ಚಂದಿರನ ಅಂಗಳದಲ್ಲಿ ಗಂಧಕ ದೃಢಪಡಿಸಿದ ಪ್ರಜ್ಞಾನ್; ಜಲಜನಕ ಶೋಧ
ಬೆಂಗಳೂರು: ಚಂದ್ರಯಾನ ಮಿಷನ್-3ಯ ಪ್ರಜ್ಞಾನ್, ಚಂದ್ರನ ಧ್ರುವ ಭಾಗದಲ್ಲಿ ನಡೆಸಿದ "ಮೊಟ್ಟಮೊದಲ ಮೂಲಸ್ಥಾನ" ಮಾಪನದಲ್ಲಿ, ಚಂದ್ರನ ಮೇಲ್ಮೈಯಲ್ಲಿ ಗಂಧಕದ ಅಂಶ ಇರುವುದು ದೃಢಪಟ್ಟಿದೆ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿಕೆ ನೀಡಿದೆ.
ಚಂದ್ರಯಾನ-3 ಮಿಷನ್ನ ರೋವರ್ ಪ್ರಜ್ಞಾನ್ನಲ್ಲಿರುವ ಲೇಸರ್ ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್ಐಬಿಎಸ್) ನಡೆಸಿದ ಅಧ್ಯಯನದ ವೇಳೆ ದಕ್ಷಿಣ ಧ್ರುವದಲ್ಲಿ ಗಂಧಕ ಇರುವ ಅಂಶ ದೃಢಪಟ್ಟಿದೆ. ಎಲ್ಐಬಿಎಸ್ ಎನ್ನುವುದು, ಯಾವುದೇ ವಸ್ತುಗಳ ಮೇಲೆ ತೀವ್ರತರ ಲೇಸರ್ ಹಾಯಿಸಿ ಅದರ ಸಂಯೋಜನೆಯನ್ನು ವಿಶ್ಲೇಷಿಸುವ ವೈಜ್ಞಾನಿಕ ತಂತ್ರವಾಗಿದೆ.
ಅತ್ಯಧಿಕ ಶಕ್ತಿಯ ಲೇಸರ್ ಕಿರಣಗಳನ್ನು ಶಿಲೆ ಅಥವಾ ಮಣ್ಣು ಹೀಗೆ ಮೇಲ್ಮೈ ವಸ್ತುವಿನ ಮೇಲೆ ಹರಿಸಲಾಗುತ್ತದೆ. ಈ ಲೇಸರ್ ಪಲ್ಸ್ ತೀವ್ರ ಉಷ್ಣ ಹಾಗೂ ಸ್ಥಳೀಯವಾಗಿ ಪ್ಲಾಸ್ಮಾವನ್ನು ಉತ್ಪಾದಿಸುತ್ತದೆ ಎಂದು ಇಸ್ರೋ ವಿವರ ನೀಡಿದೆ.
ಭೌಗೋಳಿಕ ಪ್ರಾತಿನಿಧಿಕ ಅಂಶಗಳ ಪ್ರಾಥಮಿಕ ವಿಶ್ಲೇಷಣೆಯಿಂದ ತಿಳಿದು ಬಂದಿರುವಂತೆ ಚಂದ್ರನಲ್ಲಿ ಅಲ್ಯೂಮೀನಿಯಂ, ಗಂಧಕ, ಕ್ಯಾಲ್ಷಿಯಂ, ಕಬ್ಬಿಣ, ಕ್ರೋಮಿಯಂ ಮತ್ತು ಟಿಟಾನಿಯಂ ಇರುವುದು ದೃಢಪಟ್ಟಿದೆ ಎಂದು ಇಸ್ರೊ ಪ್ರಕಟಿಸಿದೆ. ಇದರ ಜತೆಗೆ ಮ್ಯಾಂಗನೀಸ್, ಸಿಲಿಕಾನ್, ಆಮ್ಲನಕರ ಇರುವುದು ಕೂಡಾ ಪತ್ತೆಯಾಗಿದೆ. ಜಲಜನಕ ಇದೆಯೇ ಎಂದು ಪತ್ತೆ ಮಾಡುವ ಕಾರ್ಯ ಮುಂದುವರಿದಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ.