ಅನೈತಿಕ ದಾರಿಯಲ್ಲಿ ಸರಕಾರ ಉರುಳಿಸುವ ಪ್ರಯತ್ನ ಬೇಡ

Update: 2024-08-28 04:54 GMT

PC:x.com/BYVijayendra

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗಿ ಇನ್ನೇನು ಕಾಂಗ್ರೆಸ್ ಸರಕಾರ ರಚನೆ ಮಾಡಬೇಕು ಎನ್ನುವಷ್ಟರಲ್ಲೇ ‘ಸರಕಾರವನ್ನು ಉರುಳಿಸುವ’ ಮಾತುಗಳನ್ನು ಬಿಜೆಪಿ ಮುಖಂಡರು ಆಡಿದ್ದರು. ಚುನಾವಣೋತ್ತರ ಸಮೀಕ್ಷೆ ಹೊರ ಬರುತ್ತಿದ್ದಂತೆಯೇ, ಬಿಜೆಪಿಯ ಹಲವು ನಾಯಕರು ಬಹಿರಂಗವಾಗಿ ‘ಆಪರೇಷನ್ ಕಮಲ’ದ ಬೆದರಿಕೆಯೊಡ್ಡಿದ್ದರು. ‘ಯಾವುದೇ ಕಾರಣಕ್ಕೂ ಸರಕಾರ ರಚನೆ ಮಾಡಲು ಕಾಂಗ್ರೆಸ್‌ಗೆ ಅವಕಾಶ ನೀಡುವುದಿಲ್ಲ’ ಎಂದು ಸವಾಲು ಹಾಕಿದ್ದರು. ಆದರೆ ಕಾಂಗ್ರೆಸ್‌ಗೆ ಒದಗಿದ ಭಾರೀ ಬಹುಮತ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿತ್ತು. ಇದಾದ ಬಳಿಕವೂ, ‘ನಮ್ಮ ಬಳಿ ಕಾಂಗ್ರೆಸ್‌ನ ಕೆಲವು ಶಾಸಕರು ಮಾತುಕತೆ ನಡೆಸಿದ್ದಾರೆ’, ‘ಬಿಜೆಪಿಗೆ ಸೇರ್ಪಡೆಯಾಗಲು ಸಿದ್ಧತೆ ನಡೆಸುತ್ತಿದ್ದಾರೆ’ ಎನ್ನುವ ವದಂತಿಗಳನ್ನು ಬಿಜೆಪಿ ನಾಯಕರು ಪದೇ ಪದೇ ತೇಲಿ ಬಿಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರೂ ಹೇಳಿಕೆ ನೀಡಿ ‘ದೊಡ್ಡ ಸಂಖ್ಯೆಯ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ವಲಸೆ ಬರಲಿದ್ದಾರೆ’ ಎಂದು ಉತ್ತರಿಸಿದ್ದಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಭರವಸೆಗಳು ಯಶಸ್ವಿಯಾಗಿ ಜಾರಿಗೊಳ್ಳುತ್ತಿದ್ದಂತೆಯೇ ಆಪರೇಷನ್ ಕಮಲದ ಸದ್ದಡಗಿತು. ಕಾಂಗ್ರೆಸನ್ನು ದುರ್ಬಲಗೊಳಿಸಲು ಬೇರೆಯೇ ದಾರಿಯನ್ನು ಹಿಡಿಯುವುದು ಬಿಜೆಪಿಗೆ ಅನಿವಾರ್ಯವಾಯಿತು.

ವಿಧಾನಸಭಾ ಚುನಾವಣೆಯಲ್ಲಿ ಸಾಧ್ಯವಾಗದ್ದನ್ನು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಸಾಧ್ಯವಾಗಿಸಲು ಬಿಜೆಪಿ ನಾಯಕರು ಮತ್ತೆ ಯತ್ನಿಸಿದರು. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತು. ಒಂದು ವೇಳೆ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ಹಿನ್ನಡೆಯಾದರೆ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು. ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳಿಗಾಗಿ ಜಟಾಪಟಿ ಆರಂಭವಾಗಿ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದದ್ದು ಕಾಂಗ್ರೆಸ್ ಅವಧಿಯಲ್ಲಿ ಪುನರಾವರ್ತನೆಯಾಗುತ್ತದೆ ಎನ್ನುವುದು ಬಿಜೆಪಿ ನಾಯಕರ ನಿರೀಕ್ಷೆಯಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಒಡೆದರೆ, ಒಂದು ಗುಂಪಿನ ಜೊತೆಗೆ ಕೈ ಜೋಡಿಸಿ ಸರಕಾರ ರಚಿಸುವುದು ಬಿಜೆಪಿ ಕನಸಾಗಿತ್ತು. ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಅದಕ್ಕೆ ಪೂರಕವಾಗಿಯೇ ಇತ್ತು. ಆದರೆ ಅಂತಹದ್ದು ಯಾವುದೇ ಸಂಭವಿಸದೇ ಇದ್ದಾಗ, ಬಿಜೆಪಿ ಮುಡಾ ಹಗರಣ, ವಾಲ್ಮೀಕಿ ಹಗರಣಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ನಡೆಸಿತು. ಅಷ್ಟೇ ಅಲ್ಲ ರಾಜ್ಯಪಾಲರನ್ನು ಬಳಸಿಕೊಂಡು, ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಇದೀಗ ಮುಂದಾಗಿದ್ದು, ಇದು ರಾಜ್ಯದಲ್ಲಿ ಸರಕಾರ ಮತ್ತು ರಾಜಭವನದ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಕಾಂಗ್ರೆಸನ್ನು ಅಧಿಕಾರದಿಂದ ಇಳಿಸಲು ಬಿಜೆಪಿಯೊಂದಿಗೆ ರಾಜ್ಯಪಾಲರೂ ಜೊತೆ ನೀಡಿದ ಬೆನ್ನಿಗೇ ರಾಜ್ಯದಲ್ಲಿ ಮತ್ತೆ ‘ಆಪರೇಷನ್ ಕಮಲ’ ವದಂತಿ ಮುನ್ನೆಲೆಗೆ ಬಂದಿರುವುದು ನಿಜಕ್ಕೂ ಆತಂಕಕಾರಿ.

‘‘ರಾಜ್ಯದ ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಬಿಜೆಪಿ ಪ್ರತಿನಿತ್ಯ ಪ್ರಯತ್ನ ನಡೆಸುತ್ತಿದ್ದು ಇದರ ಭಾಗವಾಗಿ ಕಾಂಗ್ರೆಸ್ ಶಾಸಕರಿಗೆ ಸುಮಾರು ನೂರು ಕೋಟಿ ರೂಪಾಯಿಯ ಆಮಿಷವನ್ನು ಒಡ್ಡಲಾಗುತ್ತಿದೆ’’ ಎಂಬ ಗಂಭೀರ ಆರೋಪವನ್ನು ಶಾಸಕ ರವಿ ಗಣಿಗ ಅವರು ಮಾಡಿದ್ದಾರೆ. ‘‘ಈ ಹಿಂದೆ 50 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದ್ದ ಬಿಜೆಪಿಯವರು ಈಗ ಅದನ್ನು 100 ಕೋಟಿ ರೂಪಾಯಿಗೆ ಏರಿಸಿದ್ದಾರೆ. ಮಧ್ಯವರ್ತಿಗಳು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ನನ್ನನ್ನು ಕೂಡ ಸಂಪರ್ಕಿಸಿ ಹಣದ ಆಮಿಷ ಒಡ್ಡಿದ್ದರು’’ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿ ತನ್ನಲ್ಲಿ ದಾಖಲೆಗಳಿವೆ ಎಂದೂ ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಣಿಗ ಅವರ ಆರೋಪವನ್ನು ಬಿಜೆಪಿ ನಿರಾಕರಿಸಿದೆ ಮಾತ್ರವಲ್ಲ, ಗಣಿಗ ಹೇಳಿಕೆಯ ವಿರುದ್ಧ ದೂರನ್ನು ದಾಖಲಿಸಿದೆ. ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ನಾಯಕ ಆರ್. ಅಶೋಕ್ ‘‘ಕಾಂಗ್ರೆಸ್ ಶಾಸಕರಿಗೆ ಹಣ ನೀಡುತ್ತೇವೆಂದು ಬಂದ ಬಿಜೆಪಿ ನಾಯಕರು ಯಾರೆಂದು ಸರಿಯಾಗಿ ತಿಳಿಸಲಿ’’ ಎಂದು ಆಗ್ರಹಿಸಿದ್ದಾರೆ. ‘ಆಪರೇಷನ್ ಕಮಲ’ದ ಬಗ್ಗೆ ಸ್ವತಃ ಬಿಜೆಪಿ ನಾಯಕರೇ ಹಲವು ಬಾರಿ ಹೆಮ್ಮೆ ಪಟ್ಟುಕೊಂಡಿದ್ದಾರೆ ಮಾತ್ರವಲ್ಲ, ಆಪರೇಷನ್ ಕಮಲದ ಬೆದರಿಕೆಯನ್ನು ಮಾಧ್ಯಮಗಳ ಮೂಲಕ ನೇರವಾಗಿ ನೂತನ ಸರಕಾರಕ್ಕೆ ಒಡ್ಡಿದ್ದಾರೆ. ಹೀಗಿರುವಾಗ, ಗಣಿಗ ಹೇಳಿಕೆಯ ಬಗ್ಗೆ ಬಿಜೆಪಿಯ ಸ್ಪಷ್ಟೀಕರಣವನ್ನು ಜನತೆ ನಂಬುವ ಸ್ಥಿತಿಯಲ್ಲಿ ಇಲ್ಲ.

ಒಂದಂತೂ ನಾಡಿನ ಜನತೆಗೆ ಚೆನ್ನಾಗಿಯೇ ಗೊತ್ತಿದೆ. ಈಗಾಗಲೇ ಎರಡು ಬಾರಿ ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಆಳ್ವಿಕೆ ನಡೆಸಿದೆ. ಆದರೆ ಎರಡು ಬಾರಿಯೂ ಬಿಜೆಪಿಯು ಬಹುಮತದಿಂದ ಆಯ್ಕೆಯಾಗಿರಲಿಲ್ಲ. ಎರಡು ಬಾರಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡು ಆ ಮೂಲಕವೇ ಅಧಿಕಾರ ಹಿಡಿಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ ರೆಸಾರ್ಟ್ ರಾಜಕೀಯದ ಅವಾಂತರಗಳನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ದೇಶದ ಭ್ರಷ್ಟ ರಾಜಕೀಯಕ್ಕೆ ‘ಆಪರೇಷನ್ ಕಮಲ’ವನ್ನು ಒಂದು ಮಾದರಿ ರೂಪದಲ್ಲಿ ಉಡುಗೊರೆಯಾಗಿ ಕೊಟ್ಟ ಹೆಗ್ಗಳಿಕೆ ರಾಜ್ಯ ಬಿಜೆಪಿ ನಾಯಕರದ್ದು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗುವ ಮುನ್ನವೇ ಆಪರೇಶನ್ ಕಮಲದ ಎಚ್ಚರಿಕೆಯನ್ನು ನೀಡಿದ್ದು ಯಾವುದೇ ಕಾಂಗ್ರೆಸಿಗರಾಗಿರಲಿಲ್ಲ. ಬಿಜೆಪಿಯ ನಾಯಕರೇ ‘‘ಯಾವ ದಾರಿಯಲ್ಲಾದರೂ ಅಧಿಕಾರ ಹಿಡಿಯುತ್ತೇವೆ’’ ಎಂದು ಬೆದರಿಕೆ ಒಡ್ಡಿದ್ದರು. ಕಾಂಗ್ರೆಸ್ ಸರಕಾರ ರಚನೆ ಮಾಡಿದ ದಿನದಿಂದ ಬೇರೆ ಬೇರೆ ರೀತಿಯಲ್ಲಿ ಸರಕಾರವನ್ನು ದುರ್ಬಲಗೊಳಿಸಲು ಬಿಜೆಪಿ ನಾಯಕರು ಯತ್ನಿಸಿದ್ದಾರೆ. ಇದನ್ನು ಅಲ್ಲಗಳೆಯುವುದು ಸ್ವತಃ ಬಿಜೆಪಿ ನಾಯಕರಿಗೇ ಸಾಧ್ಯವಿಲ್ಲ. ಒಂದು ವೇಳೆ, ಬಿಜೆಪಿಯೊಳಗೆ ಭಿನ್ನಮತ ಇಲ್ಲದೆ ಇರುತ್ತಿದ್ದರೆ ಕಾಂಗ್ರೆಸ್ ಸರಕಾರವನ್ನು ತಮ್ಮ ಹಣ ಬಲದಿಂದ ಯಾವತ್ತೋ ಕೊಂಡುಕೊಂಡು ಬಿಡುತ್ತಿದ್ದರು. ನಾಳೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತಹ ಸನ್ನಿವೇಶ ನಿರ್ಮಾಣವಾದರೆ, ಕಾಂಗ್ರೆಸ್‌ನೊಳಗಿನ ಗೊಂದಲಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಹೇಳುವಂತಿಲ್ಲ. ಇದೇ ಸಂದರ್ಭದಲ್ಲಿ, ತಮ್ಮನ್ನು ತಾವು ಮಾರಿಕೊಳ್ಳಲು ಸಿದ್ಧರಿದ್ದಾಗ ಮಾತ್ರ, ಕೊಂಡುಕೊಳ್ಳುವವರು ಮುಂದೆ ಬರಲು ಸಾಧ್ಯ. ಆದುದರಿಂದ, ಬಿಜೆಪಿ ಆಪರೇಷನ್ ಕಮಲ ಯಶಸ್ವಿಯಾಗಬೇಕಾದರೆ, ಕಾಂಗ್ರೆಸ್‌ನೊಳಗಿರುವ ಶಾಸಕರೂ ಅವರ ಜೊತೆಗೆ ಕೈ ಜೋಡಿಸಬೇಕಾಗುತ್ತದೆ. ಆದುದರಿಂದ ಬರಿದೇ ಬಿಜೆಪಿಯನ್ನು ದೂರಿ ಯಾವುದೇ ಪ್ರಯೋಜನವಿಲ್ಲ. ಒಂದು ರೀತಿಯಲ್ಲಿ, ಬಿಜೆಪಿ ಮತ್ತು ಇತರ ಪಕ್ಷಗಳು ಜೊತೆ ಸೇರಿ ಹುಟ್ಟಿಸಿ ಹಾಕಿದ ಅನೈತಿಕ ಕೂಸು ಈ ಆಪರೇಷನ್ ಕಮಲ.

ಈ ಬಾರಿ ಕಾಂಗ್ರೆಸನ್ನು ಜನರು ಬಹುಮತದಿಂದ ಆರಿಸಿದ್ದಾರೆ. ಜನತೆಯ ಈ ತೀರ್ಪನ್ನು ಬಿಜೆಪಿ ಗೌರವಿಸಲೇ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಅಧಿಕಾರ ಹಿಡಿದು ಎರಡು ವರ್ಷವೂ ಪೂರ್ತಿಯಾಗಿಲ್ಲ. ಅಷ್ಟರಲ್ಲೇ ಸರಕಾರದ ಬಗ್ಗೆ ತೀರ್ಪು ನೀಡುವ ಆತುರವನ್ನು ಬಿಜೆಪಿ ಪ್ರದರ್ಶಿಸಬಾರದು. ಮುಖ್ಯವಾಗಿ ಮುಡಾ ಹಗರಣ, ವಾಲ್ಮೀಕಿ ಹಗರಣ ಎರಡನ್ನೂ ಮುಂದಿಟ್ಟುಕೊಂಡು ಒಂದು ಸರಕಾರವನ್ನು ವಜಾಮಾಡಲು ಹೊರಟಿರುವುದೇ ಬಿಜೆಪಿಯ ಹತಾಶೆಯನ್ನು ತೋರಿಸುತ್ತದೆ. ಮುಡಾ, ವಾಲ್ಮೀಕಿ ಹಗರಣಗಳೆರಡರಲ್ಲೂ ನೂತನ ಸರಕಾರದ ಪೂರ್ಣ ಪ್ರಮಾಣದ ಭಾಗೀದಾರಿಕೆ ಸಾಬೀತಾಗಿಲ್ಲ. ಇದೇ ಹೊತ್ತಿಗೆ ರಾಜ್ಯಾದ್ಯಂತ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಜನತೆಗೆ ಇದರ ಪ್ರಯೋಜನ ನೇರವಾಗಿ ತಲುಪತೊಡಗಿದೆ. ಇಂತಹ ಹೊತ್ತಿನಲ್ಲಿ ಸರಕಾರವನ್ನು ಅನೈತಿಕ ದಾರಿಯಲ್ಲಿ ಉರುಳಿಸಲು ಪ್ರಯತ್ನಪಟ್ಟಷ್ಟು ಅದರಿಂದ ಹಾನಿ ಬಿಜೆಪಿಗೇ ಆಗಿದೆ. ಮರದಲ್ಲಿರುವ ಕಾಯಿಯನ್ನು ಕಲ್ಲೆಸೆದು ಕೊಯ್ಯುವ ಬದಲು, ಅದು ಹಣ್ಣಾಗುವವರೆಗೆ ಕಾಯುವುದರಿಂದ ಬಿಜೆಪಿಗೆ ಹೆಚ್ಚು ಲಾಭವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News