ಎನ್‌ಎಸ್‌ಎಸ್ ದಿನದ ಹಿಂದೆ...
ರಾಷ್ಟ್ರಾದ್ಯಂತ ಇಂದು ‘ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ಎಸ್) ದಿನ’ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ, ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಬಹುದೆಂದು ಡಾ. ರಾಧಾಕೃಷ್ಣನ್ ನೇತೃತ್ವದ ವಿಶ್ವವಿದ್ಯಾನಿಲಯ ಅನುದಾನ ಸಮಿತಿ ಭಾರತ ಸರಕಾರಕ್ಕೆ ಅನುಮೋದನೆ ನೀಡಿತು. ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ಸುಖಕರವಾದ ಮತ್ತು ರಚನಾತ್ಮಕವಾದ ಸಂಬಂಧ ಬೆಳೆಯಬೇಕು ಎಂಬ ಆಶಯದೊಂದಿಗೆ, ಸ್ವಯಂ ಪ್ರೇರಿತರಾಗಿ ಸಮುದಾಯ ಸೇವಾಭಾವನೆ ಮೂಡಿಸಲು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮದಿನದ 100ನೇ ವರ್ಷದಲ್ಲಿ ಅಂದರೆ 1969ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ದೇಶಾದ್ಯಂತ ವಿವಿಧ ರಾಜ್ಯಗಳ 37 ವಿಶ್ವವಿದ್ಯಾನಿಲಯಗಳಲ್ಲಿ ಪ್ರಾರಂಭಿಸಲಾಯಿತು. ಈ ಕಾರಣಕ್ಕಾಗಿಯೇ ಸೆಪ್ಟಂಬರ್ 24ನ್ನು ಎನ್‌ಎಸ್‌ಎಸ್ ದಿನ ಎಂದು ದೇಶಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.
ಎನ್‌ಎಸ್‌ಎಸ್‌ನ ಬಹಳ ಪ್ರಮುಖವಾದ ಧ್ಯೇಯವೆಂದರೆ ಕಲಿಕೆಯ ಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಉಂಟಾಗುವಂತೆ ಮಾಡುವುದು. ಇದು ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳೇ ನಡೆಸುವ ಒಂದು ಕಾರ್ಯಕ್ರಮವಾಗಿರುತ್ತದೆ. ಅಧ್ಯಾಪಕರು ಮತ್ತು ಶಿಕ್ಷಕರು ಕೇವಲ ನಿಮಿತ್ತ ಮಾತ್ರವಾಗಿದ್ದು ವಿದ್ಯಾರ್ಥಿಗಳಿಗೆ ಯೋಜನೆ ಅನುಷ್ಠಾನದ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಧ್ಯೇಯವೆಂದರೆ, ಮಕ್ಕಳು ನಾಲ್ಕು ಗೋಡೆಗಳ ನಡುವೆ ಪಾಠ ಕಲಿಯುವುದರ ಜೊತೆಗೆ, ಸಮುದಾಯದ ಜನರೊಂದಿಗೆ ಬೆರೆತು, ಅವರ ನೋವು ನಲಿವು, ಸುಖ ದುಖ, ಕಷ್ಟ ಕಾರ್ಪಣ್ಯಗಳಲ್ಲಿ ಪಾಲುಗೊಳ್ಳುವುದಾಗಿದೆ. ಆ ಮೂಲಕ ಸಮಾಜದ, ದೇಶದ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೂರೈಸಿಕೊಳ್ಳುವುದು ಎಂಬುದಾಗಿದೆ. ಎನ್‌ಎಸ್‌ಎಸ್ ಮುಖಾಂತರ ವಿದ್ಯಾರ್ಥಿಗಳು ಮತ್ತು ಸಮುದಾಯದ ಜನರು ಒಂದೆಡೆ ಸೇರಿ ಒಂದೇ ವೇದಿಕೆಯಲ್ಲಿ ತಮ್ಮಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗಳನ್ನು ಹೊರಹೊಮ್ಮಿಸಲು ಸಹಾಯ ಮಾಡಿ ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದಾಗಿದೆ.
1969ರಲ್ಲಿ ಎನ್‌ಎಸ್‌ಎಸ್‌ನ ಆರಂಭವಾದಾಗ 40,000 ಪದವಿ ವಿದ್ಯಾರ್ಥಿಗಳು ಇದರಲ್ಲಿ ನೋಂದಾಯಿಸಿಕೊಂಡರು. ಪ್ರಾರಂಭದ ದಿನಗಳಲ್ಲಿ ಕೇವಲ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಎನ್‌ಎಸ್‌ಎಸ್, ಕ್ರಮೇಣ ವೈದ್ಯಕೀಯ, ತಾಂತ್ರಿಕ, ಪೊಲಿಟಿಕ್ನಿಕ್, ನರ್ಸಿಂಗ್, ಫಾರ್ಮಸಿ, ಫಿಸಿಯೋಥೆರಫಿ, ಬಿ.ಎಡ್., ಡಿ.ಎಡ್. ಮತ್ತು ಪದವಿ ಪೂರ್ವ ತರಗತಿಗಳಿಗೂ ವಿಸ್ತಾರಗೊಂಡಿದೆ. ಇಂದು ನಮ್ಮ ದೇಶಗಳಲ್ಲಿ ಎನ್‌ಎಸ್‌ಎಸ್ ಬಹಳ ವಿಸ್ತಾರವಾಗಿ ಬೆಳೆದು, ರಾಷ್ಟ್ರದ ಅತೀ ದೊಡ್ಡದಾದ ಯುವ ಸಂಘಟನೆಯಾಗಿ ಹೊರಹೊಮ್ಮಿದೆ. ಇಂದು ನಮ್ಮ ದೇಶದ್ಯಾಂತ ಸುಮಾರು 35 ಲಕ್ಷ ಸ್ವಯಂ ಸೇವಕರು, 35,000ಕ್ಕೂ ಮಿಕ್ಕಿ ಯೋಜನಾಧಿಕಾರಿಗಳು ತುಂಬಾ ಪರಿಣಾಮಕಾರಿಯಾಗಿ ಎನ್‌ಎಸ್‌ಎಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದು ಬಹಳ ಸಂತಸದ ವಿಚಾರ. ನಮ್ಮ ಕರ್ನಾಟಕ ರಾಜ್ಯ ಒಂದರಲ್ಲೇ ಸರಿ ಸುಮಾರು 35 ಲಕ್ಷ ಸ್ವಯಂ ಸೇವಕರು ಮತ್ತು 3,500 ಯೋಜನಾಧಿಕಾರಿಗಳು ಎನ್‌ಎಸ್‌ಎಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ
1.ನಾಯಕತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದು
2.ಸಾಕ್ಷರತೆ ಮೂಲಕ ಅಕ್ಷರ ಕ್ರಾಂತಿಗೆ ನೆರವಾಗುವುದು.
3.ತಾವು ವಾಸಮಾಡುವ ಸಮುದಾಯ ಸಮಾಜಗಳ ಸಮಸ್ಯೆ ಮತ್ತು ಅಗತ್ಯಗಳನ್ನು ಅರಿಯುವುದು ಮತ್ತು ಪರಿಹಾರಕ್ಕೆ ಯತ್ನಿಸುವುದು.
4. ವ್ಯಕ್ತಿಯಾಗಿ ಈ ಸಮಾಜಕ್ಕೆ ಏನು ಮಾಡಬಲ್ಲೆ ಎಂಬ ಚಿಂತನೆ ಮಾಡುವುದು
5. ಗ್ರಾಮ ಮತ್ತು ಗುಡಿ ಕೈಗಾರಿಕೆಗಳ ಪ್ರಗತಿಗೆ ನೆರವಾಗುವುದು.
6. ಗ್ರಾಮಗಳ ಆರೋಗ್ಯ ನೈರ್ಮಲ್ಯಗಳನ್ನು ಕುರಿತು ಚಿಂತನೆ ವಿಮರ್ಶೆ ಮಾಡುವುದು.
7. ಪರಿಸರದ ಬಗ್ಗೆ ಕಾಳಜಿ ಹುಟ್ಟಿಸುವುದು ಮತ್ತು ಪರಿಸರ ಸಂರಕ್ಷಣೆಯಲ್ಲಿ ನೆರವಾಗುವುದು.
8. ಹಿಂದುಳಿದ ಮತ್ತು ದುರ್ಬಲ ವರ್ಗದವರ ಜನರ ಬದುಕಿನ ಕಷ್ಟಸುಖಗಳಿಗೆ ಸ್ಪಂದಿಸುವುದು.
9. ಕೋಮುವಾದವನ್ನು ತೊಲಗಿಸಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವುದು. ಮೇಲು, ಕೀಳು ಭಾವನೆಯನ್ನು ತೊಲಗಿಸಿ ವರ್ಗರಹಿತ ಸಮಾಜವನ್ನು ನಿರ್ಮಿಸಲು ಶ್ರಮಿಸುವುದು.
10. ಮೈತ್ರಿ, ಸಹೋದರತ್ವ, ಸಹಬಾಳ್ವೆ, ಸಹಕಾರ ಮತ್ತು ಶಿಸ್ತುಬದ್ಧ ಜೀವನವನ್ನು ಮೈಗೂಡಿಸಿಕೊಳ್ಳುವುದು. ಆ ಮೂಲಕ ವೈಯಕ್ತಿಕ ಬೆಳವಣಿಗೆ ಮತ್ತು ರಾಷ್ಟ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸುವುದು.