ಫ್ರೂಟ್ಸ್ FID ಮಾಡಿಸಲು ಕಂದಾಯ ಇಲಾಖೆಯಿಂದ ತಾಂತ್ರಿಕ ಸಮಸ್ಯೆ
ಮಾನ್ಯರೇ,
ಭೂಮಿ ಹೊಂದಿರುವಪ್ರತಿಯೊಬ್ಬ ರೈತನಿಗೂ ಸರಕಾರದ ಸೌಲಭ್ಯ ತಲುಪಿಸಲು ಕಂದಾಯ ಸಚಿವರ ನೇತೃತ್ವದಲ್ಲಿ ಕಂದಾಯ ಇಲಾಖೆಯ ನೌಕರರು ರಜಾ ದಿನ ಸೇರಿದಂತೆ ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ. ಫ್ರೂಟ್ಸ್ ಎಫ್‌ಐಡಿ ರಚಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಗ್ರಾಮದ ವಿಎ ವರೆಗೆ ರೈತರನ್ನು ಸಂಪರ್ಕಿಸಿ ಐಡಿ ರಚಿಸುತ್ತಿದ್ದಾರೆ.
ರೈತರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಇಕೆವೈಸಿ, ಒಂದಕ್ಕಿಂತ ಹೆಚ್ಚಿರುವ ಪಹಣಿ
ನಂಬರ್‌ಗಳನ್ನು ಸರಿಪಡಿಸಿ ಐಡಿ ರಚಿಸುತ್ತಿದ್ದಾರೆ. ಆದರೆ ಕಂದಾಯ ಇಲಾಖೆಯ ಭೂಮಿ ತಂತ್ರಾಂಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಫಾರಂ 53ರ ಅಡಿಯಲ್ಲಿ ಮಂಜೂರು ಆಗಿರುವ ಹಕ್ಕುಪತ್ರಗಳ ಪಹಣಿಯಲ್ಲಿ ಸರಕಾರಿ ಭೂಮಿ ಎಂದು ನಮೂದು ಆಗಿರುವುದರಿಂದ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಲ್ಲಿ ಫ್ರೂಟ್ ಎಫ್‌ಐಡಿ ರಚಿಸಲು ಸಾಧ್ಯವಾಗುತ್ತಿಲ್ಲ. ತಪ್ಪುಸರಿಪಡಿಸಬೇಕಾದರೆ ಪಹಣಿಯಲ್ಲಿ ಸರಕಾರಿ ಭೂಮಿ ಬದಲು ಪಟ್ಟ(ಖಾಸಗಿ) ಭೂಮಿ ಎಂದು ನಮೂದಿಸಬೇಕು. ಸರಕಾರಿ ಎಂದು ಪಹಣಿಯಲ್ಲಿ ಇದ್ದರೆ ರೈತರು ಸಾಲ ಸೇರಿದಂತೆ ಯಾವುದೇ ಪ್ರಯೋಜನ ಪಡೆಯಲು ಅಥವಾ ಇತರ ಯಾವುದೇ ತಂತ್ರಾಂಶದ ಲಾಭ ಪಡೆಯಲು ಅಸಾಧ್ಯ. ಈಗ ಜಿಲ್ಲೆಯ ಸಾವಿರಾರು ರೈತರಿಗೆ ಈ ಅವಕಾಶ ಇರುವುದಿಲ್ಲ.ಈ ತಪ್ಪು ಸರಿಪಡಿಸಲು ಅಧಿಕಾರ ಹೊಂದಿರುವುದು ಉಪ ವಿಭಾಗಧಿಕಾರಿ(AC) ಮಾತ್ರ.
ಎಲ್ಲಾ ತಾಲೂಕು ಕಚೇರಿಗಳಿಂದ ಮಾಹಿತಿ ತರಿಸಿಕೊಂಡು ಉಪ ವಿಭಾಗಧಿಕಾರಿಗಳು ಆದಷ್ಟು ಬೇಗ ಸರಕಾರಿ ಭೂಮಿ ನಿರ್ಬಂಧ ಕಾಲಂ
ಸರಿಪಡಿಸಿದರೆ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಎಫ್‌ಐಡಿ ಗುರಿ ತಲುಪಲು ಸಾಧ್ಯ. ಅರಣ್ಯ ಹಕ್ಕುಪತ್ರ ಪಡೆದ ರೈತರು ಸರಕಾರದ ಸೌಲಭ್ಯದಿಂದ ಹೊರಗೆ: ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಹಕ್ಕುಪತ್ರ ಹೊಂದಿರುವ ಪರಿಶಿಷ್ಟ ವರ್ಗದ ರೈತರು ತಮ್ಮ ಭೂಮಿ ಪಹಣಿಯಲ್ಲಿ ಕಾಲಂ 11ರಲ್ಲಿ ನಮೂದು ಆಗಿರುವುದರಿಂದ ಸರಕಾರದ ಎಲ್ಲಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಕ್ಕುಪತ್ರ ಪಡೆದ ರೈತರು ಹಲವಾರು ಬಾರಿ ಅರ್ಜಿ ನೀಡಿದರೂ ಸಮಸ್ಯೆ ಬಗೆಹರಿದಿರುವುದಿಲ್ಲ. ಸರಕಾರ ಯೋಜನೆ ರೈತರಿಗೆ ಮತ್ತು ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಹಕ್ಕುಪತ್ರ ಪಡೆದ ರೈತರ ನೆರವಿಗೆ ಧಾವಿಸಬೇಕು.