ಕೆಎಸ್‌ಎ ಪರೀಕ್ಷೆ: ಪ್ರಶ್ನೆ ಪತ್ರಿಕೆಗಳ ಗೊಂದಲಗಳಿಗೆ ಉತ್ತರಿಸುವವರು ಯಾರು?
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2024ರ ಫೆಬ್ರವರಿ ಯಲ್ಲಿ 384 ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಒಟ್ಟು 2 ಲಕ್ಷದ 10 ಸಾವಿರ ಮಂದಿ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುತ್ತಾರೆ. ಅವುಗಳಲ್ಲಿ ಮೊನ್ನೆ ಮಂಗಳವಾರ ನಡೆದ ಪರೀಕ್ಷೆಗೆ ಹಾಜರಾಗಿರುವುದು 1 ಲಕ್ಷದ 31 ಸಾವಿರ ಆಕಾಂಕ್ಷಿಗಳು. ಉನ್ನತ ಹುದ್ದೆ ಪಡೆದು ಸಾರ್ವಜನಿಕ ಸೇವೆ ಸಲ್ಲಿಸುವುದರ ಜೊತೆಗೆ ತಮ್ಮ ಕುಟುಂಬಕ್ಕೂ ಆಸರೆಯಾಗಬಹುದು ಎನ್ನುವ ಮಹತ್ತರವಾದ ಕನಸನ್ನು ಹೊತ್ತು ಪದವಿ/ಸ್ನಾತಕೋತ್ತರ ಪದವಿ ಮುಗಿಸಿಕೊಂಡು ವರ್ಷಾನುಗಟ್ಟಲೆ ಪೂರ್ವತಯಾರಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.
KPSC ಪರೀಕ್ಷೆ ಕನ್ನಡದಲ್ಲೂ ಬರೆಯಬಹುದು. ಗ್ರಾಮೀಣ ಭಾಗದ ಬಹುತೇಕ ಕನ್ನಡ ಶಾಲೆಗಳಲ್ಲಿ ಕಲಿತ, ಕನ್ನಡ ಮಾಧ್ಯಮದಲ್ಲಿಯೇ ಪದವಿ ಪಡೆದವರು ಕನ್ನಡದಲ್ಲಿ ಮಾತ್ರ ಹಿಡಿತವನ್ನು ಹೊಂದಿರುತ್ತಾರೆ. ಇಂಗ್ಲಿಷ್ ಅರ್ಥಮಾಡಿಕೊಳ್ಳಲು ಪರದಾಡುವ ಮತ್ತು ಬರೆಯಲು ಕಷ್ಟವಾಗುವ ಕಾರಣಕ್ಕೆ ಬಹುತೇಕ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು KPSC ಪರೀಕ್ಷೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ.
ಮೊನ್ನೆಯಷ್ಟೇ ನಡೆದ KAS ಪೂರ್ವಭಾವಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ ರಚಿಸಿರುವ ಪ್ರಶ್ನೆಪತ್ರಿಕೆಯನ್ನು ನೋಡಿ ದಿಗ್ಭ್ರಮೆಗೊಳಗಾಗಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕುಳಿತವರ ಹಾಗೂ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವವರ ಹೊಣೆಗೇಡಿತನ ಮಾತ್ರವಲ್ಲ, ಪಿತೂರಿಯೂ ಇಲ್ಲಿದೆ. ಸಾಮಾನ್ಯ ಪ್ರಶ್ನೆ ಪತ್ರಿಕೆಯ ಕನ್ನಡ ಅವತರಣಿಕೆಯ ಪ್ರಶ್ನೆ ಪತ್ರಿಕೆಯ ತುಂಬಾ ಕಾಣಿಸಿಕೊಂಡ ಯಡವಟ್ಟುಗಳು ಅನೇಕ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ಅಷ್ಟೇ ಅಲ್ಲದೆ UPSC ಮಾದರಿಯನ್ನು (Exam pattern) ನಕಲು ಮಾಡಲಾಗಿದೆ. ಏಕೆಂದರೆ ಈ ಬಾರಿ ಕೇಳಲಾಗಿರುವ ಪ್ರಶ್ನೆಗಳು UPSC ಗಿಂತಲೂ ಕಠಿಣವಾಗಿದ್ದವು.
ಇನ್ನು ಕೆಲವು ವಾಕ್ಯಗಳನ್ನು ನೋಡಿ
ನೀರಿನ ಸಾಗಣೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ ರೂಟ್ ಒತ್ತಡವು ಮಧ್ಯಮ ತಳ್ಳುವಿಕೆಯನ್ನು ಒದಗಿಸುತ್ತದೆ.
ಹೆಚ್ಚಿನ ಸಸ್ಯಗಳು ತಮ್ಮ ನೀರಿನ ಅಗತ್ಯವನ್ನು ಟ್ರಾನ್ಸ್ ಪಿರೇಷನ್ ಪುಲ್ ಮೂಲಕ ಪೂರೈಸುತ್ತವೆ.
ಗುಟೇಶನ್ ಟ್ರಾನ್ಸ್ ಪಿರೇಶನ್ ಪುಲ್‌ಗೆ ಕಾರಣವಾಗಿದೆ.
ಇಷ್ಟೊಂದು ತಪ್ಪುಗಳು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಎಷ್ಟು ಗೊಂದಲವನ್ನುಂಟು ಮಾಡಬಹುದು ಎಂದು ನಾವು ಊಹಿಸ ಬಹುದು.
ಇದು ಕೇವಲ ಕಣ್ತಪ್ಪಿನಿಂದಾದ ಪ್ರಮಾದವಂತೂ ಅಲ್ಲವೇ ಅಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಈ ಪರೀಕ್ಷೆಯಲ್ಲಿ ಆಗಿರುವ ಲೋಪಗಳನ್ನು ಗಮನಿಸಿ ಅದರ ಕುರಿತು ತಕ್ಷಣವೇ ವರದಿ ಕೊಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರವನ್ನೂ ಬರೆದಿರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗವೆಂದರೆ ಭ್ರಷ್ಟಾಚಾರದ ಮಾರುಕಟ್ಟೆ ಎಂದೇ ಹೆಸರುವಾಸಿಯಾಗಿರುವ ದುರಂತ ಕಾಲದಲ್ಲಿಯೂ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಆಶಾಭಾವನೆಯೊಂದಿಗೆ ನಾಲ್ಕೈದು ವರ್ಷಗಳ ಕಾಲ ಪರೀಕ್ಷೆಗೆ ತಯಾರಾಗಿ ಹೋದರೆ ತಪ್ಪು ತಪ್ಪಾದ ಪ್ರಶ್ನೆಪತ್ರಿಕೆಗಳ ಮೂಲಕವೂ ಬಡ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುವ ಬಹುದೊಡ್ಡ ಷಡ್ಯಂತ್ರ ನಡೆಯುತ್ತಿರುವುದನ್ನು ನಾವು ಗಮನಿಸಬಹುದು.
ಉತ್ತರಿಸುವವರು ಯಾರು?
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷದ ಸಂಭ್ರಮದಲ್ಲಿ ‘ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ’ ಎನ್ನುವ ಘೋಷವಾಕ್ಯವನ್ನು ರಾಜ್ಯ ಸರಕಾರ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉನ್ನತ ಅಧಿಕಾರಿಗಳನ್ನು ನೇಮಕ ಮಾಡುವ ಸಾಂವಿಧಾನಿಕ ಸೇವಾ ಆಯೋಗವೊಂದು ಕನ್ನಡದ ಬಗ್ಗೆ ಈ ರೀತಿಯ ಮಲತಾಯಿ ಧೋರಣೆ ಯಾಕೆ ತೋರುತ್ತಿದೆ? ಕನ್ನಡದಲ್ಲಿಯೇ ಪ್ರಶ್ನೆಗಳನ್ನು ಸಿದ್ಧಪಡಿಸಿ ಆಮೇಲೆ ಅದನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರೆ ಆಗುವ ಸಮಸ್ಯೆಯೇನು? ಕರ್ನಾಟಕದಲ್ಲಿ ನಡೆಯುವ ರಾಜ್ಯ ಪರೀಕ್ಷೆಗಳಲ್ಲಿ ಕನ್ನಡವೇ ಪ್ರಮುಖವಾಗಬೇಕು. ಕೇವಲ KAS ನಂತರ ಪರೀಕ್ಷೆಗಳು ಮಾತ್ರವಲ್ಲ ರಾಜ್ಯದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೂ ಕನ್ನಡವೇ ಮೊದಲ ಆದ್ಯತೆಯಾಗಬೇಕು. ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ನಾವು ಪ್ರಶ್ನೆ ಪತ್ರಿಕೆಯನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಸಿದ್ಧಪಡಿಸಲು ಭಾಷಾ ತಜ್ಞರನ್ನು ಬಳಸಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿರುತ್ತಾರೆ.
Sister ಅನ್ನು ಕನ್ನಡದಲ್ಲಿ ಸಹೋದರ ಎಂದು ಅನುವಾದಿಸಿದ ಆ ಭಾಷಾ ತಜ್ಞರನ್ನು ಬಹಿರಂಗಪಡಿಸಿ ಎಂದು ನಾವು ಆಗ್ರಹಿಸುತ್ತೇವೆ. ಆಯೋಗವು ತನ್ನ ಕರ್ತವ್ಯಗಳು ಮತ್ತು ಕಾರ್ಯವಿಧಾನಗಳನ್ನು ಸಂವಿಧಾನದ ಆರ್ಟಿಕಲ್-320 ಮತ್ತು Government of India Act-1935 ರ ಪ್ರಕಾರ ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ಆಯೋಗವು ನೇಮಕಾತಿಯ ಪಾರದರ್ಶಕತೆಯನ್ನು ಕಾಪಾಡದಿದ್ದರೆ ಅಥವಾ ತನ್ನ ಕರ್ತವ್ಯಗಳನ್ನು ಮರೆತರೆ ಕಾನೂನು ಹಕ್ಕುಗಳನ್ನು ನಿರ್ಧರಿಸಲು ಮತ್ತು ಜಾರಿಗೊಳಿಸಲು ನ್ಯಾಯಾಂಗದ ಪ್ರಕ್ರಿಯೆಗಳನ್ನು ಅನುಸರಿಸಲು ಅದು ಜವಾಬ್ದಾರರಾಗಬೇಕಾಗುತ್ತದೆ.
ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಅದನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಗೂಗಲ್ ಅನುವಾದ ಅಥವಾ AI (artificial intelligence) ಮೂಲಕ ಅನುವಾದ ಮಾಡಲಾಗಿದೆ ಎನ್ನುವುದು ಪ್ರಶ್ನೆಪತ್ರಿಕೆಗಳಲ್ಲಿ ಕಂಡುಬರುವ ಅನುವಾದದ ಸಮಸ್ಯೆಗಳನ್ನು ನೋಡಿ ಊಹಿಸಬಹುದು. ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಮುಗಿಸಿಕೊಂಡು ಅನೇಕ ಕೌಟುಂಬಿಕ ಸಮಸ್ಯೆಗಳ ನಡುವೆಯೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾ ಸ್ನೇಹಿತರ ಬಳಿ ಸಾಲ ಮಾಡಿ, ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಮ್ಮ ನಾಲ್ಕೈದು ವರ್ಷಗಳನ್ನು ವ್ಯಯ ಮಾಡಿರುತ್ತಾರೆ. ಅಂಥ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುವ ಕೆಲಸವನ್ನು ಲೋಕಸೇವಾ ಆಯೋಗ ಮಾಡಿದೆ. ಆಯೋಗವು ಸಂವಿಧಾನದ ಆರ್ಟಿಕಲ್ 320 ಮತ್ತು Government of India act-1935ರ ಪ್ರಕಾರ ತಮ್ಮ ಕರ್ತವ್ಯಗಳನ್ನು ಮತ್ತು ಕಾರ್ಯವಿಧಾನಗಳನ್ನು ಪಾಲಿಸುವಲ್ಲಿ ಸೋತಿದೆ. ರಾಜ್ಯ ಸರಕಾರವು ಕೂಡಲೇ ಕರ್ನಾಟಕ ಲೋಕಸೇವಾ ಆಯೋಗ ಮಾಡಿರುವ ಈ ತಪ್ಪಿನ ಬಗ್ಗೆ ವರದಿ ಕೇಳಬೇಕು ಮತ್ತು ಮರುಪರೀಕ್ಷೆ ನಡೆಸಬೇಕು. ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳು ಭರವಸೆ ಕಳೆದುಕೊಂಡು ಹತಾಶರಾಗಲು ಬಿಡದೇ ಸರಕಾರ ಕೂಡಲೇ ಅವರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು. ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆಗಳಲ್ಲಿ ಹಗರಣ, ಸಂದರ್ಶನದಲ್ಲಿ ಮೋಸ ಈ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳಿಂದ ಯುವಜನತೆ ಬೇಸತ್ತಿದೆ. ದಲಿತ, ಹಿಂದುಳಿದ, ಬಡವರ ಮಕ್ಕಳು ವೈದ್ಯಕೀಯ ಪದವೀಧರರಾಗುವುದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿ NEET ಜಾರಿಗೊಳಿಸಿ ಐತಿಹಾಸಿಕ ದ್ರೋಹವೆಸಗಿದೆ. ಲ್ಯಾಟರಲ್ ಎಂಟ್ರಿಯ ಮೂಲಕ IAS ಅಧಿಕಾರಿಗಳನ್ನು ಯಾವ ಪರೀಕ್ಷೆಯೂ ಇಲ್ಲದೆ ಮತ್ತು ಅಲ್ಲಿ SC/ST/OBCಗಳಿಗೆ ಮೀಸಲಾತಿ ಇಲ್ಲದೆ ನೇರವಾಗಿ ಉನ್ನತ ಹುದ್ದೆಗಳಿಗೆ ನೇಮಕಮಾಡಿಕೊಳ್ಳಲಾಗುತ್ತಿದೆ. ಹೊರಗುತ್ತಿಗೆ ನೌಕರರನ್ನು ನೇಮಕ ಮಾಡುವುದರಲ್ಲಿಯೂ ಮೀಸಲಾತಿ ಕಲ್ಪಿಸದೇ ಮೋಸಗೊಳಿಸಲಾಗುತ್ತಿದೆ.
ಲಕ್ಷಾಂತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಹಾಗೆಯೇ ಉಳಿಸಿಕೊಂಡು ನಿರುದ್ಯೋಗ ಸಮಸ್ಯೆಯನ್ನು ಉಲ್ಬಣಗೊಳಿಸಲಾಗುತ್ತಿದೆ. ಮೀಸಲಾತಿ ಇರುವುದೇ ಕೇವಲ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಮಾತ್ರ. ಹಾಗಿರುವಾಗ ಸರಕಾರಿ ಸಂಸ್ಥೆಗಳನ್ನು ಖಾಸಗೀಕ ರಣಗೊಳಿಸಿ ಮೀಸಲಾತಿಯನ್ನು ಹತ್ತಿಕ್ಕಿ ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳು ಯುವಜನತೆಯನ್ನು ನಿರುದ್ಯೋಗಿ ಗಳನ್ನಾಗಿಸುತ್ತಿರುವಾಗ ಉದ್ಯೋಗ ನೇಮಕಾತಿಗಾಗಿ ನಿರ್ಮಿಸಲಾದ ಸೇವಾ ಆಯೋಗಗಳು ನಿರಂಕುಶವಾ ದಿಗಳಂತೆ ವರ್ತಿಸುತ್ತಿರುವುದನ್ನು ಸರಕಾರ ಕಡಿವಾಣ ಹಾಕಬೇಕಾಗುತ್ತದೆ.