ನಿಸರ್ಗ ಸಹಜ: ಫುಕೋಕಾ ಕೃಷಿ ಪದ್ಧತಿ
‘ಕೃಷಿ’ ಅಂದಮೇಲೆ ಬೆಳೆಗಳಿಗೆ ಕಾಲಕಾಲಕ್ಕೆ ನೀರು, ಗೊಬ್ಬರ ಒದಗಿಸಬೇಕು. ಹಸಿರು ಸುಲಿಯುವ ಕ್ರಿಮಿಕೀಟಗಳನ್ನು ನಾಶಕ ಸಿಂಪಡಿಸಿ ಇಲ್ಲವಾಗಿಸಬೇಕು, ಇತ್ಯಾದಿ ಕಾಯಕಗಳನ್ನು ಕೃಷಿಕರು ಸಾಮಾನ್ಯವಾಗಿ ನಡೆಸಿಕೊಂಡು ಬರುತ್ತಿರುತ್ತಾರೆ. ಆದರೆ ಇದೆಲ್ಲದಕ್ಕಿಂತ ಫುಕೋಕಾ ಕೃಷಿ ಪದ್ಧತಿಯು ಹೊರತಾಗಿದೆ. ಈ ಕಾರಣದಿಂದ ಇರಬಹುದೇನೋ ‘ಆಲಸ್ಯಿಗನ ಬೇಸಾಯ ಪದ್ಧತಿ’ ಎಂದೂ ಕೆಲವರು ಈ ಕೃಷಿ ವಿಧಾನವನ್ನು ಟೀಕಿಸುವುದಿದೆ!
ಮಸನೊಬು ಫುಕೋಕಾ ಜಪಾನ್ ದೇಶದವರು. ಇವರು ವಿದ್ಯಾರ್ಥಿ ದೆಸೆಯಲ್ಲಿ ಬಯಾಲಜಿ ವಿಷಯದಲ್ಲಿ ಪದವಿ ಪಡೆದ ತರುವಾಯ ಪ್ರಯೋಗಾಲಯವೊಂದರಲ್ಲಿ ಸಸ್ಯಗಳ ಬದುಕು ಬೆಳವಣಿಗೆ ಕುರಿತು ಸಂಶೋಧನೆಗೆ ತೊಡಗಿಕೊಂಡರು. ಕೃಷಿ ವಿಜ್ಞಾನಿಯಾದ ಅವರಿಗೆ ಪ್ರಯೋಗಾಲಯದ ಆಯಕಟ್ಟೇ ವಿವಿಧ ಸಸ್ಯ ಪರೀಕ್ಷೆಗಳ ಅಖಾಡ. ಈ ಸಂದರ್ಭ ಫುಕೋಕಾರಿಗೆ ಕುರುಸೋವಾ ಎಂಬವರ ಆಪ್ತತೆ ಒದಗುತ್ತದೆ. ಕೃಷಿ ವಿಜ್ಞಾನದ ಅಧ್ಯಯನದಲ್ಲಿ ಬರುವ ಪ್ರಮುಖ ವಿಜ್ಞಾನಿ ಕುರುಸೋವ. ಅವರು ಸಸ್ಯದ ಬೆಳವಣಿಗೆಗೆ ಕಾರಣವಾದ ‘ಜಿಬ್ರಾಲಿಕ್’ ಎಂಬ ಹಾರ್ಮೋನ್ ಒಂದನ್ನು ಗುರುತಿಸಿ ಹೆಸರಿಟ್ಟವರು. ಅಂತಹ ಕುರುಸೋವಾರೊಡನೆ ಕೆಲಸ ಮಾಡುವ ಅವಕಾಶ ಫುಕೋಕಾರಿಗೆ ಪ್ರಯೋಗಾಲಯದ ಮುಖಾಂತರ ಒದಗಿಬರುತ್ತದೆ.
ಫುಕೋಕಾ ಅವರು ತಮ್ಮ ತೋಟದಲ್ಲಿ ನೈಸರ್ಗಿಕ ರೀತಿಯಿಂದ ನಿರೂಪಿಸಿದ ಕೃಷಿಯನ್ನು ‘ಫುಕೋಕಾ ಕೃಷಿ ಪದ್ಧತಿ’ ಎಂದು ವ್ಯವಸಾಯ ಜಗತ್ತು ಬಣ್ಣಿಸಿದೆ. ಈತ ಬೇಸಾಯದಲ್ಲಿ ಮಗ್ನವಾಗಿ, ಆ ಮೂಲಕ ಅನುಭವದಿಂದ ಶೋಧಿಸಿದ ಈ ಕೃಷಿ ಪದ್ಧತಿಯ ಕೋನಗಳನ್ನು ನೋಡಿದರೆ ಇವೆಲ್ಲಾ ನಮಗೂ ಅರಿವಿರುವ ಸಂಗತಿ ಎನಿಸಬಹುದು. ಆದರೆ ಫುಕೋಕಾರ ಕೃಷಿ ಪದ್ಧತಿಯನ್ನು ತೋಟಗಳಿಗೆ ಅಳವಡಿಸುವುದು ಗ್ರಹಿಕೆಗೆ ನಿಲುಕಿದ್ದಕ್ಕಿಂತ ಕಷ್ಟಕರ. ಯಾಕೆಂದರೆ ನಮ್ಮ ಪರಿಸರದ ಸಮಕಾಲೀನ ವಾತಾವರಣ ಮೊದಲಿನಂತಿರದೆ ಇಲ್ಲಿನ ರಾಜಕೀಯ ಮಾತ್ರವಲ್ಲ ಈಗಿನ ಮಣ್ಣೂ ಬದಲಾಗಿದೆ. ಅಷ್ಟೇ ಅಲ್ಲ, ರೈತರ ಮಾನಸಿಕತೆಯೂ ಸಾಲ-ಸಬ್ಸಿಡಿ ಎಂದು ಸಂಕೀರ್ಣಗೊಳ್ಳುತ್ತಿದೆ. ಸರಳ ಹಾಗೂ ಸುಲಭದಲ್ಲಿ ಸಿಗುವುದೆಲ್ಲಾ ಇಳುವರಿ ಕೊಡಲಾಗದವು. ಹಾಗಾಗಿ ವ್ಯವಸಾಯದಿಂದ ಹೆಚ್ಚು ದುಡ್ಡುಗಳಿಸಬೇಕಾದರೆ, ‘ಹೊಲಗದ್ದೆಗಳಲ್ಲಿ ಓಡಿಸಿ ಟ್ರ್ಯಾಕ್ಟರ್’, ‘ಕೀಟಗಳನ್ನು ಕೊಲ್ಲುವ ಜೀವನಾಶಕಗಳನ್ನು ಸುರಿಯಿರಿ’ ಮೊದಲಾದ ಜಾಹೀರಾತಿನ ಪ್ರಭಾವಕ್ಕೆ ಕೃಷಿಕರು ಒಳಗಾಗುತ್ತಿರುವುದು ಹೊಸದೇನಲ್ಲ.
ಇನ್ನೊಂದೆಡೆ ಕೊಟ್ಟಿಗೆ ಗೊಬ್ಬರ, ಹಸುವಿನ ಗಂಜಲವು ಸಹಜ ಸಾವಯವ ಎಂಬ ಮನೋಭಾವ ಈಗಾಗಲೇ ಹಬ್ಬಿಯಾಗಿದೆ. ‘‘ನೋಡ್ರಿ ಎಲ್ಲಾ ಗಿಡಗಳ ಬುಡಕ್ಕೆ ಒಂದೊಂದು ಮಂಕ್ರಿ ಆಕಳ ಕೊಟ್ಟಿಗೆ ಗೊಬ್ರ ಹಾಕೋದು ಬಿಟ್ರೆ ಮತ್ಯಾವ ರಾಸಾಯನಿಕಾನೂ ಬಿಡೋದಿಲ್ಲ. ಪಕ್ಕಾ ಸಹಜ ಸಮೃದ್ಧ ರಾಸಾಯನಿಕ ಮುಕ್ತ ಸಾವಯವ ತೋಟ ನಮ್ಮದು’’ ಎಂಬ ಹೇಳಿಕೆಗಳನ್ನು ಇಂದು ಹಲವಾರು ವ್ಯವಸಾಯಗಾರರಿಂದ ಕೇಳಿಯೇ ಇರುತ್ತೀರಿ. ಆದರೆ ಫುಕೋಕಾ ಅವರು ಮನಗಂಡಿದ್ದು ಬೇರೆಯೇ; ಪ್ರಾಣಿಜನ್ಯವಾದ ಗೊಬ್ಬರ ಕೂಡ ಹಲವು ರಸಾಯನಗಳ ಆಗರ. ಆ ಕಾರಣ ಪ್ರಾಣಿಜನ್ಯವೆನ್ನುವುದು ಬಿಟ್ಟರೆ ಸಾವಯವ ಎನ್ನುವ ಸೆಗಣಿ ಗೊಬ್ಬರಕ್ಕೂ ಯೂರಿಯಾ, ಪೊಟಾಷ್, ರಾಕ್ ಸಲ್ಫೇಟ್ ಇತ್ಯಾದಿ ಫರ್ಟಿಲೈಸರಿಗೂ ವ್ಯತ್ಯಾಸವಿರದು. ಅದು ಸಹಜ ನೈಸರ್ಗಿಕ ದೃಷ್ಟಿಯಿಂದ ಪರಿಪೂರ್ಣ ಸಾವಯವವೇ ಅಲ್ಲ ಎಂಬುದು ಫುಕೋಕಾರ ಕೃಷಿ ತಾತ್ಪರ್ಯ.
ಬಹಳ ಕಾಲ ಫುಕೋಕಾ ಅವರು ಪ್ರಯೋಗಶಾಲೆಯ ಗಾಜಿನ ಪರದೆಯೊಳಗೆ ಕೃಷಿ ವಿಜ್ಞಾನಿ ಎಂಬ ಸಂಬೋಧನೆ ಹೊತ್ತುಕೊಂಡು ಬಾಳಲಿಲ್ಲ. ಅವರಿಗೆ ಕೃತಕ ಅನಿಸುವುದೆಲ್ಲಾ ಬೇಸರ ತರಿಸಲು ಕುಡಿಯೊಡೆದ ಹೊತ್ತು. ಅವರು ಕೃಷಿ ಸಂಶೋಧನಾ ಕಾರ್ಯಕ್ಕೆ ರಾಜೀನಾಮೆಕೊಟ್ಟ ನಂತರ ತಂದೆ ತಮಗೆಂದು ಬಿಟ್ಟುಕೊಟ್ಟ ತೋಟದಲ್ಲಿ ನೈಜ ಕೃಷಿಕನಾಗಿ ಕೃಷಿಯಲ್ಲಿ ತೊಡಗಲು ಮಣ್ಣಿಗಿಳಿಯುತ್ತಾರೆ. ಫುಕೋಕಾರ ತಂದೆ ಆ ಪರಿಸರಕ್ಕೆ ಹೊಂದುವ ಕಿತ್ತಳೆ, ಗೋಧಿ, ಬಾರ್ಲಿ ಮುಂತಾದ ಆಹಾರ ಬೆಳೆಗಳನ್ನು ಪೋಷಿಸಿದ್ದರು. ಪರಂಪರೆಯ ತೋಟ ತನಗೆ ಬಳುವಳಿಯಾಗಿ ಬಂದ ಶುರುವಿನಲ್ಲಿ ಕಣಗಟ್ಟಲೆ ಫಸಲು ಗಿಟ್ಟಿಸಿ ಹೊರೆ ದುಡ್ಡು ಬಾಚುವ ಸ್ವಪ್ನಸದೃಶ ರೈತರಂತೆ, ಜೊತೆಗೆ ಕೃಷಿ ವಿಜ್ಞಾನ ರುಜುಪಡಿಸಿದ ರಾಸಾಯನಿಕ ಗೊಬ್ಬರಗಳನ್ನೂ, ಕೀಟನಾಶಕಗಳನ್ನೂ ಗಿಡಗಳಿಗೆ ಸುರಿದರು. ಆರಂಭದ ವರ್ಷಗಳಲ್ಲಿ ಬಂಪರ್ ಇಳುವರಿ! ಆದರೆ ವರ್ಷಗಳು ಕಳೆದಂತೆ ಫುಕೋಕಾ ಭಗ್ನ ರೈತನಾಗಿ ಕೈಕಟ್ಟಿಕೂತರು. ಕಾರಣ ಬೆಳೆಯ ಪೋಷಣೆಗೆ ಹಾಕಿದ ಬಂಡವಾಳ ನೋಡಿದರೆ ಸಿಕ್ಕಿದ ಇಳುವರಿಯಿಂದ ಬಂದ ಲಾಭ ಏನೇನೂ ಸಾಲದು.
ಇದರಿಂದ ಫುಕೋಕಾ ಬದುಕಿನಲ್ಲೇ ನಿತ್ರಾಣಗೊಂಡರು. ಬಹುಶಃ ಕೃಷಿ ಪ್ರಯೋಗಾಲಯಕ್ಕೇ ಮೀಸಲಿದ್ದರೆ ಒಳ್ಳೆಯದಿತ್ತು ಅನಿಸಿರಬಹುದು. ನಗರದಲ್ಲಿದ್ದ ಸಂಶೋಧನಾಲಯದ ಗಾಜಿನ ತಾರಸಿಯಡಿ, ಹಸಿರು ಹೊದಿಕೆಯಡಿ ಪಾಟ್‌ನ ಸಸಿಯ ಚಿಗುರು ಕವರುತ್ತಾ ರಾಸಾಯನಿಕ ಉದಕ ಬಿಡುತ್ತಾ ‘ಕೃಷಿ ವಿಜ್ಞಾನಿ’ ಎಂಬ ಪದನಾಮ ಬಿಟ್ಟು ಈ ಹಳ್ಳಿಮೂಲೆಯ ತೋಟದ ಮಣ್ಣಿನೊಡನೆ ಹೆಣಗಾಟ ಯಾರಿಗೆ ಬೇಕೆಂಬ ಮನಸ್ಥಿತಿಗೆ ಫುಕೋಕಾ ಬಂದಿರಬಹುದು. ಒಟ್ಟಾರೆ ಕೆಲವೇ ವರ್ಷಗಳಲ್ಲಿ ತನ್ನೂರಿನ ತೋಟದಿಂದ ದೂರವಾಗಿ ಪುನಃ ನಗರದ ಕೆಲಸಕ್ಕೆ ಫುಕೋಕಾರು ಹೊರಟರು. ಅಲ್ಲಿ ಸಿಕ್ಕಸಿಕ್ಕ ಕೆಲಸಗಳನ್ನು ಮಾಡುತ್ತಾ ಜೀವಿಸತೊಡಗಿದರು.
ಇತ್ತ, ತಂದೆಯವರು ದಿಗ್ಭ್ರಮೆಗೆ ಒಳಗಾದರು. ದೈಹಿಕ ತ್ರಾಣವಿದ್ದಷ್ಟೂ ಕಾಲ ಆದಷ್ಟೂ ತಮ್ಮ ಅವಗಾಹನೆಗೆ ಅನುಗುಣವಾಗಿ ತೋಟವನ್ನು ಪೋಷಿಸುತ್ತಾ ಬಂದ ಫುಕೋಕಾರ ತಂದೆ ಒಂದು ದಿನ ವಿಧಿವಶರಾದರು. ಆಗೊಮ್ಮೆ ಈಗೊಮ್ಮೆ ಊರಿಗೆ ಬಂದಾಗ ಫುಕೋಕಾ ತೋಟದ ಮೇಲೆ ಕಣ್ಣಾಡಿಸಿ ಹೋಗುತ್ತಿದ್ದರಷ್ಟೇ. ಈಗ ಬಂದು ಕೂಲಂಕಷ ನೋಡುತ್ತಾರೆ! ತಲೆಸುತ್ತಿ ಬೀಳುವುದೊಂದೇ ಬಾಕಿ. ತಂದೆ ನಿಧನವಾದ ತರುವಾಯ ತೋಟ ಅಲ್ಲ ಅದು, ಅರಣ್ಯವಾಗಿದೆ. ತಾನು ತೋಟದಿಂದ ದಿಕ್ಕೆಟ್ಟು ನಗರದ ಕೆಲಸಕ್ಕೆ ಮರಳಿ ಹೋದಮೇಲೆ ತಂದೆ ಬೆಳೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ! ಉಡಾಫೆಯಿಂದ ಕೈಗೆ ಬಂದ ಇಳುವರಿಯಲ್ಲಷ್ಟೇ ತುತ್ತಿಗೆ ಮಾತ್ರ ತೊಂದರೆಯಿಲ್ಲದೆ ಬದುಕನ್ನು ತಳ್ಳಿಕೊಂಡಿದ್ದರೆಂಬ ಆಲೋಚನೆಗಳು, ಫುಕೋಕಾರಿಗೆ ಸದ್ಯ ತೋಟದ ಅವಸ್ಥೆ ನೋಡುವಾಗ ಮೀಟಿರಬಹುದು.
ಕಾಡಿನಂತೆ ಸಾಕ್ಷಾತ್ ರೂಪುಗೊಂಡಿದ್ದ ತನ್ನ ತೋಟದ ಅವತಾರವನ್ನು ತದೇಕವಾಗಿ ಫುಕೋಕಾ ಗಮನಿಸತೊಡಗಿದರು. ಆಹಾರ ಬೆಳೆಗಳನ್ನು ಮರೆಮಾಚಿದ ಮುಳ್ಳುಪೊದೆ, ಕಿತ್ತಳೆ ಮರಕ್ಕೆ ಸುಂದಿದ ದಪ್ಪನೆಯ ಕಾಡುಬಳ್ಳಿ, ನೆಲದ ಮೇಲೆ ಕಾಲೂರಲೂ ಅಸಾಧ್ಯವೆಂಬಂತೆ ಮೇಳೈಸಿದ ಕಳೆಗಿಡಗಳು! ತೋಟದ ಮೇಲಿನ ನೋಟವನ್ನು ಫುಕೋಕಾರು ಮತ್ತೂ ವಿಚಕ್ಷಣೆಗೆ ಒಳಪಡಿಸಿದರು. ಆಗ ಕಂಡುಬಂತು; ಕಾನನ ರೂಪದ ತೋಟದ ಮಣ್ಣು ತೇವಾಂಶದಿಂದ ಹಸಿಹಸಿಗುಟ್ಟುತ್ತಿದೆ. ಕಾಡುಕಳೆ ಮುಚ್ಚಿಗೆಯ ಮಧ್ಯವೂ ಇಣುಕಿ ನೋಡಿದರೆ, ಗೋಧಿ, ಬಾರ್ಲಿಯ ತಳಭಾಗ ಸುಪುಷ್ಟಿಗೊಂಡಿದೆ. ಕಿತ್ತಳೆ ಮರಗಳ ಬುಡ ಸದೃಢವಾಗಿವೆ. ಹಾಗೆ ಮತ್ತೂ ಆಳಕ್ಕೆ ಫುಕೋಕಾ ಗಮನಿಸುತ್ತಾ ಹೋದರು. ನೋಡಿದರೆ, ಜೀವಜಾಲವೇ ತೋಟದಲ್ಲಿ ನೆರೆದಿದೆ. ಎಲ್ಲವೂ ಸಹಜ ಹಾಗೂ ನೈಸರ್ಗಿಕ!. ಕ್ರಿಮಿಯನ್ನು ತಿನ್ನುವ ಇನ್ನೊಂದು ಕೀಟ. ಅದನ್ನು ಭಕ್ಷಿಸಲೆಂದು ಹರಿಯುತ್ತಿರುವ ಸರೀಸೃಪ. ಮರಗಳಲ್ಲಿ ಹಕ್ಕಿ ಗೂಡು. ಎತ್ತರಕ್ಕೆ ಕಣ್ಣು ಹಾಯಿಸಿದರೆ ಒಂದೊಂದು ಟೊಂಗೆಯಲ್ಲೂ ಚಿಲಿಪಿಲಿ. ಅಳಿಲು, ಇರುವೆಗಳು! ಆಗ ಫುಕೋಕಾರಿಗೆ ಅರಳಿ ಮರದಡಿಯ ಬುದ್ಧ ಜ್ಞಾನದಂತೆ ತೋಟದ ಅಡಿಯಲ್ಲಿ ನಿಸರ್ಗ ಸಹಜ ಕೃಷಿಯ ರೀತಿನೀತಿ ಅರಿವಿಗೆ ಬರತೊಡಗಿತು.
ತೋಟದ ಸುತ್ತಲೂ ಬೇಲಿಯ ತರಹ ಕಾಡು ಇರಬೇಕೆಂದು ಅವರು ತೀರ್ಮಾನಿಸಿದರು. ಗೋಧಿ, ಬಾರ್ಲಿಯ ಕಾಳುಗಳನ್ನು ತೋಟದ ಪೊದೆಗಳ ಮಧ್ಯೆ ಹಕ್ಕಿಯೊಂದು ಹಿಕ್ಕೆಹಾಕಿದಂತೆ ಚೆಲ್ಲಾಪಿಲ್ಲಿ ಚೆಲ್ಲಿದರು. ಕಾಳು ಮೊಳಕೆಯೊಡೆದು ಗಿಡ ಮೊಣಕಾಲೆತ್ತರ ಬರುತ್ತಿದ್ದಂತೆ ಅದರ ಸುತ್ತ ಆವೃತ್ತವಾಗಿದ್ದ ಮುಳ್ಳುಪೊದೆಗಳನ್ನು ತರಿದು ಆಹಾರ ಬೆಳೆಯ ಬುಡಕ್ಕೇ ಗೊಬ್ಬರವಾಗಿ ಚೆಲ್ಲಿದರು. ಕಿತ್ತಳೆ ಮರಕ್ಕೆ ಸುತ್ತಿದ ಬಳ್ಳಿಗಳನ್ನು ಕೊಚ್ಚಿ ಅದರ ಬುಡಕ್ಕೇ ಹರವಿದರು. ಜೊತೆಗೆ ಕಿತ್ತಳೆ ಮರದ ಪ್ರಧಾನ ಕಾಂಡದ ಟೊಂಗೆಗಳನ್ನು ಹೊರತು ಪಡಿಸಿ ದಟ್ಟೈಸಿದ ಅನವಶ್ಯಕ ರೆಂಬೆಗಳನ್ನು ಕತ್ತರಿಸಿದರು. ಇದರಿಂದ ಗಾಳಿ ಸಂಚಾರದ ಜೊತೆಗೆ ಸೂರ್ಯ ಕಿರಣದ ಸಂಚಾರ ಸಲೀಸು. ಎಂದೂ ಕೂಡ ಬೀಜ ಬಿತ್ತನೆಯಲ್ಲಿ ಹೈಬ್ರಿಡ್ ತಳಿ ಬಳಸದೆ ಮೂಲವಾದ ತಳಿಯನ್ನೇ ಆರಿಸಿದರು. ಬೇಸಗೆಯಲ್ಲಿ ನೀರು ಹಾಯಿಸಲಿಲ್ಲ. ತೋಟದ ಸುತ್ತಲಿದ್ದ ಕಾಡುಮರಗಳೇ ತೇವಾಂಶವನ್ನು ಮೀಸಲಿಟ್ಟಿತು. ಹಾಗೇ ಬಿಸಿಲಿನ ತಾಪಕ್ಕೆ ಬೆಳೆಗಳು ತೆರೆದುಕೊಂಡಾಗ ಅದರಲ್ಲಿದ್ದ ಪಾಚಿ, ಫಂಗಸ್ ಮೊದಲಾದವು ನಿರ್ನಾಮ ಹೊಂದುತ್ತವೆ. ಕೇವಲ ಮಳೆ ನೀರೇ ತೋಟಕ್ಕೆ ಆಧಾರ. ಅದುಬಿಟ್ಟು ನೀರನ್ನು ಕೃತಕವಾಗಿ ಹಾಯಿಸಿದರೆ ಬೆಳೆಗಳು ವರ್ಷಂಪ್ರತಿ ನೀರನ್ನು ಬೇಡುವುದಕ್ಕೇ ಹೊಂದಿಕೊಳ್ಳುತ್ತವೆ. ಇದಕ್ಕೆ ಪೂರಕವಾಗಿ ರಾಸಾಯನಿಕ ಗೊಬ್ಬರವೂ ಹಾಕುವುದೂ ಅಷ್ಟೇ, ಅದಕ್ಕೇ ಹೊಂದಿಕೊಳ್ಳುತ್ತವೆ. ನೀರು ಗೊಬ್ಬರ ಹಾಕದಿದ್ದರೆ ಕಂಗಾಲಾಗಿ ಗಿಡಗಳು ಸಾಯುತ್ತವೆ. ಫುಕೋಕಾ ಅವರ ವ್ಯವಸಾಯದ ರೀತಿಗೆ ವರ್ಷದಿಂದ ವರ್ಷಕ್ಕೆ ತೋಟದ ಫಸಲು ದುಪ್ಪಟ್ಟಾಯಿತೇ ವಿನಃ ಗಮನಾರ್ಹ ಸೊರಗಲಿಲ.್ಲ
ಎಷ್ಟು ಸರಳವೆಂದರೆ, ಇಲ್ಲಿ ತೋಟವನ್ನು ಕಾಪಾಡುವುದು ಕೇವಲ ಪ್ರಕೃತಿ. ಇದರಲ್ಲಿ ಮನುಷ್ಯನ ಕ್ರಿಯೆ ಅತ್ಯಲ್ಪ. ನಿಸರ್ಗ ಹೇಗೆ ತನ್ನನ್ನು ತಾನು ಪೋಷಿಸಿಕೊಂಡು ಹೋಗುತ್ತೋ, ಅದೇ ನಿಯಮನ್ನು ಫುಕೋಕಾ ತೋಟದಲ್ಲಿ ಅಳವಡಿಸಿದ್ದರು.
ಕ್ಷಿಪ್ರ ಗತಿಯಲ್ಲಿ ಫುಕೋಕಾರ ಕೃಷಿ ಪದ್ಧತಿಯನ್ನು ಸಂಪೂರ್ಣ ನಮ್ಮದೇ ಆಗಿಸುವುದು ಕಷ್ಟಸಾಧ್ಯ. ಮೊದಲಿಗೆ ಅರಣ್ಯವನ್ನು ನಮ್ಮ ತೋಟದ ಸುತ್ತ ಬೆಳೆಸುವುದು ಅತಿ ಮುಖ್ಯ. ಅಲ್ಲೊಂದು ಹುಳಹುಪ್ಪಟೆಯಾದಿಯಾಗಿ ಹಾವು, ಚೇಳು, ಹಕ್ಕಿಗಳುಳ್ಳ ಜೀವಜಾಲ ಮೇಳೈಸಬೇಕು. ನಂತರ ಅಲ್ಲಿನ ಸಹಜ ನಿಸರ್ಗ ಕ್ರಿಯೆಗೆ ಏಟಾಗದಂತೆ ಬೆಳೆಯ ಹೈಬ್ರಿಡ್ ತಳಿಗೆ ಹೊರತಾದ ಮೂಲ ಬೀಜ ಅಥವಾ ಗಿಡದ ಆಯ್ಕೆ ನಮ್ಮದಾಗಬೇಕು. ಹೀಗಿದ್ದರೆ ಕೃಷಿಗೆ ಬಂಡವಾಳ ಹಾಕುವುದು ಕೇವಲ ಗಿಡ ನೆಡುವುದರಲ್ಲಿ, ಅತಿ ಸ್ವಲ್ಪಮಟ್ಟಿಗೆ ಕಾರ್ಮಿಕರ ಬಳಕೆಯಲ್ಲಿ, ಇಳುವರಿ ಸಾಗಾಟದ ಖರ್ಚು ಅಷ್ಟೇ. ನಂತರ ಗಿಡಗಳನ್ನು ನಿಸರ್ಗ ನಿಯಮದಂತೆ ಪ್ರಕೃತಿಯೇ ನೋಡಿಕೊಳ್ಳುತ್ತದೆ.
ತತ್ವಜ್ಞಾನಿ ಹಾಗೂ ನೈಸರ್ಗಿಕ ಸಹಜ ಕೃಷಿಕ ಎಂದು ಕರೆಯಲ್ಪಡುವ ಮಸನೊಬು ಪುಕೋಕಾ 2008ರಂದು ಅಗಲಿದರು. ಅವರ ನೆನಪಿಗೆ ಜಪಾನಿನ ಅಂದಿನ ಸರಕಾರ ಫುಕೋಕಾ ಗಾರ್ಡನ್ ಎಂಬ ಉದ್ಯಾನವನ ನಿರ್ಮಿಸಿದೆ. ಭಾರತದ ಕೆಲವು ತೋಟಕ್ಕೂ ಫುಕೋಕಾ ಭೇಟಿ ನೀಡಿ ತಮ್ಮ ಕೃಷಿಯ ನೈಸರ್ಗಿಕ ನೋಟವನ್ನು ಮಾರ್ಗದರ್ಶಿಸಿದ್ದರು. ಫುಕೋಕಾ ಅವರ ವ್ಯವಸಾಯದ ಬಗ್ಗೆ ತೇಜಸ್ವಿ ಸೇರಿದಂತೆ ಇತರ ಲೇಖಕರು ಬರೆದ ಪುಸ್ತಕಗಳೂ ಕನ್ನಡದಲ್ಲಿ ಪ್ರಕಟಗೊಂಡಿವೆ.