ಜೆ.ಪಿ. ನಡ್ಡಾ ಹೇಳಿಕೆಯ ಒಳಮರ್ಮವೇನು?

ಬಿಜೆಪಿಯಲ್ಲಿ ನಡ್ಡಾ ಮೂರನೇ ನಂಬರಿನ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಈ ಹೇಳಿಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ಮೊದಲನೇ ನಂಬರಿನ ನಾಯಕನಂತೆ ಕೊಟ್ಟಿರುವುದಾಗಿದೆ. ಹಾಗೆ ಬಂದಿರುವ ಅವರ ಈ ಹೇಳಿಕೆಯಿಂದ ಆರೆಸ್ಸೆಸ್ ಕೆಲ ಸಂಗತಿಯನ್ನು ಮನವರಿಕೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಂತಿದೆ. ಅಲ್ಲದೆ, ಚುನಾವಣೆಯ ಸಂದರ್ಭದಲ್ಲಿ ನಡ್ಡಾ ಹೇಳಿಕೆ ಬೇರೆಯದೇ ಅರ್ಥ ಕೊಡುತ್ತಿದೆ.

Update: 2024-05-21 04:54 GMT
Editor : Thouheed | Byline : ವಿನಯ್ ಕೆ.

ಬಿಜೆಪಿ ಈಗ ತುಂಬಾ ಬೆಳೆದಿದೆ. ಮೊದಲಾದರೆ ಅರೆಸ್ಸೆಸ್ ಅಗತ್ಯವಿತ್ತು. ಈಗ ಬಿಜೆಪಿ ತನ್ನದೇ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ ನಡ್ಡಾ.

ಆರೆಸ್ಸೆಸ್ ಪಾತ್ರ ಬೇರೆಯೇ ಆಗಿದೆ. ಅದು ಸೈದ್ಧಾಂತಿಕವಾಗಿ ಕೆಲಸ ಮಾಡುತ್ತದೆ. ಬಿಜೆಪಿ ರಾಜಕೀಯವಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ.

ಆರೆಸ್ಸೆಸ್ ಅಗತ್ಯದ ಪ್ರಶ್ನೆಯೇ ಬರುವುದಿಲ್ಲ. ಪಕ್ಷದ ವ್ಯವಹಾರಗಳನ್ನು ನಾವೇ ನಿಭಾಯಿಸುವಷ್ಟು ಬೆಳೆದಿದ್ದೇವೆ ಎಂದಿದ್ದಾರೆ ನಡ್ಡಾ.

ವಾಜಪೇಯಿ ಕಾಲಕ್ಕೂ ಈಗಿನ ಸಂದರ್ಭಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿರುವ ನಡ್ಡಾ, ಬಿಜೆಪಿ ಮತ್ತು ಆರೆಸ್ಸೆಸ್ ಎರಡರ ಕೆಲಸಗಳೇ ಬೇರೆ ಬೇರೆ ಎನ್ನುವ ಮಾತಾಡಿದ್ದಾರೆ.

ಇದರೊಂದಿಗೆ ಬಿಜೆಪಿಗಾಗಿ ಬೀದಿಯಲ್ಲಿ ಕೆಲಸ ಮಾಡುತ್ತಿರುವ ಆರೆಸ್ಸೆಸ್‌ನ ಲಕ್ಷಾಂತರ ಕಾರ್ಯಕರ್ತರನ್ನೂ ಅವರು ನಿರಾಕರಿಸಿದಂತಾಗಿದೆ ಎಂಬುದು ಸ್ಪಷ್ಟ.

ನಡ್ಡಾ ಹೇಳಿಕೆ ಒಂದು ರೀತಿಯಲ್ಲಿ ಪಾಕಿಸ್ತಾನಕ್ಕೆ ಹೋಗಿ ಜಿನ್ನಾ ಅವರನ್ನು ಹೊಗಳಿದ್ದ ಅಡ್ವಾಣಿ ಹೇಳಿಕೆಯಂತಿದ್ದರೂ, ಆಗ ಅಡ್ವಾಣಿಗೆ ಎದುರಾಗಿದ್ದ ಸ್ಥಿತಿ ಈಗ ನಡ್ಡಾಗೆ ಎದುರಾಗಲಾಗಲಿಕ್ಕಿಲ್ಲ.

ಯಾಕೆಂದರೆ ಆಗ ಆರೆಸ್ಸೆಸ್ ಶಕ್ತಿಯುತವಾಗಿತ್ತು. ಈಗ ಮೋದಿ ಬಿಜೆಪಿಯೆದುರಲ್ಲಿ ಅದು ಆ ಹಿಂದಿನ ಶಕ್ತಿಯನ್ನು ಕಳೆದುಕೊಂಡಿದೆ ಮತ್ತು ಆದಷ್ಟೂ ಮೌನವಾಗಿರುವುದನ್ನು ಕೂಡ ಕಲಿತಿರುವ ಹಾಗಿದೆ.

ಬಿಜೆಪಿಯಲ್ಲಿ ನಡ್ಡಾ ಮೂರನೇ ನಂಬರಿನ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಈ ಹೇಳಿಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ಮೊದಲನೇ ನಂಬರಿನ ನಾಯಕನಂತೆ ಕೊಟ್ಟಿರುವುದಾಗಿದೆ.

ಹಾಗೆ ಬಂದಿರುವ ಅವರ ಈ ಹೇಳಿಕೆಯಿಂದ ಆರೆಸ್ಸೆಸ್ ಕೆಲ ಸಂಗತಿಯನ್ನು ಮನವರಿಕೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಂತಿದೆ.

ಅಲ್ಲದೆ, ಚುನಾವಣೆಯ ಸಂದರ್ಭದಲ್ಲಿ ನಡ್ಡಾ ಹೇಳಿಕೆ ಬೇರೆಯದೇ ಅರ್ಥ ಕೊಡುತ್ತಿದೆ.

ಆರೆಸ್ಸೆಸ್ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಯಾಗಿದೆ ಮತ್ತು ಬಿಜೆಪಿ ರಾಜಕೀಯವಾಗಿ ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಏನಿದ್ದರೂ ತನ್ನದೇ ಆಟ ಎಂಬುದನ್ನು ಆರೆಸ್ಸೆಸ್‌ಗೆ ಮನವರಿಕೆ ಮಾಡಿಕೊಟ್ಟ ಹಾಗಿದೆ.

ಆದರೆ ನಡ್ಡಾ ಈ ಹೇಳಿಕೆ ಆರೆಸ್ಸೆಸ್ ಪಾಲಿಗೆ ಸುಮ್ಮನೆ ಮರೆತುಬಿಡುವ ಹೇಳಿಕೆಯಾಗಿಯಂತೂ ಇರುವುದಿಲ್ಲ.

ಇದು ನಿಜವಾಗಿಯೂ ನಡ್ಡಾ ತಾವಾಗಿಯೇ ಹೇಳಿರುವ ಹೇಳಿಕೆಯೇ ಅಥವಾ ಮೋದಿ ಮಾತು ನಡ್ಡಾ ಬಾಯಲ್ಲಿ ಬಂದಿದೆಯೋ ಎಂಬ ಪ್ರಶ್ನೆಯೂ ಏಳುತ್ತದೆ.

ಇಲ್ಲಿ ಮತ್ತೊಂದು ವಿಚಾರ ಗಮನ ಸೆಳೆಯುತ್ತದೆ.

ಅದು ಉದ್ಧವ್ ಠಾಕ್ರೆ ಹೇಳಿಕೆ.

ತನ್ನ ಮಾತೃಸಂಸ್ಥೆಯಾದ ಆರೆಸ್ಸೆಸ್ ಅನ್ನೇ ಬ್ಯಾನ್ ಮಾಡಲು ಬಿಜೆಪಿ ಯೋಚಿಸುತ್ತಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇಲ್ಲಿಯವರೆಗೆ ಆರೆಸ್ಸೆಸ್‌ನ ಅಗತ್ಯವಿತ್ತು, ಆದರೆ ನಾವು ಈಗ ಸಮರ್ಥರಾಗಿದ್ದೇವೆ ಮತ್ತು ನಮಗೆ ಆರೆಸ್ಸೆಸ್ ಅಗತ್ಯವಿಲ್ಲ ಎಂದು ನಡ್ಡಾ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ಆರೆಸ್ಸೆಸ್ ಕಾರ್ಯಕರ್ತರಿಗೆ ದೊಡ್ಡ ಅಪಾಯ ಕಾದಿದೆ. ಯಾಕೆಂದರೆ ಬಿಜೆಪಿ ಆರೆಸ್ಸೆಸ್ ಅನ್ನೇ ನಿಷೇಧಿಸುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.

ಈ ಹಿಂದೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು ಎಂಬುದನ್ನೂ ಠಾಕ್ರೆ ನೆನಪಿಸಿದ್ದಾರೆ.

ಮೋದಿ ಸರಕಾರಕ್ಕಿಂತ ಮೊದಲು ಪತ್ರಿಕೆಗಳಲ್ಲಿ ಆರೆಸ್ಸೆಸ್ ಹೇಳಿಕೆಗಳಿಗೆ ಬಹಳ ಪ್ರಾಮುಖ್ಯತೆ ಇರುತ್ತಿತ್ತು.

ಆದರೆ 2014ರ ನಂತರ ಮೋಹನ್ ಭಾಗವತ್ ಥರದ ಸಂಘ ಪರಿವಾರದ ನಾಯಕರ ಹೇಳಿಕೆಗಳು ಪತ್ರಿಕೆಗಳ ಮೊದಲ ಪುಟದಲ್ಲಿ ಜಾಗ ಪಡೆಯುವುದು ಕಡಿಮೆಯಾಗಿದೆ.

ಈಗ ನಡ್ಡಾ ಹೇಳಿಕೆಯನ್ನು ಎದುರಿಸುವಾಗಲೂ ಆರೆಸ್ಸೆಸ್ ಗೆ ತನ್ನ ಸ್ಥಿತಿ ಅರ್ಥವಾಗದೇ ಇರಲಾರದು.

ಬಿಜೆಪಿ ಇಂದು ಆರೆಸ್ಸೆಸ್‌ನ ಬಿಜೆಪಿಯಾಗಿ ಉಳಿಯದೆ ಮೋದಿ ಬಿಜೆಪಿ ಯಾಗಿದೆ. ಜಗತ್ತಿನ ಅತಿದೊಡ್ಡ ಹಾಗೂ ಅತ್ಯಂತ ಶ್ರೀಮಂತ ಪಕ್ಷವಾಗಿದೆ.

ಮೋದಿ ಆಡಳಿತದ ಅವಧಿಯಲ್ಲಿ ಬಿಜೆಪಿಯ ಕಚೇರಿಗಳು ದೇಶದ ಸಾಕಷ್ಟು ಕಡೆಗಳಲ್ಲಿ ನಿರ್ಮಾಣವಾಗಿವೆ. ಯಾರ ಆಡಳಿತದಲ್ಲೂ ಇಷ್ಟೊಂದು ಕಚೇರಿಗಳ ನಿರ್ಮಾಣ ಆಗಿರಲಿಲ್ಲ.

ಮೋದಿ ಸರಕಾರದ ಅವಧಿಯಲ್ಲಿ ಆಗುತ್ತಿರುವುದು ಬಿಜೆಪಿ ಮತ್ತು ಆರೆಸ್ಸೆಸ್ ನೆಟ್‌ವರ್ಕ್ ವಿಸ್ತರಣೆ ಎಂಬ ಟಿಎಂಸಿ ರಾಜ್ಯಸಭಾ ಸದಸ್ಯ ಡೆರಿಕ್ ಓಬ್ರಿಯಾನ್ ವಾದವನ್ನು ಇಲ್ಲಿ ಗಮನಿಸಬೇಕು.

‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಬರೆದಿರುವ ಲೇಖನದಲ್ಲಿ ಅವರು, ಮೋದಿ ಸರಕಾರದ 10 ಮಂತ್ರಿಗಳಲ್ಲಿ 7 ಮಂದಿ ಸಂಘ ಪರಿವಾರದವರೇ ಆಗಿದ್ದಾರೆ.

10 ಗವರ್ನರ್‌ಗಳಲ್ಲಿ ನಾಲ್ವರು ಈ ಹಿಂದೆ ಸಂಘಕ್ಕಾಗಿ ದುಡಿದವರೇ ಆಗಿದ್ದಾರೆ.

ಬಿಜೆಪಿ ಆಡಳಿತವಿರುವ 12 ರಾಜ್ಯಗಳಲ್ಲಿ 8 ರಾಜ್ಯಗಳ ಸಿಎಂ ಮತ್ತು ಡಿಸಿಎಂ ಆಗಿರುವವರು ಆರೆಸ್ಸೆಸ್ ಸ್ವಯಂಸೇವಕರೇ ಆಗಿದ್ದಾರೆ ಎಂದು ಡೆರಿಕ್ ಬರೆದಿದ್ದಾರೆ.

ಬಹುಶಃ ಬಿಜೆಪಿ ಮತ್ತು ಆರೆಸ್ಸೆಸ್ ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬುದು ಸ್ಪಷ್ಟ ಮತ್ತು ಅವೆರಡೂ ಬೇರೆ ಬೇರೆ ಎಂದುಕೊಳ್ಳಲೂ ಆಗದು. ನಡ್ಡಾ ಹೇಳಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಬಂದಿರಬಹುದಾದ ಸಾಧ್ಯತೆಯೇ ಹೆಚ್ಚು.

2015ರಲ್ಲಿ ಮೋಹನ್ ಭಾಗವತ್ ಅಧ್ಯಕ್ಷತೆಯಲ್ಲಿ ನಡೆದ ಆರೆಸ್ಸೆಸ್ ಸಭೆಯಲ್ಲಿ ಮೋದಿ ಸರಕಾರದ ಮಂತ್ರಿಗಳೇ ಪಾಲ್ಗೊಂಡಿದ್ದರು.

ಮೋದಿ ಮತ್ತು ಮೋಹನ್ ಭಾಗವತ್ ಸೇರಿ 93 ನಾಯಕರು ಪಾಲ್ಗೊಂಡಿದ್ದ ಸಮನ್ವಯ ಸಮಿತಿ ಸಭೆ ಅದಾಗಿತ್ತು ಮತ್ತು 2014ರಲ್ಲಿ ಸರಕಾರ ರಚಿಸಿದ ಬಳಿಕ ಮೋದಿ ಪಾಲ್ಗೊಂಡಿದ್ದ ಅಂಥ ಮೊದಲ ಸಭೆ ಅದಾಗಿತ್ತು.

ಮೋದಿ ಸರಕಾರ ಆರೆಸ್ಸೆಸ್‌ಗೆ ಉತ್ತರದಾಯಿಯೇ? ಎಂದು ಆಗ ಕಾಂಗ್ರೆಸ್ ಪ್ರಶ್ನಿಸಿತ್ತು.

ಹಾಗಾದರೆ ಬಿಜೆಪಿ ಈಗ ಬಲಿಷ್ಠವಾಗಿದೆ ಎಂಬ ನಡ್ಡಾ ಹೇಳಿಕೆಯ ಅರ್ಥವೇನು? ಚುನಾವಣೆಯಲ್ಲಿ ಸಂಘದ ಸಹಾಯವಿಲ್ಲದೆಯೂ ತಾವು ಗೆಲ್ಲುತ್ತೇವೆ ಎಂದು ಅರ್ಥವೆ?

ಒಂದು ಅಂಶವಂತೂ ಸ್ಪಷ್ಟ. ಅಧಿಕಾರವಿಲ್ಲದೆ ಸಂಘ ಪರಿವಾರ ಕೂಡ ಇರಲಾರದು.

ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಹೋರಾಟ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಲೇ ಬಂದಿದ್ದಾರೆ.

ಆದರೆ ಬಿಜೆಪಿಯ ನಡುವೆ ಮಾತ್ರ ಅಧಿಕಾರದ ಲಡಾಯಿ ನಡೆದಂತಿದೆ. ಹಾಗಾಗಿಯೇ ನಡ್ಡಾ, ಸಂಘಕ್ಕೆ ಅದರ ಜಾಗವೆಲ್ಲಿ ಎಂದು ಹೇಳಿದ ಹಾಗೆ ಕಾಣಿಸುತ್ತದೆ.

ಸಂಘದ ಅಗತ್ಯ ಈಗ ಇಲ್ಲ, ಬಿಜೆಪಿ ಬೆಳೆದಿದೆ ಎಂದು 20 ವರ್ಷಗಳ ಹಿಂದೆ ಬಿಜೆಪಿಯ ಯಾವುದೇ ನಾಯಕನೂ ಹೇಳುವ ಸ್ಥಿತಿಯಲ್ಲಿರಲಿಲ್ಲ.

ಆದರೆ ಇಂದು ಅದು ಆರೆಸ್ಸೆಸ್ ಅನ್ನೇ ದೂರವಿಟ್ಟು ನಡೆಯಲು ತಯಾರಾಗಿಬಿಟ್ಟಿದೆಯೇ? ಆರೆಸ್ಸೆಸ್ ಕೆಲಸ ಬೇರೆ ತನ್ನ ಕೆಲಸವೇ ಬೇರೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸುತ್ತಿದೆಯೇ?

ಉತ್ತರ ಪ್ರದೇಶದಲ್ಲಿ ಚುನಾವಣಾ ಕೆಲಸದಿಂದ ಸಂಘ ಪರಿವಾರ ದೂರವಾಗಿದೆ ಎಂಬ ವರದಿಗಳಿವೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಲ್ಲಿ ಮೋದಿಯೊಬ್ಬರೇ ಮಿಂಚಿದ್ದರು. ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಇದ್ದರೂ ಮೋದಿ ಮಿಂಚಿದ ರೀತಿ ಬೇರೆ ಬಗೆಯಲ್ಲಿಯೇ ಇತ್ತು.

400ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದ ಬಿಜೆಪಿ ಮೂರು ಹಂತಗಳ ಮತದಾನ ಮುಗಿಯುವ ಹೊತ್ತಿಗೆ ಪರಿಸ್ಥಿತಿ ತನಗೆ ವಿರುದ್ಧವಾದಂತಿರುವುದನ್ನು ತಿಳಿದಿತ್ತು.

ಆರೆಸ್ಸೆಸ್ ಚುನಾವಣಾ ಕೆಲಸದಿಂದ ದೂರ ಇರುವುದಕ್ಕೂ ಇದಕ್ಕೂ ಏನಾದರೂ ಸಂಬಂಧ ಇದ್ದಿರಬಹುದೇ?

ಬಿಜೆಪಿಯನ್ನು ಅಧಿಕಾರಕ್ಕೆ ಏರಿಸುವುದಕ್ಕೆ ಅಥವಾ ಅದನ್ನು ಅಧಿಕಾರದಿಂದ ದೂರವಾಗಿಸುವುದಕ್ಕೆ ಆರೆಸ್ಸೆಸ್ ಕಾರಣವಾಗುವ ಸಾಧ್ಯತೆ ಇದೆಯೇ?

ಕಳೆದ ತಿಂಗಳು ಮೋಹನ್ ಭಾಗವತ್ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತ, ‘‘2025ರಲ್ಲಿ ಸಂಘದ ಶತಮಾನೋತ್ಸವವನ್ನು ಆಚರಿಸಿಕೊಳ್ಳುವ ಇರಾದೆ ಆರೆಸ್ಸೆಸ್ ಗೆ ಇಲ್ಲ’’ ಎಂದು ಹೇಳಿದ್ದರು.

ತನ್ನ ಸಾಧನೆಗಳ ಬಗ್ಗೆ ಎದೆ ತಟ್ಟಿ ಹೇಳಿಕೊಳ್ಳಬೇಕಾದ ಅಗತ್ಯವಿಲ್ಲ. ಕೆಲ ಸಾಧನೆಗಳ ಶ್ರೇಯಸ್ಸು ತನ್ನದೆಂದು ಹೇಳಿಕೊಳ್ಳಲು ಸಂಘ ಬಯಸುತ್ತಿಲ್ಲ ಎಂದು ಅವರು ಆ ವೇಳೆ ಹೇಳಿದ್ದರು.

ಭಾಗವತ್ ಮಾತಿನ ಉದ್ದೇಶ ಏನಿತ್ತು?

ಅದಾದ ಮೇಲೆ ಚುನಾವಣೆಯೂ ಶುರುವಾಗಿ, ಆರೆಸ್ಸೆಸ್ ಹೆಡ್ ಕ್ವಾರ್ಟರ್ ನಾಗಪುರವೂ ಸೇರಿದಂತೆ ಹಲವೆಡೆ ಮತದಾನ ಕಡಿಮೆಯಾಗಿತ್ತು.

ಮೋದಿ ಎಲ್ಲಿಯವರೆಗೆ ಧರ್ಮದ ವಿಚಾರ ತಂದರೆಂದರೆ, ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಅದು ಬೀಗ ಹಾಕಲಿದೆ ಎಂದರು, ಬುಲ್ಡೋಜರ್ ಹರಿಸಲಿದೆ ಎಂದರು.

ಆದರೆ ಆರೆಸ್ಸೆಸ್‌ಗೆ ಮಾತ್ರ ಜನಸಾಮಾನ್ಯರು ಸಂಕಷ್ಟದಲ್ಲಿರುವುದು, ಅವರು ಸಿಟ್ಟಾಗಿರುವುದು ಗಮನಕ್ಕೆ ಬಂದಿತ್ತು. ಅವರೆದುರು ನಿಂತು ಮತ ಕೇಳುವುದು ಕಷ್ಟ ಎಂಬುದು ಅದಕ್ಕೆ ಮನವರಿಕೆಯಾಗಿತ್ತು.

ಆದರೆ ಆರೆಸ್ಸೆಸ್ ಚುನಾವಣಾ ಪ್ರಚಾರದಿಂದ ದೂರವಿದ್ದರೂ ಗೆಲ್ಲುವ ವಿಶ್ವಾಸ ನಿಜವಾಗಿಯೂ ಬಿಜೆಪಿಗೆ ಇದೆಯೇ?

ಆರೆಸ್ಸೆಸ್ ಅಗತ್ಯ ಎಂದು ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂದೆಯಂಥವರು ಹೇಳುವಾಗ, ಅದರ ಅಗತ್ಯವಿಲ್ಲ ಎಂದು ಬಿಜೆಪಿಯ ನಡ್ಡಾ ಹೇಳಿದ್ಧಾರೆ. ನಾವು ಬಲಿಷ್ಠರಾಗಿದ್ದೇವೆ ಎಂದಿದ್ದಾರೆ ನಡ್ಡಾ.

ಹಿಂದುತ್ವ, ರಾಮಮಂದಿರದ ವಿಚಾರ ಮತ ತಂದುಕೊಡಲಾರದು ಎಂದು ಮನವರಿಕೆಯಾಗಿರುವ ಹೊತ್ತಿನಲ್ಲಿ ನಡ್ಡಾ ಬಾಯಿಂದ ಈ ಮಾತು ಹೇಳಿಸಲಾಯಿತೇ?

2014ರ ಚುನಾವಣೆ ಹಿಂದುತ್ವದ ವಿಚಾರದ ಮೇಲೆ ಇರಲಿಲ್ಲ. ಅಲ್ಲಿ ಭ್ರಷ್ಟಾಚಾರದ ವಿರುದ್ಧದ ಅಲೆ ಬಿಜೆಪಿಯನ್ನು ಗೆಲ್ಲಿಸಿತ್ತು. ಕ್ರಮೇಣ ಆರೆಸ್ಸೆಸ್ ಅನ್ನು ಪ್ರಮುಖ ತೀರ್ಮಾನಗಳ ಸಂದರ್ಭದಲ್ಲಿ ದೂರವಿಡುವ ಕೆಲಸವನ್ನು ಮೋದಿ ಬಿಜೆಪಿ ಮಾಡಿಕೊಂಡು ಬಂತು.

ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ ಮೊದಲಾದವರನ್ನು ಬದಲಿಸುವ ವಿಚಾರದಲ್ಲಿ ಅದು ಆರೆಸ್ಸೆಸ್ ಜೊತೆಗೆ ಸಮಾಲೋಚಿಸದೆ ನಿರ್ಧರಿಸಿತ್ತು.

ಹೀಗೆ ಅವೆರಡರ ನಡುವೆ ಬೆಳೆಯುತ್ತಾ ಬಂದ ಅಂತರ ಈಗ ನಡ್ಡಾ ಇಂಥದೊಂದು ಹೇಳಿಕೆ ಕೊಡುವಲ್ಲಿಯವರೆಗೂ ಮುಂದುವರಿದಿದೆ.

ಆರೆಸ್ಸೆಸ್ ಬಯಸಿದ್ದ ರಾಜನಾಥ್ ಸಿಂಗ್, ಗಡ್ಕರಿ ಇವರೆಲ್ಲರನ್ನೂ ಮೋದಿ ಟೀಂ ಬದಿಗೆ ಸರಿಸಿದೆ ಎಂಬುದು ವಾಸ್ತವ. ಈಗ ಅದು ಆರೆಸ್ಸೆಸ್ ಅಗತ್ಯದ ಪ್ರಶ್ನೆಯೇ ಬರುವುದಿಲ್ಲ ಎನ್ನುತ್ತಿದೆ. ಇದು ಎಲ್ಲಿಗೆ ಹೋಗಿ ಮುಟ್ಟಲಿದೆ?

ಶತಮಾನೋತ್ಸವ ಆಚರಿಸಲು ಬಯಸದ ಆರೆಸ್ಸೆಸ್, ಆ ಹೊತ್ತಲ್ಲಿ ಬಿಜೆಪಿ ಸರಕಾರ ಕೂಡ ಇರಬೇಕಾಗಿಲ್ಲ ಎಂದು ಒಳಗೊಳಗೇ ಬಯಸಿದೆಯೇ?

ಮತ್ತು ಅದರ ಅಂತಹ ಇರಾದೆ, ಈ ಚುನಾವಣೆಯ ಮೂಲಕ ನಿಜವಾಗಲಿದೆಯೆ? ಅಥವಾ ಇದೆಲ್ಲ ಬರೀ ವದಂತಿಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News