ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ನ ದಿಢೀರ್ ಮುಚ್ಚುಗಡೆ ಎತ್ತಿದ ಗಂಭೀರ ಪ್ರಶ್ನೆಗಳು

ಮೌಲಾನ ಆಝಾದ್ ಎಜುಕೇಶನ್ ಫೌಂಡೇಶನ್‌ನ ಮುಚ್ಚುಗಡೆಯು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರಲಿದೆ. ಅಲ್ಪಸಂಖ್ಯಾತ ಬಾಲಕಿಯರಿಗಾಗಿ ವಸತಿ ಶಾಲೆಗಳ ಸ್ಥಾಪನೆಯನ್ನು ಫೌಂಡೇಶನ್ ಬೆಂಬಲಿಸಿತ್ತು ಮತ್ತು ಹಲವಾರು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡಿತ್ತು. ಈಗ ಅದರ ಮುಚ್ಚುಗಡೆಯು ಈ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿದೆ ಮತ್ತು ಹಲವು ಅಲ್ಪಸಂಖ್ಯಾತ ಸಂಸ್ಥೆಗಳು ಅನಿಶ್ಚಿತ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲಿವೆ.

Update: 2024-08-17 04:49 GMT

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್ (ಎಮ್‌ಎಇಎಫ್)ನ್ನು ಮುಚ್ಚಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರವು ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಾಲಕಿಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಹಿಂದುಳಿದ ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿಯನ್ನು ಸುಧಾರಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಫೌಂಡೇಶನ್ ವಿಶೇಷವಾಗಿ ಮುಸ್ಲಿಮ್ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಈಗ ಈ ಮಹತ್ವದ ಸಂಸ್ಥೆಯನ್ನು ಹಠಾತ್ತನೆ ಮುಚ್ಚಲು ತೆಗೆದುಕೊಳ್ಳಲಾಗಿರುವ ನಿರ್ಣಯವು ಈ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಜೊತೆಗೆ, ಅಲ್ಪಸಂಖ್ಯಾತರ ಶಿಕ್ಷಣದ ವಿಷಯದಲ್ಲಿ ಸರಕಾರದ ಧೋರಣೆಯಲ್ಲಿರುವ ಮೂಲ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿದೆ.

ಫೌಂಡೇಶನ್ ಕೇವಲ ಸ್ಕಾಲರ್‌ಶಿಪ್ ನೀಡುವ ಸಂಸ್ಥೆಯಾಗಿ ರಲಿಲ್ಲ, ಅದಕ್ಕಿಂತಲೂ ಹೆಚ್ಚಿನದಾಗಿತ್ತು. ಅದು ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತ ಮುಸ್ಲಿಮ್ ವಿದ್ಯಾರ್ಥಿಗಳ ಜೀವನಾಡಿಯಾಗಿತ್ತು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಮಾನಾವಕಾಶಗಳನ್ನು ಒದಗಿಸುವ ಗುರಿಯೊಂದಿಗೆ ಸ್ಥಾಪನೆಯಾಗಿರುವ ಸಂಸ್ಥೆಯು ವಿದ್ಯಾರ್ಥಿಗಳ ಅಗತ್ಯಕ್ಕೆ ಹೊಂದುವ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮಗಳಲ್ಲಿ, ಸ್ಕಾಲರ್‌ಶಿಪ್‌ಗಳನ್ನು ನೀಡುವುದು ಮತ್ತು ನಿರ್ದಿಷ್ಟ ವಿಷಯಗಳಲ್ಲಿ ಪರಿಣತರಿಂದ ತರಬೇತಿ ಕೊಡಿಸುವುದು ಸೇರಿವೆ. ಎಲ್ಲರನ್ನೂ ಒಳಗೊಳಿಸುವ ಮತ್ತು ಉತ್ತೇಜನಾತ್ಮಕ ಕಲಿಕಾ ಪರಿಸರವೊಂದನ್ನು ನಿರ್ಮಿಸಲು ಅದು ತೆಗೆದುಕೊಂಡಿರುವ ಕ್ರಮಗಳು ಐತಿಹಾಸಿಕವಾಗಿವೆ.

ಫೌಂಡೇಶನ್ ತನ್ನ ಅಸ್ತಿತ್ವದ ಅವಧಿಯಲ್ಲಿ ಹಲವು ಉಪಕ್ರಮ ಗಳ ಮೂಲಕ ಅಲಸ್ಪಂಖ್ಯಾತ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಬೆಂಬಲ ಒದಗಿಸಿದೆ. ಅವುಗಳ ಪೈಕಿ ಪ್ರಮುಖವಾದವುಗಳೆಂದರೆ- ಖ್ವಾಜಾ ಗರೀಬ್ ನವಾಝ್ ಕೌಶಲ ಅಭಿವೃದ್ಧಿ ತರಬೇತಿ ಯೋಜನೆ ಮತ್ತು ಬೇಗಮ್ ಹಝ್ರತ್ ಮಹಲ್ ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆ. ಈ ಯೋಜನೆಗಳು ಅಲ್ಪಸಂಖ್ಯಾತ ಯುವಜನರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮತ್ತು ಪ್ರತಿಭಾವಂತ ಅಲ್ಪಸಂಖ್ಯಾತ ಬಾಲಕಿಯರಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡುವ ಉದ್ದೇಶಗಳನ್ನು ಹೊಂದಿದ್ದವು.

ಹೆಚ್ಚಿನ ಬಾಲಕಿಯರಿಗೆ ತಮ್ಮ ಸಾಮಾಜಿಕ-ಆರ್ಥಿಕ ಹಿನ್ನೆಲೆ ಗಳಿಂದಾಗಿ ಕೈಗೆಟುಕದೆ ಇರಬಹುದಾಗಿದ್ದ ಅವಕಾಶಗಳು ಮತ್ತು ಸಂಪನ್ಮೂಲಗಳನ್ನು ಫೌಂಡೇಶನ್ ಒದಗಿಸಿದೆ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಬೆಳವಣಿಗೆಗೆ ಅಗತ್ಯವಾದ ಪಠ್ಯೇತರ ಚಟುವಟಿಕೆ ಗಳಿಗೆ ಅದು ಒತ್ತು ನೀಡಿದೆ ಮತ್ತು ವೃತ್ತಿ ತರಬೇತಿಯನ್ನೂ ನೀಡಿದೆ.

ಆದರೆ, ಈಗ ಸಂಸ್ಥೆಯ ಮುಚ್ಚುಗಡೆಯಿಂದಾಗಿ ಅದರ ಫಲಾನುಭವಿಗಳಾಗಿದ್ದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು, ಅದರಲ್ಲೂ ಮುಖ್ಯವಾಗಿ ಬಾಲಕಿಯರು ಅತಂತ್ರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ವಿದ್ಯಾರ್ಥಿಗಳಿಗೆ ನೀಡಿದ ಸವಲತ್ತುಗಳು

ಮುಚ್ಚುಗಡೆಯ ಮೊದಲು, ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಲವು ಮಹತ್ವದ ಸವಲತ್ತುಗಳನ್ನು ನೀಡುತ್ತಿತ್ತು. ಅವುಗಳೆಂದರೆ:

1. ವಿದ್ಯಾರ್ಥಿಗಳ ಬೋಧನಾ ಶುಲ್ಕ, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ವೆಚ್ಚಗಳ ನಿರ್ವಹಣೆಗಾಗಿ ಸ್ಕಾಲರ್‌ಶಿಪ್‌ಗಳು ಮತ್ತು ಆರ್ಥಿಕ ನೆರವು ನೀಡುವುದು. ಇದು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗದ ಹಲವು ಕುಟುಂಬಗಳಿಗೆ ವರದಾನವಾಗಿತ್ತು.

2. ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವು ಬೇಕಾದ ವಿಷಯಗಳಲ್ಲಿ ಹೆಚ್ಚುವರಿ ಸಂಪನ್ಮೂಲಗಳು ಮತ್ತು ಬೋಧನೆಯನ್ನು ಒದಗಿಸಲು ಫೌಂಡೇಶನ್ ಕಾರ್ಯಕ್ರಮಗಳನ್ನು ರೂಪಿಸಿತ್ತು. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಸೃಷ್ಟಿಸಿ ಅವರು ಉತ್ತಮ ನಿರ್ವಹಣೆ ನೀಡಲು ಸಹಕಾರಿಯಾಗಿತ್ತು.

3. ವಿದ್ಯಾರ್ಥಿಗಳು, ಅದರಲ್ಲೂ ಮುಖ್ಯವಾಗಿ ಬಾಲಕಿಯರು ಯಾವುದೇ ತಾರತಮ್ಯದ ಹೆದರಿಕೆಯಿಲ್ಲದೆ ತಮ್ಮ ವ್ಯಾಸಂಗ ಮುಂದುವರಿಸಲು ಅವಕಾಶ ಮಾಡಿಕೊಟ್ಟಿತ್ತು. ಅವರಿಗಾಗಿ ನಾಯಕತ್ವ ತರಬೇತಿ, ಆತ್ಮವಿಶ್ವಾಸ ಬೆಳೆಸುವ ಮತ್ತು ಇತರರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಪರಿಣತಿಯನ್ನು ತುಂಬುವ ಕಾರ್ಯಕ್ರಮಗಳನ್ನು ಅದು ರೂಪಿಸಿತ್ತು.

ಫೌಂಡೇಶನ್‌ನ ಐತಿಹಾಸಿಕ ಪಾತ್ರ

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನನ್ನು 1860ರ ಸೊಸೈಟಿಗಳ ನೋಂದಣಿ ಕಾಯ್ದೆಯಡಿ 1989 ಜುಲೈ 6ರಂದು ಸ್ಥಾಪಿಸಲಾಗಿತ್ತು. ಶಿಕ್ಷಣವಂಚಿತ ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಸಬಲೀಕರಣ ಫೌಂಡೇಶನ್‌ನ ಉದ್ದೇಶವಾಗಿತ್ತು. ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಬೌದ್ಧರು, ಪಾರ್ಸಿಗಳು ಮತ್ತು ಜೈನರು- ಈ ಆರು ಅನುಸೂಚಿತ ಅಲ್ಪಸಂಖ್ಯಾತ ಸಮುದಾಯಗಳು ಫೌಂಡೇಶನ್‌ನ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡಿವೆ.

ಭಾರತದ ಪ್ರಥಮ ಶಿಕ್ಷಣ ಸಚಿವ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಮ್ ಆಝಾದ್‌ರ ಹೆಸರಿನಲ್ಲಿ ಸ್ಥಾಪನೆಯಾದ ಫೌಂಡೇಶನ್, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಫೌಂಡೇಶನ್‌ನ ಕಾರ್ಯಕ್ರಮಗಳು ಮತ್ತು ಆಡಳಿತದ ಸಂಪೂರ್ಣ ವೆಚ್ಚವನ್ನು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಭರಿಸುತ್ತದೆ ಮತ್ತು ಅದರ ಕಾರ್ಯನಿರ್ವಹಣೆಯ ಮೇಲುಸ್ತುವಾರಿಯನ್ನು ವಹಿಸುತ್ತದೆ.

ಸಾಧನೆಗಳಿಗೆ ಮೆಚ್ಚುಗೆ

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್ ಸ್ಥಾಪನೆಯಾದಂದಿನಿಂದ ಮುಚ್ಚುಗಡೆಯಾಗುವವರೆಗೂ ತನ್ನ ಉದ್ದೇಶವನ್ನು ಸಮರ್ಥವಾಗಿ ಈಡೇರಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆರ್ಗನೈಸೇಶನ್ ರಿಸರ್ಚ್ ಗ್ರೂಪೊಂದು ತನ್ನ 2007ರ ಅಧ್ಯಯನದಲ್ಲಿ, ಫೌಂಡೇಶನ್‌ನ ಯೋಜನೆಗಳ ಪರಿಣಾಮದ ಬಗ್ಗೆ ಧನಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ತನ್ನ ಉದ್ದೇಶಿತ ಗುಂಪುಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಅದು ಮಾದರಿ ಪಾತ್ರವನ್ನು ವಹಿಸಿದೆ ಎಂದಿತ್ತು. ಅದೂ ಅಲ್ಲದೆ, ಫೌಂಡೇಶನ್‌ನ ಕಾರ್ಯಗಳು ಉದ್ದೇಶಿತ ಗುಂಪುಗಳ ಮೇಲೆ ಬೀರಿರುವ ಪರಿಣಾಮಗಳು ಮೇಲ್ನೋಟಕ್ಕೆ ಎದ್ದು ಕಾಣುತ್ತಿವೆ ಎಂದು ಅದು ಹೇಳಿತ್ತು.

2013ರಲ್ಲಿ, ಸ್ವತಃ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವೇ ಈ ರಿಸರ್ಚ್ ಗ್ರೂಪ್‌ನ ಅಭಿಪ್ರಾಯಗಳನ್ನು ಅನುಮೋದಿಸಿತ್ತು. ಅದೂ ಅಲ್ಲದೆ, 2018-19ರ ಆರ್ಥಿಕ ವರ್ಷದ ತನ್ನ ವರದಿಯೊಂದರಲ್ಲಿ, ಸಚಿವಾಲಯವು ಫೌಂಡೇಶನ್‌ನ ಯೋಜನೆಗಳ ಪರಿಣಾಮವನ್ನು ದೃಢೀಕರಿಸಿತ್ತು. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾತ್ರ ವಹಿಸುವ ಎನ್‌ಜಿಒಗಳಿಗೆ ಅನುದಾನ ನೀಡುವುದು, ಬೇಗಮ್ ಹಝ್ರತ್ ಮಹಲ್ ರಾಷ್ಟ್ರೀಯ ಸ್ಕಾಲರ್‌ಶಿಪ್ ವಿತರಣೆ ಹಾಗೂ ಮದ್ರಸಾ ವಿದ್ಯಾರ್ಥಿಗಳು ಮತ್ತು ಅರ್ಧದಲ್ಲೇ ಶಾಲೆ ಬಿಟ್ಟವರಿಗೆ ಇಂಟರ್‌ಮೀಡಿಯೆಟ್ ಶಿಕ್ಷಣಕ್ಕೆ ಸಮವಾದ ಒಂದು ವರ್ಷದ ಕೋರ್ಸ್ ಒದಗಿಸುವ ‘ನಾಲ್ ಮಂಝಿಲ್ ಬ್ರಿಜ್ ಕೋರ್ಸ್’ ಮುಂತಾದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ.

ಸಾಧನೆಗಳು

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್ 2016 ಸೆಪ್ಟಂಬರ್ 8ರವರೆಗೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಏಳಿಗೆಗಾಗಿ ಕೆಲಸ ಮಾಡಿರುವ 1,548 ಎನ್‌ಜಿಒಗಳಿಗೆ ಅನುದಾನ ಯೋಜನೆಯಡಿಯಲ್ಲಿ 200 ಕೋಟಿ ರೂ. ವಿತರಿಸಿದೆ ಮತ್ತು ಇದೇ ಅವಧಿಯಲ್ಲಿ 2,30,744 ಬಾಲಕಿಯರಿಗೆ 275 ಕೋಟಿ ರೂ. ಮೊತ್ತದ ಬೇಗಮ್ ಹಝ್ರತ್ ಮಹಲ್ ಸ್ಕಾಲರ್‌ಶಿಪ್‌ಗಳನ್ನು ನೀಡಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ಹೇಳುತ್ತವೆ. 2017-18ರ ಅವಧಿಯಲ್ಲಿ, 1,15,000 ಬಾಲಕಿಯರು ಒಟ್ಟು 78 ಕೋಟಿ ರೂ. ಮೊತ್ತದ ಬೇಗಮ್ ಹಝ್ರತ್ ಮಹಲ್ ಸ್ಕಾಲರ್‌ಶಿಪ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ‘ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಬೇಗಮ್ ಹಝ್ರತ್ ಮಹಲ್ ರಾಷ್ಟ್ರೀಯ ಸ್ಕಾಲರ್‌ಶಿಪ್‌ನ್ನು ಉನ್ನತ ಶಿಕ್ಷಣ ಪಡೆಯಲು ಪ್ರತಿಭಾವಂತ ಅಲ್ಪಸಂಖ್ಯಾತ ಬಾಲಕಿಯರಿಗೆ ನೀಡಲಾಗುತ್ತದೆ.

2017ರಲ್ಲಿ, ಫೌಂಡೇಶನ್ ಅಲ್ಪಸಂಖ್ಯಾತ ಯುವಜನರಿಗಾಗಿ, ಅದರಲ್ಲೂ ಮುಖ್ಯವಾಗಿ ಅರ್ಧದಲ್ಲೇ ಶಾಲೆ ಬಿಟ್ಟವರಿಗೆ ಅವರ ಉದ್ಯೋಗಾರ್ಹತೆಯನ್ನು ಸುಧಾರಿಸಲು ಗರೀಬ್ ನವಾಝ್ ಉದ್ಯೋಗ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯು ಅರ್ಹ ಆಕಾಂಕ್ಷಿಗಳಿಗೆ ಕಿರು ಅವಧಿಯ ವೃತ್ತಿಪರ ಕೌಶಲ ಅಭಿವೃದ್ಧಿ ಕೋರ್ಸ್‌ಗಳನ್ನು ನಡೆಸುತ್ತದೆ.

2021ರಲ್ಲಿ, ಅಂದಿನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಸಂಸತ್‌ನಲ್ಲಿ ಹೇಳಿಕೆಯೊಂದನ್ನು ನೀಡಿ, ಗರೀಬ್ ನವಾಝ್ ಯೋಜನೆಯಡಿಯಲ್ಲಿ ದೇಶಾದ್ಯಂತ 371 ಉದ್ಯೋಗ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ತರಬೇತಿ ಪಡೆದವರ ಪೈಕಿ ಶೇ. 70 ಮಂದಿಗೆ ಉದ್ಯೋಗ ಲಭಿಸಿದೆ ಎಂದು ಹೇಳಿದ್ದರು.

ಮುಚ್ಚುಗಡೆಯ ಹಾದಿ

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ನ ಈ ಎಲ್ಲಾ ಧನಾತ್ಮಕ ಕಾರ್ಯಕ್ರಮಗಳ ಹೊರತಾಗಿಯೂ, ಕೇಂದ್ರ ಸರಕಾರ ಬೇರೆಯೇ ಯೋಜನೆಯನ್ನು ಹೊಂದಿದ್ದಂತೆ ಕಾಣುತ್ತದೆ. 2022-23ರ ಕೇಂದ್ರ ಸರಕಾರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ದೊಡ್ಡ ಮೊತ್ತದ ಅನುದಾನ ನೀಡಲಾಗಿತ್ತು. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಫೌಂಡೇಶನ್‌ನ ಅನುದಾನವನ್ನು ಶೇ. 99ರಷ್ಟು ಕಡಿತಗೊಳಿಸಲಾಯಿತು. ಗುಜರಾತ್‌ನಲ್ಲಿ, 2021-22ರ ಶೈಕ್ಷಣಿಕ ವರ್ಷದಲ್ಲಿ, 1,000ಕ್ಕೂ ಅಧಿಕ ಅಲ್ಪಸಂಖ್ಯಾತ ಬಾಲಕಿಯರಿಗೆ ಬೇಗಮ್ ಹಝ್ರತ್ ಮಹಲ್ ಸ್ಕಾಲರ್‌ಶಿಪ್ ನಿರಾಕರಿಸಲಾಯಿತು.

ಅದೂ ಅಲ್ಲದೆ, ಫೌಂಡೇಶನ್‌ಗೆ ಒದಗಿಸಲಾಗಿರುವ ಅನುದಾನವನ್ನೂ ಪೂರ್ಣಪ್ರಮಾಣದಲ್ಲಿ ಬಳಸದಿರುವ ವಿಷಯವು 2021ರಲ್ಲಿ ಮಾಹಿತಿ ಹಕ್ಕಿನಡಿ ಪಡೆದುಕೊಳ್ಳಲಾಗಿರುವ ಅಂಕಿಅಂಶಗಳಿಂದ ಬೆಳಕಿಗೆ ಬಂತು. ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಫೌಂಡೇಶನ್‌ಗೆ 125 ಕೋಟಿ ರೂ., 90 ಕೋಟಿ ರೂ. ಮತ್ತು 82 ಕೋಟಿ ರೂ. ಅನುದಾನ ಒದಗಿಸಲಾಗಿತ್ತಾದರೂ, ಆ ಪೈಕಿ ಕ್ರಮವಾಗಿ 36 ಕೋಟಿ ರೂ., 37.5 ಕೋಟಿ ರೂ. ಮತ್ತು 63.5 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿತ್ತು.

2022ರ ಡಿಸೆಂಬರ್‌ನಲ್ಲಿ, ಎಂಫಿಲ್ ಮತ್ತು ಪಿಎಚ್‌ಡಿ ಪದವಿಗಳ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೌಲಾನಾ ಆಝಾದ್ ನ್ಯಾಶನಲ್ ಫೆಲೋಶಿಪ್‌ನ್ನು ನಿಲ್ಲಿಸಲಾಯಿತು. ಅದೇ ರೀತಿ, ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ಸ್ಕಾಲರ್‌ಶಿಪ್ ಯೋಜನೆಯನ್ನು ಹಠಾತ್ತನೆ ನಿಲ್ಲಿಸಲಾಯಿತು. ಈಗ ಈ ಸ್ಕಾಲರ್‌ಶಿಪ್‌ನ್ನು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಅದೂ ಅಲ್ಲದೆ, ವಿದೇಶಗಳಲ್ಲಿ ಅಧ್ಯಯನ ಮಾಡುವುದಕ್ಕಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪಡೆಯುವ ಶಿಕ್ಷಣ ಸಾಲದ ಮೇಲಿನ ಬಡ್ಡಿಗೆ ಸಬ್ಸಿಡಿಗಳನ್ನು ನೀಡುವ ಫೌಂಡೇಶನ್‌ನ ‘ಪಢೋ ಪರದೇಶ್ ಬಡ್ಡಿ ಸಬ್ಸಿಡಿ ಯೋಜನೆ’ಗೂ ಕತ್ತರಿ ಹಾಕಲಾಗಿದೆ.

ಫೌಂಡೇಶನ್‌ನ ಕಾರ್ಯಕ್ರಮಗಳನ್ನು ಒಂದೊಂದಾಗಿ ನಿಲ್ಲಿಸಿದ ಬಳಿಕ, ಅಂತಿಮವಾಗಿ ಫೌಂಡೇಶನನ್ನೇ ಮುಚ್ಚುವ ನಿರ್ಧಾರವನ್ನು ಘೋಷಿಸಲಾಗಿದೆ.

ಅಂತಿಮ ಮೊಳೆ

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನನ್ನು ಮುಚ್ಚುವ ಅಧಿಸೂಚನೆಯನ್ನು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಈ ವರ್ಷದ ಫೆಬ್ರವರಿ 7ರಂದು ಹೊರಡಿಸಿತು. ವಿಸ್ತೃತ ವಿವರಣೆಗಳನ್ನು ನೀಡದೆಯೇ, ಸಚಿವಾಲಯದ ಅಧೀನ ಕಾರ್ಯದರ್ಶಿ ಧೀರಜ್ ಕುಮಾರ್ ಫೌಂಡೇಶನನ್ನು ಮುಚ್ಚುವುದಾಗಿ ಘೋಷಿಸಿದರು. ಅಲ್ಪಸಂಖ್ಯಾತ ವ್ಯವಹಾರಗಳ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಸಚಿವಾಲಯವೊಂದು ಇರುವಾಗ ಮೌಲಾನ ಆಝಾದ್ ಎಜುಕೇಶನ್ ಫೌಂಡೇಶನನ್ನು ಮುಂದುವರಿಸುವುದಕ್ಕೆ ಅರ್ಥವಿಲ್ಲ ಎಂಬುದಾಗಿ ಸಚಿವಾಲಯವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಫೌಂಡೇಶನ್ ನಡೆಸುತ್ತಿರುವ ಯೋಜನೆಗಳನ್ನು ಇನ್ನು ಸಚಿವಾಲಯವೇ ಮುಂದುವರಿಸುವುದು ಎಂದು ಅದು ಹೇಳಿತು.

ಆದರೆ, ಸಚಿವಾಲಯವು ನೀಡಿರುವ ಕಾರಣಗಳ ಬಗ್ಗೆ ಸಾರ್ವಜನಿಕ ವಲಯದಿಂದ ಸಂಶಯ ವ್ಯಕ್ತವಾಗಿದೆ. ಫೌಂಡೇಶನನ್ನು ಮುಚ್ಚುವ ನಿರ್ಧಾರವು ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ದಾಳಿ ಮಾಡುವ ಮತ್ತು ಅಲ್ಪಸಂಖ್ಯಾತ ಶಿಕ್ಷಣಕ್ಕೆ ನೀಡಲಾಗುತ್ತಿರುವ ನೆರವನ್ನು ಕಡಿತಗೊಳಿಸುವ ದೊಡ್ಡ ಯೋಜನೆಯೊಂದರ ಭಾಗವಾಗಿದೆ ಎಂದು ಈ ನಿರ್ಧಾರದ ಟೀಕಾಕಾರರು ಹೇಳುತ್ತಾರೆ. ಭಾರತದ ಶೈಕ್ಷಣಿಕ ಕ್ಷೇತ್ರಕ್ಕೆ ಅಡಿಗಲ್ಲು ಹಾಕಿರುವ ಮೌಲಾನಾ ಆಝಾದ್‌ರ ಪರಂಪರೆಯನ್ನು ಸಚಿವಾಲಯದ ಈ ನಿರ್ಧಾರವು ಕಡೆಗಣಿಸುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಸಮ್ಮಿಳಿತ ಶಿಕ್ಷಣಕ್ಕೆ ಮಾರಕ

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನನ್ನು ಮುಚ್ಚುವ ಕೇಂದ್ರ ಸರಕಾರದ ನಿರ್ಧಾರವು, ಭಾರತದಲ್ಲಿ ‘ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ವ್ಯವಸ್ಥೆ’ಯೊಂದನ್ನು ತಲುಪುವ ಗುರಿಗೆ ವ್ಯತಿರಿಕ್ತವಾಗಿದೆ. ಮುಸ್ಲಿಮ್ ಸಮುದಾಯವು ಕೇಂದ್ರ ಸರಕಾರದ ನಿರ್ಧಾರದ ನೇರ ಪರಿಣಾಮಗಳಿಗೆ ಒಳಗಾಗಿದೆ. 2006ರ ಸಾಚಾರ್ ಸಮಿತಿ ವರದಿಯು ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಎತ್ತಿ ತೋರಿಸಿದೆ. ಇತರ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಹೋಲಿಸಿದರೆ, ಮುಸ್ಲಿಮ್ ಸಮುದಾಯದ ಸಾಕ್ಷರತಾ ದರವು ಕನಿಷ್ಠವಾಗಿರುವುದನ್ನು 2011ರ ಜನಗಣತಿ ತೋರಿಸುತ್ತದೆ. ಸಾಕ್ಷರತೆ ಪ್ರಮಾಣದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹಿಂದಿರುವ ಏಕೈಕ ಅಲ್ಪಸಂಖ್ಯಾತ ಸಮುದಾಯ ಅದಾಗಿದೆ.

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯ

2017ರಲ್ಲಿ, ಭಾರತದಲ್ಲಿರುವ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಪೈಕಿ ಮುಸ್ಲಿಮ್ ಸಮುದಾಯವು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ ಎಂಬುದಾಗಿ ಸ್ವತಃ ಫೌಂಡೇಶನ್ ತನ್ನ ವರದಿಯೊಂದರಲ್ಲಿ ಹೇಳಿದೆ. ಈ ಅಂಶಗಳು ಇದನ್ನು ಸಾಬೀತುಪಡಿಸುತ್ತವೆ- 1) ಮುಸ್ಲಿಮ್ ಸಮುದಾಯದ ಸಾಕ್ಷರತೆ ದರ ಮತ್ತು ಶಾಲಾ ನೋಂದಣಿ ದರ ರಾಷ್ಟ್ರೀಯ ಸರಾಸರಿಗಿಂತ ತೀರಾ ಕೆಳಗಿರುವುದು. 2) ಶೈಕ್ಷಣಿಕ ಸಾಧನೆಯಲ್ಲಿ ಇತರ ಸಮುದಾಯಗಳು ಮತ್ತು ಮುಸ್ಲಿಮ್ ಸಮುದಾಯದ ನಡುವೆ ಅಗಾಧ ಅಂತರವಿರುವುದು ಮತ್ತು 3) ಮುಸ್ಲಿಮ್ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣದ ಲಭ್ಯತೆ ಸೀಮಿತವಾಗಿರುವುದು ಮತ್ತು ಅರ್ಧದಲ್ಲೇ ಶಾಲೆ ಬಿಡುವವರ ಪ್ರಮಾಣ ಅಧಿಕವಾಗಿರುವುದು.

ಮುಸ್ಲಿಮರ ಒಡೆತನದ ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ

ದೇಶದಲ್ಲಿ ಮುಸ್ಲಿಮರ ಒಡೆತನದ ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆಯಿದೆ ಎನ್ನುವುದರತ್ತ ‘ಸೆಂಟರ್ ಫಾರ್ ಸ್ಟಡಿ ಆ್ಯಂಡ್ ರಿಸರ್ಚ್’ನ 2023ರ ಅಧ್ಯಯನವೊಂದು ಬೆಟ್ಟು ಮಾಡಿದೆ. ಅದರ ವರದಿಯಲ್ಲಿ ಈ ಅಂಶಗಳಿವೆ: 1) ದೇಶದಲ್ಲಿರುವ ವಿಶ್ವವಿದ್ಯಾನಿಲಯಗಳ ಪೈಕಿ ಶೇ. 2.1 ಮತ್ತು ಕಾಲೇಜುಗಳ ಪೈಕಿ ಶೇ. 2.6 ಮಾತ್ರ ಮುಸ್ಲಿಮರ ಆಡಳಿತಕ್ಕೆ ಒಳಪಟ್ಟಿದೆೆ. ಮುಸ್ಲಿಮರ ಜನಸಂಖ್ಯೆಗೆ ಹೋಲಿಸಿದರೆ ಅವರು ಹೊಂದಿರುವ ಶೈಕ್ಷಣಿಕ ಸಂಸ್ಥೆಗಳು ತೀರಾ ವಿರಳ ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ. 2) ಇತರ ಅಲ್ಪಸಂಖ್ಯಾತ ಗುಂಪುಗಳಿಗೆ ಹೋಲಿಸಿದರೆ, ಮುಸ್ಲಿಮರಿಗೆ ತಾಂತ್ರಿಕ ಕಾಲೇಜುಗಳಿಗೆ ಪ್ರವೇಶ ಲಭ್ಯತೆ ತೀರಾ ಕಡಿಮೆಯಾಗಿದೆ. 3) ಪ್ರಾದೇಶಿಕ ಮಟ್ಟದಲ್ಲಿ, ಶಿಕ್ಷಣ ಲಭ್ಯತೆಯಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಅಗಾಧ ಅಂತರವಿದೆ.

ಶೈಕ್ಷಣಿಕವಾಗಿ ಮುಸ್ಲಿಮರು ಹಿಂದುಳಿದಿರುವುದನ್ನು 2020-21ರಲ್ಲಿ ನಡೆಸಲಾದ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯೂ ಗುರುತಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ದಲಿತರು, ಆದಿವಾಸಿಗಳು ಮತ್ತು ಒಬಿಸಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸೇರ್ಪಡೆಯಾಗಿರುವ ಪ್ರಮಾಣ ಕ್ರಮವಾಗಿ ಶೇ. 4.2 , ಶೇ. 11.9 ಮತ್ತು ಶೇ. 4ರಷ್ಟು ಹೆಚ್ಚಿದೆ; ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮುಸ್ಲಿಮರು ಶಾಲಾ-ಕಾಲೇಜುಗಳಿಗೆ ಸೇರ್ಪಡೆಯಾಗಿರುವ ಪ್ರಮಾಣ ಶೇ. 8ರಷ್ಟು ಕುಸಿದಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಮೀಕ್ಷೆ ಬಹಿರಂಗಪಡಿಸಿದೆ.

ಈ ಶೈಕ್ಷಣಿಕ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್ ಕೆಲಸ ಮಾಡುತ್ತಿತ್ತು.

ಪರಿಣಾಮಗಳು

ಮೌಲಾನಾ ಆಝಾದ್ ಎಜುಕೇಶನಲ್ ಫೌಂಡೇಶನನ್ನು ಮುಚ್ಚುವ ನಿರ್ಧಾರವು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ, ಅದರಲ್ಲೂ ಮುಖ್ಯವಾಗಿ ಆ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ.

ಶೈಕ್ಷಣಿಕ ಅಡಚಣೆ: ಫೌಂಡೇಶನ್ ಮುಚ್ಚುಗಡೆಯ ತಕ್ಷಣದ ಪರಿಣಾಮವಾಗಿ, ಸಾವಿರಾರು ವಿದ್ಯಾರ್ಥಿಗಳು ಈ ತನಕ ಪಡೆದುಕೊಂಡು ಬಂದಿದ್ದ ಶೈಕ್ಷಣಿಕ ನೆರವಿನಿಂದ ವಂಚಿತರಾಗುತ್ತಾರೆ. ತುಂಬಾ ವಿದ್ಯಾರ್ಥಿಗಳು, ಅದರಲ್ಲೂ ಮುಖ್ಯವಾಗಿ ಬಾಲಕಿಯರು ಫೌಂಡೇಶನ್‌ನ ಸ್ಕಾಲರ್‌ಶಿಪ್‌ಗಳು ಮತ್ತು ಆರ್ಥಿಕ ನೆರವು ಕಾರ್ಯಕ್ರಮಗಳನ್ನು ಅವಲಂಬಿಸಿದ್ದಾರೆ. ಅವರಿಗೆ ಇನ್ನು ಪರ್ಯಾಯ ಆರ್ಥಿಕ ಮೂಲಗಳನ್ನು ಹುಡುಕುವುದು ಕಷ್ಟವಾಗಬಹುದು.

ಹೆಚ್ಚಿದ ಆರ್ಥಿಕ ಹೊರೆ: ಫೌಂಡೇಶನ್‌ನ ಆರ್ಥಿಕ ನೆರವನ್ನು ಅವಲಂಬಿಸಿರುವ ಕುಟುಂಬಗಳು ಈಗ ಹೆಚ್ಚಿನ ಆರ್ಥಿಕ ಹೊರೆಯನ್ನು ಹೊರಲು ತಯಾರಾಗಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನೇ ನಿಲ್ಲಿಸಬಹುದು ಅಥವಾ ತಮಗೆ ಹೊಂದಿಕೆಯಾಗದ ಶೈಕ್ಷಣಿಕ ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಇದು ಅಂತಿಮವಾಗಿ ಆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಬದುಕುಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು.

ಬಾಲಕಿಯರ ಶಿಕ್ಷಣದ ಮೇಲೆ ಪರಿಣಾಮ: ಫೌಂಡೇಶನನ್ನು ಮುಚ್ಚುವ ಕೇಂದ್ರ ಸರಕಾರದ ನಿರ್ಧಾರವು ಮುಖ್ಯವಾಗಿ ಬಾಲಕಿಯರ ಶಿಕ್ಷಣದ ವಿಚಾರದಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಪ್ರತಿಭಾವಂತ ಬಾಲಕಿಯರಿಗೆ ಸ್ಕಾಲರ್‌ಶಿಪ್ ನೀಡುವ ಹಾಗೂ ಯುವ ಮಹಿಳೆಯರ ಸಬಲೀಕರಣದ ಉದ್ದೇಶದ ಕಾರ್ಯಕ್ರಮಗಳನ್ನು ಒಳಗೊಂಡ ಫೌಂಡೇಶನ್‌ನ ಉಪಕ್ರಮಗಳು ಸುರಕ್ಷಿತ ಹಾಗೂ ಉತ್ತೇಜನಾತ್ಮಕ ಶೈಕ್ಷಣಿಕ ಪರಿಸರವನ್ನು ಒದಗಿಸಿದ್ದವು. ಈಗ ಈ ಉಪಕ್ರಮಗಳಿಲ್ಲದೆ, ಬಾಲಕಿಯರು ಶಿಕ್ಷಣ ಪಡೆಯಲು ದೊಡ್ಡ ತಡೆಗಳನ್ನು ಎದುರಿಸಬೇಕಾಗಬಹುದು.

ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳು: ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ನ ದಿಢೀರ್ ಹಾಗೂ ಅಗೌರವಯುತ ಮುಚ್ಚುಗಡೆಯು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಮಾನಸಿಕ ಕ್ಲೇಶವನ್ನು ಹುಟ್ಟುಹಾಕಿದೆ. ತಮ್ಮ ಶೈಕ್ಷಣಿಕ ಭವಿಷ್ಯದ ಕುರಿತ ಅನಿಶ್ಚಿತತೆ ಮತ್ತು ದಿಢೀರ್ ಶೈಕ್ಷಣಿಕ ನೆರವು ಸ್ಥಗಿತವು ವಿದ್ಯಾರ್ಥಿಗಳಲ್ಲಿ ತಳಮಳ ಮತ್ತು ಹತಾಶೆಗೆ ಕಾರಣವಾಗಬಹುದು.

‘ಉದ್ದೇಶಪೂರ್ವಕ ಕ್ರಮ’

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನನ್ನು ಮುಚ್ಚುವ ಕೇಂದ್ರ ಸರಕಾರದ ನಿರ್ಧಾರಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕೇಂದ್ರ ಸರಕಾರದ ಈ ಕ್ರಮವು ತಮ್ಮ ಶೈಕ್ಷಣಿಕ ಅವಕಾಶಗಳನ್ನು ಕಡಿತಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅಲ್ಪಸಂಖ್ಯಾತ ಸಮುದಾಯದ ಹೆಚ್ಚಿನವರು ಭಾವಿಸಿದ್ದಾರೆ. ಸರಕಾರದ ಈ ಕ್ರಮವು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಅಸಮಾನತೆಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ದಿಲ್ಲಿಯ ಸರಕಾರೇತರ ಸಂಘಟನೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಹಾರಿಸ್ ಅಭಿಪ್ರಾಯಪಡುತ್ತಾರೆ. ಇಂಥ ಆರ್ಥಿಕ ನೆರವಿನ ಅನುಪಸ್ಥಿತಿಯು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಗಳಿಂದ ಬರುವ ವಿದ್ಯಾರ್ಥಿಗಳ ಮೇಲೆ ಮಿತಿ ಇರದ ದುಷ್ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಹೇಳುತ್ತಾರೆ.

ಕೇಂದ್ರದ ಸಮರ್ಥನೆ

ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರಕಾರವು ಪುನರಾವರ್ತನೆ ಮತ್ತು ಹೆಚ್ಚುವರಿ ವೆಚ್ಚಗಳನ್ನು ಕಡಿತ ಮಾಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದಿದೆ. ಆದರೆ, ಈ ವಿವರಣೆಯನ್ನು ಹೆಚ್ಚಿನವರು ನಂಬಲು ನಿರಾಕರಿಸಿದ್ದಾರೆ. ಆದರೆ, ದಿಲ್ಲಿ ಹೈಕೋರ್ಟ್ ಸರಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ. ಫೌಂಡೇಶನ್‌ನ ಕಾರ್ಯನಿರ್ವಹಣೆಯ ಕುರಿತ ತಪ್ಪು ಲೆಕ್ಕಗಳು ಮತ್ತು ಆರ್ಥಿಕ ಅವ್ಯವಹಾರಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬ ಸರಕಾರದ ವಾದವನ್ನು ಹೈಕೋರ್ಟ್ ಸ್ವೀಕರಿಸಿದೆ.

ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ಪರಿಣಾಮ

ಮೌಲಾನ ಆಝಾದ್ ಎಜುಕೇಶನ್ ಫೌಂಡೇಶನ್‌ನ ಮುಚ್ಚುಗಡೆಯು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರಲಿದೆ. ಅಲ್ಪಸಂಖ್ಯಾತ ಬಾಲಕಿಯರಿಗಾಗಿ ವಸತಿ ಶಾಲೆಗಳ ಸ್ಥಾಪನೆಯನ್ನು ಫೌಂಡೇಶನ್ ಬೆಂಬಲಿಸಿತ್ತು ಮತ್ತು ಹಲವಾರು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡಿತ್ತು. ಈಗ ಅದರ ಮುಚ್ಚುಗಡೆಯು ಈ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿದೆ ಮತ್ತು ಹಲವು ಅಲ್ಪಸಂಖ್ಯಾತ ಸಂಸ್ಥೆಗಳು ಅನಿಶ್ಚಿತ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲಿವೆ.

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ನ ಮುಚ್ಚುಗಡೆಯು, ಭಾರತದಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಕ್ಷೇತ್ರದಲ್ಲಿ ಸಂಭವಿಸಿದ ಒಂದು ಮಹತ್ವದ ಬದಲಾವಣೆಯಾಗಿದೆ. ಹಿಂದಳಿದ ಸಮುದಾಯಗಳ, ಅದರಲ್ಲೂ ಮುಖ್ಯವಾಗಿ ಮುಸ್ಲಿಮ್ ಬಾಲಕಿಯರ ಶಿಕ್ಷಣದಲ್ಲಿ ಫೌಂಡೇಶನ್ ವಹಿಸಿರುವ ಪಾತ್ರವು ಅಗಾಧವಾಗಿದೆ. ಫೌಂಡೇಶನ್‌ನ ದಿಢೀರ್ ಮುಚ್ಚುಗಡೆಯು ಈ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸರ್ವರನ್ನೊಳಗೊಂಡ ಶಿಕ್ಷಣದ ಬಗ್ಗೆ ಸರಕಾರದ ಬದ್ಧತೆಯ ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ರಾಜೇಶ್ ಹಳೆಯಂಗಡಿ

contributor

Similar News