ಏಕೈಕ ಟೆಸ್ಟ್ ಪಂದ್ಯ | ದಕ್ಷಿಣ ಆಫ್ರಿಕಾದ ಪ್ರತಿರೋಧ ಮೆಟ್ಟಿನಿಂತ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಒಲಿದ ಪ್ರಶಸ್ತಿ

Update: 2024-07-01 16:40 GMT

PC : X/Jay Shah

ಚೆನ್ನೈ : ಲೌರಾ ವೊಲ್ವಾರ್ಟ್ ಶತಕ ಗಳಿಸಿ ಪ್ರತಿರೋಧ ಒಡ್ಡಿದರೂ ಆತಿಥೇಯ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಮಹಿಳೆಯರ ಟೆಸ್ಟ್ ಪಂದ್ಯವನ್ನು 10 ವಿಕೆಟ್ ಅಂತರದಿಂದ ಗೆದ್ದುಕೊಂಡಿದೆ.

4ನೇ ದಿನವಾದ ಸೋಮವಾರ ದಕ್ಷಿಣ ಆಫ್ರಿಕಾ ತಂಡವನ್ನು 2ನೇ ಇನಿಂಗ್ಸ್‌ನಲ್ಲಿ 373 ರನ್‌ಗೆ ಆಲೌಟ್ ಮಾಡಿದ ಭಾರತ ತಂಡವು ಗೆಲ್ಲಲು 37 ರನ್ ಗುರಿ ಪಡೆಯಿತು. ವಿಕೆಟ್ ನಷ್ಟವಿಲ್ಲದೆ ಕೇವಲ 9.2 ಓವರ್‌ಗಳಲ್ಲಿ ಭಾರತವು ಗೆಲುವಿನ ದಡ ಸೇರಿತು.

ಆರಂಭಿಕ ಜೋಡಿ ಶುಭಾ ಸತೀಶ್(ಔಟಾಗದೆ 13)ಹಾಗೂ ಶೆಫಾಲಿ ವರ್ಮಾ(ಔಟಾಗದೆ 24)ಭಾರತಕ್ಕೆ ಸುಲಭ ಜಯ ತಂದುಕೊಟ್ಟರು. ಭಾರತವು 2ನೇ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಅಂತರದಿಂದ ಜಯ ಸಾಧಿಸಿದೆ. 2002ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧವೇ ಭಾರತವು 10 ವಿಕೆಟ್ ಅಂತರದಿಂದ ಜಯ ಸಾಧಿಸಿತ್ತು.

ಭಾರತವು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾವು ಮೊದಲ ಇನಿಂಗ್ಸ್‌ನಲ್ಲಿ 266 ರನ್‌ಗೆ ಆಲೌಟಾಯಿತು. ಆದರೆ 2ನೇ ಇನಿಂಗ್ಸ್‌ನಲ್ಲಿ ಪ್ರಬಲ ಹೋರಾಟ ನೀಡಿದೆ. ವಾಲ್ವರ್ಟ್(122 ರನ್, 314 ಎಸೆತ, 16 ಬೌಂಡರಿ) ಹಾಗೂ ಸುನೆ ಲುಸ್(109 ರನ್,203 ಎಸೆತ)ಶತಕ ಗಳಿಸಿದರು. ಈ ಇಬ್ಬರ ಪ್ರಯತ್ನವು ಸೋಲಿನಿಂದ ಪಾರಾಗಲು ಸಾಕಾಗಲಿಲ್ಲ. ಭಾರತದ ಬೌಲರ್‌ಗಳು ಹಾಗೂ ಬ್ಯಾಟರ್‌ಗಳು ಪ್ರವಾಸಿ ತಂಡಕ್ಕೆ ಕಬ್ಬಿಣದ ಕಡಲೆಯಾದರು.

ದಕ್ಷಿಣ ಆಫ್ರಿಕಾವು 2 ವಿಕೆಟ್ ನಷ್ಟಕ್ಕೆ 232 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ವಾಲ್ವಾರ್ಟ್ ತನ್ನ ಚೊಚ್ಚಲ ಟೆಸ್ಟ್ ಶತಕ ಗಳಿಸಿ ಮಹತ್ವದ ಮೈಲಿಗಲ್ಲು ತಲುಪಿದರು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ವಾಲ್ವಾರ್ಟ್ ಇನಿಂಗ್ಸ್‌ಗೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ತೆರೆ ಎಳೆದರು. ಹಿನ್ನಡೆಯ ಹೊರತಾಗಿಯೂ ದಕ್ಷಿಣ ಆಫ್ರಿಕಾವು 300 ರನ್ ಗಡಿ ದಾಟಿತು. ಟೆಸ್ಟ್‌ನಲ್ಲಿ ಭಾರತ ವಿರುದ್ಧ ಗರಿಷ್ಠ ಮೊತ್ತ ಗಳಿಸಿ ನೂತನ ದಾಖಲೆ ನಿರ್ಮಿಸಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ದಕ್ಷಿಣ ಆಫ್ರಿಕಾವು 2003ರಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ್ದ 315 ರನ್ ದಾಖಲೆ ಹಿಂದಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News