ಕೋಟ್ಯಂತರ ಸಣ್ಣ ಹೂಡಿಕೆದಾರರು ಹಣ ಕಳೆದು ಕೊಳ್ಳಲು ಯಾರು ಕಾರಣರು?

ಜೂನ್ 4ಕ್ಕೆ ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆಯಾಗಲಿದೆ ಎಂದಿದ್ದ ಮೋದಿಗೆ ಹಾಗಾಗುವುದಿಲ್ಲ ಎಂಬುದು ಮೊದಲೇ ಗೊತ್ತಿತ್ತು. ಆ ದಿನ ಸಿಕ್ಕಾಪಟ್ಟೆ ನಷ್ಟವಾಗಲಿದೆ ಎಂಬುದು ಅವರಿಗೆ ಸ್ಪಷ್ಟವಾಗಿಯೇ ಗೊತ್ತಿತ್ತು. ಹಾಗಿದ್ದೂ ಯಾರೋ ಲಾಭ ಮಾಡಿಕೊಳ್ಳುವುದಕ್ಕೋಸ್ಕರ ಜನಸಾಮಾನ್ಯರ ಸಾವಿರಾರು ಕೋಟಿ ರೂ.ಲೂಟಿಯಾಗಿದೆ. ಹಾಗಾದರೆ ಗೊತ್ತಿದ್ದೂ ಗೊತ್ತಿದ್ದೂ ಮೋದಿ ಮತ್ತು ಶಾ ಯಾಕೆ ಜನರಿಗೆ ತಪ್ಪು ಮಾಹಿತಿ ಕೊಟ್ಟಿದ್ದರು ಎಂಬುದು ರಾಹುಲ್ ಪ್ರಶ್ನೆ.

Update: 2024-06-09 06:42 GMT

ಪ್ರಧಾನಿ ಹುದ್ದೆಗೇರುವ ಮೊದಲೇ ಮೋದಿ ವಿರುದ್ಧ ಗಂಭೀರ ಅಕ್ರಮದ ಆರೋಪ ಕೇಳಿಬಂದಿದೆ. ಅದೂ ಮೂವತ್ತು ಲಕ್ಷ ಕೋಟಿ ರೂ. ಹಗರಣದ ಆರೋಪ.

ಕೋಟ್ಯಂತರ ಸಣ್ಣ ಹೂಡಿಕೆದಾರರ ಜೊತೆ ಚೆಲ್ಲಾಟವಾಡಿ ಯಾರೋ ಸಾವಿರಾರು ಕೋಟಿ ರೂಪಾಯಿ ಬಾಚಿದ್ದಾರೆ ಎಂದು ಆರೋಪಿಸಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ಜೂನ್ ಒಂದರಂದು ಸಂಜೆಯಿಂದ ಎಕ್ಸಿಟ್ ಪೋಲ್‌ಗಳು ಮೋದಿ ಸರಕಾರ ಮತ್ತೆ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂಬ ವಾತಾವರಣವನ್ನು ಸೃಷ್ಟಿಸಿದ್ದವು.

ಜೂನ್ 3ರಂದು ಷೇರು ಮಾರುಕಟ್ಟೆ ಏರಿಕೆ ಕಂಡಿತ್ತು.

ಜೂನ್ 4ರಂದು ನಿಜವಾದ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಷೇರು ಮಾರುಕಟ್ಟೆ ತೀವ್ರವಾಗಿ ಕುಸಿಯಿತು.

ಸಾಮಾನ್ಯ ಹೂಡಿಕೆದಾರರು ಅಂದು 30 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಸುದ್ದಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ, ಗೃಹಮಂತ್ರಿ ಹಾಗೂ ಹಣಕಾಸು ಮಂತ್ರಿ ಹೇಳಿದ್ದಾರೆ. ಅಂದು ಜನಸಾಮಾನ್ಯರು ಹಣ ಕಳೆದುಕೊಂಡಾಗ ಲಾಭ ಮಾಡಿಕೊಂಡವರು ಯಾರು ಎಂಬ ಬಗ್ಗೆ ತನಿಖೆಯಾಗಬೇಕು ಎಂಬುದು ರಾಹುಲ್ ಒತ್ತಾಯ.

ಯಾರಿಗೆ ಲಾಭ ಮಾಡಿಕೊಡುವುದಕ್ಕಾಗಿ ಹೀಗೆ ಸೆನ್ಸೆಕ್ಸ್ ಏರಲಿದೆ ಎಂಬ ಭ್ರಮೆ ಸೃಷ್ಟಿಸುವ ಕೆಲಸ ನಡೆಯಿತು ಎಂಬುದು ರಾಹುಲ್ ಎತ್ತಿರುವ ಗಂಭೀರ ಪ್ರಶ್ನೆ.

ಜನಸಾಮಾನ್ಯರೆಲ್ಲ ಹೀಗೆ ಹಣ ಕಳೆದುಕೊಂಡಾಗ ಮತ್ತೊಂದೆಡೆ ಯಾರೋ ಕೆಲವರಿಗೆ ಸಾವಿರಾರು ಕೋಟಿ ರೂ.ಗಳ ಲಾಭವಾಗಿದೆ. ಹಾಗಾದರೆ ಲಾಭ ಮಾಡಿಕೊಂಡವರು ಯಾರು? ಇದರ ತನಿಖೆಯಾಗಬೇಕು ಎಂಬ ಒತ್ತಾಯ ರಾಹುಲ್ ಅವರದಾಗಿದೆ.

ಬಿಜೆಪಿಯ ಸಣ್ಣಪುಟ್ಟ ನಾಯಕರೆಲ್ಲ ಸೇರಿಕೊಂಡಿರುವ ಈ ಹಗರಣದಲ್ಲಿ ಮೋದಿ ಮತ್ತು ಶಾ ಕೂಡ ಷಾಮೀಲಾಗಿದ್ದಾರೆಯೇ ಎಂಬುದು ಕೂಡ ಗೊತ್ತಾಗಬೇಕಿದೆ ಎಂದು ರಾಹುಲ್ ಹೇಳಿದ್ದಾರೆ. ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ರಾಹುಲ್ ಒತ್ತಾಯಿಸಿದ್ದಾರೆ.

ಮೋದಿ, ಶಾ ಮತ್ತು ನಿರ್ಮಲಾ ಸೀತಾರಾಮನ್ ಹೇಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಪ್ರಚೋದಿಸಿದರು ಎಂಬುದನ್ನು ರಾಹುಲ್ ಸುದ್ದಿಗೋಷ್ಠಿಯಲ್ಲಿ ಕ್ರೊನಾಲಜಿ ಸಹಿತ ವಿವರಿಸಿದ್ದಾರೆ.

ಅದರಂತೆ, 2024ರ ಮೇ 13ರಂದು ಅಮಿತ್ ಶಾ ಜೂನ್ 4ರೊಳಗೆ ಷೇರು ಖರೀದಿಸುವಂತೆ ಜನತೆಗೆ ನೇರವಾಗಿಯೇ ಹೇಳಿಬಿಟ್ಟಿದ್ದರು.

2024ರ ಮೇ 19ರಂದು ಮೋದಿ ಹೇಳಿದ್ದು ಷೇರು ಮಾರುಕಟ್ಟೆಯಲ್ಲಿ ಜೂನ್ 4ರಂದು ದಾಖಲೆಯ ಏರಿಕೆ ಆಗಲಿದೆ ಎಂದು.

ಜೂನ್ 1ರಂದು ಕಡೇ ಹಂತದ ಮತದಾನದ ಬಳಿಕ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾದವು. ಅವು ಸುಳ್ಳುಗಳನ್ನೇ ಹೇಳಿದ್ದವು.

ಬಿಜೆಪಿಯ ಆಂತರಿಕ ಸಮೀಕ್ಷೆಯೇ ಅದು 220 ಸೀಟು ಗೆಲ್ಲಬಹುದು ಎಂದಿತ್ತು. ಆ ಮಾಹಿತಿ ಬಿಜೆಪಿ ನಾಯಕರ ಬಳಿ ಇತ್ತು. ಇಂಟೆಲಿಜೆನ್ಸ್ ವರದಿಗಳೂ ಅಷ್ಟೇ ನಂಬರ್ ಬರುವುದರ ಬಗ್ಗೆ ಬಿಜೆಪಿ ಸರಕಾರಕ್ಕೆ ಹೇಳಿದ್ದವು.

ಎಕ್ಸಿಟ್ ಪೋಲ್ ಬಂದ ಬೆನ್ನಿಗೇ ಜೂನ್ 3ರಂದು ಷೇರು ಮಾರುಕಟ್ಟೆ ಸಾರ್ವತ್ರಿಕ ಏರಿಕೆ ಕಂಡಿತು. ಆದರೆ ಜೂನ್ 4ರಂದು ಷೇರುಗಳು ಪ್ರಪಾತಕ್ಕೆ ಕುಸಿದಿದ್ದವು. ಸಾವಿರಾರು ಕೋಟಿ ರೂ. ಹೂಡಿಕೆಯಾಗಿತ್ತು. ಆದರೆ 30 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿತು.

ಆದರೆ ನಷ್ಟ ಆದದ್ದು ಯಾರಿಗೆ? ಕೋಟ್ಯಂತರ ಜನ ಚಿಲ್ಲರೆ ಹೂಡಿಕೆದಾರರಿಗೆ.

ಇದು ದೇಶದ ಷೇರು ಮಾರುಕಟ್ಟೆಯ ಅತಿ ದೊಡ್ಡ ಹಗರಣವಾಗಿದೆ. ಇದರ ಬಗ್ಗೆ ಕೇಳಲೇಬೇಕಾಗಿದೆ ಎಂಬುದು ರಾಹುಲ್ ಪ್ರತಿಪಾದನೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ದೇಶದ ಜನರಿಗೆ ಪ್ರಧಾನಿ ಮತ್ತು ಗೃಹಮಂತ್ರಿ ಏಕೆ ಸಲಹೆ ಕೊಟ್ಟರು?

ಸುಳ್ಳು ಮತಗಟ್ಟೆ ಸಮೀಕ್ಷೆಯ ಹಿಂದಿರುವ ವಿದೇಶೀ ಹೂಡಿಕೆದಾರರ ಜೊತೆಗೆ ಬಿಜೆಪಿ ನಾಯಕರಿಗೆ ಸಂಬಂಧವಿದೆಯೆ? ಇದ್ದರೆ ಯಾವ ಥರದ ಸಂಬಂಧ?

ಇದರ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕು, ದೇಶದ ಜನರಿಗೆ ಸತ್ಯ ತಿಳಿಯಬೇಕು ಎಂಬುದು ರಾಹುಲ್ ಆಗ್ರಹ.

ಬಹುಮತ ಬರುವುದಿಲ್ಲವೆಂಬುದು ಮೋದಿಗೆ ಗೊತ್ತಿತ್ತೆ? ಗೊತ್ತಿದ್ದೂ ಬಹುಮತದ ನಾಟಕ ಆಡಲಾಯಿತೇ?

ಇದೆಲ್ಲದರ ಹಿನ್ನೆಲೆಯಲ್ಲಿ ನಡೆದ ಈ ಹಗರಣದಲ್ಲಿ ಲಾಭ ಬಾಚಿಕೊಂಡವರು ಯಾರು?

ಚಿಲ್ಲರೆ ಹೂಡಿಕೆದಾದರರೆಲ್ಲರೂ ನಂಬಿದ್ದು ಮೋದಿ ಮಾತನ್ನು. ಜೂನ್ 4ಕ್ಕೆ ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆಯಾಗಲಿದೆ ಎಂದಿದ್ದ ಮೋದಿಗೆ ಹಾಗಾಗುವುದಿಲ್ಲ ಎಂಬುದು ಮೊದಲೇ ಗೊತ್ತಿತ್ತು. ಆ ದಿನ ಸಿಕ್ಕಾಪಟ್ಟೆ ನಷ್ಟವಾಗಲಿದೆ ಎಂಬುದು ಅವರಿಗೆ ಸ್ಪಷ್ಟವಾಗಿಯೇ ಗೊತ್ತಿತ್ತು. ಹಾಗಿದ್ದೂ ಯಾರೋ ಲಾಭ ಮಾಡಿಕೊಳ್ಳುವುದಕ್ಕೋಸ್ಕರ ಜನಸಾಮಾನ್ಯರ ಸಾವಿರಾರು ಕೋಟಿ ರೂ. ಲೂಟಿಯಾಗಿದೆ. ಹಾಗಾದರೆ ಗೊತ್ತಿದ್ದೂ ಗೊತ್ತಿದ್ದೂ ಮೋದಿ ಮತ್ತು ಶಾ ಯಾಕೆ ಜನರಿಗೆ ತಪ್ಪು ಮಾಹಿತಿ ಕೊಟ್ಟಿದ್ದರು ಎಂಬುದು ರಾಹುಲ್ ಪ್ರಶ್ನೆ.

ಚುನಾವಣೆ ಪ್ರಚಾರದಲ್ಲಿ ಬಿಝಿಯಾಗಿದ್ದ ಮೋದಿಗೆ,

ಮಂಗಲಸೂತ್ರ, ಮಟನ್, ಮುಸ್ಲಿಮ್ ಎಂದೆಲ್ಲ ದ್ವೇಷ ಹರಡುವುದರಲ್ಲಿ ನಿರತವಾಗಿದ್ದ ಮೋದಿಗೆ, ಹೇಗೆ ಜೂನ್ 4ರಂದು ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆ ಆಗುತ್ತದೆ ಎಂಬ ಮಾಹಿತಿ ಸಿಕ್ಕಿತ್ತು? ಯಾವ ಆಧಾರದ ಮೇಲೆ ಅವರು ಹಾಗೆ ಹೇಳಿದ್ದರು?

ಜನರು ತಾವಾಗಿಯೇ ಹಣ ಹಾಕಿ ಕಳೆದುಕೊಂಡಿದ್ದರೆ ಆ ಮಾತು ಬೇರೆಯಾಗುತ್ತಿತ್ತು. ಆದರೆ ಮೋದಿ ಮತ್ತು ಶಾ ಮಾತು ಕೇಳಿಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿ ಕಳೆದುಕೊಂಡಿದ್ದಾರೆ ಎಂದಾದರೆ ಅದರ ಬಗ್ಗೆ ತನಿಖೆಯಾಗುವುದು ಅಗತ್ಯ.

ಇಲ್ಲಿಯವರೆಗೆ ಧರ್ಮದ ಹೆಸರಲ್ಲಿ ಮರುಳಾಗುತ್ತಿದ್ದವರು ಈಗ ದುಡ್ಡಿನ ಹೆಸರಲ್ಲೂ ದೊಡ್ಡ ನಾಮ ಹಾಕಿಸಿಕೊಂಡ ಹಾಗಾಗಿದೆಯಲ್ಲವೇ?

ಚುನಾವಣೆಯುದ್ದಕ್ಕೂ ಪ್ರಧಾನಿ ಉದ್ಯೋಗಗಳ ವಿಚಾರವಾಗಿ ಮಾತೆತ್ತಿರಲಿಲ್ಲ. ಜನರ ಆದಾಯದ ಬಗ್ಗೆ ಮಾತಾಡಿರಲಿಲ್ಲ.

ಆದರೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದರ ಬಗ್ಗೆ ಮಾತಾಡಿದರು. ಮೋದಿ ಜೊತೆಗೆ ಗೃಹಮಂತ್ರಿ ಅಮಿತ್ ಶಾ ಕೂಡ ಅದನ್ನೇ ಮಾಡಿದರು. ಹಾಗಾದರೆ ಈ ಆಟದಲ್ಲಿ ಇರುವವರು ಯಾರ್ಯಾರು?

ನಿವೃತ್ತ ಐಎಎಸ್ ಅಧಿಕಾರಿ ಇಎಎಸ್ ಶರ್ಮಾ ಹಣಕಾಸು ಸಚಿವೆಗೆ ಪತ್ರ ಬರೆದಿದ್ದು,

ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವಂತೆ ಜನರಿಗೆ ಮೋದಿ ಹೇಳಿದ್ದು ಆಪತ್ತು ತರುವ ವಿಚಾರ ಎಂದು ಎಚ್ಚರಿಸಿದ್ದರು.

ಇಂಥದೊಂದು ಮಾಹಿತಿ ಕೊಟ್ಟವರು ಯಾರು?

ಅವರ ಪತ್ತೆ ಮಾಡಿ ಕೇಸು ದಾಖಲಿಸಬೇಕು ಎಂದೂ ಶರ್ಮಾ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕಂಪೆನಿಯೊಂದರ ಷೇರು ಏರಿಕೆಯಾಗುತ್ತದೆಯೊ ಕುಸಿಯುತ್ತದೆಯೊ ಎಂಬುದು ಆ ಕಂಪೆನಿಯ ಯೋಗ್ಯತೆಗೆ ಸಂಬಂಧಿಸಿದ್ದಾಗಿದೆ. ಅದು ಮೋದಿ ಕಾರಣಕ್ಕಾಗಿ ಏರುವುದಿಲ್ಲ ಮತ್ತು ಮೋದಿ ಕಾರಣಕ್ಕಾಗಿ ಏರಲೂಬಾರದು. ಹೀಗಿರುವಾಗ ಜೂನ್ 4ರಂದು ಭಾರೀ ಏರಿಕೆಯ ಸುಳ್ಳನ್ನು ಹಬ್ಬಿಸಿ ಜನರು ಹಣ ಕಳೆದುಕೊಳ್ಳುವ ಹಾಗೆ ಆಗಿದ್ದರೆ ಹೊಣೆ ಹೊರಬೇಕಾದವರು ಯಾರು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿ.ಎನ್. ಉಮೇಶ್

contributor

Similar News