ಮಲ ಹೊರುವ ಪದ್ಧತಿ: ನುಣುಚಿಕೊಳ್ಳುತ್ತಿರುವ ಆರೋಪಿಗಳು

Update: 2024-02-02 04:12 GMT

Photo: NDtv

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಮಲಹೊರುವ ಪದ್ಧತಿ’ಗೆ ಸಂಬಂಧಿಸಿ ದೇಶದಲ್ಲೇ ಅತ್ಯಧಿಕ ಪ್ರಕರಣಗಳು ಗುಜರಾತ್‌ನಲ್ಲಿ ದಾಖಲಾಗುತ್ತವೆ. ಇದೇ ಸಂದರ್ಭದಲ್ಲಿ ಶಿಕ್ಷೆಯಿಂದ ಅಪರಾಧಿಗಳು ನುಣುಚಿಕೊಳ್ಳುವುದರಲ್ಲೂ ಗುಜರಾತ್ ಅಗ್ರ ಸ್ಥಾನದಲ್ಲಿದೆ. ಮಲಹೊರುವ ಪದ್ಧತಿಯೇ ಇಲ್ಲ ಎಂದು ಸಾಬೀತು ಪಡಿಸಲು ಎಲ್ಲ ಜಿಲ್ಲಾಡಳಿತಗಳು ಹೆಣಗಾಡುತ್ತಿರುವ ಹೊತ್ತಿನಲ್ಲೇ, ಪ್ರಕರಣ ದಾಖಲಾದರೆ ಅಪರಾಧಿಗಳಿಗೆ ಶಿಕ್ಷೆಯಾಗುವುದು ಕೂಡ ಅಪರೂಪವಾಗಿದೆ ಎನ್ನುವುದನ್ನು ಮಾಧ್ಯಮ ವರದಿಗಳು ಬಹಿರಂಗಪಡಿಸುತ್ತಿವೆ. ಮಲಹೊರುವ ಪದ್ಧತಿಯನ್ನು ಜೀವಂತವಾಗಿರಿಸಿರುವುದೇ ಒಂದು ಅಪರಾಧ. ಆ ಪದ್ಧತಿಗೆ ಬಲಿಯಾದ ಸಂತ್ರಸ್ತರಿಗೆ ನ್ಯಾಯ ನೀಡಲು ವಿಫಲವಾಗುವುದು ಅದಕ್ಕಿಂತ ಘೋರ ಅಪರಾಧ. ಮಲಹೊರುವ ಪದ್ಧತಿ ಪ್ರಕರಣದಲ್ಲಿ ಆರೋಪಿ ಶಿಕ್ಷೆಯಿಂದ ಪಾರಾಗುತ್ತಾನೆ ಎಂದರೆ, ವ್ಯವಸ್ಥೆಯೇ ಈ ಮಲಹೊರುವ ಪದ್ಧತಿಯನ್ನು ಪೋಷಿಸುತ್ತಿದೆ ಎಂದು ಅರ್ಥ. ಇಂತಹದೊಂದು ವ್ಯವಸ್ಥೆ ಎಲ್ಲೋ ದೂರದ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಮಾತ್ರ ಇದೆ ಎಂದು ನಾವು ನಂಬಿಕೊಂಡು ಬಂದಿದ್ದೇವೆ. ಆದರೆ ದುರದೃಷ್ಟವಶಾತ್ ಕರ್ನಾಟಕದಲ್ಲೂ ಮಲಹೊರುವ ಪದ್ಧತಿ ಇನ್ನೂ ಗುಟ್ಟಾಗಿ ಜೀವಂತದಲ್ಲಿದೆ. ಅಷ್ಟೇ ಅಲ್ಲ, ಈ ವ್ಯವಸ್ಥೆಯ ಹಿಂದಿರುವ ಅಪರಾಧಿಗಳನ್ನು ಗುರುತಿಸಿ ಅವರನ್ನು ಶಿಕ್ಷಿಸಲು ಇಲ್ಲಿನ ನ್ಯಾಯ ವ್ಯವಸ್ಥೆಯೂ ವಿಫಲವಾಗುತ್ತಿದೆ. ಈ ಬಗ್ಗೆ ಸರಕಾರ ಈಗಾಗಲೇ ಹೈಕೋರ್ಟ್‌ಗೆ ಮಾಹಿತಿಗಳನ್ನು ನೀಡಿದೆ.

ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲೂ ಮಲ ಹೊರುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಇಷ್ಟಾದರೂ, 1993ರಿಂದ ಇಲ್ಲಿಯವರೆಗೆ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯಡಿ ಒಟ್ಟು 47 ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲ, 92 ಮಂದಿ ಶುಚಿಗೊಳಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಇಷ್ಟೂ ಪ್ರಕರಣಗಳಲ್ಲಿ ಕೇವಲ ಒಬ್ಬ ಆರೋಪಿಗಷ್ಟೇ ಶಿಕ್ಷೆಯಾಗಿದೆ. 15 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಎರಡು ಪ್ರಕರಣಗಳಲ್ಲಿ ವರದಿ ಸಲ್ಲಿಕೆಯಾಗಿಲ್ಲ. 47 ಪ್ರಕರಣಗಳಲ್ಲಿ 15 ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗಿದೆ. 22 ಪ್ರಕರಣಗಳು ಖುಲಾಸೆಗೊಂಡಿವೆ ಎಂದು ವರದಿ ಹೇಳುತ್ತದೆ. 2013ರಿಂದ ಈವರೆಗೆ ಮನುಷ್ಯರಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಅಡಿ 87 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 11 ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗಿದೆ. 28 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿಯಿದ್ದು, 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 21 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 11 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು 22 ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ ಎಂದು ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಸದ್ಯಕ್ಕೆ ದೇಶಾದ್ಯಂತ ಮಲಹೊರುವ ಪದ್ಧತಿ ನಿಷೇಧವಾಗಿರುವುದರಿಂದ ಎಲ್ಲ ಜಿಲ್ಲಾಡಳಿತಗಳೂ ‘ನಮ್ಮ ಜಿಲ್ಲೆಯಲ್ಲಿ ಮಲ ಹೊರುವ ಪದ್ಧತಿಯಿಲ್ಲ’ ಎನ್ನುವುದನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಿವೆ. ಒಂದು ವೇಳೆ ಅಂತಹ ಪ್ರಕರಣಗಳು ನಡೆದರೆ ಅದರ ಪರಿಣಾಮವನ್ನು ಜಿಲ್ಲಾಧಿಕಾರಿಗಳು ಉಣ್ಣಬೇಕಾಗುತ್ತದೆ. ರಾಜ್ಯ ಸರಕಾರಕ್ಕೂ ಈ ಕಳಂಕ ಬೇಡವಾಗಿರುವುದರಿಂದ, ಇದನ್ನು ನಿಷೇಧಿಸುವ ಹೊಣೆಯನ್ನು ಅಧಿಕಾರಿಗಳ ತಲೆಯ ಮೇಲೆ ಹಾಕಿ ಬಿಟ್ಟಿದೆ. ಅಧಿಕಾರಿಗಳು ತಮ್ಮ ತಲೆ ಉಳಿಸಿಕೊಳ್ಳಲು ಗರಿಷ್ಠ ಪ್ರಯತ್ನ ಮಾಡುತ್ತಾರೆ. ಪರಿಣಾಮವಾಗಿ, ಈ ಕೆಟ್ಟ ಪದ್ಧತಿ ಎಲ್ಲಾದರೂ ಬೆಳಕಿಗೆ ಬಂದರೆ ಅದನ್ನು ಮುಚ್ಚಿ ಹಾಕಲು ಸಾಧ್ಯವೇ ಎನ್ನುವುದರ ಬಗ್ಗೆ ಅವರು ಮೊದಲು ಯೋಚಿಸುತ್ತಾರೆ. ಪ್ರಕರಣ ದಾಖಲಾಗಿಯೇ ಬಿಟ್ಟಿತು ಎಂದಾದರೆ, ಅವುಗಳು ನ್ಯಾಯಾಲಯದಲ್ಲಿ ಸಾಬೀತಾಗದಂತೆ ನೋಡಿಕೊಳ್ಳುವ ಉಸ್ತುವಾರಿಯನ್ನು ಅಧಿಕಾರಿಗಳೇ ವಹಿಸುತ್ತಾರೆ. ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿದ್ದರೂ ಚಿಂತಿಲ್ಲ, ಅವುಗಳು ಬಹಿರಂಗವಾಗದಂತೆ ನೋಡಿಕೊಳ್ಳುವುದನ್ನೇ ತಮ್ಮ ಕರ್ತವ್ಯವೆಂದು ಭಾವಿಸಿದ ಅಧಿಕಾರಿಗಳು ರಾಜ್ಯದಲ್ಲಿ, ದೇಶದಲ್ಲಿ ಬಹಳಷ್ಟಿದ್ದಾರೆ. ಮಲದ ಗುಂಡಿಗೆ ಇಳಿಯುವ ಕಾರ್ಮಿಕನ ಸ್ಥಾನಮಾನ ಸಮಾಜದಲ್ಲಿ ಏನು ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಈತ ಮಲದ ಗುಂಡಿಯಲ್ಲಿ ಬಿದ್ದು ಸತ್ತರೆ ಅದರ ವಿರುದ್ಧ ದೂರು ದಾಖಲಿಸುವಷ್ಟು ಧೈರ್ಯ ತೋರುವ ಕುಟುಂಬ ಸದಸ್ಯರೇ ಇರುವುದಿಲ್ಲ. ಯಾಕೆಂದರೆ ಆ ಮೂಲಕ ಅವರು ತಮ್ಮ ಮಾಲಕರ ವೈರವನ್ನು ಕಟ್ಟಿಕೊಳ್ಳಬೇಕು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಬಲಾಢ್ಯರ ಪರವಾಗಿ ಕೆಲಸ ಮಾಡುತ್ತದೆ. ಇಂತಹ ಸಂದರ್ಭದಲ್ಲಿ, ಸಂತ್ರಸ್ತರ ಕುಟುಂಬ ಮತ್ತು ಮಾಲಕರ ನಡುವೆ ಪೊಲೀಸರೇ ಮಧ್ಯಸ್ಥಿಕೆಯನ್ನು ನಡೆಸುತ್ತಾರೆ. ಮಾಲಕರು ನೀಡುವ ಸಣ್ಣ ಪರಿಹಾರವೂ ಸಂತ್ರಸ್ತರ ಕುಟುಂಬಕ್ಕೆ ಬಹುದೊಡ್ಡ ಮೊತ್ತವಾಗಿ ಕಾಣಬಹುದು. ಯಾಕೆಂದರೆ, ಮಲ ಶುಚಿಗೊಳಿಸುವ ಕೆಲಸಕ್ಕೆ ಅವರನ್ನು ಇಳಿಸಿರುವುದೇ ಅವರ ಬಡತನ. ಶೌಚಗುಂಡಿ ಶುಚಿಗೊಳಿಸುವ ಸಂದರ್ಭದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ 10 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಯವರೆಗೆ ಪರಿಹಾರ ನೀಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಈ ಪರಿಹಾರವನ್ನು ತನ್ನದಾಗಿಸಿಕೊಳ್ಳಲು ಸಂತ್ರಸ್ತ ಕುಟುಂಬ ಸುದೀರ್ಘ ಹೋರಾಟವನ್ನು ನಡೆಸಬೇಕು. ಹಾಗೆ ಕಾನೂನು ಹೋರಾಟ ಮಾಡುವ ಶಕ್ತಿ ಬಹುತೇಕ ಕುಟುಂಬಗಳಿಗೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಸ್ಥಿಕೆಯಲ್ಲಿ ಸಿಕ್ಕಿದ ಸಣ್ಣ ಪರಿಹಾರವೇ ಅವರಿಗೆ ಬಹುದೊಡ್ಡ ಮೊತ್ತವಾಗಿ ಬಿಡುತ್ತದೆ. 25,000 ಅಥವಾ 50,000 ರೂಪಾಯಿಯಲ್ಲಿ ಪ್ರಕರಣ ಮುಚ್ಚಿ ಹೋಗುತ್ತದೆ. ನಗರ ಪ್ರದೇಶಗಳಲ್ಲಿ ಇಂತಹ ದುರಂತಗಳು ಸಂಭವಿಸಿದಾಗ ಸಂತ್ರಸ್ತರ ಪರವಾಗಿ ವಿವಿಧ ಸಂಘಟನೆಗಳು ಕೈ ಜೋಡಿಸುತ್ತವೆಯಾದುದರಿಂದ ಪ್ರಕರಣ ಮುಚ್ಚಿ ಹಾಕುವುದು ಕಷ್ಟವಾಗುತ್ತದೆ. ಆದರೂ ಸುದೀರ್ಘ ಹೋರಾಟದಲ್ಲಿ ನ್ಯಾಯ ಪಡೆದವರ ಸಂಖ್ಯೆಯನ್ನು ಗಮನಿಸಿದಾಗ, ಯಾಕೆ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಲು ಹಿಂದೇಟು ಹಾಕುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ಮಲ ಹೊರುವ ಪದ್ಧತಿಯೇ ಅಮಾನವೀಯ. ಇದೇ ಸಂದರ್ಭದಲ್ಲಿ ಆ ಪದ್ಧತಿಗೆ ಬಲಿಯಾಗಿ ಮಲದಗುಂಡಿಯಲ್ಲಿ ಒಬ್ಬ ಪ್ರಾಣ ಕಳೆದುಕೊಳ್ಳುತ್ತಾನೆ ಎನ್ನುವುದು ನಾಗರಿಕ ಸಮಾಜಕ್ಕೆ ಕಳಂಕ. ಅವನನ್ನು ಅಂತಹ ಸ್ಥಿತಿಗೆ ದೂಡಿದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಮಾತ್ರವಲ್ಲ, ಸಂತ್ರಸ್ತ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡಬೇಕು. ಅವರ ಕುಟುಂಬಕ್ಕೆ ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉದ್ಯೋಗಗಳನ್ನು ನೀಡಬೇಕು. ಭವಿಷ್ಯದಲ್ಲಿ ಆ ಕುಟುಂಬಕ್ಕೆ ಘನತೆಯಿಂದ ಬದುಕುವ ವಾತಾವರಣವನ್ನು ಕಲ್ಪಿಸಿಕೊಡಬೇಕು. ನ್ಯಾಯಾಲಯದಲ್ಲಿ ನ್ಯಾಯ ವಂಚಿತರಾದ ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯದ ಮೇಲೆ ಅನ್ಯಾಯಗಳಾಗುತ್ತವೆ. ಮೊತ್ತ ಮೊದಲಾಗಿ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಾರೆ. ಇದು ಮಲಹೊರುವ ಪದ್ಧತಿ ಮುಂದುವರಿಯಲು ಕುಮ್ಮಕ್ಕು ನೀಡುತ್ತದೆ. ಇದೇ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬ ಸೂಕ್ತ ಪರಿಹಾರದಿಂದಲೂ ವಂಚಿತವಾಗುತ್ತದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಮೇಲ್‌ಜಾತಿಯ ಮಾಲಕನ ಅಸಮಾಧಾನವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬದುಕಬೇಕಾಗುತ್ತದೆ. ಆದುದರಿಂದ, ಮಲಹೊರುವ ಪದ್ಧತಿಗೆ ಬಲಿಯಾದ ಸಂತ್ರಸ್ತರ ಪ್ರಕರಣವನ್ನು ಸರಕಾರ ವಿಶೇಷವೆಂದು ಪರಿಗಣಿಸಿ ವಿಚಾರಣೆ ನಡೆಸಬೇಕು. ಇಂತಹ ಘಟನೆಗಳು ಪ್ರಾಥಮಿಕವಾಗಿ ಸತ್ಯವೆಂದು ಕಂಡಾಕ್ಷಣ ಅದಕ್ಕೆ ಕಾರಣರಾದವರನ್ನು ಬಂಧಿಸುವಂತಾಗಬೇಕು. ಹಾಗೆಯೇ ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಟ್ಟಳೆ ಕಾಯುವಂತಾಗಬಾರದು. ಮಲ ಹೊರುವ ಪದ್ಧತಿಗೆ ಕಾರ್ಮಿಕರು ಪದೇ ಪದೇ ಯಾಕೆ ಬಲಿಯಾಗುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಗಂಭೀರ ಅಧ್ಯಯನ ನಡೆಯಬೇಕು. ಒಂದೆಡೆ ನಿರುದ್ಯೋಗ ಸಮಸ್ಯೆ ಇದಕ್ಕೆ ಕಾರಣವಾದರೆ, ಜಾತಿ ವ್ಯವಸ್ಥೆಯೂ ಇವರನ್ನು ಮಲದಗುಂಡಿಗೆ ದೂಡುತ್ತಿದೆ. ಬರೇ ಕಾನೂನಿನ ಮೂಲಕ ಮಲ ಹೊರುವ ಪದ್ಧತಿಯನ್ನು ಇಲ್ಲವಾಗಿಸುವುದು ಕಷ್ಟ. ಇದರ ವಿರುದ್ಧ ಧಾರ್ಮಿಕ ಮುಖಂಡರು, ವಿವಿಧ ಗ್ರಾಮಗಳ ಮುಖ್ಯಸ್ಥರು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ನಾಯಕರು ಕೈ ಜೋಡಿಸಬೇಕು. ಮಲಹೊರುವ ಪದ್ಧತಿಯನ್ನು ಶಾಶ್ವತವಾಗಿ ಇಲ್ಲವಾಗಿಸದೇ ಶುಚಿತ್ವ ಆಂದೋಲನ ಯಶಸ್ವಿಯಾಗಲು ಸಾಧ್ಯವಿಲ್ಲ. ಮೊತ್ತ ಮೊದಲು, ಜಾತೀಯ ಮಲದ ಗುಂಡಿಯಿಂದ ನಮ್ಮ ಸಮಾಜ ಹೊರ ಬಂದು ಶುಚಿಯಾಗಬೇಕು. ಆಗ ಮಲ ಹೊರುವ ಪದ್ಧತಿಯಿಂದ ನಮ್ಮ ಸಮಾಜ ಸಹಜವಾಗಿಯೇ ಮುಕ್ತವಾಗುತ್ತದೆ. ಸಮಾಜ ಆ ಮೂಲಕ ನಾಗರಿಕ ಸಮಾಜವಾಗಿ ಬದಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News