ನಿರ್ಭಯಾನಂತರದ ಭಾರತ...

Update: 2024-08-24 08:17 GMT

ಭಾರತ ದೇಶವನ್ನು ಭಾರತಾಂಬೆ ಎಂಬ ಹೆಸರಿಟ್ಟು ಗೌರವಿಸುವ ನಾಡಿನಲ್ಲಿ ನಾವೆಲ್ಲ ಇಂದು ಜೀವಿಸುತ್ತಿದ್ದೇವೆ. ಒಂದು ಹೆಣ್ಣನ್ನು ತಾಯಿ, ತಂಗಿ, ಅಕ್ಕ, ಸಹೋದರಿ ಎಂಬ ಭಾವನೆ ಇಲ್ಲದಿರುವ ಜನರ ನಡುವೆ ನಾವಿಂದು ಬದುಕುತ್ತಿದ್ದೇವೆ. ಯಾರು ಒಳ್ಳೆಯವರು - ಯಾರು ಕೆಟ್ಟವರು ಎಂಬುದು ಅರಿಯದೆ ಎಲ್ಲರೂ ನಮ್ಮವರು ಎಂಬ ಭಾವನೆಯೊಂದಿಗೆ ಸಮಾಜದೊಡನೆ ಒಡನಾಡಿಗಳಾಗಿ ಮುಂದುವರಿಯುತ್ತಿದ್ದೇವೆ. ಹೆಣ್ಣನ್ನು ಗೌರವಿಸುವ ಈ ನಾಡಿನಲ್ಲಿ ದಿನೇ ದಿನಕ್ಕೂ ಹೆಣ್ಣಿನ ಮೇಲೆಯೇ ಅತ್ಯಾಚಾರ ದೌರ್ಜನ್ಯ ಹೆಚ್ಚಾಗುತ್ತಿದೆ. 1947 ರಂದು ಬ್ರಿಟಿಷ್ ಗುಲಾಮಗಿರಿಯಿಂದ ಸ್ವ್ವಾತಂತ್ರ್ಯ ಸಿಕ್ಕಿತ್ತು ಎಂದು ಆ ದಿನ ಹೋರಾಡಿದವರೆಲ್ಲರೂ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟರು. ಆದರೆ ಇಂದಿನ ದಿನಗಳಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಕೊಲೆ, ಅತ್ಯಾಚಾರ, ಶೋಷಣೆ ನೋಡಿದರೆ ನಿಜವಾಗಿ ಸ್ವಾತಂತ್ರ್ಯ ದೊರಕಿದ್ದು ಫಲವಿಲ್ಲ ಎಂಬಂತಾಗಿದೆ. ಮಹಿಳೆಯರಿಗೆ ಯಾವ ರೀತಿ ಸ್ವಾತಂತ್ರ್ಯ ಸಿಕ್ಕಿದೆ? ಮನೆಯಿಂದಲೂ, ತನ್ನ ಜೊತೆಗಾರರಿಂದಲೂ ಅಥವಾ ಹೊರ ಜನರಿಂದಲೂ ಎಲ್ಲಾ ಕಡೆಯಿಂದಲೂ ಶೋಷಣೆಗೆ ಒಳಗಾಗುತ್ತಿರುವಳು ಹೆಣ್ಣು. ಆಗಸ್ಟ್ 15 ಬಂತೆಂದರೆ ಎಲ್ಲರೂ ಆ ದಿನವನ್ನು ಸಂಭ್ರಮಿಸುವರು ಆದರೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ? ಎಲ್ಲಿ? ತಪ್ಪು ಮಾಡಿ ತಪ್ಪಿಸಿಕೊಳ್ಳುತ್ತಿರುವ, ಶಿಕ್ಷೆಯಿಂದ ದೂರ ಸರಿಯುತ್ತಿರುವ ಆರೋಪಿಗಳಿಗೆ ಸಿಕ್ಕಿದ್ದು ಸ್ವಾತಂತ್ರ್ಯ ಹೊರತು ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗಲ್ಲ. ಯಾವಾಗ ಆ ಹೆಣ್ಣಿಗೆ ನ್ಯಾಯ ಸಿಗುತ್ತದೆಯೋ, ಅತ್ಯಾಚಾರದ ಪ್ರಕರಣ ದೇಶದಲ್ಲಿ ಕಡಿಮೆ ಆಗುತ್ತಿದೆಯೋ, ಅಂದು ಸಂಭ್ರಮಿಸಿ ಸ್ವಾತಂತ್ರ್ಯ ದಿನವನ್ನ್ನು.

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವರದಿಯಾದಾಗ ದೇಶದಲ್ಲಿ ವ್ಯಾಪಕ ಪ್ರತಿಭಟನೆ, ಆಕ್ರೋಶಗಳು ವ್ಯಕ್ತವಾಗುತ್ತವೆ. ಕಾನೂನು ತಿದ್ದುಪಡಿಗಳಿಗೂ ಕಾರಣವಾಗುತ್ತದೆ. ಆದರೆ ಅದರ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆೆ. ಕಾನೂನು ಕಟ್ಟಳೆ ಬಿಗಿಗೊಳಿಸಿದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಪ್ರಮಾಣ ದಿನದಿಂದ ದಿನಕ್ಕ್ಕೆ ಕಡಿಮೆಯಾಗುತ್ತದೆ. ಅತ್ಯಾಚಾರದ ಹೆಸರಿನಲ್ಲಿ ಹೆಣ್ಣಿನ ಘನತೆ, ಮಾನ, ಪ್ರಾಣದ ಮೇಲೆ ದಾಳಿ ಮಾಡುತ್ತಿರುವ ಪ್ರವೃತ್ತಿ ಹೆಚ್ಚಳವಾಗಿದೆ.

ಇತ್ತೀಚೆಗೆ ಕೋಲ್ಕತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ನಿರ್ಭಯಾ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆಗಾಗಿ ಕೇಂದ್ರ ಸರಕಾರ ಬಿಗಿ ಕಾನೂನು ಜಾರಿಗೆ ತಂದಿದ್ದರೂ, ನಿರ್ಭಯಾ ನಿಧಿ ಸ್ಥಾಪನೆಯಂತಹ ಕ್ರಮಗಳನ್ನು ಕೈಗೊಂಡಿದ್ದರೂ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ವಿರುದ್ಧ ಹೀನ ಅಪರಾಧ ಎಸಗುತ್ತಿರುವವರಿಗೆ ಎಷ್ಟರಮಟ್ಟಿಗೆ ಶಿಕ್ಷೆ ಆಗುತ್ತಿವೆ ಎಂಬ ಬಗ್ಗೆ ನಾವೆಲ್ಲರೂ ಇಂದು ಧ್ವನಿ ಎತ್ತಬೇಕಿದೆ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೃತ್ಯಗಳನ್ನು ಎಸಗುತ್ತಿರುವವರಿಗೆ ಶಿಕ್ಷೆ ವಿಧಿಸುವ ದಿಸೆಯಲ್ಲಿ ನಿರ್ಭಯಾ ಕಾಯ್ದೆ ಬಹಳ ಮಹತ್ವದ್ದು. 2012ರಲ್ಲಿ ದಿಲ್ಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ 6 ಮಂದಿ ಅಪರಾಧಿಗಳು ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದರು. ವಿದ್ಯಾರ್ಥಿನಿಯ ಜೊತೆಯಲ್ಲಿದ್ದ ಸ್ನೇಹಿತನ ಮೇಲೆಯೂ ಹಲ್ಲೆ ನಡೆಸಿ ನಂತರ ಇಬ್ಬರನ್ನು ರಸ್ತೆಗೆ ಬಿಸಾಡಿದ್ದರು. ಅದರ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅತ್ಯಾಚಾರಿಗಳ ಕ್ರೂರ ವರ್ತನೆಗೆ ತಕ್ಕಂತೆ ಶಿಕ್ಷೆಯು ಕಠಿಣವಾಗಿರಬೇಕು ಎಂಬ ಕೂಗು ಕೇಳಿ ಬಂದಿತ್ತು. ತ್ವರಿತ ಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ಅತ್ಯಾಚಾರಿಗಳ ಪೈಕಿ ನಾಲ್ವರಿಗೆ ಮರಣದಂಡನೆ ವಿಧಿಸಲಾಗಿತ್ತು. ಅಷ್ಟು ಹೊತ್ತಿಗೆ ಒಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಉಳಿದವರಿಗೆ ವಿಧಿಸಿದ ಶಿಕ್ಷೆ ಘಟನೆ ನಡೆದ 8 ವರ್ಷಗಳ ಬಳಿಕ ಜಾರಿಯಾಗಿತ್ತು. ಅತ್ಯಾಚಾರಿಗಳ ಪೈಕಿ ಬಾಲಕನೊಬ್ಬನೂ ಇದ್ದ .

ನ್ಯಾಯಾಲಯವು ಅವನಿಗೆ ಕೇವಲ ಮೂರು ವರ್ಷ ಶಿಕ್ಷೆ ವಿಧಿಸಿದ್ದರ ವಿರುದ್ಧವು ಆಕ್ಷೇಪಣೆ ವ್ಯಕ್ತವಾಗಿತ್ತು. ಕಾನೂನಿಗೆ ತಿದ್ದುಪಡಿ ತರುವ ಸಂಬಂಧ ಕೇಂದ್ರ ಸರಕಾರವು ನ್ಯಾ. ಜೆ .ಎಸ್ ವರ್ಮಾ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ನೇಮಿಸಿತು. ಕೇಂದ್ರ ಸರಕಾರವು ನಿರ್ಭಯಾ ಪ್ರಕರಣದ ವೇಳೆ ವ್ಯಕ್ತವಾದ ಸಾರ್ವಜನಿಕ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ನ್ಯಾ. ವರ್ಮಾ ಸಮಿತಿ ಶಿಫಾರಸುಗಳ ಅನ್ವಯ ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಕಾನೂನಿಗೆ ಕೆಲವು ತಿದ್ದುಪಡಿಗಳನ್ನು ತಂದಿತು. ಭಾರತೀಯ ದಂಡ ಸಂಹಿತೆಯ (IPಅ) 375, 376 ಸೆಕ್ಷನ್ ಗಳಿಗೆ ತಿದ್ದುಪಡಿ ತರಲಾಯಿತು. ಜೊತೆಗೆ 166 ಎ, 166 ಬಿ, 326 ಎ ಬಿ, 354 ಎ, ಸಿ ಡಿ ಸೆಕ್ಷನ್ ಗಳನ್ನು ಹೊಸದಾಗಿ ಸೇರಿಸಲಾಗಿತ್ತು. ಅದು ನಿರ್ಭಯಾ ಕಾಯ್ದೆ ಎಂದೇ ಹೆಸರು ಪಡೆಯಿತು. ಬಾಲಾಪರಾಧ ಕಾಯ್ದೆಗೂ ತಿದ್ದುಪಡಿ ತಂದು ಹೀನ ಕೃತ್ಯ ಎಸಗಿದ ಆರೋಪಿಯು 16ರಿಂದ 18 ವರ್ಷದ ಒಳಗಿದ್ದರೆ, ಅವನನ್ನು ಕೂಡ ಶಿಕ್ಷೆಗೆ ಅರ್ಹ ಎಂದು ಪರಿಗಣಿಸಲಾಗುವುದು ( ಜೆಜೆ ಕಾಯ್ದೆ ) ಎಂದು ಬದಲಾಯಿಸಲಾಯಿತು.

2013-14ನೇ ಸಾಲಿನಲ್ಲಿ ಆರಂಭಿಸಲಾಗಿದ್ದ ನಿರ್ಭಯಾನಿಧಿಗೆ ಕೇಂದ್ರ ಸರಕಾರ ಮೀಸಲಿಟ್ಟ ಮೂಲಧನ 1,000 ಕೋಟಿ, 2023- 24ನೇ ಸಾಲಿನವರೆಗೆ ಕೇಂದ್ರ ಸರಕಾರವು ನಿರ್ಭಯಾ ನಿಧಿಗೆ ನೀಡಿದ ಹಣ ರೂ.7,213 ಕೋಟಿ, ಯೋಜನೆಗಳ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಣ ರೂ.348 ಕೋಟಿ. ಮೀಸಲಿಟ್ಟ ಒಟ್ಟು ಹಣದಲ್ಲಿ ಮಂಜೂರಾದ ಪ್ರಮಾಣ ಶೇ.75. ಇನ್ನು ಉಳಿದ ಹಣ ಎಲ್ಲಿ ಹೋಯಿತು? ಅದಕ್ಕೆ ಲೆಕ್ಕ ಕೇಳುವವರು , ಪ್ರಶ್ನೆ ಮಾಡುವವರು ಯಾರೂ ಇಲ್ಲದಾಗಿದೆ.

ಈಗಾಗಲೇ ಸಾಕಷ್ಟು ಅತ್ಯಾಚಾರ ಪ್ರಕರಣಗಳು ಸದ್ದು ಮಾಡಿವೆ.

1. ಆಗಸ್ಟ್ 22, 2013 - ದಕ್ಷಿಣ ಮುಂಬೈನ ಶಕ್ತಿ ಮೀಲ್ಸ್ ನಲ್ಲಿ 22 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಒಬ್ಬ ಬಾಲಕ ಸೇರಿದಂತೆ ಐದು ಮಂದಿ ಅತ್ಯಾಚಾರ ಮಾಡಿದ್ದರು.

2. ಎಪ್ರಿಲ್ 28, 2016 - ಕೇರಳದ ಪೆರುಂ ಬಾವುರ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕಾನೂನು ವಿದ್ಯಾರ್ಥಿಯ ಮೇಲೆ ವಲಸೆ ಕಾರ್ಮಿಕ ನೊಬ್ಬನಿಂದ ಅತ್ಯಾಚಾರ ಮತ್ತು ಹತ್ಯೆ.

3. ಡಿಸೆಂಬರ್ 2016 - ತಮಿಳುನಾಡಿನ ಅರಿಯಾ ಲೂರ್ ಎಂಬ 17 ವರ್ಷದ ದಲಿತ ಬಾಲಕಿಯ ಮೇಲೆ ಆಕೆಯ ಗೆಳೆಯ ಸೇರಿದಂತೆ 4 ಜನರಿಂದ ಅತ್ಯಾಚಾರ ಮತ್ತು ಹತ್ಯೆ.

4. ಜೂನ್ 4,2017 - ಉನ್ನಾವೊದಲ್ಲಿ 17 ವರ್ಷದ ಬಾಲಕಿಯ ಮೇಲೆ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸಿಂಗರ್ ನಿಂದ ಅತ್ಯಾಚಾರ.

5. ಜನವರಿ 2018- ಜಮ್ಮು-ಕಾಶ್ಮೀರದ ಕಠುವಾದಲ್ಲಿ ಒಬ್ಬ ಬಾಲಕ ಸೇರಿದಂತೆ ಏಳು ಮಂದಿಯಿಂದ ಎಂಟು ವರ್ಷದ ಮುಸ್ಲಿಮ್ ಬಾಲಕಿಯ ಅಪಹರಣ , ಅತ್ಯಾಚಾರ, ಹತ್ಯೆ.

6. ನವೆಂಬರ್ 28, 2019 - ಹೈದಬಾದ್‌ನ ಹೊರವಲಯದಲ್ಲಿ ಪಶು ವೈದ್ಯಕಿಯ ವಿದ್ಯಾರ್ಥಿ ಮೇಲೆ ನಾಲ್ವರಿಂದ ಅತ್ಯಾಚಾರ ಕೊಲೆ.

7. ಸೆಪ್ಟೆಂಬರ್ 14 ,2018 - ಉತ್ತರ ಪ್ರದೇಶದ ಹಾಥರಸದಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ ಪ್ರಬಲ ಜಾತಿಯ ನಾಲ್ವರಿಂದ ಅತ್ಯಾಚಾರ, ಕೊಲೆ.

8. ಆಗಸ್ಟ್ 21, 2021- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎಂಬಿಎ ವಿದ್ಯಾರ್ಥಿನಿಯ ಮೇಲೆ ಬಾಲಕ ಸೇರಿದಂತೆ ಆರು ಮಂದಿಯಿಂದ ಸಾಮೂಹಿಕ ಅತ್ಯಾಚಾರ.

ಇಷ್ಟೆಲ್ಲ ಪ್ರಕರಣಗಳು ಈಗಾಗಲೇ ಸದ್ದು ಮಾಡಿ ಅನೇಕ ಪ್ರತಿಭಟನೆ, ಆಕ್ರೋಶಗಳು ವ್ಯಕ್ತವಾಗಿವೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ನ್ಯಾಯ ಸಿಕ್ಕಿದೆಯೇ? ಎಷ್ಟು ಅಪರಾಧಿಗಳಿಗೆ ಶಿಕ್ಷೆ ಆಗಿದೆ. ಇದಕ್ಕೆ ಉತ್ತರವೇ ಸಿಗದಂತಾಗಿದೆ. ಮಹಿಳೆಯರ ರಕ್ಷಣೆಗೆ ಕಾಯ್ದೆಗಳು ಜಾರಿಯಾಗಿದ್ದರೂ ಅದು ಸಹ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆೆ.

ನಿರ್ಭಯಾ ಪ್ರಕರಣದ ನಂತರ ವರದಿಯಾದ ಅತ್ಯಾಚಾರ ಪ್ರಕರಣಗಳು 30 ಸಾವಿರಕ್ಕೂ ಹೆಚ್ಚು. ಆದರೆ 2013 ರಿಂದ 2022 ರ ವರೆಗೆ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಶಿಕ್ಷೆಯಾದ ಪ್ರಮಾಣ ಕೇವಲ ಶೇ.29.25.

ಲೈಂಗಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗಿವೆ. ಅವುಗಳಲ್ಲಿ ಅತ್ಯಾಚಾರದ ಪ್ರಕರಣಗಳು ಗಮನಾರ್ಹವಾಗಿ ಏರಿಕೆಯಾಗಿವೆ. ಅದರಲ್ಲೂ ಬಾಲಕಿಯರು, ಪುಟ್ಟ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಪರಿಚಿತರಿಂದಲೇ ನಡೆಯುತ್ತಿವೆೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ವರದಿಯಾಗುತ್ತಿವೆ. ಒಂದು ಕಡೆ ದೇಶದಲ್ಲಿ ಅತ್ಯಾಚಾರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಆರೋಪಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ಅತ್ಯಂತ ಕಡಿಮೆ. ಜಾಗತಿಕ ಮಟ್ಟದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ಭಾರತದಲ್ಲಿಯೇ ಕಡಿಮೆ. ಅಪರಾಧಿಗಳ ವಿರುದ್ಧ ಸರಕಾರ ಯಾವಾಗ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದೇ ಒಂದು ಪ್ರಶ್ನೆಯಾಗಿ ಉಳಿದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರತಿಭಾ.ಎಚ್.ಎಚ್

contributor

Similar News