ನಾವು ಟೀಕೆಗೆ ಅರ್ಹರಿದ್ದೇವೆ: ಪಾಕಿಸ್ತಾನದ ಆರಂಭಿಕ ಆಟಗಾರ ಮುಹಮ್ಮದ್ ರಿಝ್ವಾನ್
ಕರಾಚಿ : ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ತಂಡವು ಟೀಕೆಗೆ ಅರ್ಹವಾಗಿದೆ ಎಂದು ಪಾಕಿಸ್ತಾನದ ಆರಂಭಿಕ ಆಟಗಾರ ಮುಹಮ್ಮದ್ ರಿಝ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಫ್ಲೋರಿಡಾದಲ್ಲಿ ಐರ್ಲ್ಯಾಂಡ್ ವಿರುದ್ಧ 3 ವಿಕೆಟ್ ಅಂತರದಿಂದ ಜಯ ಸಾಧಿಸಿ ಗ್ರೂಪ್ ಹಂತದಲ್ಲೇ ತನ್ನ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿತ್ತು. ಎ ಗುಂಪಿನಿಂದ ಅದಾಗಲೇ ಭಾರತ ಹಾಗು ಅಮೆರಿಕ ಸೂಪರ್ 8 ಹಂತಕ್ಕೇರಿದ ಕಾರಣ ಈ ಪಂದ್ಯವು ಮಹತ್ವ ಪಡೆದಿರಲಿಲ್ಲ.
ಎ ಗುಂಪಿನಲ್ಲಿದ್ದ ಪಾಕಿಸ್ತಾನ ತಂಡವು ಸಹ ಆತಿಥ್ಯ ರಾಷ್ಟ್ರ ಅಮೆರಿಕ ಹಾಗೂ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸೋತಿತ್ತು. ಕೆನಡ ಹಾಗೂ ಐರ್ಲ್ಯಾಂಡ್ ವಿರುದ್ಧ ಜಯ ಸಾಧಿಸಿದ್ದರೂ ಇದು ಸೂಪರ್8 ಹಂತಕ್ಕೇರಲು ಸಾಕಾಗಲಿಲ್ಲ. ಪಾಕಿಸ್ತಾನ ತಂಡ ಲೀಗ್ ಹಂತದಲ್ಲಿ ಎ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿತ್ತು.
ತಂಡ ಎದುರಿಸುತ್ತಿರುವ ಟೀಕೆಗಳು ಸಮರ್ಥನೀಯವಾಗಿದೆ. ನಾವು ನಿರೀಕ್ಷೆಗೆ ಅನುಗುಣವಾಗಿ ಪ್ರದರ್ಶನ ನೀಡದ ಕಾರಣ ಈ ಟೀಕೆಗೆ ಅರ್ಹರಾಗಿದ್ದೇವೆ. ಟೀಕೆಗಳನ್ನು ಎದುರಿಸಲು ಸಾಧ್ಯವಾಗದ ಆಟಗಾರರು ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಟಿ20 ವಿಶ್ವಕಪ್ ನಲ್ಲಿ ನಮ್ಮ ಪ್ರದರ್ಶನದಿಂದ ನಾವು ನಿರಾಶೆಗೊಂಡಿದ್ದೇವೆ. ನಮ್ಮ ಸೋಲಿನ ಹಿಂದೆ ಹಲವು ಕಾರಣಗಳಿವೆ. ತಂಡ ಸೋತಾಗ ಬೌಲಿಂಗ್ ಹಾಗೂ ಬ್ಯಾಟಿಂಗ್ ಉತ್ತಮವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ರಿಝ್ವಾನ್ ಹೇಳಿದ್ದಾರೆ.
ವಿಶ್ವಕಪ್ ನಲ್ಲಿ ರಿಝ್ವಾನ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ರಿಝ್ವಾನ್ 36.66ರ ಸರಾಸರಿಯಲ್ಲಿ 90.90 ಸ್ಟ್ರೈಕ್ರೇಟ್ನಲ್ಲಿ 4 ಇನಿಂಗ್ಸ್ ಗಳಲ್ಲಿ ಕೇವಲ 110 ರನ್ ಗಳಿಸಿದ್ದರು. ಕೆನಡಾ ವಿರುದ್ಧ ಮಾತ್ರ ಅರ್ಧಶತಕ(ಔಟಾಗದೆ 53)ಗಳಿಸಲು ಶಕ್ತರಾಗಿದ್ದರು.
ನಾಯಕ ಬಾಬರ್ ಆಝಮ್ ಕೂಡ ಬ್ಯಾಟಿಂಗ್ನಲ್ಲಿ ಪರದಾಟ ನಡೆಸಿದ್ದು 4 ಪಂದ್ಯಗಳಲ್ಲಿ ಕೇವಲ 122 ರನ್ ಗಳಿಸಿದ್ದರು. 44 ಗರಿಷ್ಠ ಸ್ಕೋರಾಗಿತ್ತು.