ರಾಯಚೂರು | ಸಚಿವ ಝಮೀರ್ ಅಹ್ಮದ್ ಹೇಳಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ
ರಾಯಚೂರು : ಸಚಿವ ಝಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನೀಡಿದ್ದ ʼಕರಿಯʼ ಪದ ಬಳಕೆಯನ್ನು ಖಂಡಿಸಿ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಚಿವ ಝಮೀರ್ ಅಹ್ಮದ್, ಕುಮಾರಸ್ವಾಮಿ ಅವರನ್ನು ʼಕರಿಯʼ ಎಂದು ಹೇಳುವ ಮೂಲಕ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ʼಕರಿಯ ಐ ಲವ್ ಯುʼ ಎಂಬ ಬಿತ್ತಪತ್ರ ಪ್ರದರ್ಶಿಸಿ ಝಮೀರ್ ಅಹ್ಮದ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಅಸಮಾಧಾನ ಹೊರಹಾಕಿದರು.
ಸಿಎಂ ಸಿದ್ದರಾಮಯ್ಯ ಅವರು ಝಮೀರ್ ಅಹ್ಮದ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಚನ್ನಪಟ್ಟಣ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎ.ವಿರುಪಾಕ್ಷಿ, ಕಾರ್ಯಾಧ್ಯಕ್ಷ ಶಿವಶಂಕರ್ ವಕೀಲ್, ಲಕ್ಷ್ಮಿಪತಿ ಗಾಣಧಾಳ, ನರಸಿಂಹ ನಾಯಕ, ಜಂಬುನಾಥ ಯಾದವ್, ನಾಗರಾಜ ಗೌಡ ಮತ್ತಿತರರು ಉಪಸ್ಥಿತರಿದ್ದರು.