ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಗಮನಸೆಳೆದ ಏಳು ಆಟಗಾರರು

Update: 2024-07-01 16:46 GMT

PC : PTI 

ಹೊಸದಿಲ್ಲಿ : ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಶನಿವಾರ ರಾತ್ರಿ ಟಿ20 ವಿಶ್ವಕಪ್ ಕಿರೀಟ ಧರಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಟಿ20 ವಿಶ್ವಕಪ್ ವಿಜಯವು ತಂಡದ ಸಂಘಟಿತ ಪ್ರಯತ್ನವಾಗಿದ್ದರೂ, ಏಳು ಆಟಗಾರರು ಎಲ್ಲರ ಗಮನಸೆಳೆದಿದ್ದಾರೆ.

►  ರೋಹಿತ್ ಶರ್ಮಾ(8 ಪಂದ್ಯ, 257 ರನ್): ಐಪಿಎಲ್‌ ನಲ್ಲಿ ಕಳಪೆ ಫಾರ್ಮ್ನಲ್ಲಿದ್ದ ರೋಹಿತ್ ಶರ್ಮಾ ಅವರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಕಸಿದುಕೊಳ್ಳಲಾಗಿತ್ತು. ಟಿ20 ವಿಶ್ವಕಪ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ರೋಹಿತ್ 157 ಸ್ಟ್ರೈಕ್ರೇಟ್‌ ನಲ್ಲಿ ಒಟ್ಟು 257 ರನ್ ಗಳಿಸಿದರು. ಆಸ್ಟ್ರೇಲಿಯ ವಿರುದ್ಧ ಗಳಿಸಿರುವ 92 ರನ್ ಟೂರ್ನಿಯಲ್ಲಿ ದಾಖಲಾಗಿರುವ 3ನೇ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. ಇಂಗ್ಲೆಂಡ್ ವಿರುದ್ಧ ಸೆಮಿ ಫೈನಲ್‌ ನಲ್ಲಿ 57 ರನ್ ಗಳಿಸಿ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾಗಿದ್ದರು. ಇದರೊಂದಿಗೆ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ನಾಯಕತ್ವದಲ್ಲಿ ಕೌಶಲ್ಯತೆ ಹಾಗೂ ಶಾಂತತೆಯನ್ನು ತೋರ್ಪಡಿಸಿದ್ದ ರೋಹಿತ್ ಡ್ರೆಸ್ಸಿಂಗ್ ರೂಮ್ ಯೋಜನೆಯನ್ನು ಪರಿಪೂರ್ಣವಾಗಿ ಕಾರ್ಯಗತಗೊಳಿಸಿದರು.

ರೋಹಿತ್ ಟೂರ್ನಿಯಲ್ಲಿ ಒಟ್ಟು 24 ಬೌಂಡರಿ ಹಾಗೂ 15 ಸಿಕ್ಸರ್ಗಳನ್ನು ಸಿಡಿಸಿದ್ದು ಭಾರತದ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.

►  ಸೂರ್ಯಕುಮಾರ್ ಯಾದವ್(8 ಪಂದ್ಯ,199 ರನ್): ಸ್ಕೈ ಖ್ಯಾತಿಯ ಸೂರ್ಯಕುಮಾರ್ ಟಿ20 ವಿಶ್ವಕಪ್ ಫೈನಲ್‌ ನಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್ನಲ್ಲಿ ಡೇವಿಡ್ ಮಿಲ್ಲರ್ ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯ ಸಮೀಪ ಅದ್ಭುತವಾಗಿ ಕ್ಯಾಚ್ ಪಡೆದು ಭಾರತಕ್ಕೆ ರೋಚಕ ಗೆಲುವು ಸಾಧಿಸಲು ತನ್ನದೇ ಆದ ಕಾಣಿಕೆ ನೀಡಿದರು. ಅಮೆರಿಕ ಹಾಗೂ ಇಂಗ್ಲೆಂಡ್ ವಿರುದ್ಧ ಸೂರ್ಯ ಅವರ ಇನಿಂಗ್ಸ್ ತಂಡದ ಮೇಲುಗೈಗೆ ನೆರವಾಗಿದೆ. ಆಸ್ಟ್ರೇಲಿಯ(31ರನ್,16 ಎಸೆತ) ಹಾಗೂ ಅಫ್ಘಾನಿಸ್ತಾನ(53 ರನ್,28 ಎಸೆತ)ವಿರುದ್ಧವೂ ಉತ್ತಮ ಇನಿಂಗ್ಸ್ ಆಡಿದ್ದರು. ಸೂರ್ಯ ಅವರು ಶೇ.60ರಷ್ಟು ತನ್ನ ಸ್ಕೋರನ್ನು ಬೌಂಡರಿ ಹಾಗೂ ಸಿಕ್ಸರ್ಗಳ ಮೂಲಕವೇ ಗಳಿಸಿದ್ದಾರೆ.

►  ಹಾರ್ದಿಕ್ ಪಾಂಡ್ಯ(8 ಪಂದ್ಯ, 144 ರನ್, 11 ವಿಕೆಟ್): ವಿಶ್ವಕಪ್ ನಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಜೀವನ ಕತೆಯನ್ನು ಮರು ರಚಿಸಿದ್ದಾರೆ. ಕಾಲಿಗೆ ಆಗಿರುವ ಗಾಯದಿಂದಾಗಿ 2023ರ ಏಕದಿನ ವಿಶ್ವಕಪ್ ನಡೆಯುತ್ತಿರುವಾಗಲೇ ಟೂರ್ನಿಯಿಂದ ಹೊರಗುಳಿದಿದ್ದರು. ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ಗೆ ವರ್ಗಾವಣೆಯಾಗಿ ಆ ತಂಡದ ನಾಯಕತ್ವವಹಿಸಿರುವುದು ದೊಡ್ಡ ವಿವಾದವಾಗಿತ್ತು. ಐಪಿಎಲ್‌ ನಲ್ಲಿನ ಕಳಪೆ ಫಾರ್ಮ್ ಅವರನ್ನು ಹೈರಾಣಾಗಿಸಿತ್ತು. ಟಿ20 ವಿಶ್ವಕಪ್ ನಲ್ಲಿ ಮಿಂಚಿನ ವೇಗದಲ್ಲಿ(151 ಸ್ಟ್ರೈಕ್ರೇಟ್) ರನ್ ಗಳಿಸಿದ್ದ ಪಾಂಡ್ಯ 11 ವಿಕೆಟ್‌ ಗಳನ್ನು ಉರುಳಿಸಿದ್ದರು. ವಿಶ್ವಕಪ್ ಫೈನಲ್‌ ನಲ್ಲಿ ಕ್ಲಾಸೆನ್ ಹಾಗೂ ಮಿಲ್ಲರ್ ವಿಕೆಟನ್ನು ಕಬಳಿಸಿ ಪಂದ್ಯದ ದಿಕ್ಕನ್ನು ಬದಲಿಸಿದ್ದ ಪಾಂಡ್ಯ 20 ರನ್ಗೆ 3 ವಿಕೆಟ್‌ ಗಳನ್ನು ಉರುಳಿಸಿದ್ದರು. ಇದು ಅವರ ಪಾಲಿನ ಸ್ಮರಣೀಯ ಕ್ಷಣವಾಗಿದೆ.

►  ಅಕ್ಷರ್ ಪಟೇಲ್(8 ಪಂದ್ಯ,92 ರನ್,9 ವಿಕೆಟ್): ಅಕ್ಷರ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಚುರುಕಿನ ಎಡಗೈ ಸ್ಪಿನ್ ಬೌಲಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾರತದ ಅತ್ಯಂತ ಶ್ರೇಷ್ಠ ಕ್ಷಣಕ್ಕೆ ಕಾರಣವಾಗಿದೆ. ಬೌಲಿಂಗ್ನಲ್ಲಿ ಇಂಗ್ಲೆಂಡ್ನ ಅಗ್ರ ಹಾಗೂ ಮಧ್ಯಮ ಸರದಿಯನ್ನು ಕಾಡಿದ್ದ್ದ ಅಕ್ಷರ್(3-23) ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ ನಲ್ಲಿ ಬ್ಯಾಟಿಂಗ್ನಲ್ಲಿ(47 ರನ್, 31 ಎಸೆತ, 4 ಸಿಕ್ಸರ್)ಮಹತ್ವದ ಕೊಡುಗೆ ನೀಡಿದ್ದರು. ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯದ ನಾಯಕ ಮಿಚೆಲ್ ಮಾರ್ಷ್ ನೀಡಿದ್ದ ಕಠಿಣ ಕ್ಯಾಚ್ ಪಡೆದಿದ್ದ ಅಕ್ಷರ್ ಪಂದ್ಯವು ಭಾರತದ ಪರ ವಾಲಲು ನೆರವಾಗಿದ್ದರು.

►  ಕುಲದೀಪ್ ಯಾದವ್(5 ಪಂದ್ಯ,10 ವಿಕೆಟ್): ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ಗಳಿಂದ ತೀವ್ರ ದಂಡನೆಗೆ ಒಳಗಾಗಿದ್ದರೂ ಗುಂಗುರು ಕೂದಲಿನ ಈ ಸ್ಪಿನ್ನರ್ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್‌ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ವಿರುದ್ಧ ಎಸೆದ ಚೆಂಡು ಆಕರ್ಷಕವಾಗಿತ್ತು.

►  ಜಸ್ಪ್ರೀತ್ ಬುಮ್ರಾ(8 ಪಂದ್ಯ,15 ವಿಕೆಟ್): ವಿಶ್ವ ಶ್ರೇಷ್ಠ ವೇಗದ ಬೌಲರ್ ಬುಮ್ರಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 4.2 ಇಕಾನಮಿ ರೇಟ್‌ ನಲ್ಲಿ ಒಟ್ಟು 15 ವಿಕೆಟ್‌ ಗಳನ್ನು ಉರುಳಿಸಿದ್ದಾರೆ. ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಟೂರ್ನಿಯಲ್ಲಿ ಮುಹಮ್ಮದ್ ರಿಝ್ವಾನ್(ಪಾಕಿಸ್ತಾನ), ಫಿಲ್ ಸಾಲ್ಟ್(ಇಂಗ್ಲೆಂಡ್), ರೀಝಾ ಹೆಂಡ್ರಿಕ್ಸ್ ಹಾಗೂ ಮಾರ್ಕೊ ಜಾನ್ಸನ್(ದಕ್ಷಿಣ ಆಫ್ರಿಕಾ)ರಂತಹ ಪ್ರಮುಖ ಆಟಗಾರರನ್ನು ಕ್ಲೀನ್ಬೌಲ್ಡ್ ಮಾಡಿದ್ದರು.

►  ಅರ್ಷದೀಪ್ ಸಿಂಗ್(8 ಪಂದ್ಯ,17 ವಿಕೆಟ್): ಚಂಡಿಗಡದ 25ರ ಹರೆಯದ ಬೌಲರ್ ಅರ್ಷದೀಪ್ ಅಮೆರಿಕದ ಪಿಚ್ಗಳಲ್ಲಿ ಬೌನ್ಸ್ ಪಡೆದಿದ್ದು ಒಟ್ಟು 17 ವಿಕೆಟ್‌ ಗಳನ್ನು ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಫಝಲ್ ಹಕ್ ಫಾರೂಕಿ ಕೂಡ 17 ವಿಕೆಟ್‌ ಗಳನ್ನು ಪಡೆದಿದ್ದಾರೆ. ಒಂದೇ ಓವರ್ನಲ್ಲಿ ಆಸ್ಟ್ರೇಲಿಯದ ಅಪಾಯಕಾರಿ ಬ್ಯಾಟರ್ಗಳಾದ ಟಿಮ್ ಡೇವಿಡ್ ಹಾಗೂ ಮ್ಯಾಥ್ಯೂ ವೇಡ್ ವಿಕೆಟ್‌ ಗಳನ್ನು ಪಡೆದು ಗಮನ ಸೆಳೆದಿದ್ದರು.

ವಿಕೆಟ್‌ ಕೀಪರ್-ಬ್ಯಾಟರ್ ರಿಷಭ್ ಪಂತ್, ರವೀಂದ್ರ ಜಡೇಜ ಹಾಗೂ ಶಿವಂ ದುಬೆ ಭಾರತದ ವಿಶ್ವಕಪ್ ಗೆಲುವಿಗೆ ನೆರವಾಗಿದ್ದಾರೆ. ಪಂತ್ ಅವರು ಪಾಕಿಸ್ತಾನದ ವಿರುದ್ಧ 31 ಎಸತಗಳಲ್ಲಿ 42 ರನ್ ಗಳಿಸಿದ್ದರು.

ಸಂಜು ಸ್ಯಾಮ್ಸನ್, ಯಜುವೇಂದ್ರ ಚಹಾಲ್ ಹಾಗೂ ಯಶಸ್ವಿ ಜೈಸ್ವಾಲ್ ಪಂದ್ಯ ಆಡುವ ಅವಕಾಶ ಪಡೆಯಲಿಲ್ಲ.

ಕೋಚ್ ರಾಹುಲ್ ದ್ರಾವಿಡ್ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಮೂಲಕ ತಮ್ಮ ಕೋಚ್ ಅವಧಿಯನ್ನು ಪೂರೈಸಿದರು.

► ಫೈನಲ್‌ ನಲ್ಲಿ ಮೈಕೊಡವಿ ಆಡಿದ ಕೊಹ್ಲಿ

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯಕ್ಕಿಂತ ಮೊದಲು 1,4,0,24,37,0,9 ರನ್ ಗಳಿಸಿದ್ದರು. 2024ರ ಐಪಿಎಲ್‌ ನಲ್ಲಿ ಕೊಹ್ಲಿ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು. ಫೈನಲ್ ಪಂದ್ಯದಲ್ಲಿ ತನ್ನೆಲ್ಲಾ ಅನುಭವ ಧಾರೆ ಎರೆದ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 59 ಎಸೆತಗಳಲ್ಲಿ 76 ರನ್ ಗಳಿಸಿದರು. ಫೈನಲ್‌ ನಲ್ಲಿ ಹಿಂದಿನ 7 ಇನಿಂಗ್ಸ್ನ ಒಟ್ಟು ರನ್ಗಿಂತ(75) ಹೆಚ್ಚು ಸ್ಕೋರ್ ಕಲೆ ಹಾಕಿದರು. ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 151 ರನ್ ಗಳಿಸಿದ್ದ ಕೊಹ್ಲಿ ಟಿ20 ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.

ಕೊಹ್ಲಿ ಟಿ20 ಕ್ರಿಕೆಟ್‌ ನಲ್ಲಿ 16 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇದೊಂದು ವಿಶ್ವ ದಾಖಲೆಯಾಗಿದೆ. 8 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ವಿಶ್ವಕಪ್ವೊಂದರಲ್ಲಿ ಗೆದ್ದುಕೊಂಡ್ದಿರು. ಈ ಸಾಧನೆಯನ್ನು ಯಾವ ಆಟಗಾರನೂ ಮಾಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News