ಮಹಿಳೆಯರ ಮೇಲೆ ದೌರ್ಜನ್ಯ: ಕಠಿಣ ಕ್ರಮ ತೆಗೆದುಕೊಳ್ಳದಂತೆ ಪ್ರಧಾನಿಯನ್ನು ತಡೆದವರು ಯಾರು?

Update: 2024-08-26 04:59 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅತ್ಯಾಚಾರ, ಮಹಿಳಾ ದೌರ್ಜನ್ಯಗಳಿಗಾಗಿ ದೇಶ ಸುದ್ದಿಯಲ್ಲಿದೆ. ಪಶ್ಚಿಮಬಂಗಾಳದಲ್ಲಿ ವೈದ್ಯೆಯೊಬ್ಬಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆ ಇಡೀ ದೇಶವನ್ನು ವ್ಯಾಪಿಸಿದ ಬೆನ್ನಿಗೇ ಮಹಾರಾಷ್ಟ್ರದ ಬದ್ಲಾಪುರ ಎಂಬಲ್ಲಿ ಇಬ್ಬರು ನರ್ಸರಿ ಮಕ್ಕಳ ಮೇಲೆ ನಡೆದ ದೌರ್ಜನ್ಯದ ವಿರುದ್ಧದ ಪ್ರತಿಭಟನೆ ಮಹಾರಾಷ್ಟ್ರ ಬಂದ್‌ವರೆಗೂ ಮುಂದುವರಿಯಿತು. ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್‌ಗೆ ಆದ ಅನ್ಯಾಯ ಈ ದೇಶದಲ್ಲಿ ಮಹಿಳೆಯರ ಅದರಲ್ಲೂ ಮಹಿಳಾ ಕ್ರೀಡಾಳುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಡೆಗೆ ಮತ್ತೊಮ್ಮೆ ವಿಶ್ವದ ಗಮನ ಸೆಳೆಯುವಂತೆ ಮಾಡಿತು. ಮಣಿಪುರದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳು ಹಸಿಯಾಗಿಯೇ ಇವೆೆ. ಇವೆಲ್ಲದರ ಮಧ್ಯೆ ರವಿವಾರ ಮಹಾರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ಮಾತನಾಡಿ ‘‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಹಾಪಾಪವಾಗಿದ್ದು ಇದರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ’’ ಎಂದು ಕರೆ ನೀಡಿದರು. ಈ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾದುದು ಕೇಂದ್ರ ಸರಕಾರವೇ ಆಗಿರುವಾಗ, ಕ್ರಮ ತೆಗೆದುಕೊಳ್ಳದಂತೆ ಅವರನ್ನು ತಡೆದವರು ಯಾರು? ಕಠಿಣ ಕ್ರಮ ತೆಗೆದುಕೊಳ್ಳಲು ಅವರಿಗಿರುವ ಅಡ್ಡಿಯೇನು? ಎನ್ನುವ ಪ್ರಶ್ನೆಗಳು ಉತ್ತರವಿಲ್ಲದೆ ಬಿದ್ದುಕೊಂಡಿವೆ.

ಪ್ರಧಾನಿ ಮೋದಿಯವರು ಲೈಂಗಿಕ ದೌರ್ಜನ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಾಮಾಣಿಕರಾಗಿದ್ದಾರೆ ಎಂದಾದರೆ ಅವರು ಮೊದಲು ತನ್ನ ಸರಕಾರದೊಳಗಿರುವ ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ. ಈ ದೇಶದ 151 ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ 16 ಮಂದಿಯ ವಿರುದ್ಧ ಅತ್ಯಾಚಾರ ಆರೋಪವಿದೆ ಎನ್ನುವುದನ್ನು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ. ಸಂಸ್ಥೆಯು ತನ್ನ ವರದಿಗಾಗಿ ಹಾಲಿ ಸಂಸದರು ಮತ್ತು ಶಾಸಕರು 2019ರಿಂದ 2024ರ ನಡುವಿನ ಅವಧಿಯಲ್ಲಿ ಸಲ್ಲಿಸಿದ 4,693 ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ. 16 ಸಂಸದರು ಮತ್ತು 135 ಶಾಸಕರು ‘ಮಹಿಳೆಯರ ವಿರುದ್ಧ ಅಪರಾಧವೆಸಗಿದ ಆರೋಪ’ಗಳನ್ನು ಎದುರಿಸುತ್ತಿರುವುದನ್ನು ಬಹಿರಂಗಪಡಿಸಿದೆ. ಮತ್ತು ಇವರೆಲ್ಲ ಪ್ರಧಾನಿ ಮೋದಿಯ ಸರಕಾರದ ಭಾಗವಾಗಿದ್ದಾರೆ. ಹೀಗಿರುವಾಗ ಈ ಸರಕಾರ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಎಷ್ಟರಮಟ್ಟಿಗೆ ಕಠಿಣ ಕ್ರಮ ತೆಗೆದುಕೊಳ್ಳಬಲ್ಲುದು? ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಅವರನ್ನು ಕೊಲೆಗೈದು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳನ್ನು ಸರಕಾರವೇ ಮುಂದೆ ನಿಂತು ಬಿಡುಗಡೆ ಮಾಡಿತು. ಕೇಂದ್ರ ಸರಕಾರವೂ ಈ ಬಿಡುಗಡೆಗೆ ಸಹಕರಿಸಿತು. ಬಿಡುಗಡೆ ಮಾಡಿದ ಅಪರಾಧಿಗಳನ್ನು ಮತ್ತೆ ಶರಣಾಗುವಂತೆ ಕಟ್ಟಕಡೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತು. ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಈ ಅತ್ಯಾಚಾರ ಆರೋಪಿಗಳು ಬಿಜೆಪಿಯ ಪರವಾಗಿ ಸಕ್ರಿಯವಾಗಿ ಭಾಗವಹಿಸಿದ್ದರು ಎನ್ನುವುದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಈ ದೇಶದ ಮಹಿಳಾ ಕ್ರೀಡಾಳುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಸಂಸದನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದಾಗಲೂ ಮೌನವಾಗಿದ್ದ ಪ್ರಧಾನಿ ಇದೀಗ, ಮಹಿಳಾ ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿರುವುದು ಬಹುದೊಡ್ಡ ವ್ಯಂಗ್ಯವಾಗಿದೆ.

ಅತ್ಯಂತ ಆತಂಕಕಾರಿ ಅಂಶವೆಂದರೆ, ಲೈಂಗಿಕ ಹಗರಣಗಳಲ್ಲಿ ಕರ್ನಾಟಕದ ರಾಜಕಾರಣಿಗಳು ಕೂಡ ಯಾವ ಎಗ್ಗಿಲ್ಲದೆಯೇ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಜಾರಿಗೆ ಬಂದ ದಿನದಿಂದ ರಾಜಕಾರಣಿಗಳು ಮತ್ತು ಅವರ ಅಶ್ಲೀಲ ಸೀಡಿಗಳು ಮಾಧ್ಯಮಗಳಲ್ಲಿ ಸದಾ ಚರ್ಚೆಯ ವಿಷಯವಾಗುತ್ತಾ ಬಂದಿವೆ. ರಾಜ್ಯ ರಾಜಕಾರಣವನ್ನು ಒಂದು ಹಂತದಲ್ಲಿ ಸೀಡಿಗಳು ಮತ್ತು ಪೆನ್‌ಡ್ರೈವ್‌ಗಳೇ ನಿಯಂತ್ರಿಸತೊಡಗಿದವು. ಯಾರು ಯಾರಿಂದ ಬ್ಲ್ಯಾಕ್‌ಮೇಲ್‌ಗೊಳಗಾಗುತ್ತಿದ್ದಾರೆ ಎನ್ನುವುದನ್ನು ಊಹಿಸುವುದೂ ಕಷ್ಟ ಎನ್ನುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿತ್ತು. ಬಹುತೇಕ ರಾಜಕಾರಣಿಗಳು ತಮ್ಮ ಸೀಡಿಗಳು ಬಿಡುಗಡೆಯಾಗದಂತೆ ತಡೆಯಾಜ್ಞೆಗಳನ್ನು ತಂದಿದ್ದಾರೆ. ಇಂದಿಗೂ ರಾಜ್ಯ ರಾಜಕೀಯವನ್ನು ಈ ಲೈಂಗಿಕ ಹಗರಣಗಳು ಬಿಟ್ಟೂ ಬಿಡದಂತೆ ಕಾಡುತ್ತಿವೆ. ಒಂದು ವರ್ಷದ ಹಿಂದೆ, ಬಿಜೆಪಿಯ ಹಿರಿಯ ನಾಯಕರಾಗಿದ್ದ ಯಡಿಯೂರಪ್ಪ ಅವರೇ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿಕೊಂಡರು. ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ಹೇಳಲು ಬಂದ ಸಂತಸ್ತೆಯ ಮೇಲೆಯೇ ದೌರ್ಜನ್ಯವೆಸಗಿದ ಆರೋಪ ಇವರ ಮೇಲಿದೆ. ಇದಾದ ಬಳಿಕ ದೇವೇಗೌಡರ ಮಗ, ಮೊಮ್ಮಕ್ಕಳು ಲೈಂಗಿಕ ಹಗರಣಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. ಇದೀಗ ವಿಶೇಷ ತನಿಖಾ ದಳ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.

ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣ ಬೇರೆ ರಾಜ್ಯಗಳಲ್ಲಾದರೆ ಭಾರೀ ಅಲ್ಲೋಲಕಲ್ಲೋಲವನ್ನು ಸೃಷ್ಟಿ ಮಾಡಿ ಬಿಡುತ್ತಿತ್ತು. ಆರೋಪಿಗಳು ಬಿಜೆಪಿಯ ಮಿತ್ರಪಕ್ಷದ ಮುಖಂಡರಾಗಿರುವುದರಿಂದ ಕೇಂದ್ರ ವರಿಷ್ಠರ ಮೇಲೂ ಭಾರೀ ದುಷ್ಪರಿಣಾಮ ಬೀರುತ್ತಿತ್ತು. ಆದರೆ ರಾಜ್ಯದಲ್ಲಿ ಪ್ರಜ್ವಲ್ ಬಂಧನದೊಂದಿಗೆ ಈ ಭಾರೀ ಲೈಂಗಿಕ ಹಗರಣ ಮಾಧ್ಯಮಗಳ ಪಾಲಿಗೆ ಮುಗಿದು ಹೋಯಿತು. ಇಲ್ಲಿ ಮಾಜಿ ಪ್ರಧಾನಿಯ ಪುತ್ರ ಮತ್ತು ಮೊಮ್ಮಕ್ಕಳೆಂದು ಗುರುತಿಸಲ್ಪಟ್ಟವರು ಮಹಿಳೆಯರನ್ನು ತಮ್ಮ ಲೈಂಗಿಕ ವಾಂಛೆಗಾಗಿ ಅತ್ಯಂತ ವಿಕೃತವಾಗಿ ಬಳಸಿಕೊಂಡಿದ್ದಾರೆ. ತಮ್ಮ ವಿಕೃತಿಯನ್ನು ಚಿತ್ರೀಕರಿಸಿ ಅವನ್ನು ಪೆನ್‌ಡ್ರೈವ್‌ಗಳಲ್ಲಿ ಶೇಖರಿಸಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಸಂತ್ರಸ್ತೆಯರು ದೂರು ನೀಡದಂತೆ ಅವರ ಬಾಯಿಮುಚ್ಚಿಸಲು ಸಕಲ ಪ್ರಯತ್ನ ಮಾಡಿದ ಆರೋಪಗಳಿವೆ. ಪಶ್ಚಿಮಬಂಗಾಳದಲ್ಲಿ ಎಲ್ಲೋ ಒಂದು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಆಕೆಯ ಕೊಲೆಗಾಗಿ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಅಲ್ಲಿನ ಬಿಜೆಪಿ ಒತ್ತಾಯಿಸುತ್ತದೆ. ಮಹಾರಾಷ್ಟ್ರದಲ್ಲಿ ಎಲ್ಲೋ ದೂರದ ಬದ್ಲಾಪುರದ ನರ್ಸರಿ ಸ್ಕೂಲೊಂದರಲ್ಲಿ ಇಬ್ಬರು ಎಳೆ ಕಂದಮ್ಮಗಳ ಮೇಲೆ ನಡೆದ ದೌರ್ಜನ್ಯಕ್ಕಾಗಿ ಅಲ್ಲಿನ ವಿರೋಧ ಪಕ್ಷಗಳು ಮಹಾರಾಷ್ಟ್ರವನ್ನೇ ಬಂದ್ ಮಾಡುವ ಮಟ್ಟಕ್ಕೆ ತಲುಪುತ್ತದೆ. ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಆ ಕೃತ್ಯಕ್ಕೆ ಹೊಣೆ ಮಾಡುತ್ತದೆ. ಆದರೆ ಕರ್ನಾಟಕದಲ್ಲಿ ಬಿಜೆಪಿಯ ಮಿತ್ರ ಪಕ್ಷದ ಮುಖಂಡರು ನೇರವಾಗಿ ದೌರ್ಜನ್ಯಗಳಲ್ಲಿ ಭಾಗವಹಿಸಿದ ಆರೋಪಗಳನ್ನು ಹೊತ್ತುಕೊಂಡಿದ್ದಾರೆ. ಒಬ್ಬ ನ ಮೇಲೆ ನೂರಾರು ಮಹಿಳೆಯರ ಮೇಲೆ ವಿಕೃತವಾಗಿ ನಡೆದುಕೊಂಡ ಆರೋಪವಿದ್ದರೆ, ದೇವೇಗೌಡರ ಇನ್ನೊಬ್ಬ ಮೊಮ್ಮಗನ ಮೇಲೆ ಯುವಕನ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ಆರೋಪವಿದೆ. ಇಷ್ಟಾದರೂ ಈ ಮಹಾ ಪಾಪದಲ್ಲಿ ಶಾಮೀಲಾಗಿರುವ ಪಕ್ಷದ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳಬೇಕು ಎಂದು ಪ್ರಧಾನಿ ಮೋದಿಗೆ ಅನ್ನಿಸಿಲ್ಲ. ತನ್ನ ಪಕ್ಷದ, ತನ್ನ ಕುಟುಂಬದ ಸದಸ್ಯರು ಎಸಗಿದ ಲೈಂಗಿಕ ಹಗರಣಗಳಿಗಾಗಿ ಪಶ್ಚಾತ್ತಾಪ ಪಟ್ಟು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೂ ಅನ್ನಿಸಿಲ್ಲ. ಪಾಪಗಳಲ್ಲಿ ಸ್ವತಃ ಸರಕಾರವೇ ಶಾಮೀಲಾಗಿರುವಾಗ, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಸಾಧ್ಯದ ಮಾತಾಗಿದೆ. ಪ್ರಧಾನಿ ಮೋದಿಯವರಿಗೆ ಮಹಿಳಾ ದೌರ್ಜನ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಉದ್ದೇಶವಿದ್ದರೆ, ಅದನ್ನು ಸರಕಾರದೊಳಗಿಂದಲೇ ಆರಂಭಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News