ರಾಜ್ಯದ 10 ಸಾವಿರಕ್ಕೂ ಅಧಿಕ ಕುಸ್ತಿಪಟುಗಳ ಭವಿಷ್ಯ ಕತ್ತಲೆಯಲ್ಲಿ

Update: 2024-01-08 02:39 GMT

Photo: PTI

ಬೆಂಗಳೂರು: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಕುಸ್ತಿಪಟುಗಳ ಹೋರಾಟ ತೀವ್ರಗೊಂಡು, ದೇಶದಲ್ಲಿ ಹಲವು ಕುಸ್ತಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿರುವುದಲ್ಲದೇ, ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆಯ ಯುವ ಹಾಗೂ ಪ್ರತಿಭಾವಂತ ಕುಸ್ತಿಪಟುಗಳ ಭವಿಷ್ಯವನ್ನು ಕತ್ತಲೆಗೆ ದೂಡಿದಂತಾಗಿದೆ.

ಕಳೆದೊಂದು ವರ್ಷದಿಂದಲೂ ಲೈಂಗಿಕ ದೌರ್ಜನ್ಯ ಖಂಡಿಸಿ ದೇಶದೆಲ್ಲೆಡೆ ಕುಸ್ತಿಪಟುಗಳ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕದಲ್ಲಿ 10 ಸಾವಿರದಷ್ಟಿರುವ ಯುವ ಕುಸ್ತಿಪಟುಗಳ ಬದುಕು ಕೂಡಾ ಅತಂತ್ರವಾಗಿದೆ. ವಿವಾದಗಳ ನಡುವೆಯೇ ಕರ್ನಾಟಕದಲ್ಲಿ ಕುಸ್ತಿ ಚಾಂಪಿಯನ್‌ಶಿಪ್‌ಗಳು ನಿರಂತರವಾಗಿ ನಡೆಯುತ್ತಿದ್ದರೂ, ರಾಷ್ಟ್ರ ಮಟ್ಟದಲ್ಲಿ ಯಾವುದೇ ಸ್ಪರ್ಧೆಗಳು ನಡೆಯುತ್ತಿಲ್ಲ. ಇದರ ನೇರ ಪರಿಣಾಮ ಬೀರುತ್ತಿರುವುದು ಕುಸ್ತಿಪಟುಗಳ ಭವಿಷ್ಯದ ಮೇಲೆ. ಒಂದೆಡೆ ಆರ್ಥಿಕ ಸಮಸ್ಯೆ, ಮತ್ತೊಂದೆಡೆ ಕೆಲಸದ ನೇಮಕಾತಿಯೂ ಇಲ್ಲದೆ ಯುವ ಕುಸ್ತಿಪಟುಗಳ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಕುಗ್ಗಲಾರಂಭಿಸಿದೆ.

ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ಗಳೇ ನಡೆದಿಲ್ಲ:

2023ರ ಜನವರಿಯಲ್ಲಿ ಕುಸ್ತಿ ಫೆಡರೇಷನ್‌ನ ಆಗಿನ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖರು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಆದರೆ ಬ್ರಿಜ್‌ಭೂಷಣ್ ವಿರುದ್ಧ ಸರಕಾರ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ನಡುವೆ ಕೇಂದ್ರ ಕ್ರೀಡಾ ಸಚಿವಾಲಯ ಕುಸ್ತಿ ಸಂಸ್ಥೆಯನ್ನೇ ಅಮಾನತುಗೊಳಿಸಿತ್ತು. ಬಳಿಕ ಫೆಡರೇಶನ್ ಮೇಲುಸ್ತುವಾರಿ ನೋಡಿಕೊಳ್ಳಲು ಸ್ವತಂತ್ರ ಸಮಿತಿಯನ್ನೂ ನೇಮಿಸಲಾಗಿತ್ತು. ಆದರೆ ಸಮಿತಿಗೆ ಯಾವುದೇ ಕೂಟಗಳನ್ನು ಆಯೋಜಿಸುವ ಅಧಿಕಾರ ಇರಲಿಲ್ಲ. ಹೀಗಾಗಿ ಜನವರಿಯಿಂದ ಯಾವುದೇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಯೋಜನೆಗೊಂಡಿಲ್ಲ. ಇದರಿಂದ ಯುವ ಕುಸ್ತಿಪಟುಗಳು ತೀರಾ ಬೇಸರ ವ್ಯಕ್ತಪಡಿಸಿದ್ದಾರೆ.

 ಕರ್ನಾಟಕದಲ್ಲಿ ಮಾತ್ರ ಚಾಂಪಿಯನ್‌ಶಿಪ್:

ರಾಷ್ಟ್ರ ಮಟ್ಟದಲ್ಲಿ ಕುಸ್ತಿ ಚಾಂಪಿಯನ್‌ಶಿಪ್ ಆಯೋಜನೆಗೊಳ್ಳದಿದ್ದರೂ, ಕರ್ನಾಟಕದಲ್ಲಿ 2022ರಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಗೆ ಗುಣರಂಜನ್ ಶೆಟ್ಟಿ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಈವರೆಗೆ ಒಟ್ಟು 18ಕ್ಕೂ ಹೆಚ್ಚು ಚಾಂಪಿಯನ್‌ಶಿಪ್‌ಗಳು ನಡೆದಿವೆ ಎಂಬುದು ರಾಜ್ಯ ಕುಸ್ತಿ ಸಂಸ್ಥೆ ನೀಡುವ ಮಾಹಿತಿಯಾಗಿದೆ. ಇತ್ತೀಚೆಗಷ್ಟೇ ಡಿ.22ರಿಂದ 26ರವರೆಗೂ ರಾಜ್ಯದ ಹರಿಹರದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿ ಆಯೋಜನೆಗೊಂಡಿತ್ತು.

 ಪ್ರತಿಭೆಗಳನ್ನು ಲೆಕ್ಕಿಸದ ಕೇಂದ್ರ:

ಕುಸ್ತಿಪಟುಗಳ ತರಬೇತಿಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಕುರಿತಾಗಿ ಕೇಂದ್ರ ಸರಕಾರವು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಪದಕ ಗೆದ್ದಾಗ ಇರುವ ಸಂಭ್ರಮದ ಮಧ್ಯೆ ಕುಸ್ತಿಪಟುಗಳ ಶ್ರೇಯೋಭಿವೃದ್ಧಿಗಾಗಿ ಸರಕಾರಗಳು ವಿಶೇಷ ಅನುದಾನವನ್ನು ಒದಗಿಸಿಕೊಡಬೇಕಾಗಿದೆ. ರಾಜ್ಯ ಕುಸ್ತಿ ಸಂಸ್ಥೆಯು ಕುಸ್ತಿಪಟುಗಳ ಏಳಿಗೆಗಾಗಿ ಸತತ ಪ್ರಯತ್ನವನ್ನು ಮಾಡುತ್ತಿದೆ ಎನ್ನುತ್ತಾರೆ ಓರ್ವ ಕುಸ್ತಿಪಟು.

ಕುಸ್ತಿಪಟುಗಳ ಸಂಖ್ಯೆ ಇಳಿಮುಖ!:

ಪ್ರತಿಭಾನ್ವಿತ ಕುಸ್ತಿಪಟುಗಳು ಭವಿಷ್ಯವನ್ನು ಕಸಿದುಕೊಳ್ಳುತ್ತಿರುವ ನಡುವೆ ಪೋಷಕರು ಮಕ್ಕಳನ್ನು ಕುಸ್ತಿ ಅಖಾಡದಿಂದ ದೂರಗೊಳಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಸ್ತಿಪಟುಗಳ ಸಂಖ್ಯೆ ಇಳಿಮುಖಕ್ಕೆ ಕಾರಣವಾಗಬಹುದೆಂದು ರಾಜ್ಯ ಕುಸ್ತಿ ಸಂಸ್ಥೆಯ ತಾಂತ್ರಿಕ ಅಧಿಕಾರಿ, ತರಬೇತುದಾರ ವಿನೋದ್ ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಗೊಂದಲದಲ್ಲಿ ಕುಸ್ತಿಪಟುಗಳ ಭವಿಷ್ಯಕ್ಕೆ ಕುತ್ತು

ರಾಜ್ಯ ಕುಸ್ತಿ ಸಂಸ್ಥೆಯು ಕುಸ್ತಿಪಟುಗಳ ಮೇಲೆ ಅಪಾರ ಕಾಳಜಿಯನ್ನು ವಹಿಸಿಕೊಂಡು ಅವರಿಗೆ ರಾಜ್ಯಮಟ್ಟದಲ್ಲಿ ಹಲವು ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಮುಂದೆಯೂ ಇನ್ನಷ್ಟು ಚಾಂಪಿಯನ್‌ಶಿಪ್ ಸ್ಪರ್ಧೆಗಳನ್ನು ಆಯೋಜಿಸಲಿದ್ದೇವೆ. ರಾಜ್ಯದಲ್ಲಿ ಕುಸ್ತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕೆಂಬ ಉದ್ದೇಶದಲ್ಲಿದ್ದೇವೆ. ರಾಷ್ಟ್ರಮಟ್ಟದ ಕುಸ್ತಿ ಸಂಸ್ಥೆಯ ರಾಜಕೀಯ ಗೊಂದಲದಲ್ಲಿ ಕುಸ್ತಿಪಟುಗಳ ಭವಿಷ್ಯವೇ ಹಾಳಾಗುವುದು ಸರಿಯಲ್ಲ.

 ಗುಣರಂಜನ್ ಶೆಟ್ಟಿ, ಅಧ್ಯಕ್ಷ, ರಾಜ್ಯ ಕುಸ್ತಿ ಸಂಸ್ಥೆ.

ಅಖಾಡ ತೊರೆಯುತ್ತಿರುವ ಕುಸ್ತಿಪಟುಗಳು!

ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿರುವ ಕುಸ್ತಿಪಟುಗಳ ಸಂಖ್ಯೆ ೧೦,೦೦೦ಕ್ಕೂ ಹೆಚ್ಚು. ಆದರೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ನಡೆದರೆ ಮಾತ್ರ ಕುಸ್ತಿಪಟುಗಳು ಆಡಲು ಇಷ್ಟಪಡುತ್ತಾರೆ. ಇಲ್ಲದಿದ್ದರೆ ಕುಸ್ತಿಯನ್ನೇ ತೊರೆಯುವುದು ಸರ್ವೇ ಸಾಮಾನ್ಯ. ಎಲ್ಲಾ ಕ್ರೀಡೆಗಳಿಗೂ ಅನ್ವಯ. ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ನಡೆಯದ ಕಾರಣ ಕರ್ನಾಟಕದ ಹಲವರು ಕುಸ್ತಿ ಅಂಗಳದಿಂದ ದೂರ ಸರಿಯುತ್ತಿದ್ದಾರೆ. ಇನ್ನು ವಯಸ್ಸಿಗೆ ಅನುಗುಣವಾಗಿ ನಡೆಯುವ ಚಾಂಪಿಯನ್‌ಶಿಪ್‌ಗಳು ಒಂದು ವರ್ಷದಿಂದ ನಡೆಯದ ಕಾರಣ ಅವಕಾಶ ವಂಚಿತರಾಗುತ್ತಿದ್ದಾರೆ. ಅಲ್ಲದೆ ಇದರಿಂದ ರೈಲ್ವೆ, ಸೇನಾ ನೇಮಕಾತಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಹಲವಾರು ಕುಸ್ತಿಪಟುಗಳು ನಿರುದ್ಯೋಗಿಗಳಾಗುತ್ತಿದ್ದಾರೆ ಎನ್ನುವುದು ೧೯ ವರ್ಷ ವಯಸ್ಸಿನ ಕುಸ್ತಿ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಗೆದ್ದ ರಾಜ್ಯದ ಕುಸ್ತಿಪಟು ಸಂಜೀವ್ ಹೇಳುವ ಮಾತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಇಬ್ರಾಹಿಂ ಖಲೀಲ್ ಬನ್ನೂರು

contributor

Similar News