ಮೈದಾನದಲ್ಲಿ ಹೃದಯಾಘಾತಕ್ಕೆ ಬಲಿಯಾದ ಚೀನಾದ 17ರ ಹರೆಯದ ಬ್ಯಾಡ್ಮಿಂಟನ್ ಆಟಗಾರ

Update: 2024-07-01 16:43 GMT

PC : X 

ಬೀಜಿಂಗ್ : ಚೀನಾದ 17ರ ಹರೆಯದ ಬ್ಯಾಡ್ಮಿಂಟನ್ ಆಟಗಾರ ಇಂಡೋನೇಶ್ಯದ ಯೊಗ್ಯಕರ್ತದಲ್ಲಿ ಪಂದ್ಯ ಆಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಝಾಂಗ್ ಝಿಜಿ ರವಿವಾರ ಏಶ್ಯ ಜೂನಿಯರ್ ಚಾಂಪಿಯನ್ಶಿಪ್ ನಲ್ಲಿ ಜಪಾನ್ನ ಕಝುಮಾ ಕವಾನೊ ವಿರುದ್ಧ ಮೊದಲ ಪಂದ್ಯದಲ್ಲಿ ಸ್ಪರ್ಧಿಸುತ್ತಿದ್ದಾಗ ಹಠಾತ್ತನೇ ಬ್ಯಾಡ್ಮಿಂಟನ್ ಅಂಗಣದಲ್ಲಿ ಕುಸಿದುಬಿದ್ದರು. ಬಿದ್ದ ಜಾಗದಲ್ಲಿ ತಕ್ಷಣವೇ ವೈದ್ಯಕೀಯ ಆರೈಕೆ ನೀಡಿ ಆ್ಯಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಬೇಗನೆ ದಾಖಲಿಸಿದ್ದರೂ ರವಿವಾರ ತಡರಾತ್ರಿ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

ಝಾಂಗ್ ಝಿಜಿಗೆ ಹಠಾತ್ ಹೃದಯ ಸ್ತಂಭನವಾಗಿದೆ ಎಂದು ಇಂಡೋನೇಶ್ಯದ ಬ್ಯಾಡ್ಮಿಂಟನ್ ಸಂಸ್ಥೆಯ ವಕ್ತಾರ ಬ್ರೋಟೊ ಹ್ಯಾಪಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.

ವಿಶ್ವ ಬ್ಯಾಡ್ಮಿಂಟನ್ ಪ್ರತಿಭಾವಂತ ಆಟಗಾರನನ್ನು ಕಳೆದುಕೊಂಡಿದೆ ಎಂದು ಬ್ಯಾಡ್ಮಿಂಟನ್ ಏಶ್ಯ ಹಾಗೂ ಪಿಬಿಎಸ್ಐ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಝಾಂಗ್ ಚಿಕ್ಕ ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ಅವರ ಪ್ರತಿಭೆ ಹಾಗೂ ಸಮರ್ಪಣೆಯನ್ನು ಗುರುತಿಸಿ ಕಳೆದ ವರ್ಷ ಚೀನಾದ ರಾಷ್ಟ್ರೀಯ ಯುವ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಈ ವರ್ಷದ ಆರಂಭದಲ್ಲಿ ಡಚ್ ಜೂನಿಯರ್ ಇಂಟರ್ನ್ಯಾಶನಲ್‌ ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದ ಝಾಂಗ್ ಬ್ಯಾಡ್ಮಿಂಟನ್ ಅಂಗಳದಲ್ಲಿ ತನ್ನ ಕೌಶಲ್ಯ ಪ್ರದರ್ಶಿಸಿದ್ದರು.

ಭಾರತದ ಡಬಲ್ಸ್ ಒಲಿಂಪಿಯನ್ ಪಿ.ವಿ.ಸಿಂಧು ಝಾಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ನಾನು ಝಾಂಗ್ ಕುಟುಂಬಕ್ಕೆ ಸಂತಾಪ ಸೂಚಿಸುವೆ. ವಿಶ್ವವು ಇಂದು ಶ್ರೇಷ್ಠ ಪ್ರತಿಭೆಯೊಂದನ್ನು ಕಳೆದುಕೊಂಡಿದೆ ಎಂದು ಸಿಂಧು ಎಕ್ಸ್‌ ನಲ್ಲಿ ಬರೆದಿದ್ದಾರೆ.

ಉದಯೋನ್ಮುಖ ಬ್ಯಾಡ್ಮಿಂಟನ್ ಪ್ರತಿಭೆ ಝಾಂಗ್ ಝಿಜಿಯ ನಿಧನದಿಂದ ದುಃಖವಾಗಿದೆ. ಝಾಂಗ್ ಕುಟುಂಬ, ಅವರ ಸಹ ಆಟಗಾರರು, ಚೀನಾದ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಇಡೀ ಚೀನಾದ ಬ್ಯಾಡ್ಮಿಂಟನ್ ಸಮುದಾಯಕ್ಕೆ ಸಾಂತ್ವನ ಹೇಳುತ್ತೇವೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News