ಸರಕಾರಿ ಶಾಲೆಗಳಿಗೆ ತರಕಾರಿ ವ್ಯಾಪಾರಿ ಶರೀಫ್ ರ 'ಅಳಿಲು ಸೇವೆ'

Update: 2024-08-12 06:10 GMT

ಮಂಗಳೂರು: ಸರಕಾರಿ ಶಾಲೆಗಳನ್ನು ಉಳಿಸುವ ಕಿರು ಪ್ರಯತ್ನದ ಜತೆಗೆ ನಮ್ಮ ಸುತ್ತಮುತ್ತಲಿನ ಬಡ ಮಕ್ಕಳಿಗೆ ಪೌಷ್ಟಿಕತೆಗೂ ನೆರವಾಗಬಹುದು ಎಂಬುದಕ್ಕೆ ಬಂಟ್ವಾಳ ನಂದಾವರದ ತರಕಾರಿ ವ್ಯಾಪಾರಿ ಮುಹಮ್ಮದ್ ಶರೀಫ್ ಮಾದರಿ. ಬಂಟ್ವಾಳದ ಮೆಲ್ಕಾರ್ ಬಳಿ ಸಣ್ಣ ತರಕಾರಿ ಅಂಗಡಿ ಹೊಂದಿರುವ ಶರೀಫ್, ಸುಮಾರು ಎಂಟು ವರ್ಷಗಳ ಹಿಂದೆ ಮಜಿ ವೀರಕಂಭ ಶಾಲೆಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿ ಪೂರೈಕೆ ಮಾಡಲು ಆರಂಭಿಸಿದ್ದರು. ಇದೀಗ ನಾಲ್ಕು ಶಾಲೆಗಳಿಗೆ ಉಚಿತವಾಗಿ ತರಕಾರಿ ಒದಗಿಸುತ್ತಿದ್ದಾರೆ.

ಮಜಿ ಶಾಲೆಯ ಶಿಕ್ಷಕಿ ಎಂಟು ವರ್ಷಗಳ ಹಿಂದೆ ತಮ್ಮ ಶಾಲೆಯ ಬಿಸಿಯೂಟಕ್ಕೆ ತರಕಾರಿ ಖರೀದಿಸಲು ಬರುತ್ತಿದ್ದ ವೇಳೆ ಮಾನವೀಯ ನೆಲೆಯಲ್ಲಿ ಉಚಿತವಾಗಿ ತರಕಾರಿ ನೀಡಲು ಆರಂಭಿಸಿದರು. ಆರಂಭದಲ್ಲಿ ಎರಡು ಮೂರು ಕೆಜಿ ತರಕಾರಿ ಉಚಿತವಾಗಿ ನೀಡುತ್ತಿದ್ದ ಶರೀಫ್ ಸದ್ಯ ಆ ಶಾಲೆಗೆ ದಿನವೊಂದಕ್ಕೆ 10ರಿಂದ 12 ಕೆಜಿಯಷ್ಟು ತರಕಾರಿ ಪೂರೈಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಕಿಯೇ ಮೆಲ್ಕಾರ್‌ನಿಂದ ಸುಮಾರು 9 ಕಿ.ಮೀ. ದೂರಕ್ಕೆ ಬಸ್ಸಿನಲ್ಲಿ ತರಕಾರಿ ಹೊತ್ತೊಯ್ಯುತ್ತಿದ್ದರು. ಬಳಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಿದ್ದು, ಸದ್ಯ 250ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ. ಹಾಗಾಗಿ ತರಕಾರಿ ಬೇಡಿಕೆಯೂ ಹೆಚ್ಚಾಗಿದ್ದು, ಕಳೆದ 3 ವರ್ಷಗಳಿಂದೀಚೆಗೆ ಶಾಲೆಯ ಹಳೆ ವಿದಾರ್ಥಿಯೊಬ್ಬರು ತರಕಾರಿ ಸಾಗಿಸುವ ಜವಾಬ್ದಾರಿ ವಹಿಸಿ ಅದನ್ನು ನಿರ್ವಹಿಸುತ್ತಿದ್ದಾರೆ.

ಬಳಿಕ ಕೆಲಿಂಜ ಶಾಲೆಗೆ ತರಕಾರಿಯ ಬೇಡಿಕೆ ಬಂದಾಗ ಅಲ್ಲಿಗೂ ವಾರಕ್ಕೊಮ್ಮೆ ಉಚಿತವಾಗಿ ತರಕಾರಿ ಪೂರೈಕೆಯ ಜವಾಬ್ದಾರಿಯನ್ನು ವಹಿಸಿದ ಶರೀಫ್, ಇದೀಗ ಬಾಯಿಲ ಹಾಗೂ ಸಜಿಪದ ಕಂಚಿನಡ್ಕ ಪದವು ಶಾಲೆಗಳಿಗೂ ಉಚಿತವಾಗಿ ತರಕಾರಿ ಪೂರೈಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಪ್ರಚಾರ ಬಯಸದೆ ಈ ಕಾರ್ಯ ನಡೆಸುತ್ತಿರುವ ಶರೀಫ್‌ಅವರ ಈ ಕಾರ್ಯಕ್ಕೆ ಶಾಲೆಯ ಹಳೆ ವಿದ್ಯಾರ್ಥಿ ಸಂಘ, ಸ್ಥಳೀಯರು ಹಾಗೂ ಗ್ರಾಹಕರು ಸಹಕಾರ ನೀಡುತ್ತಿದ್ದಾರೆ.

‘ನನ್ನ ಕುಟುಂಬದ ಸದಸ್ಯರೆಲ್ಲರೂ ಈ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ. 8 ವರ್ಷಗಳ ಹಿಂದೆ ನನ್ನ ಅಂಗಡಿಗೆ ತರಕಾರಿ ಖರೀದಿಸಲು ಬರುತ್ತಿದ್ದ ಮಜಿ ಶಾಲೆಯ ಶಿಕ್ಷಕಿಯ ಬೇಡಿಕೆಯ ಮೇರೆಗೆ ನಾನು ಉಚಿತವಾಗಿ ತರಕಾರಿ ಒದಗಿಸಲು ಮುಂದಾದೆ. ಆ ವೇಳೆ ಶಾಲೆಯಲ್ಲಿ 24 ಮಕ್ಕಳಿದ್ದರೆ, ಇದೀಗ 290ರಷ್ಟು ಮಕ್ಕಳಿದ್ದಾರೆ. ಈ ಶಾಲೆಗೆ ವಾರಕ್ಕೊಮ್ಮೆ ಆಲೂಗಡ್ಡೆ, ಸೌತೆ, ಚೀನಿಕಾಯಿ, ಬದನೆ ಮೊದಲಾದ ತರಕಾರಿ ನೀಡುತ್ತಿದ್ದು, ಉಳಿದ ದಿನಗಳಲ್ಲಿ ಟೊಮೊಟೊ, ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು ಮೊದಲಾದ ತರಕಾರಿಗಳನ್ನು ನೀಡುತ್ತಿದ್ದೇನೆ. ನಿರ್ದಿಷ್ಟ ಪ್ರಮಾಣ, ತೂಕದ ಬದಲಾಗಿ ಅಗತ್ಯತೆಯ ಮೇರೆಗೆ ಒದಗಿಸುತ್ತಿದ್ದೇನೆ’ ಎನ್ನುತ್ತಾರೆ ಶರೀಫ್.

ತರಕಾರಿ ವ್ಯಾಪಾರಿಯೇ ಆಗಿರುವ ಅಬ್ದುಲ್ ಹಮೀದ್ ಹಾಗೂ ಮೈಮುನಾ ದಂಪತಿಯ ಪುತ್ರರಾಗಿರುವ ಶರೀಫ್‌ರ ಇಬ್ಬರು ಹಿರಿಯ ಸಹೋದರರು ಕೂಡಾ ತರಕಾರಿ ವ್ಯಾಪಾರಿಗಳಾಗಿದ್ದು, ಇವರ ಈ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.

‘ಬಿಸಿಯೂಟಕ್ಕೆ ಅನುದಾನ ಸಿಗುತ್ತಿದೆ. ಅದರ ಜತೆ ಶರೀಫ್ ಒದಗಿಸುವ ತರಕಾರಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದ್ದೇವೆ. ಶರೀಫ್‌ರ ಕಾರ್ಯ ಮಾದರಿ. ಸರಕಾರಿ ಶಾಲೆಯ ಗುಣಮಟ್ಟ ಹೆಚ್ಚಳದ ಜೊತೆಗೆ ಮಕ್ಕಳ ಉತ್ತಮ ಆರೋಗ್ಯದ ಮೇಲೂ ಇದು ಪರಿಣಾಮಕಾರಿ’

-ಬಿ. ತಿಮ್ಮಪ್ಪ ನಾಯಕ್, ಪ್ರಭಾರ ಮುಖ್ಯ ಶಿಕ್ಷಕರು, ದ.ಕ. ಜಿಪಂ ಹಿ.ಪ್ರಾ. ಶಾಲೆ, ಕೆಲಿಂಜ

ಸರಕಾರಿ ಶಾಲೆಗಳಿಗೆ ಉಚಿತವಾಗಿ ತರಕಾರಿ ನೀಡುವುದರಿಂದ ನನಗೆ ಯಾವುದೇ ರೀತಿಯಲ್ಲಿ ನಷ್ಟವಾಗಿಲ್ಲ. ಬದಲಾಗಿ ಗ್ರಾಹಕರಿಂದ ಉತ್ತಮ ಸ್ಪಂದನ ದೊರಕಿದೆ. ಇದೀಗ ಸಮೀಪದ ಮೂರ್ನಾಲ್ಕು ಶಾಲೆಗಳಿಂದಲೂ ತರಕಾರಿಗೆ ಬೇಡಿಕೆ ಬಂದಿದೆ. ನನ್ನ ತಂದೆ, ಸಹೋದರರು ಹಾಗೂ ಬಾವ ಈ ಬಗ್ಗೆ ಚರ್ಚೆ ನಡೆಸಿದ್ದು, ಮುಂದೆ ನಾವು ಬೇರೆ ಕಡೆ ತರಕಾರಿ ಅಂಗಡಿ ತೆರೆದಲ್ಲಿ ಅಲ್ಲಿಂದ ಸಮೀಪದ ಸರಕಾರಿ ಶಾಲೆಗಳ ಬೇಡಿಕೆಯ ಮೇರೆಗೆ ಉಚಿತವಾಗಿ ತರಕಾರಿ ಪೂರೈಕೆಯ ಸಾಧ್ಯತೆಯ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ. ಈ ಮೂಲಕವಾದರೂ ನಮ್ಮ ಸರಕಾರಿ ಶಾಲೆಗಳು ಉಳಿಯಬೇಕು. ನಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕೆಂಬುದು ನಮ್ಮ ಆಶಯ.

-ಮುಹಮ್ಮದ್ ಶರೀಫ್, ತರಕಾರಿ ವ್ಯಾಪಾರಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News