5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಅತಿ ನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ನಲ್ಲಿ ಪರ್ತ್ ನಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಮಂಗಳವಾರ ಪ್ರಕಟಿಸಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯು ಸಾಂಪ್ರದಾಯಿಕ ಹೊಸ ವರ್ಷದ ಟೆಸ್ಟ್‌ನೊಂದಿಗೆ ಸಿಡ್ನಿಯಲ್ಲಿ ಸಂಪನ್ನಗೊಳ್ಳಲಿದೆ.
30ಕ್ಕೂ ಅಧಿಕ ವರ್ಷಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಮೊದಲ ಐದು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22ರಂದು ಪರ್ತ್ ಸ್ಟೇಡಿಯಮ್ನಲ್ಲಿ ಆರಂಭಗೊಳ್ಳಲಿದೆ.
ಸರಣಿಯ ಎರಡನೇ ಟೆಸ್ಟ್ ಹಗಲು-ರಾತ್ರಿ ಪಂದ್ಯವಾಗಿ ಡಿಸೆಂಬರ್ 6ರಂದು ಅಡಿಲೇಡ್ ನಲ್ಲಿ ನಡೆಯುತ್ತದೆ. ಮೂರನೇ ಪಂದ್ಯವು ಡಿಸೆಂಬರ್ 14ರಂದು ಬ್ರಿಸ್ಬೇನ್ ನ ಗಾಬಾ ಸ್ಟೇಡಿಯಮ್ ನಲ್ಲಿ ನಡೆದರೆ, ನಾಲ್ಕನೇ ಪಂದ್ಯವು ಡಿಸೆಂಬರ್ 26ರಂದು ಸಾಂಪ್ರದಾಯಿಕ ʼಬಾಕ್ಸಿಂಗ್ ಡೇʼ ಟೆಸ್ಟ್ ಆಗಿ ಮೆಲ್ಬರ್ ನಲ್ಲಿ ಪ್ರಾರಂಭಗೊಳ್ಳುತ್ತದೆ.
2014-15ರ ಬಳಿಕ, ಆಸ್ಟ್ರೇಲಿಯವು ಸ್ವದೇಶದಲ್ಲಿ ನಡೆದ ಸರಣಿಯಲ್ಲಿ ಭಾರತವನ್ನು ಸೋಲಿಸಿಲ್ಲ. 2018-19 ಮತ್ತು 2020-21ರಲ್ಲಿ ನಡೆದ ಎರಡೂ ಸರಣಿಗಳಲ್ಲಿ ಆಸ್ಟ್ರೇಲಿಯ ಸೋಲನುಭವಿಸಿದೆ.
ಆದರೆ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಮತ್ತು ಕಳೆದ ವರ್ಷ ನಡೆದ 50 ಓವರ್ ಗಳ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿದೆ.
ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಆ್ಯಶಸ್ ಸರಣಿಯ ವೇಳಾಪಟ್ಟಿಯನ್ನೂ ಕ್ರಿಕೆಟ್ ಆಸ್ಟ್ರೇಲಿಯ ಹೊರಡಿಸಿದೆ. ಸರಣಿಯು ಏಕದಿನ ಪಂದ್ಯದೊಂದಿಗೆ ಸಿಡ್ನಿಯಲ್ಲಿ ಜನವರಿ 12ರಂದು ಆರಂಭಗೊಳ್ಳಲಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಜನವರಿ 30ರಂದು ಆರಂಭಗೊಳ್ಳುವ ಹಗಲು-ರಾತ್ರಿ ಟೆಸ್ಟ್‌ನೊಂದಿಗೆ ಆ್ಯಶಸ್ ಸರಣಿಯು ಮುಕ್ತಾಯಗೊಳ್ಳಲಿದೆ.
“ಇದು ಅತ್ಯಂತ ನಿರೀಕ್ಷಿತ ಸರಣಿಗಳ ಪೈಕಿ ಒಂದಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ವಿಸ್ತøತ ಭಾಗವನ್ನು ಮತ್ತು ಬಹು ಮಾದರಿಗಳ ಮಹಿಳಾ ಆ್ಯಶಸ್ ಸರಣಿಯನ್ನು ನೋಡಲು ಕ್ರಿಕೆಟ್ ಜಗತ್ತು ಕಾತರವಾಗಿದೆ'' ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ಹೇಳಿದರು.
ಆಸ್ಟ್ರೇಲಿಯ-ಭಾರತ ಟೆಸ್ಟ್ ಸರಣಿ ವೇಳಾಪಟ್ಟಿ
ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್
ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಹಗಲು-ರಾತ್ರಿ)
ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬರ್ನ್
ಐದನೇ ಟೆಸ್ಟ್: ಜನವರಿ 3-7, ಸಿಡ್ನಿ