100ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾದ ಅಶ್ವಿನ್, ಬೈರ್ಸ್ಟೋವ್
ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ಅಪರೂಪಕ್ಕೊಮ್ಮೆ ಘಟಿಸುವ ಕ್ಷಣಕ್ಕೆ ಸಾಕ್ಷಿಯಾಗಲು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ಸ್ಟೋವ್ ಸಜ್ಜಾಗಿದ್ದಾರೆ. ಈ ಇಬ್ಬರು ಗುರುವಾರದಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 100ನೆ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರು 100ನೇ ಪಂದ್ಯದ ಮೈಲಿಗಲ್ಲು ತಲುಪುತ್ತಿರುವುದು ಇದು ನಾಲ್ಕನೇ ಬಾರಿ.
2000ರಲ್ಲಿ ಮೊದಲ ಬಾರಿ ಇದು ನಡೆದಿತ್ತು. ಇಂಗ್ಲೆಂಡ್ ನ ಮಾಜಿ ನಾಯಕ ಮೈಕಲ್ ಅಥರ್ಟನ್ ಹಾಗೂ ಅಲೆಕ್ ಸ್ಟಿವರ್ಟ್, ಓಲ್ಡ್ ಟ್ರಾಫೋರ್ಡ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಒಟ್ಟಿಗೆ 100ನೇ ಟೆಸ್ಟ್ ಪಂದ್ಯ ಆಡಿದ್ದರು.
ಎರಡನೇ ಬಾರಿ ಇದು ಘಟಿಸಿದಾಗ ಮೂವರು ಆಟಗಾರರು 100ನೇ ಪಂದ್ಯ ಆಡಿದ್ದರು. 2006ರಲ್ಲಿ ಸೆಂಚೂರಿಯನ್ನಲ್ಲಿ ದಕ್ಷಿಣ ಆಫ್ರಿಕಾ-ನ್ಯೂಝಿಲ್ಯಾಂಡ್ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ಶಾನ್ ಪೊಲಾಕ್ ಹಾಗೂ ಸ್ಟೀಫನ್ ಫ್ಲೆಮಿಂಗ್ 100ನೇ ಟೆಸ್ಟ್ ಪಂದ್ಯ ಆಡಿದ್ದರು.
2013ರಲ್ಲಿ ಮೂರನೇ ಬಾರಿ ಇದು ಘಟಿಸಿತು. ಪರ್ತ್ನಲ್ಲಿ ನಡೆದಿದ್ದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವಿನ ಆ್ಯಶನ್ ಸರಣಿಯಲ್ಲಿ ಅಲಿಸ್ಟೈರ್ ಕುಕ್ ಹಾಗೂ ಮೈಕಲ್ ಕ್ಲಾರ್ಕ್ 100ನೇ ಪಂದ್ಯ ಆಡಿದ್ದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಬಾರಿ ಎದುರಾಳಿ ತಂಡಗಳ ಆಟಗಾರರಾದ ಅಶ್ವಿನ್ ಹಾಗೂ ಬೈರ್ಸ್ಟೋವ್ ಒಂದೇ ಪಂದ್ಯದಲ್ಲಿ 100ನೇ ಪಂದ್ಯ ಆಡಲಿದ್ದಾರೆ.
ಭಾರತ-ಇಂಗ್ಲೆಂಡ್ ಪಂದ್ಯದ ನಂತರ ನ್ಯೂಝಿಲ್ಯಾಂಡ್ ನಾಯಕ ಟಿಮ್ ಸೌಥಿ ಹಾಗೂ ಅವರ ಉತ್ತರಾಧಿಕಾರಿ ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಈ ಮೈಲಿಗಲ್ಲನ್ನು ಒಟ್ಟಿಗೆ ಕ್ರಮಿಸಲಿದ್ದಾರೆ.
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಕ್ಲಬ್ ಗೆ ಸೇರ್ಪಡೆಯಾಗಿ ಅನಿಲ ಕುಂಬ್ಳೆ ಹೆಜ್ಜೆ ಗುರುತನ್ನು ಅನುಸರಿಸಿದ್ದ ಅಶ್ವಿನ್ 2011ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ತನ್ನ 13 ವರ್ಷಗಳ ವೃತ್ತಿಬದುಕಿನಲ್ಲಿ ಚೆನ್ನೈ ಸ್ಪಿನ್ನರ್ ಸಾಕಷ್ಟು ಸಾಧನೆ ಮಾಡಿದ್ದಾರೆ.
ಇದೇ ವೇಳೆ, 34ರ ಹರೆಯದ ಬೈರ್ಸ್ಟೋವ್ ಧರ್ಮಶಾಲಾದಲ್ಲಿ 100ನೇ ಟೆಸ್ಟ್ ಕ್ಯಾಪ್ ಧರಿಸಿದ ಇಂಗ್ಲೆಂಡ್ ನ 17ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಬೈರ್ಸ್ಟೋವ್ 2012ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು.
ಈಗ ನಡೆಯುತ್ತಿರುವ ಸರಣಿಯಲ್ಲಿ 3-1 ಮುನ್ನಡೆಯಲ್ಲಿರುವ ಭಾರತವು ಈಗಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಧರ್ಮಶಾಲಾದಲ್ಲಿ ನಡೆಯುವ ಟೆಸ್ಟ್ ಪಂದ್ಯವು ಅಶ್ವಿನ್ ಹಾಗೂ ಬೈರ್ಸ್ಟೋವ್ ಪಾಲಿಗೆ ವಿಶೇಷವಾಗಿದೆ.