ಸಿದ್ದರಾಮಯ್ಯ-ಕುಮಾರಸ್ವಾಮಿ ಸ್ಥಾನದ ಘನತೆಯನ್ನು ಮರೆಯದಿರಲಿ

Update: 2024-08-23 05:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಆರೋಪ-ಪ್ರತ್ಯಾರೋಪಗಳು ಇದೀಗ ಕುಮಾರಸ್ವಾಮಿ- ಸಿದ್ದರಾಮಯ್ಯ ನಡುವಿನ ವೈಯಕ್ತಿಕ ಜಗಳದ ಮಟ್ಟಕ್ಕೆ ಬಂದು ನಿಂತಿದೆ. ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ಮೇಲೆ ವಿರೋಧ ಪಕ್ಷಗಳು ಮುಗಿ ಬೀಳುತ್ತಿದ್ದಂತೆಯೇ, ಬಿಜೆಪಿ ನಾಯಕರ ಹಳೆಯ ಹಗರಣಗಳು ಜೀವ ಪಡೆದಿವೆ. ಕುಮಾರಸ್ವಾಮಿ ಸಹಿತ ಬಿಜೆಪಿಯ ಹಲವು ನಾಯಕರ ಹಗರಣಗಳ ವಿಚಾರಣೆ ನಡೆಸಲು ರಾಜ್ಯಪಾಲರು ಅನುಮತಿ ನೀಡಬೇಕು ಎಂದು ಈಗಾಗಲೇ ಸಂಪುಟ ಸಭೆ ಸಲಹೆ ನೀಡಿದೆ. ಮುಡಾ ಹಗರಣಕ್ಕೆ ಸಂಬಂಧಿಸಿ ಯಾರೋ ಸಲ್ಲಿಸಿದ ದೂರನ್ನು ಮುಂದಿಟ್ಟು ಮುಖ್ಯಮಂತ್ರಿಯನ್ನು ವಿಚಾರಣೆ ನಡೆಸಲು ರಾಜ್ಯಪಾಲರು ಅನುಮತಿ ನೀಡಬಹುದಾದರೆ, ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಸಿಟ್ ತಾನು ನಡೆಸಿದ ತನಿಖೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರು ಯಾಕೆ ಅನುಮತಿ ನೀಡಬಾರದು ಎನ್ನುವ ಪ್ರಶ್ನೆಗೆ ಮಹತ್ವ ಬಂದಿದೆ. ಭ್ರಷ್ಟಾಚಾರದ ಬಗ್ಗೆ ರಾಜ್ಯಪಾಲರಿಗೆ ಕಾಳಜಿಯಿರುವುದು ನಿಜವೇ ಆಗಿದ್ದರೆ, ಕುಮಾರಸ್ವಾಮಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡಲು ರಾಜ್ಯಪಾಲರ ಮುಂದಿರುವ ಅಡ್ಡಿಯೇನು ಎನ್ನುವುದು ಅವರು ಸ್ಪಷ್ಟಪಡಿಸಬೇಕಾಗುತ್ತದೆ. ಒಂದು ವೇಳೆ, ವಿರೋಧ ಪಕ್ಷಗಳ ನಾಯಕರ ವಿಚಾರಣೆಗೂ ಅನುಮತಿ ನೀಡಿದ್ದೇ ಆದರೆ, ರಾಜ್ಯಪಾಲರು ಬಹುದೊಡ್ಡ ಆರೋಪವೊಂದರಿಂದ ಪಾರಾಗುತ್ತಾರೆ. ಸಿದ್ದರಾಮಯ್ಯ ಅವರ ವಿಚಾರಣೆಗೆ ನೀಡಿದ ಅನುಮತಿ ಆ ಮೂಲಕ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತದೆ. ಎಲ್ಲಿಯವರೆಗೆ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ಹಗರಣಗಳ ವಿಚಾರಣೆಗೆ ಅನುಮತಿ ನೀಡುವುದಿಲ್ಲವೋ ಅಲ್ಲಿಯವರೆಗೆ ಆಳುವ ಪಕ್ಷದ ಆರೋಪಗಳ ಬಾಣಗಳಿಗೆ ಅವರು ಎರವಾಗುತ್ತಲೇ ಇರಬೇಕಾಗುತ್ತದೆ. ಅಷ್ಟೇ ಅಲ್ಲ, ಅದು ಪರೋಕ್ಷವಾಗಿ ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರ ಮೇಲೆ ಅನುಕಂಪದ ಅಲೆಯನ್ನು ಹುಟ್ಟಿಸುತ್ತದೆ.

ಸದ್ಯಕ್ಕೆ ಕುಮಾರಸ್ವಾಮಿಯವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದೊಂದಿಗಿರುವ ಭಿನ್ನಾಭಿಪ್ರಾಯಕ್ಕೆ ಮುಖ್ಯ ಕಾರಣ ಸಿದ್ದರಾಮಯ್ಯ. ಅವರು ಶತಾಯಗತಾಯ ದ್ವೇಷಿಸುತ್ತಾ ಬಂದಿರುವುದು ಕಾಂಗ್ರೆಸ್‌ನೊಳಗಿರುವ ಸಿದ್ದರಾಮಯ್ಯ ಮತ್ತು ಅವರ ತಂಡವನ್ನು ಮಾತ್ರ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದರೊಂದಿಗೆ ಕಾಂಗ್ರೆಸ್‌ನೊಳಗಿರುವ ಅವರ ಬಹುತೇಕ ಭಿನ್ನಾಭಿಪ್ರಾಯ ಮುಗಿದು ಬಿಡುತ್ತದೆ. ಜೆಡಿಎಸ್‌ನಲ್ಲಿದ್ದಾಗಲೇ ಸಿದ್ದರಾಮಯ್ಯ ಅವರು ಗೌಡರ ಕುಟುಂಬ ರಾಜಕಾರಣಕ್ಕೆ ಬಹುದೊಡ್ಡ ತಡೆಯಾಗಿದ್ದರು. ದೇವೇಗೌಡರ ಬಳಿಕ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಹೆಸರು ಮುನ್ನೆಲೆಯಲ್ಲಿತ್ತು. ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಅಡ್ಡಿಯಾಗಿದ್ದರು. ಈ ಕಾರಣದಿಂದ ಅಂತಿಮವಾಗಿ ಜೆಡಿಎಸ್ ಪಕ್ಷವನ್ನು ಒಡೆದು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈ ಜೋಡಿಸಿ ರಾಜ್ಯದ ಮುಖ್ಯಮಂತ್ರಿಯಾಗಬೇಕಾಯಿತು. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಒಂಟಿಯಾಗಬೇಕಾಯಿತು ಮಾತ್ರವಲ್ಲ, ಜೆಡಿಎಸ್‌ನ್ನು ತೊರೆಯುವುದು ಅನಿವಾರ್ಯವಾಯಿತು. ದೇವೇಗೌಡರ ಕುಟುಂಬ ತನ್ನನ್ನು ಬಳಸಿ ಎಸೆಯಿತು ಎನ್ನುವುದು ಸಿದ್ದರಾಮಯ್ಯರ ನೋವಾದರೆ, ಜೆಡಿಎಸ್‌ನಿಂದ ಸಕಲ ಪ್ರಯೋಜನಗಳನ್ನು ಪಡೆದು, ಪಕ್ಷಕ್ಕೆ ಮತ್ತು ದೇವೇಗೌಡರ ಕುಟುಂಬಕ್ಕೆ ದ್ರೋಹ ಬಗೆದರು ಎನ್ನುವುದು ಕುಮಾರಸ್ವಾಮಿ ಆರೋಪ. ಜೆಡಿಎಸ್ ತೊರೆದ ಬಳಿಕ ಆರಂಭದಲ್ಲಿ ದೇವೇಗೌಡ ಕುಟುಂಬವನ್ನೇ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ರಾಜಕೀಯ ನಡೆಸತೊಡಗಿದ್ದರು. ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿಗೂ ಬಹುದೊಡ್ಡ ತೊಡರಾಗಿ ಕಾಡಿದ್ದು ಸಿದ್ದರಾಮಯ್ಯ ಅವರೇ. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದರಲ್ಲಿ ಸಿದ್ದರಾಮಯ್ಯ ಕೈವಾಡವಿತ್ತು ಎನ್ನುವ ಆರೋಪಗಳನ್ನು ಹಲವರು ಮಾಡಿದ್ದಾರೆ. ಇದೀಗ ಸರಕಾರದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳೂ ಸಿದ್ದರಾಮಯ್ಯ-ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯಾಗಿ ಬದಲಾಗುತ್ತಿರುವುದು ರಾಜಕೀಯ ವಲಯಕ್ಕೆ ಅನಿರೀಕ್ಷಿತವೇನು ಅಲ್ಲ.

ಸಿದ್ದರಾಮಯ್ಯ ವಿರುದ್ಧದ ಆರೋಪ ಕುಮಾರಸ್ವಾಮಿ-ಸಿದ್ದರಾಮಯ್ಯ ಅವರ ವೈಯಕ್ತಿಕ ಜಗಳದ ಮಟ್ಟಕ್ಕೆ ಬಂದು ನಿಂತಿದೆ. ‘ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು’ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದರೆ, ಪ್ರತಿಯಾಗಿ ‘‘ಕುಮಾರಸ್ವಾಮಿಯನ್ನು ಬಂಧಿಸಲು ಸಿದ್ದರಾಮಯ್ಯ ಅಗತ್ಯವಿಲ್ಲ. ಓರ್ವ ಕಾನ್‌ಸ್ಟೇಬಲ್ ಸಾಕು’ ಎಂದು ಸಿದ್ದರಾಮಯ್ಯ ಪ್ರತಿಯಾಗಿ ಸವಾಲೆಸೆದಿದ್ದಾರೆ. ಒಬ್ಬ ಮುಖ್ಯಮಂತ್ರಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ನಡುವಿನ ಆರೋಪ, ಪ್ರತ್ಯಾರೋಪಗಳು ಬೀದಿ ಜಗಳದ ಮಟ್ಟಕ್ಕಿಳಿದಿರುವುದು ರಾಜ್ಯಕ್ಕೆ ಖಂಡಿತ ಭೂಷಣವಲ್ಲ. ಈ ದೇಶದಲ್ಲಿ ಯಾರನ್ನೇ ಆಗಲಿ ಬಂಧಿಸುವುದು, ಶಿಕ್ಷಿಸುವುದು ಈ ದೇಶದ ಕಾನೂನೇ ಹೊರತು ಯಾವುದೋ ಒಬ್ಬ ಮುಖ್ಯಮಂತ್ರಿ ಅಥವಾ ಕಾನ್‌ಸ್ಟೇಬಲ್ ಅಲ್ಲ. ಕುಮಾರಸ್ವಾಮಿಯೇ ಆಗಲಿ, ಸಿದ್ದರಾಮಯ್ಯ ಅವರೇ ಆಗಲಿ ಅಕ್ರಮಗಳನ್ನು ಎಸಗಿದ್ದು ಸಾಬೀತಾದರೆ ಅವರು ಬಂಧನಕ್ಕೊಳಗಾಗಲೇ ಬೇಕು. ಈ ದೇಶದ ಕಾನೂನಿಗೆ, ಸಂವಿಧಾನಕ್ಕೆ ತಲೆ ಬಾಗಲೇಬೇಕು. ಇದು ಇಬ್ಬರು ನಾಯಕರಿಗೆ ತಿಳಿಯದ್ದೇನೂ ಅಲ್ಲ.

ತನ್ನ ಮೇಲಿನ ಆರೋಪಗಳ ಬಗ್ಗೆ ಸಿದ್ದರಾಮಯ್ಯ ಅವರು ಎರಡೆರಡು ಬಾರಿ ಪತ್ರಿಕಾಗೋಷ್ಠಿಯನ್ನು ಮಾಡಿ ಅಲ್ಲಗಳೆದಿದ್ದಾರೆ. ನಡೆದಿದ್ದು ಏನು ಎನ್ನುವುದನ್ನು ವಿವರಿಸುವುದಕ್ಕೂ ಪ್ರಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ತನ್ನ ಮೇಲಿರುವ ಆರೋಪಗಳಲ್ಲಿ ಹುರುಳಿಲ್ಲ ಎನ್ನುವುದನ್ನು ಕುಮಾರಸ್ವಾಮಿಯವರು ಸ್ಪಷ್ಟಪಡಿಸಬೇಕೇ ಹೊರತು, ಆರೋಪ ಹೊರಿಸಿದ ಅಧಿಕಾರಿಗಳಿಗೆ ಅಥವಾ ರಾಜ್ಯದ ಮುಖ್ಯಮಂತ್ರಿಗೆ ಸವಾಲೆಸೆಯುವುದು, ಅವರನ್ನು ಬೆದರಿಸುವುದು ಸರಿಯಾದ ಕ್ರಮವಲ್ಲ . ‘‘ತನ್ನ ಮೇಲಿನ ಆರೋಪ ಸಾಬೀತಾದರೆ ಕಾನೂನಿಗೆ ತಲೆಬಾಗಲು ತಾನು ಸಿದ್ಧ’ ಎಂಬ ಹೇಳಿಕೆ ಕುಮಾರ ಸ್ವಾಮಿಗೆ ಭೂಷಣವೇ ಹೊರತು,ಕಾನೂನಿಗೆ ಸವಾಲೆಸೆಯುವುದರಿಂದ ಜನತೆಗೆೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ. ಕುಮಾರಸ್ವಾಮಿಯವರು ಆರೋಪಿಯೆಂದು ಗುರುತಿಸಲ್ಪಟ್ಟಿರುವ ಗಣಿಗಾರಿಕೆಗೆ ಸಂಬಂಧಿಸಿದ ಅವ್ಯವಹಾರದ ತನಿಖೆಯನ್ನು ಸಿಟ್ ಮುಗಿಸಿದ್ದು, ದೋಷಾರೋಪಕ್ಕೆ ಅನುಮತಿಯನ್ನು ಕಾಯುತ್ತಿದೆ. ಸಿದ್ದರಾಮಯ್ಯ ಅವರು ಮುಡಾ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಬೇಕು ಎಂದು ಕುಮಾರ ಸ್ವಾಮಿ ಒತ್ತಾಯಿಸಬಹುದಾದರೆ, ಕುಮಾರಸ್ವಾಮಿಯೂ ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿ ನೈತಿಕ ಹೊಣೆ ಹೊತ್ತು ಮೊದಲು ರಾಜೀನಾಮೆಯನ್ನು ನೀಡಬೇಕು. ಆ ಮೂಲಕ ಸಿದ್ದರಾಮಯ್ಯ ರಾಜೀನಾಮೆಗೆ ಬೇಕಾದ ನೈತಿಕ ದಾರಿಯನ್ನು ಸುಗಮ ಮಾಡಿಕೊಡಬೇಕು. ಇದನ್ನು ಬಿಟ್ಟು ಕೆಳದರ್ಜೆಯ ಟೀಕೆ-ಪ್ರತಿ ಟೀಕೆಗಳನ್ನು ಮಾಡುತ್ತಾ ಉಭಯ ನಾಯಕರು ತಾವು ನಿರ್ವಹಿಸುತ್ತಿರುವ ಸ್ಥಾನದ ಘನತೆಗೆ ಕುಂದುಂಟು ಮಾಡಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News