ್ರೆ ಶಾಲೆಯ ಶಿಕ್ಷಕಿ ದಿವಂಗತೆ ಕೆ.ಪಿ ಶಾಹಿದಾ ಮೇಡಂ.

ಬೆಂಗ್ರೆ ಮಂಗಳೂರು ನಗರದ ಪುಟ್ಟ ದ್ವೀಪ ಪ್ರದೇಶ ಹಳೇಯ ಬಂದರಿನಿಂದ ದೋಣಿಯ ಮೂಲಕವೇ ಅಲ್ಲಿಗೆ ಹೋಗಬೇಕು. ಬೆಂಗ್ರೆ ಒಂದು ರೀತಿಯಲ್ಲಿ ಹೇಳುವುದಾದರೆ ಅಂದೊಂದು ಮರಳಿನ ದಿಂಡೆ, ಮೀನುಗಾರಿಕೆ ಅವರ ಮೂಲ ಕಸುಬು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಈ ಪ್ರದೇಶವನ್ನು ಸುಧಾರಣೆಗೊಳಿಸುವಲ್ಲಿ ಶಾಹಿದಾ ಮೇಡಂ ರವರ ತಂದೆ ದಿವಂಗತ ಕೆ.ಪಿ ಇಸ್ಮಾಯಿಲ್ ಉಸ್ತಾದ್ ರವರ ಸೇವೆ ಸ್ಮರಣೀಯ. ತನ್ನ ಮೆಟ್ಟಿಲು ಸವೆದು ಹೋದರೂ ಬಡವನ ಸಂಕಷ್ಟಕ್ಕೆ ಆಸರೆಯಾಗುತ್ತಿದ್ದ ಆ ಮಾಹಾನ್ ಪುರುಷನನ್ನು ಅರಬಿ ಕಡಲಿನ ಅಲೆಗಳು ನಿತ್ಯವೂ ಸ್ಮರಿಸುತ್ತದೆ.

ಕಸ್ಬಾ ಬೆಂಗ್ರೆಯ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ತಂದೆಯ ಅವಿರತ ಶ್ರಮದಿಂದ ಕಟ್ಟಿದ ಎ.ಆರ್.ಕೆ ಶಾಲೆಯಲ್ಲಿ 2013ರಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿದ ಶಾಹಿದಾ, ತಂದೆಯ ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟವರು.

ಬೆಂಗರೆಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಬಡತನ ಅದಕ್ಕೊಂದು ತೊಡಕಾಗಬಾರದು. ಅವರು ಭವಿಷ್ಯದಲ್ಲಿ ಏಳಿಗೆ ಕಾಣಬೇಕೆಂಬ ನಿಸ್ವಾರ್ಥ ತುಡಿತ ಅವರಲ್ಲಿತ್ತು. ಆ ಕಾರಣಕ್ಕಾಗಿ ತನ್ನ ನಿವಾಸ ಹತ್ತಾರು ಕಿಲೋಮೀಟರ್ ದೂರದ ಉಳ್ಳಾಲ ಪ್ರದೇಶದಲ್ಲಿದ್ದರೂ ಬೆಂಗ್ರೆ ಶಾಲೆಯಲ್ಲಿಯೇ ಸೇವೆ ಮುಂದುವರಿಸಿದ್ದರು.

ತನ್ನ ಶಾಲೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಸಿದ್ದರಾಗಿದ್ದ ಶಾಹಿದಾ, ಸಮಾಜ ಸೇವೆಯಲ್ಲಿಯೂ ಸಕ್ರೀಯರಾಗಿದ್ದರು. ಅವರ ಸೇವಾ ವ್ಯಾಪ್ತಿ ಕಸ್ಬಾ ಬೆಂಗ್ರೆಯನ್ನು ಮೀರಿತ್ತು. ಬಡಾ ಮಕ್ಕಳ ಫೀಸ್ ಕಟ್ಟುವುದು, ಪುಸ್ತಕ ಬ್ಯಾಗ್ ವಿತರಿಸುವುದು, ದಾನಿಗಳ ನೆರವು ಪಡೆದು ಬಡವರಿಗೆ ನೆರವಾಗುವುದು, ರೇಶನ್ ಕಿಟ್ ವಿತರಿಸುವುದು, ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡುವುದು, ಅವರ ಕಷ್ಟಗಳಿಗೆ ಸ್ಪಂದಿಸುವುದು. ಮಹಿಳೆಯರಿಗೆ ತರಗತಿಗಳನ್ನು ನಡೆಸುವುದು,ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಹೆಣ್ಮಕ್ಕಳಿಗೆ ಭರವಸೆ ಕೊಡುವುದು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಇತ್ಯಾದಿ ಸೇವೆಗಳನ್ನು ಅವರು ಬಿಡುವಿನ ವೇಳೆಯಲ್ಲಿ ರಾತ್ರಿ ಹಗಲೆನ್ನದೆ ಮಾಡುತ್ತಿದ್ದರು. ನಗು ಮುಖದಿಂದಲೇ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ, ಕಷ್ಟಗಳಿಗೆ ನೆರವಾಗುವ ವಿಶೇಷ ಗುಣ ಅವರಿಗಿತ್ತು. ನಾನು ನನ್ನದು ಎಂಬ ಚಿಂತೆಯಲ್ಲಿ ದಿನ ದೂಡುವ ಹೊಸ ಕಾಲದ ಶಿಕ್ಷಕಿಯರಿಗಿಂತ ಶಾಹಿದ ಭಿನ್ನರಾಗಿದ್ದರು. ಅವರ ಪ್ರಾಥೀವ ಶರೀರ ನೋಡಲು ಸಾಲುಗಟ್ಟಿ ನಿಂತಿದ್ದ ಮಹಿಳೆಯರೇ ಅದಕ್ಕೆ ಸಾಕ್ಷಿ. ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಮಾಡಿದ ಪಾಠದಿಂದಲೇ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂಬ ನೀತಿಯನ್ನು ಮೇಡಂ ಪಾಲಿಸಿದ್ದರು. ಅವರ ಭೋಧನೆಗಳು ಮಕ್ಕಳ ಮೇಲೆ ದೊಡ್ಡ ಪ್ರಭಾವ ಬೀರಿತ್ತು ಎಂದು ವಿದ್ಯಾರ್ಥಿಗಳ ಕಣ್ಣೀರ‌ ಹನಿಗಳು ತಿಳಿಸುತ್ತದೆ.

"ಉತ್ತಮ ರೀತಿಯಲ್ಲಿ ಕರ್ತವ್ಯ ನಿರತರಾಗುತ್ತಿದ್ದ ನಮ್ಮ ಶಾಹಿದಾ ಟೀಚರ್ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಗತಿಗಳನ್ನು ಮಾಡಿ ಅವರ ಓದುವಿನಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿದ್ದರು. ಅಲ್ಲದೆ ಊರಿನವರಿಗಾಗಿ ಸಮಾಜ ಸೇವೆ, ದಾನ ಧರ್ಮ ನಿರಂತರವಾಗಿ ಮಾಡುತ್ತಿದ್ದರು. ಮಹಿಳೆಯರಿಗಾಗಿ ವಿಶೇಷ ತರಗತಿಗಳನ್ನು ನಡೆಸಿಕೊಡುತ್ತಿದ್ದರು"ಎಂದು ಎ.ಆರ್.ಕೆ. ಶಾಲೆಯ ಅಧ್ಯಾಪಕಿ ನೆನಪಿಸುತ್ತಾರೆ.

"ಯಾವ ವಿಷಯದಲ್ಲಾದರೂ ಅಲ್ಪವೂ ಕೊಪಗೊಳ್ಳದ, ಯಾವುದಕ್ಕೂ ಬೇಸರ ಪಡದ, ಶಿಕ್ಷಕಿಯರೊಂದಿಗೆ ಅನ್ಯೋನ್ಯತೆಯಿಂದ ಎಲ್ಲದಕ್ಕೂ ಯಾವಾಗಲೂ ಸಹಕರಿಸುತ್ತಿದ್ದ ಶಾಹಿದಾ ಟೀಚರ್ ನಮ್ಮೊಂದಿಗಿಲ್ಲ ಎಂಬುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ", ಎಂದು ಶಿಕ್ಷಕಿ ಆತ್ಮೀಯ ಸ್ನೇಹಿತೆ ಲತಾ ನೆನೆದು ಭಾವುಕರಾಗುತ್ತಾರೆ.

“ಕೆಲವೇ ದಿನದ ಹಿಂದೆ ಬೋಟಿನಲ್ಲಿ ಬರುವಾಗ ಪರಿಚಯವಾದ ಶಾಹಿದಾ ಟೀಚರ್ ಬಹಳ ಆತ್ಮೀಯರಾದರು. ಅವರು ಟೀಚರ್ ಆದರೂ ಕಲಿಯುವ ಹಂಬಲ ಇತ್ತು. ನಮ್ಮ ಆತ್ಮೀಯತೆಗೆ ದೇವನು ಆಯಸ್ಸು ಕೊಡಲಿಲ್ಲ ಅವರು ಇನ್ನಿಲ್ಲ ಎನ್ನುವುದು ಸಹಿಸಲಾಗುವುದಿಲ್ಲ”, ಎಂದು ಗೆಳತಿ ಶಿಕ್ಷಕಿ ಅಂಬಿಕ ನೋವು ಹಂಚಿಕೊಳ್ಳುತ್ತಾರೆ.

ಎ.ಎಸ್.ಐ ಆಗಿರುವ ಪತಿ ಮುಹಮ್ಮದ್, ಮೂವರು ಮಕ್ಕಳು, ಕಾನೂನು ವ್ಯಾಸಾಂಗದಲ್ಲಿರುವ ಮಗಳು, ಕೌಟುಂಬಿಕ ಒತ್ತಡದ ನಡುವೆಯೂ ತನ್ನ ಸೇವೆಯನ್ನು ಸಾಮರ್ಥವಾಗಿ ನಿಭಾಯಿಸಿದರು. ಹಗೆತನ ಅಸೂಯೆ ಹಟವಿಲ್ಲದೆ ನಿಷ್ಕಲ್ಮಶವಾಗಿ ಸರಳ ಜೀವನ ನಡೆಸುತ್ತಿದ್ದ ನಗು ಮುಖದ ಶಾಹಿದಾ ಮೇಡಂ 2024ರ ಆಗಸ್ಟ್ 17ರಂದು ರಸ್ತೆ ಅಪಘಾತದಲ್ಲಿ ನಮ್ಮನ್ನು ಅಗಲಿದರು. ವಿದ್ಯಾರ್ಥಿಗಳ ಭವಿಷ್ಯ ಮತ್ತು ಉತ್ತಮ ಸಮಾಜ ಕಟ್ಟಲು ಪಣತೊಟ್ಟ ಇಂತಹ ನಿಸ್ವಾರ್ಥ ಶಿಕ್ಷಕ/ಶಿಕ್ಷಕಿಯರನ್ನು ಸ್ಮರಿಸದೆ ಶಿಕ್ಷಕ ದಿನಾಚರಣೆ ಪೂರ್ಣವಾಗದು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ಅಶೀರುದ್ದೀನ್ ಆಲಿಯಾ, ಸಾರ್ತಬೈಲ್

contributor

Similar News