ಧರ್ಮ ಸಂಘರ್ಷಕ್ಕೆ ಮುಖಾಮುಖಿಯಾದ 'ಕರಿಯ ದೇವರ ಹುಡುಕಿ'

Update: 2024-02-03 07:23 GMT

'ಬಣ್ಣಗಳ ಹಿಂದೆ ಹೋದ ಮಕ್ಕಳು ಯಾರೂ ಮರಳಿ ಬಂದಿಲ್ಲ' - ಇದು ಕರಿಯ ದೇವರ ಹುಡುಕಿ ನಾಟಕದ ಒಂದು ಸಂಭಾಷಣೆ. ತಾಯಿಯೊಬ್ಬಳ ಈ ಆರ್ತನಾದ ಇಡೀ ಭಾರತದ ಕೋಟ್ಯಾಂತರ ತಾಯಂದಿರ ಆರ್ತನಾದದಂತೆ ಕೇಳುತ್ತದೆ.

ದೇವರನ್ನು ಹುಡುಕಿ ಹೊರಡುವ ಮಕ್ಕಳು ಇಂದಿನ ಕೋಮುವಾದದ ಸುಳಿಗೆ ಸಿಕ್ಕ ಹುಡುಗರನ್ನು ಪ್ರತಿನಿದಿಸುತ್ತದೆ. ಮೂಲನಿವಾಸಿಗಳು ದೇವರನ್ನು ಹುಡುಕುತ್ತಲೇ ಬಣ್ಣಗಳಿಗೆ ಜೋತು ಬಿದ್ದು ಬಿಳಿಯ ದೇವರು, ಕರಿಯ ದೇವರು ಎಂಬ ಸಂಘರ್ಷವನ್ನು ಹುಟ್ಟುಹಾಕುತ್ತಾರೆ. ಕ್ರಮೇಣ ಮೂಲನಿವಾಸಿಗಳು ತಮ್ಮ ಬುಡಕಟ್ಟು ಆರಾಧನಾ ಪದ್ದತಿಯನ್ನು ಮರೆತು ಬಿಳಿಯ ದೇವರಿಗೂ ಭಕ್ತರಾಗುತ್ತಾರೆ. ಇದು ಶೂದ್ರರ ಸಾಂಸ್ಕೃತಿಕ ಪಲ್ಲಟವನ್ನು ಅಭಿವ್ಯಕ್ತಿಸುತ್ತದೆ. ಮೂಲನಿವಾಸಿ ಶೂದ್ರ ಸಮುದಾಯದ ಆರಾಧನಾ ಪದ್ದತಿಯಲ್ಲಿ ಇಲ್ಲದ ಲಿಂಗ ತಾರತಮ್ಯವನ್ನು ಬಿಳಿಯ ದೇವರ ಆರಾಧನಾ ಪದ್ದತಿಯು ಮೂಲನಿವಾಸಿಗಳ ಮೇಲೆ ಹೇರುತ್ತದೆ. ಮಡಿವಂತಿಕೆಯ ಬಿಳಿಯ ದೇವರ ಹಿಂದೆ ಬಿದ್ದ ಮೂಲನಿವಾಸಿಗಳು ತಮ್ಮ ಮನೆಯ ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಕಾರಣರಾಗುತ್ತಾರೆ. ಮಡಿವಂತಿಕೆಯ ಬಿಳಿಯ ದೇವರು ನಮ್ಮದಲ್ಲ ಎಂದು ಅರಿವಾಗುವ ವೇಳೆಗೆ ಸಾವು ನೋವು ಘಟಿಸಿ ಕಾಲ ಮಿಂಚಿರುತ್ತದೆ.

ಶೂದ್ರ-ಮೂಲನಿವಾಸಿಗಳ ಕರಿಯ ದೇವರು ನಮ್ಮ ನಡುವಿನ ಕಿರು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಅಸಮಾನತೆಯನ್ನು ಸಾರುವ ವೈದಿಕ ಸಂಸ್ಕೃತಿಗಳ ಎದುರು ನಾವು ಕಿರು ಸಂಸ್ಕೃತಿಗಳನ್ನು ನಾವು ಗೌರವಿಸಬೇಕು ಎಂಬುದು ನಿಜವಾದರೂ, ಅಲ್ಲೂ ಬಣ್ಣ ಮತ್ತು ಮೂಢನಂಬಿಕೆಗಳ ತೆಳು ಗೆರೆಯನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಕರಿಯ ದೇವರ ಹುಡುಕಿ ನಾಟಕ ಸಾರುತ್ತದೆ. ಕರಿಯ ದೇವರು 'ಬಲಿ' ಕೇಳಿದಾಗ, ದೇವರ ಹುಡುಕಾಟದಲ್ಲಿ ಹೊರೆ ಹೊತ್ತ ಮೂಕನೊಬ್ಬನನ್ನು ಬಲಿ ಕೊಡಲಾಗುತ್ತದೆ. ಇಲ್ಲಿ ಮೂಕ, ಶೋಷಿತ ಸಮುದಾಯವನ್ನು ಪ್ರತಿನಿಧಿಸುತ್ತಾನೆ. ನೆಲಮೂಲದ ಕಿರು ಸಂಸ್ಕೃತಿಗಳನ್ನು ಉಳಿಸಲೂ ಕೂಡಾ ಶೋಷಿತರೇ ಬಲಿಯಾಗುತ್ತಾರೆ ಎನ್ನುವ ವಾಸ್ತವ ಇಲ್ಲಿ ಧ್ವನಿಸುತ್ತದೆ. ಈ ಸಮಯದಲ್ಲಿ ದೇವರು ಮತ್ತು ಬಣ್ಣದ ಹಿಂದೆ ಬಿದ್ದ ಹುಡುಗರೆಲ್ಲರೂ ಕಣ್ಣು ಕಳೆದುಕೊಳ್ಳುತ್ತಾರೆ ಎಂಬ ರೂಪಕವಿದೆ.

ದೇವರಿಗಾಗಿ ಬಲಿಯಾದ ಮೂಕ ಕೊನೆಗೆ ದೇವರಾಗುತ್ತಾನೆ. ಮೂಕನ ತಾಯಿಯ ಅಳುವಿನ ಮಧ್ಯೆಯೇ ಬಲಿ ಪಡೆದುಕೊಂಡ ಪೂಜಾರಿಗಳು ಬಲಿಯಾದ ಮೂಕನನ್ನು ದೇವರನ್ನಾಗಿಸಿ ಸಂಪಾದನೆ ಮಾಡುತ್ತಾರೆ. ಅ ದೇಗುಲಕ್ಕೆ ಆತನ ತಾಯಿ ಮತ್ತು ಸಹವರ್ತಿಗಳಿಗೇ ಪ್ರವೇಶವಿರುವುದಿಲ್ಲ. ಆಗ ರೊಚ್ಚಿಗೇಳುವ ತಾಯಿಯ ಮಾತು ಈ ಸಮಾಜದ ಹೃದಯವನ್ನು ಕಲಕದೇ ಇರದು. "ಅವನು ದೇವರೇ ಅಲ್ಲ. ನಮಗೆ ಅವನಲ್ಲಿಗೆ ಪ್ರವೇಶವಿಲ್ಲವೆ? ಅವನನ್ನು ನಮ್ಮಿಂದ ತೆಗೆದುಕೊಂಡು ಬಂದು, ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟಿದ್ದೀರಿ. ಅವನೇನು ಖೈದಿಯೇ? ಅವನೊಬ್ಬ ಕಾಯಕ ಯೋಗಿ. ಬದುಕಿರುವವರೆಗೂ ನಮ್ಮ ಭಾರ ಹೊತ್ತವ. ನಮ್ಮನ್ನು ಹಗುರಾಗಿಸಿದವ. ಅವನನ್ನು ಅಪಹರಿಸಿ, ಬಂಧಿಸಿ, ಅವನಿಗೊಂದು ಬಣ್ಣ ಕೊಟ್ಟು ನಮ್ಮ ದೇವರು, ನಮ್ಮ ದೇವರು ಎಂದು ಕಿರುಚಾಡುತ್ತಿರುವವರೇ, ಇಲ್ಲಿ ಕೇಳಿ. ನಮಗೆ ಅಲ್ಲಿಗೆ ಪ್ರವೇಶ ಬೇಡ . ಅವನನ್ನು ಆಲಯದಿಂದ ಬಯಲಿಗೆ ಬಿಟ್ಟು ಬಿಡಿ. ಅವನು ಲಿಂಗಾತೀತ, ಅವನಿಗೆ ಬಣ್ಣವನ್ನು ಬಳಿಯಬೇಡಿ. ಅವನು ಕಾಯಕಯೋಗಿ. ಅವನು ಬಡಜನರ ಪರಂಪರೆ. ಅವನು ಹಚ್ಚಿಟ್ಟ ಜ್ಯೋತಿಯನ್ನು ಬೂದಿ ಮಾಡಿ ಹಂಚುವವರು ನೀವು. ಅವನನ್ನು ನೀವು ಎಲ್ಲಿ ಇಟ್ಟರೂ ಅವನು ನೆಲೆಸುವುದು ಜನರ ಮನದೊಳಗೆ. ಅವನು ಕಾಣಿಸುವುದು ಜನರ ಕಾಯಕದಲ್ಲೇ" ಎನ್ನುತ್ತಾಳೆ ತಾಯಿ.

ಇಲ್ಲಿ ತಾಯಿ ಎಂದರೆ ಪ್ರಕೃತಿ. ಬಿಳಿಯ ದೇವರ ಅನುಯಾಯಿ ಮಡಿವಂತರಿಗೂ, ಕರಿಯ ದೇವರ ಅನುಯಾಯಿ ಮೂಲನಿವಾಸಿಗಳಿಗೂ ತಾಯಿ ಒಬ್ಬಳೆ ! ಪ್ರಕೃತಿ ಕೊಡುವ ಸಂದೇಶವನ್ನು ತಾಯಿ ಪಾತ್ರದ ಮೂಲಕ ದಾಟಿಸಲಾಗಿದೆ. ಮೂಕ ಬಲಿಯಾದಾಗ ಕಣ್ಣು ಕಳೆದುಕೊಂಡ ಮಕ್ಕಳು ಅಂತಿಮವಾಗಿ "ನಮ್ಮ ಕಣ್ಣುಗಳು ಮರಳಿ ಕಾಣುವಂತೆ ಸರಿಯಾಗುವುದು ಯಾವಾಗ ತಾಯಿ ?" ಎಂದು ಪ್ರಶ್ನಿಸುತ್ತಾರೆ. ಆಗ ತಾಯಿ "ಮತ್ತೆ ನೀವು ಜಗತ್ತನ್ನು ಕಾಣಬಹುದು. ಬಳಿದುಕೊಂಡಿರುವ ಬಣ್ಣವನ್ನು ತೊಳೆದುಕೊಂಡರೆ ! ನಾನು ಪ್ರಕೃತಿ, ನಾನೇ ತಾಯಿ. ನಾನು ನಿಮ್ಮನ್ನು ಸ್ವಚ್ಚಗೊಳಿಸುತ್ತೇನೆ" ಎಂಬ ಸಂದೇಶವೇ ಈಗಿರುವ ಕೋಮು ಪ್ರಕ್ಷುಬ್ದತೆಗೆ ಉತ್ತರದಂತಿದೆ.

ರಂಗಭೂಮಿ ವಿಮರ್ಶಕರು 'ಕರಿಯ ದೇವರು ಹುಡುಕಿ' ನಾಟಕವನ್ನು ರಂಗನೆಲೆಯಲ್ಲಿ ಟೀಕಿಸಬಹುದು. ವಿದೂಷಕನ ಪಾತ್ರ ಅಗತ್ಯವಿತ್ತೇ ? ನಟನೆ ಇನ್ನಷ್ಟೂ ಪಕ್ವವಾಗಬೇಕಿತ್ತು, ಪ್ರಾರಂಭದ ನಿಧಾನಗತಿ, ರೊಮ್ಯಾನ್ಸ್ ನ ದೃಶ್ಯಗಳು ಅಗತ್ಯವಿತ್ತೇ ? ಧ್ವನಿ, ಬೆಳಕಿನ ಬಳಕೆ ಇತ್ಯಾದಿ ಟೀಕೆಗಳನ್ನು ನುರಿತ ರಂಗ ವಿಮರ್ಶಕರು ಪಟ್ಟಿ ಮಾಡಬಹುದು. ಆದರೆ ಈ ನಾಟಕವನ್ನು ಕೇವಲ ರಂಗ ವಿಮರ್ಶೆಯಿಂದ ನೋಡಲಾಗುವುದಿಲ್ಲ. ಯಾಕೆಂದರೆ ಈ ನಾಟಕವು, ಕಲೆ ಕಲೆಗಾಗಿ ಅಲ್ಲ : ಬದುಕಿಗಾಗಿ ಕಲೆ ಎಂಬ ಧೋರಣೆಯ 'ಸಮುದಾಯ ಬೆಂಗಳೂರು' ಪ್ರಸ್ತುತಪಡಿಸಿದೆ. ಹಾಗಾಗಿಯೇ ಸಾಮಾಜಿಕ, ಸಾಂಸ್ಕೃತಿಕ ನೆಲೆಯಿಂದ ಸೃಜನಶೀಲ ಪ್ರಯೋಗವಾಗಿ ಈ ನಾಟಕವನ್ನು ನೋಡಬೇಕಾಗುತ್ತದೆ. ನಾಟಕದ ಸಾಹಿತ್ಯದ ಸಂದೇಶವು ಈಗಿನ ಕಾಲಘಟ್ಟದಲ್ಲಿ ಮನುಷ್ಯ ಸಂವೇದನೆ ಮತ್ತು ಸೂಕ್ಷ್ಮತೆಯನ್ನು ಹೆಚ್ಚಿಸುವ ಒಂದು ಸೃಜನಾತ್ಮಕ ಸೇತುವೆಯಾಗಿದೆ‌.

ಕರಿಯ ದೇವರ ಹುಡುಕಿ ನಾಟಕದ ಮೂಲ ಮಳಯಾಲ ಕತೆ ಪ್ರೊ. ಜಿ. ಶಂಕರ ಪಿಳ್ಳೆಯವರದ್ದು. ಅದನ್ನು ಗಡಿನಾಡ ಕನ್ನಡಿಗ ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿ ಅನುವಾದ ಮಾಡಿದ್ದಾರೆ. ನಿರ್ದೇಶಕ ನಿರಂಜನ ಖಾಲಿಕೊಡ ಅದನ್ನು ರಂಗರೂಪಕ್ಕಿಳಿಸಿ ಸಮಾಜವನ್ನು ಬಣ್ಣಗಳಿಂದ ಮುಕ್ತಗೊಳಿಸಿ ಅನಿಕೇತನವನ್ನಾಗಿಸುವ ಪ್ರಯತ್ನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ನವೀನ್ ಸೂರಿಂಜೆ

contributor

Similar News