ಚುನಾವಣೋತ್ತರ ಸಮೀಕ್ಷೆಯ ವಿರುದ್ಧ ಜನತಂತ್ರ ಗೆಲ್ಲಲಿ

Update: 2024-06-03 05:10 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಚುನಾವಣೆ ಫಲಿತಾಂಶಗಳನ್ನು ಈ ದೇಶ ಎರಡೆರಡು ಬಾರಿ ಸಂಭ್ರಮಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಮುಗಿದಾಕ್ಷಣ, ಚುನಾವಣೋತ್ತರ ಸಮೀಕ್ಷೆಯ ಆಧಾರದಲ್ಲಿ ಮಾಧ್ಯಮಗಳು ಹೊರ ಹಾಕುವ ಫಲಿತಾಂಶವನ್ನು ಸಂಭ್ರಮಿಸುವುದು ಒಂದಾದರೆ, ಇದಾದ ಎರಡೇ ದಿನಗಳಲ್ಲಿ ನಿಜವಾದ ಫಲಿತಾಂಶಕ್ಕೆ ತಲೆಕೊಡಬೇಕಾಗುತ್ತದೆ. ಚುನಾವಣೆಯುದ್ದಕ್ಕೂ ನಿರ್ದಿಷ್ಟ ಪಕ್ಷವೊಂದರ ಪರವಾಗಿ ಕೊಡೆ ಹಿಡಿಯುವ ಮಾಧ್ಯಮಗಳು, ಯಾರಿಗೆ ಮತ ಹಾಕಬೇಕು ಎನ್ನುವ ವಿಷಯದಲ್ಲಿ ಮಾತ್ರವಲ್ಲ, ಯಾರು ಗೆದ್ದಿದ್ದಾರೆ ಎನ್ನುವುದನ್ನು ಕೂಡ ಫಲಿತಾಂಶಕ್ಕೆ ಮುನ್ನ ಸ್ವಯಂ ಘೋಷಿಸುತ್ತಿರುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣೋತ್ತರ ಸಮೀಕ್ಷೆಯೆನ್ನುವುದೂ ಚುನಾವಣೆಯ ಪ್ರಕ್ರಿಯೆಯಲ್ಲಿ ಮಾಧ್ಯಮಗಳು ಪರೋಕ್ಷವಾಗಿ ನಡೆಸುವ ಹಸ್ತಕ್ಷೇಪ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಹಿಂದೆ ತೀವ್ರ ಟೀಕೆ, ತರಾಟೆಗೆ ಒಳಗಾಗಿದ್ದವು.ಯಾರಿಗೆ ಮತ ನೀಡಬೇಕು ಎನ್ನುವುದಕ್ಕೆ ಜನಸಾಮಾನ್ಯರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ರಾಜಕೀಯ ದುರುದ್ದೇಶದ ಭಾಗವಾಗಿ ಈ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳ ಪ್ರಾಯೋಜಕತ್ವದಲ್ಲೇ ಮಾಧ್ಯಮಗಳು ನಡೆಸುತ್ತಿದ್ದವು. ಮತದಾನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ಚುನಾವಣೆ ಘೋಷಣೆಯಾದ ಬಳಿಕ ಮಾಧ್ಯಮಗಳು ನಡೆಸುವ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಇದೀಗ ಚುನಾವಣಾ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಚುನಾವಣೋತ್ತರ ಸಮೀಕ್ಷೆಗಳನ್ನು ಬಳಸಿಕೊಳ್ಳಲಾಗುತ್ತದೆ ಎನ್ನುವ ಆರೋಪಗಳನ್ನು ಕೆಲವು ರಾಜಕೀಯ ನಾಯಕರು ಮಾಡುತ್ತಿದ್ದಾರೆ.

ಸುದೀರ್ಘ ಸುಮಾರು ಒಂದು ತಿಂಗಳ ಕಾಲ ನಡೆದ ಚುನಾವಣೆ ಇನ್ನೂ ಮುಗಿದು ಗಂಟೆ ಕಳೆದಿಲ್ಲ, ಅಷ್ಟರಲ್ಲಿ ಹಲವು ಮಾಧ್ಯಮ ಸಂಸ್ಥೆಗಳು ಯಾರು ಗೆಲ್ಲುತ್ತಾರೆ, ಎಷ್ಟು ಸ್ಥಾನಗಳನ್ನು ಪಡೆಯುತ್ತಾರೆ ಎನ್ನುವುದನ್ನು ಘೋಷಿಸಿ ಬಿಟ್ಟಿವೆ. ಎಬಿಪಿ-ಸಿವೋಟರ್ ತನ್ನ ಸಮೀಕ್ಷೆಯಲ್ಲಿ ಎನ್‌ಡಿಎ 353-383 ಸ್ಥಾನಗಳನ್ನು ಪಡೆಯುತ್ತವೆ ಎಂದಿದ್ದರೆ, ಇಂಡಿಯಾ 152ರಿಂದ-182 ಸ್ಥಾನಗಳನ್ನು ಪಡೆಯುತ್ತದೆ ಎಂದು ಘೋಷಿಸಿದೆ. ಸಿಎನ್‌ಎಕ್ಸ್ ತನ್ನ ಸಮೀಕ್ಷೆಯಲ್ಲಿ ಎನ್‌ಡಿಎಗೆ 371-401 ಸ್ಥಾನಗಳನ್ನು ಕೊಟ್ಟಿದ್ದರೆ, ಇಂಡಿಯಾಗೆ 109-139 ಸ್ಥಾನಗಳನ್ನು ಕೊಟ್ಟಿದೆ. ಜನ ಕೀ ಬಾತ್ ತನ್ನ ಸಮೀಕ್ಷೆಯಲ್ಲಿ ಎನ್‌ಡಿಎಗೆ 363-392 ಸ್ಥಾನಗಳನ್ನು ನೀಡಿದ್ದರೆ ಇಂಡಿಯಾಕ್ಕೆ 141-139 ಸ್ಥಾನಗಳನ್ನು ನೀಡಿದೆ. ರಾಜ್ಯದಲ್ಲೂ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಅತ್ಯಧಿಕ ಸ್ಥಾನಗಳನ್ನು ನೀಡಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಗ್ಯಾರಂಟಿ ಬಲದಿಂದ 14ಕ್ಕಿಂತ ಅಧಿಕ ಸ್ಥಾನಗಳನ್ನು ಗಳಿಸುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರಾದರೂ, ಸಮೀಕ್ಷೆ ಗಳು ಆ ಭರವಸೆಯನ್ನು ಸುಳ್ಳು ಎಂದು ಹೇಳುತ್ತಿವೆ. ಕಾಂಗ್ರೆಸ್ ಕಡಿಮೆಯೆಂದರೆ 3 ಸ್ಥಾನಗಳನ್ನು ಹೆಚ್ಚೆಂದರೆ 7 ಸ್ಥಾನಗಳನ್ನು ಗೆಲ್ಲಬಹುದು ಎನ್ನುವುದು ಸಮೀಕ್ಷೆಗಳ ಲೆಕ್ಕಾಚಾರಗಳಾಗಿವೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತಾನೂ ಆಂತರಿಕ ಸಮೀಕ್ಷೆಯನ್ನು ನಡೆಸಿರುವುದಾಗಿ ಹೇಳುತ್ತಿದ್ದು ಅಧಿಕಾರಕ್ಕೇರುವುದು ಖಚಿತ ಎನ್ನುತ್ತಿದೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಅತ್ಯಧಿಕ ಬಹುಮತವನ್ನು ಪಡೆಯುತ್ತದೆ ಎನ್ನುತ್ತಿದೆ. ಸಮೀಕ್ಷೆ ಹೊರ ಬೀಳುವ ಮುನ್ನವೇ ಯೋಗೇಂದ್ರ ಯಾದವ್ ಸಹಿತ ಕೆಲವು ರಾಜಕೀಯ ಮುತ್ಸದ್ದಿಗಳು ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳನ್ನು ಹೇಳಿದ್ದಾರೆ. ಆದರೆ ಸಮೀಕ್ಷೆಗಳು ಹೇಳುವಂತೆ ಎನ್‌ಡಿಎ 350ರಷ್ಟು ಅದಕಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಿದೆಯೆ? ಅಂತಹದೊಂದು ಫಲಿತಾಂಶ ಹೊರ ಬೀಳಲು ಹೇಗೆ ಸಾಧ್ಯ? ಎನ್ನುವುದು ಚರ್ಚೆಗೆ ಅರ್ಹ ವಿಷಯವಾಗಿದೆ. ಆಡಳಿತ ವಿರೋಧಿ ಅಲೆಗಳು ವ್ಯಾಪಕವಾಗಿರುವುದು ಮಾತ್ರವಲ್ಲ, ಎಲ್ಲ ಪಕ್ಷಗಳು ಸಂಘಟಿತವಾಗಿ ಬಿಜೆಪಿಯ ವಿರುದ್ಧ ಈ ಬಾರಿ ಕೆಲಸ ಮಾಡಿದ್ದವು. ಇಷ್ಟಾದರೂ ಮೋದಿಯವರು 400 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುತ್ತಾರೆ ಎಂದರೆ ಅದಕ್ಕೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆ ನಡೆಸುವುದು ಅತ್ಯಗತ್ಯವಾಗಿದೆ.

ಚುನಾವಣೋತ್ತರ ಸಮೀಕ್ಷೆಗೆ ಪೂರಕವಾಗಿ ಹೊರ ಬೀಳುವ ಅನಿರೀಕ್ಷಿತ ಫಲಿತಾಂಶ ಅನೇಕ ಬಾರಿ ಇವಿಎಂನ್ನು ತಂದು ಕಟಕಟೆಯಲ್ಲಿ ನಿಲ್ಲಿಸುತ್ತದೆ. ಈ ಬಾರಿ ಸಮೀಕ್ಷೆಯಂತೆ ಎನ್‌ಡಿಎ 400 ಸ್ಥಾನಗಳನ್ನು ಪಡೆಯಿತು ಎಂದಾದರೆ ಇವಿಎಂ ಮತ್ತೆ ಚರ್ಚೆಗೆ ಬರುವುದರಲ್ಲಿ ಅನುಮಾನವಿಲ್ಲ. ಚುನಾವಣೆ ಘೋಷಣೆಯಾಗುವ ಸಂದರ್ಭದಲ್ಲೇ ಹಲವು ರಾಜಕೀಯ ನಾಯಕರು ಬಹಿರಂಗವಾಗಿಯೇ, ಪ್ರಧಾನಿ ಮೋದಿಯವರು ಇವಿಎಂ ಮೂಲಕ ಗೆಲ್ಲುತ್ತಿದ್ದಾರೆ ಎಂದು ಆರೋಪಿಸಿದ್ದರು. ವಿರೋಧ ಪಕ್ಷಗಳು ಇವಿಎಂನ್ನು ಸಂಪೂರ್ಣ ತಿರಸ್ಕರಿಸುತ್ತಿಲ್ಲವಾದರೂ, ಕೆಲವು ಬದಲಾವಣೆಗಳನ್ನು ನಿರೀಕ್ಷಿಸಿ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದವು. ವಿವಿಪ್ಯಾಟ್ ಚೀಟಿಗಳ ಪೂರ್ಣ ಪ್ರಮಾಣದ ಎಣಿಕೆಯಾಗಬೇಕು ಎನ್ನುವುದು ಅದರಲ್ಲಿ ಒಂದು. ಆದರೆ ಅದನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿತ್ತು. ಇದೇ ಸಂದರ್ಭದಲ್ಲಿ ಮತಗಟ್ಟೆವಾರು ಮತಚಲಾವಣೆಯ ವಿವರಗಳನ್ನು ನೀಡಲು ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕು ಎಂದೂ ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ಆದರೆ ಅದಕ್ಕೂ ನ್ಯಾಯಾಲಯ ಅಸಹಾಯಕತೆಯನ್ನು ವ್ಯಕ್ತಪಡಿಸಿತ್ತು. ಒಂದು ವೇಳೆ ಚುನಾವಣೋತ್ತರ ಸಮೀಕ್ಷೆ ಗೆದ್ದಿತು ಎಂದಾದರೆ ಇವಿಎಂ ಅಕ್ರಮಗಳೇ ಗೆಲುವಿಗೆ ಕಾರಣ ಎಂದು ವಿರೋಧ ಪಕ್ಷಗಳು ಗದ್ದಲ ಎಬ್ಬಿಸುವುದಕ್ಕೆ ಸುಪ್ರೀಂಕೋರ್ಟ್ ತೀರ್ಪು ಕೂಡ ಪರೋಕ್ಷ ಕಾರಣವಾಗಲಿದೆ.

ಇವಿಎಂ ಅಕ್ರಮಗಳ ಮೂಲಕ ತಿರುಚಲ್ಪಡುವ ಅನಿರೀಕ್ಷಿತ ಫಲಿತಾಂಶಗಳಿಗೆ ಜನರನ್ನು ಸಿದ್ಧಗೊಳಿಸುವುದಕ್ಕಾಗಿಯೇ ಚುನಾವಣೋತ್ತರ ಸಮೀಕ್ಷೆಯನ್ನು ಆಳುವ ಪಕ್ಷ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳಿವೆ. 2014ರಿಂದ ಲೋಕಸಭಾ ಚುನಾವಣೆಯಲ್ಲಿ ಹೊರ ಬೀಳುತ್ತಿರುವ ಅನಿರೀಕ್ಷಿತ ಫಲಿತಾಂಶಗಳು, ಬಿಜೆಪಿಯ ಅಭ್ಯರ್ಥಿಗಳ ಗೆಲುವಿನಲ್ಲಿ ಕಂಡು ಬರುವ ಲಕ್ಷಾಂತರ ಮತಗಳ ಅಂತರಗಳನ್ನು ಚುನಾವಣೋತ್ತರ ಸಮೀಕ್ಷೆಗಳ ಮೂಲಕ ಜನರು ಸ್ವೀಕರಿಸುವಂತೆ ಮಾಡಲಾಗುತ್ತಿದೆ ಎಂದು ಇವಿಎಂ ವಿರೋಧಿಗಳು ಆರೋಪಿಸುತ್ತಾ ಬರುತ್ತಿದ್ದಾರೆ. ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡೇ, ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂ ದುರ್ಬಳಕೆಯಾಗುತ್ತಿಲ್ಲ. ಇಂದಿಗೂ ವಿಧಾನಸಭಾ ಚುನಾವಣೆಯ ಗೆಲುವುಗಳೇ ವಿರೋಧ ಪಕ್ಷಗಳು ಸಂಘಟಿತವಾಗಿ ಇವಿಎಂ ವಿರುದ್ಧ ಹೋರಾಟ ನಡೆಸದಂತೆ ತಡೆದಿದೆ ಎನ್ನುವುದು ಕೆಲವರ ವಾದವಾಗಿದೆ. ಆದರೆ ಫಲಿತಾಂಶ ಘೋಷಣೆಯ ಬಳಿಕ ವಿರೋಧ ಪಕ್ಷಗಳು ಇವಿಎಂ ವಿರುದ್ಧ ಆರೋಪಗಳನ್ನು ಮಾಡಿದರೆ ಅದು ಸಮರ್ಥನೀಯವಲ್ಲ. ಒಂದು ವೇಳೆ ಇವಿಎಂ ಮೂಲಕ ನಡೆಸುವ ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತವೆ ಎನ್ನುವುದರ ಬಗ್ಗೆ ವಿರೋಧಪಕ್ಷಗಳಿಗೆ ಸ್ಪಷ್ಟತೆಯಿದೆಯಾದರೆ ಅವುಗಳು ಈ ಚುನಾವಣೆ ಮುಗಿದ ದಿನದಿಂದಲೇ ಸಂಘಟಿತವಾಗಿ ಇವಿಎಂ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ ಆರಂಭಿಸಬೇಕು.ಆ ಮೂಲಕ 2029ರ ಚುನಾವಣೆಯ ಸಂದರ್ಭದಲ್ಲಾದರೂ ಮತಪತ್ರಗಳ ಮೂಲಕ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ಈ ಬಾರಿ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ವಿರುದ್ಧ ಜನತಂತ್ರ ಜಯ ಸಾಧಿಸಲಿ ಎನ್ನುವುದು ಪ್ರಜಾಸತ್ತೆಯ ಪರವಾಗಿರುವ ಎಲ್ಲರ ಹಾರೈಕೆಯಾಗಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News