ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಕಾನೂನು

ಭಾರತೀಯ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯು ಸಂವಿಧಾನದ ಗುರಿಗಳ ಸಮಾಜವಾದ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಸಾಧನೆಯತ್ತ ಸಾಗುತ್ತಿದೆ. ಜಾತಿ, ಸಮುದಾಯ, ಜನಾಂಗ, ಧರ್ಮ ಮತ್ತು ಲಿಂಗವನ್ನು ಲೆಕ್ಕಿಸದೆ ಸಮಾಜದ ಎಲ್ಲಾ ವರ್ಗಗಳು ಸಮಾನವಾಗಿ ರಾಜ್ಯಾಧಿಕಾರದಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿಯನ್ನು ಈಗ ರಾಜ್ಯವು ಸಂವಿಧಾನದ ಆಶಯಗಳಿಂದಾಗಿ ಕೆಲ ಮಟ್ಟಿಗಾದರೂ ಸೃಷ್ಟಿಸಿದೆ.

Update: 2024-04-02 04:49 GMT

ಭಾರತೀಯ ಸಮಾಜವು ಶತಮಾನಗಳಿಂದ ಜಾತಿಯ ಆಧಾರದ ಮೇಲೆ ಸಮತಲವಾಗಿ ಮತ್ತು ಲಂಬವಾಗಿ ವಿಭಜಿಸಲ್ಪಟ್ಟಿದೆ ಮತ್ತು ವರ್ಗೀಕರಿಸಲ್ಪಟ್ಟಿದೆ. ಜಾತಿಯೋ ಅಥವಾ ಉಪ ಜಾತಿಯೋ ಯಾವುದಾದರೊಂದರಲ್ಲಿ ಜನರು ಜನಿಸುತ್ತಾರೆ. ಅವರಲ್ಲಿ ಅನೇಕರು ಸಾಂಪ್ರದಾಯಿಕವಾಗಿ ವಿವಿಧ ರೀತಿಯ ಸಾಮಾಜಿಕ ತಾರತಮ್ಯ ಮತ್ತು ಬಲಹೀನತೆಯಿಂದ ಬಳಲುತ್ತಿದ್ದಾರೆ. ಸಮಾಜದ ಈ ಸಾಂಪ್ರದಾಯಿಕವಾಗಿ ಹಿಂದುಳಿದ ಮತ್ತು ವಂಚಿತ ವರ್ಗಗಳು ಎಷ್ಟು ದುರ್ಬಲವಾಗಿವೆ ಎಂದರೆ ಅವರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿಗಳು ಮತ್ತು ವರ್ಗಗಳಿಗೆ ಹೋಲಿಸಿದರೆ ಸಮಾನ ಅವಕಾಶಗಳ ಸಮಾನ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸಮಾಜದ ದುರ್ಬಲ ವರ್ಗದವರು ಸಾಮಾಜಿಕ ನ್ಯಾಯ ಸಿಗದೆ ಶೋಷಣೆಗೆ ಸಿಲುಕಿದ್ದಾರೆ. ಸಾಮಾಜಿಕ ನ್ಯಾಯವು ದುರ್ಬಲ ವರ್ಗಗಳ ಒಟ್ಟಾರೆ ಅಭಿವೃದ್ಧಿಯನ್ನು ಸೂಚಿಸುತ್ತದೆ. ಒಟ್ಟಾರೆ ಅಭಿವೃದ್ಧಿ ಅಂದರೆ - ಶೈಕ್ಷಣಿಕ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ರಾಜಕೀಯ ಪ್ರಾತಿನಿಧ್ಯ ಮುಂತಾದವುಗಳೆಲ್ಲವೂ ಸಾಮಾಜಿಕ ಸಬಲೀಕರಣದಲ್ಲಿ ಒಳಗೊಂಡಿವೆ.

ಸಂವಿಧಾನವು ಸಮಾಜದ ದುರ್ಬಲ ವರ್ಗದವರಿಗೆ ವಿಧಿ 15(4)ಮತ್ತು16(4)ರ ಅಡಿಯಲ್ಲಿ ಮುಖ್ಯವಾಗಿ ಶೈಕ್ಷಣಿಕ ಅಭಿವೃದ್ಧಿ ಮತ್ತು ಸರಕಾರಿ ಸೇವೆಗಳಲ್ಲಿನ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಒದಗಿಸುತ್ತದೆ. ದುರ್ಬಲರೂ ಸೇರಿದಂತೆ ಎಲ್ಲರಿಗೂ ಶಿಕ್ಷಣದ ಅವಕಾಶಗಳು ಮತ್ತು ಉದ್ಯೋಗಾವಕಾಶಗಳನ್ನು ಸಮಾನತೆಯ ತತ್ವದ ಮೇಲೆ ಸಮಾಜದ ಪಂಗಡಗಳಿಗೆ ಒದಗಿಸುವುದು ರಾಜ್ಯದ ಜವಾಬ್ದಾರಿಯಾಗಿದೆ. ಅಸಮಾನತೆಯ ಅಗಾಧತೆಯು ಕಳೆದ ಶತಮಾನದ ಆರಂಭದಿಂದಲೇ, ವಿಶೇಷವಾಗಿ ದಕ್ಷಿಣದಲ್ಲಿ ವಿವಿಧ ತಳ ಸಮುದಾಯಗಳ ಚಳವಳಿಗೆ ಕಾರಣವಾಯಿತು.

ಇದರ ಪರಿಣಾಮವಾಗಿ ರಾಜ್ಯಗಳ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಸೀಟುಗಳ ನಿರ್ದಿಷ್ಟ ಕೋಟಾಗಳನ್ನು ಟ್ರಾವಂಕೂರ್- ಕೊಚ್ಚಿನ್, ಮದ್ರಾಸ್ ಮತ್ತು ಮೈಸೂರುಗಳಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ಗುರುತಿಸಲಾಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಪರಿಸ್ಥಿತಿಯನ್ನು ನಿವಾರಿಸಲು ಮೊದಲ ಪ್ರಮುಖ ಹೆಜ್ಜೆಯನ್ನು ಸಂವಿಧಾನದ16(4) ಅಡಿಯಲ್ಲಿ ತೆಗೆದುಕೊಳ್ಳಲಾಯಿತು. ಇದು ಹಿಂದುಳಿದ ವರ್ಗಗಳ ನಾಗರಿಕರ ಪರವಾಗಿ ಹುದ್ದೆಗಳನ್ನು ಕಾಯ್ದಿರಿಸಲು ರಾಜ್ಯಗಳಿಗೆ ಅಧಿಕಾರ ನೀಡಿತು. 1993ರಲ್ಲಿ ಹಿಂದುಳಿದ ವರ್ಗಗಳಿಗೆ ತೀರಾ ವಿಳಂಬವಾಗಿ ಕೇಂದ್ರದಲ್ಲಿ ಮಾನ್ಯತೆ ಸಿಕ್ಕಿದ್ದು ಅವುಗಳ ಪುಣ್ಯ!

ಸಾಮಾಜಿಕ ನ್ಯಾಯವು ಸಮಾನತೆಯ ಸಮಾಜವನ್ನು ಸ್ಥಾಪಿಸುವ ಮತ್ತು ಅದರ ಹಲವಾರು ಸಾಮಾಜಿಕ ವಿಭಾಗಗಳಲ್ಲಿ ಅಧಿಕಾರದ ಹಂಚಿಕೆಯ ಗುರಿಯನ್ನು ಸಾಧಿಸುವ ಸಾಧನವಾಗಿದೆ. ರಾಜಕೀಯ, ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರದ ವಿತರಣೆಯ ಗುರಿಗಳನ್ನು ಸಾಧಿಸಲು ಕಳೆದ 75 ವರ್ಷಗಳಲ್ಲಿ ಭಾರತದ ಸಂವಿಧಾನವನ್ನು 105 ಬಾರಿ ತಿದ್ದುಪಡಿ ಮಾಡಲಾಗಿದೆ. ಭಾರತದ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಉದಾರವಾದಿ ಸಂವಿಧಾನವು ಸಾಮಾಜಿಕ ಪರಿಸರದ ನೀತಿಯ ಅಡಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಅದು ತನ್ನ ನೀತಿಗಳನ್ನು ರೂಪಿಸುವಲ್ಲಿ ಮತ್ತು ರಾಜಕೀಯ ಅಧಿಕಾರವನ್ನು ಪಡೆಯಲು ಹಾಗೂ ನಿಯಂತ್ರಿಸಲು, ಸ್ಪರ್ಧೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತೀಯ ಸಂವಿಧಾನದಲ್ಲಿ ‘ಹಿಂದುಳಿದ ವರ್ಗಗಳು’ ಎಂಬ ಪದಪುಂಜವನ್ನು ಎಲ್ಲಿಯೂ ವ್ಯಾಖ್ಯಾನಿಸಲಾಗಿಲ್ಲ. ಹಿಂದುಳಿದ ವರ್ಗವು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳನ್ನು ಒಳಗೊಂಡಿದೆ. ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ, ಸಮಾಜದ ಇತರ ಮುಂದುವರಿದ ವರ್ಗಗಳಿಗೆ ಹೋಲಿಸಿದರೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ.

ವಿಧಿ16(4) ಕೇವಲ ‘ಹಿಂದುಳಿದ ವರ್ಗಗಳ’ ಬಗ್ಗೆ ವಿಶದೀಕರಿಸುತ್ತದೆ. ವಿಧಿಯು ‘ನಾಗರಿಕರಲ್ಲಿ ದುರ್ಬಲ ವರ್ಗಗಳ’ ಕುರಿತು ಉಲ್ಲೇಖಿಸುತ್ತದೆ. ಈಗಲೂ ‘ಹಿಂದುಳಿದ ವರ್ಗಗಳು’ ಎಂಬ ಪದಪುಂಜವನ್ನು ವಿವಿಧ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳು ಮತ್ತು ವಿವಿಧ ಉಚ್ಚ ನ್ಯಾಯಾಲಯಗಳ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಲ್ಲಿ ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ.

ಸಕಾರಾತ್ಮಕ ಕ್ರಿಯೆ (affirmative action):

ಭಾರತದ ಸಂವಿಧಾನವು ವಂಚಿತ ಸಾಮಾಜಿಕ ವಿಭಾಗದ ಕಲ್ಯಾಣಕ್ಕಾಗಿ ಕೆಲವು ಅವಕಾಶಗಳನ್ನು ಹೊಂದಿದೆ. ಸಕಾರಾತ್ಮಕ ಕ್ರಮ, ಮೀಸಲಾತಿ ನೀತಿ ಮತ್ತು ಧನಾತ್ಮಕ ತಾರತಮ್ಯಗಳವು. ಸಂವಿಧಾನದ ಉದ್ದೇಶ ಮತ್ತು ಗುರಿಗಳಾದ ಸಾಮಾನ್ಯ ಒಪ್ಪಂದ ಮತ್ತು ಸಾಂವಿಧಾನಿಕ ಸಭೆಯಲ್ಲಿ ಹೊಮ್ಮಿದ ಹೊಂದಾಣಿಕೆಗಳು ಮತ್ತು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವಿವಿಧ ವಿಧಿಗಳು ಮತ್ತು ಅವಕಾಶಗಳು ಫಲಿಸುತ್ತವೆ. ಉದಾಹರಣೆಗೆ: ಪೀಠಿಕೆ ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳ ವಿಧಿ 38 ಮತ್ತು ವಿಧಿ 46 ಹಾಗೂ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳಾದ 14, 15 ಮತ್ತು 16 ಅಷ್ಟೇ ಅಲ್ಲದೆ, ಭಾರತ ಸಂವಿಧಾನದ 338 ಮತ್ತು 340ನೇ ವಿಧಿಗಳೂ ಇವೆ.

ಸಂವಿಧಾನ ಪೀಠಿಕೆಯು ಭಾರತದ ಜನರ ಸಂಕಲ್ಪ ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತದೆ.

ಭಾರತದ ಸಂವಿಧಾನವು ಹಿಂದುಳಿದ ವರ್ಗಗಳಿಗೆ ಪರಿಹಾರದ ಆದ್ಯತೆಯೊಂದಿಗೆ ವ್ಯವಹರಿಸುವ ಹಲವಾರು ವಿಧಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ಪ್ರಮುಖವಾದವುಗಳು ವಿಧಿಗಳಾದ 15(4)ಮತ್ತು 16 (4)ಹಾಗೂ ವಿಧಿಗಳಾದ 46, 325, 338, 340, 341, 342, 366(24)ಮತ್ತು 366(25)ಸಹ ವಿಷಯದ ಮೇಲೆ ಪ್ರಭಾವ ಬೀರುತ್ತವೆ.

ಹಿಂದುಳಿದ ವರ್ಗಗಳು ಮತ್ತು ರಾಜ್ಯನೀತಿ

ನಿರ್ದೇಶಕ ತತ್ವಗಳು:

ಭಾರತೀಯ ಸಂವಿಧಾನದ 38 ಮತ್ತು 46ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ರಾಜ್ಯ ನೀತಿಯ ನಿರ್ದೇಶಕ ತತ್ವಗಳು ನಿರ್ದಿಷ್ಟವಾಗಿ ಹಿಂದುಳಿದ ವರ್ಗಗಳು ಸೇರಿದಂತೆ ಸಾಮಾನ್ಯ ಮತ್ತು ದುರ್ಬಲ ವರ್ಗಗಳ ಜನರ ಕಲ್ಯಾಣವನ್ನು ಉತ್ತೇಜಿಸಲು ಶ್ರಮಿಸುವುದು ರಾಜ್ಯದ ಕರ್ತವ್ಯವಾಗಿದೆ.

ಸಮಾನತೆಯ ಹಕ್ಕುಗಳು: ಕಾನೂನಿನ ಕಟ್ಟುಪಾಡುಗಳು

ಹೊಸ ಸಂವಿಧಾನ ಮತ್ತು ಕಾನೂನಿನ ಪ್ರಸಕ್ತಿ ರಾಜ್ಯದ ಕಾರ್ಯ ಚಟುವಟಿಕೆಯಲ್ಲಿ ಪ್ರತಿಯೊಬ್ಬ ನಾಗರಿಕನ ಸಮಾನ ಭಾಗವಹಿಸುವಿಕೆಯನ್ನು ಒತ್ತಿ ಹೇಳುತ್ತದೆ. ಸಂವಿಧಾನದ ಸ್ಥಾಪಕ ಪಿತಾಮಹರು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ಖಾತ್ರಿಪಡಿಸುವ ಮೂಲಕ ಶತಮಾನಗಳ ತಾರತಮ್ಯವನ್ನು ತೊಡೆದುಹಾಕಲು ಪ್ರಯತ್ನಿಸುತ್ತಾರೆ. ಹಿಂದುಳಿದವರ ಮೇಲಿನ ಗತಕಾಲದ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಲು ಸಾಂಪ್ರದಾಯಿಕವಾಗಿ ಸಾಮಾಜಿಕ-ಆರ್ಥಿಕ ದಬ್ಬಾಳಿಕೆಯಿಂದ ಬಳಲುತ್ತಿರುವ ಪರಿಶಿಷ್ಟ ಜಾತಿಗಳಿಗೆ ವಿಶೇಷ ಸಾಂವಿಧಾನಿಕ ಕ್ರಮಗಳನ್ನು ಜಾರಿಗೊಳಿಸಲಾಯಿತು. ಸಂವಿಧಾನ ರಚನಾಕಾರರ ಪ್ರಾಮಾಣಿಕತೆ ಮತ್ತು ನೈತಿಕ ಬದ್ಧತೆಯಿಂದ ಅವರು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆಯ ಆಧಾರದ ಮೇಲೆ ಜಾತ್ಯತೀತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದರು. ಸಂವಿಧಾನದ 15ನೇ ವಿಧಿಯು ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿದೆ ಮತ್ತು 17ನೇ ವಿಧಿಯು ಅಸ್ಪಶ್ಯತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದೆ ಮತ್ತು ವಿಧಿ 330 ಮತ್ತು 332 ಲೋಕಸಭೆ ಮತ್ತು ಶಾಸಕಾಂಗ ಸಭೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸ್ಥಾನಗಳ ಮೀಸಲಾತಿಯನ್ನು ದೃಢಪಡಿಸುತ್ತದೆ. ಸಮಯದ ಅಗತ್ಯಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ ಸಂವಿಧಾನ ಸಭೆಯ ಸದಸ್ಯರು ಮೀಸಲಾತಿ ನೀತಿ ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೃಷ್ಟಿಯಿಂದ ರಕ್ಷಣಾತ್ಮಕ ತಾರತಮ್ಯವನ್ನು ಆರಿಸಿಕೊಂಡರು.

ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹಕ್ಕು:

ಭಾರತದ ಸಂವಿಧಾನವು ಜಾತಿ, ಮತ, ಧರ್ಮ, ಲಿಂಗ ಇತ್ಯಾದಿಗಳನ್ನು ಲೆಕ್ಕಿಸದೆ ದೇಶದ ಎಲ್ಲಾ ನಾಗರಿಕರಿಗೆ ಕಾನೂನಿನ ಮುಂದೆ ಸಮಾನತೆ ಹಕ್ಕನ್ನು ನೀಡುತ್ತದೆ. ಸಂವಿಧಾನದ ಇತರ ವಿಧಿಗಳು ಉದಾಹರಣೆಗೆ 15 ಮತ್ತು 16 ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಉದ್ಯೋಗಕ್ಕೆ ಕ್ರಮವಾಗಿ ಪ್ರವೇಶದ ಹಕ್ಕನ್ನು ಒದಗಿಸುತ್ತವೆ. ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ: ಭಾರತದ ಸಂವಿಧಾನದ ವಿವಿಧ ವಿಧಿಗಳ ಅಡಿಯಲ್ಲಿ ಎಲ್ಲಾ ನಾಗರಿಕರು ಸಮಾನ ಅವಕಾಶಗಳನ್ನು ಮತ್ತು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆಯೇ?. ಅದಕ್ಕೆ ಉತ್ತರ ಹೌದು ಎಂದಾದರೆ ಹೆಚ್ಚಿನ ಜನಸಂಖ್ಯೆಯು ಇನ್ನೂ ಏಕೆ ಶಿಕ್ಷಣದಿಂದ ವಂಚಿತವಾಗಿದೆ ಮತ್ತು ಯಾವುದೇ ಉದ್ಯೋಗವಿಲ್ಲದೆ ಏಕೆ ಇದೆ? ಉತ್ತರ ಇಲ್ಲ ಎಂದಾದರೆ ಭಾರತದ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯವನ್ನು ಪಡೆಯಲು ಅವರಿಗೆ ‘ಉಳ್ಳವರಂತೆ’ ಹಕ್ಕಿಲ್ಲವೇ?

ಸಮಾನತೆಯ ಸಿದ್ಧಾಂತವು ಅನೇಕ ಅಂಶಗಳನ್ನು ಹೊಂದಿದೆ. ಇದು ಕ್ರಿಯಾತ್ಮಕ ಮತ್ತು ವಿಕಾಸಗೊಳ್ಳುತ್ತಿರುವ ಪರಿಕಲ್ಪನೆ. ಭಾರತೀಯ ಸಮಾಜಕ್ಕೆ ಸಂಬಂಧಿಸಿದ ಅದರ ಮುಖ್ಯ ಅಂಶಗಳನ್ನು ಸಮಾನತೆ ಹಕ್ಕು ಎಂಬ ಉಪ ಶೀರ್ಷಿಕೆಯಡಿಯಲ್ಲಿ ಪೀಠಿಕೆ ಮತ್ತು ವಿಧಿಗಳಲ್ಲಿ ಉಲ್ಲೇಖಿಸಲಾಗಿದೆ.

ನಮ್ಮ ಸಂವಿಧಾನದ ಪಿತೃಗಳು ಸಮಾಜದ ದುರ್ಬಲ ವರ್ಗಗಳಿಗೆ ಸುರಕ್ಷತೆಯನ್ನು ಒದಗಿಸುವ ಅಗತ್ಯದ ಬಗ್ಗೆ ಸಂಪೂರ್ಣ ಜಾಗೃತರಾಗಿದ್ದರು. ಆ ಕಾರಣದಿಂದ ವಿಧಿಗಳಾದ 15, 16 ಮತ್ತು 29 ಎಲ್ಲಾ ನಾಗರಿಕರಿಗೆ ಶಿಕ್ಷಣ, ಉದ್ಯೋಗ ಮತ್ತು ಇತರ ಸೌಲಭ್ಯಗಳಿಗೆ ಸಮಾನ ಪ್ರವೇಶದ ಅಭಿಪ್ರಾಯ ಸೃಷ್ಟಿಸುತ್ತವೆ.

ಹಿಂದುಳಿದ ವರ್ಗಗಳಿಗೆ ಅವಕಾಶ:

ಸಮಾನತೆಯ ಹಕ್ಕಿನ ಜೊತೆಗೆ ಭಾರತದ ಸಂವಿಧಾನವು ಹಿಂದುಳಿದ ವರ್ಗಗಳ ಪ್ರಗತಿಗೆ ಪ್ರತ್ಯೇಕ ಮತ್ತು ವಿಶೇಷ ಅವಕಾಶಗಳನ್ನು ಒದಗಿಸುತ್ತದೆ. ಇದನ್ನು ಸಾಮಾನ್ಯವಾಗಿ ಪರಿಹಾರ ರೂಪದ ತಾರತಮ್ಯ, ರಕ್ಷಣಾತ್ಮಕ ತಾರತಮ್ಯ ಮತ್ತು ಹಿಮ್ಮೊಗ ತಾರತಮ್ಯ ಎಂದು ಕರೆಯಲಾಗುತ್ತದೆ. ಈ ಅವಕಾಶಗಳು ಹಿಂದುಳಿದ ವರ್ಗಗಳ ಉನ್ನತಿಗಾಗಿ ಸರಕಾರವು ವಿಶೇಷ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಸಂವಿಧಾನದ (ಮೊದಲನೇ ತಿದ್ದುಪಡಿ) ಕಾಯ್ದೆ, 1951ರ ಅಡಿಯಲ್ಲಿ ಭಾರತೀಯ ಸಂವಿಧಾನಕ್ಕೆ ಸೇರ್ಪಡೆಗೊಂಡದ್ದು ವಿಧಿ15(4). ಅದರಂತೆ ನಾಗರಿಕರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದೆ ಬಿದ್ದವರು, ಹಿಂದುಳಿದ ವರ್ಗವೆಂದು ಪರಿಗಣಿಸಲ್ಪಡುತ್ತಾರೆ.

ವಿಧಿ15(4) ಮತ್ತು 29ರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕಡ್ಡಾಯವಾಗಿ ಸ್ಥಾನಗಳನ್ನು ಮೀಸಲಿರಿಸಬೇಕು. ಹಾಗೆಯೇ ರಾಜ್ಯಗಳು ಯುಕ್ತವೆನಿಸಿದಲ್ಲಿ ಹಿಂದುಳಿದ ವರ್ಗಗಳಿಗೆ ಶಿಕ್ಷಣದಲ್ಲಿ ಮತ್ತು 16(4)ರಂತೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಬಹುದು.

ಮೀಸಲಾತಿ ನೀತಿಗಳ ಟೀಕೆ:

ಜಾತಿ ಪೂರ್ವಗ್ರಹಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸ್ತವವಾಗಿರಬಹುದು. ಆದರೆ ವಿವಿಧ ರಾಜ್ಯಗಳಲ್ಲಿ ಮೀಸಲಾತಿಯ ಶೇಕಡವಾರು ವ್ಯವಸ್ಥಿತ ಹೆಚ್ಚಳವು ಹಿಂದುಳಿದವರಲ್ಲದವರಿಗೆ ಅವಕಾಶಗಳನ್ನು ಕುಗ್ಗಿಸುತ್ತಿದೆ; ಜೊತೆಗೆ ಮೀಸಲಾತಿಯ ಪ್ರಯೋಜನಗಳು ಕಷ್ಟದಲ್ಲಿರುವವರಿಗೆ ತಲುಪುತ್ತಿಲ್ಲ ಎನ್ನುವ ಟೀಕೆ ಸದಾ ಕೇಳಿಬರುತ್ತಿದೆ.

ಮೀಸಲಾತಿ ವಿರುದ್ಧ ಧ್ವನಿಯೆತ್ತಿರುವ ಎಲ್ಲಾ ಟೀಕೆಗಳು ಕೇವಲ ಮೇಲುಗೈ ಕಳೆದುಕೊಳ್ಳುವ ಭಯದಲ್ಲಿರುವ ಸವಲತ್ತು ಪಡೆದ ವರ್ಗಗಳ ಕೂಗು ಅಷ್ಟೇ.

ಭಾರತದ ಸಂವಿಧಾನವು ನಾಗರಿಕರಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ನಿಷೇಧಿಸುತ್ತದೆ. ಆದರೆ ರಕ್ಷಣಾತ್ಮಕ ತಾರತಮ್ಯವೂ ಮೀಸಲಾತಿಯ ಸಂದರ್ಭದಲ್ಲಿ ಕಾನೂನಾಗಿ ಪರಿವರ್ತಿತವಾಗುತ್ತದೆ. ಸಂವಿಧಾನವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯಲ್ಲಿ ವರ್ಗೀಕರಣವಾಗಿದ್ದರೂ ಇತರ ಹಿಂದುಳಿದ ಜಾತಿಗಳ ಬಗ್ಗೆ ಅಸ್ಪಷ್ಟವಾಗಿದೆ. ಫಲಾನುಭವಿಗಳನ್ನು ಗುರುತಿಸುವಲ್ಲಿ ಅಗತ್ಯವಿರುವ ಪ್ರಯೋಜನಗಳ ವಿಧಗಳನ್ನು ನಿರ್ದಿಷ್ಟ ಪಡಿಸುವಲ್ಲಿ ಮತ್ತು ಆದ್ಯತಾ ಉಪಚಾರ ತತ್ವದ ಈ ನೀತಿಯನ್ನು ಜಾರಿಗೊಳಿಸುವಲ್ಲಿ ಅಸ್ಪಷ್ಟತೆ ಉಂಟಾಗುವುದು.

ಮೀಸಲಾತಿ ನೀತಿಯನ್ನು ನಿಯಮಿತವಾಗಿ ನವೀಕರಿಸಲಾಗುತ್ತಿರುವುದರಿಂದ ಇತರ ಬಲಾಢ್ಯ ಜಾತಿ ಗುಂಪುಗಳು ದೇಶದಾದ್ಯಂತ ಹಿಂದುಳಿದ ಸ್ಥಾನಮಾನ ಮತ್ತು ಮೀಸಲಾತಿಯ ಪ್ರಯೋಜನಗಳ ಕಾರಣದಿಂದಾಗಿ ಹಿಂದುಳಿದವರ ಓಟದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪೈಪೋಟಿಗೆ ನಿಲ್ಲುತ್ತಾರೆ.

ಭಾರತೀಯ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯು ಸಂವಿಧಾನದ ಗುರಿಗಳ ಸಮಾಜವಾದ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಸಾಧನೆಯತ್ತ ಸಾಗುತ್ತಿದೆ. ಜಾತಿ, ಸಮುದಾಯ, ಜನಾಂಗ, ಧರ್ಮ ಮತ್ತು ಲಿಂಗವನ್ನು ಲೆಕ್ಕಿಸದೆ ಸಮಾಜದ ಎಲ್ಲಾ ವರ್ಗಗಳು ಸಮಾನವಾಗಿ ರಾಜ್ಯಾಧಿಕಾರದಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿಯನ್ನು ಈಗ ರಾಜ್ಯವು ಸಂವಿಧಾನದ ಆಶಯಗಳಿಂದಾಗಿ ಕೆಲ ಮಟ್ಟಿಗಾದರೂ ಸೃಷ್ಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News