ಏಶ್ಯನ್ ಗೇಮ್ಸ್ ; ಭಾರತದ ಪುರುಷರ ಹಾಕಿ ತಂಡ ಪಯಣ
ಹೊಸದಿಲ್ಲಿ : ಹಾಂಗ್ಝೌನಲ್ಲಿ ಸೆಪ್ಟಂಬರ್ 23ರಿಂದ ಆರಂಭವಾಗಲಿರುವ ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಭಾರತದ ಪುರುಷರ ಹಾಕಿ ತಂಡವು ಚೀನಾಕ್ಕೆ ಇಂದು ಪ್ರಯಾಣ ಬೆಳೆಸಿದೆ.
ಸೆಪ್ಟಂಬರ್ 24ರಂದು ಉಜ್ಬೇಕಿಸ್ತಾನ ವಿರುದ್ಧ ಆಡುವ ಮೂಲಕ ಭಾರತವು ಗೇಮ್ಸ್ ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಟೂರ್ನಮೆಂಟ್ ನಲ್ಲಿ ಭಾರತವು ಬಲಿಷ್ಠ ಸ್ಪರ್ಧಿಗಳಾದ ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಸಿಂಗಾಪುರ ಹಾಗೂ ಉಜ್ಬೇಕಿಸ್ತಾನ ಒಳಗೊಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ವೇಳೆ ಬಿ ಗುಂಪಿನಲ್ಲಿ ಕೊರಿಯಾ, ಮಲೇಶ್ಯ, ಚೀನಾ, ಒಮಾನ್, ಥಾಯ್ಲೆಂಡ್ ಹಾಗೂ ಇಂಡೋನೇಶ್ಯ ತಂಡಗಳಿವೆ.
ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್ ನಲ್ಲಿ ಸ್ಥಾನ ಪಡೆಯುತ್ತವೆ. ಇದು ಸ್ಪರ್ಧೆಯಲ್ಲಿ ಕುತೂಹಲ ಹಾಗೂ ಸ್ಪರ್ಧೆ ಹುಟ್ಟು ಹಾಕಲಿದೆ. ಭಾರತದ ಹಾಕಿ ತಂಡಕ್ಕೆ ಹರ್ಮನ್ ಪ್ರೀತ್ ಸಿಂಗ್ ನಾಯಕತ್ವ ವಹಿಸಲಿದ್ದು, ಹಾರ್ದಿಕ್ ಉಪ ನಾಯಕನಾಗಿರುತ್ತಾರೆ. ಇತ್ತೀಚೆಗೆ ಚೆನ್ನೈನಲ್ಲಿ ಕೊನೆಗೊಂಡಿರುವ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿನ ಉತ್ತಮ ಪ್ರದರ್ಶನದ ಮೂಲಕ ಭಾರತ ಭರ್ಜರಿ ತಯಾರಿ ನಡೆಸಿದೆ. ಇದೀಗ ಅದೇ ಪ್ರದರ್ಶನವನ್ನು ಮುಂದುವರಿಸಿ ಏಶ್ಯನ್ ಗೇಮ್ಸ್ ನಲ್ಲಿ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ನಮ್ಮ ತಂಡ ಏಶ್ಯನ್ ಗೇಮ್ಸ್ ಗೆ ಉತ್ತಮ ತಯಾರಿ ನಡೆಸಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅದೇ ರೀತಿಯ ಪ್ರದರ್ಶನ ಮುಂದುವರಿಸುವುದು ನಮ್ಮ ಮುಂದಿರುವ ಗುರಿ. ನಮ್ಮ ಗುಂಪಿನಲ್ಲಿ ಕೆಲವು ಕಠಿಣ ಎದುರಾಳಿಗಳನ್ನು ಹೊಂದಿದ್ದೇವೆ. ನಮ್ಮ ತಯಾರಿಯ ಮೇಲೆ ನಮಗೆ ವಿಶ್ವಾಸವಿದ್ದು, ಪದಕ ಗೆಲ್ಲುವ ಭರವಸೆ ಇದೆ ಎಂದು ಚೀನಾಕ್ಕೆ ಪ್ರಯಾಣಿಸುವ ಮೊದಲು ಭಾರತದ ನಾಯಕ ಹರ್ಮನ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಭಾರತ ಹಾಕಿ ತಂಡದಲ್ಲಿ ಗೋಲ್ ಕೀಪರ್ಗಳಾದ ಪಿ.ಆರ್.ಶ್ರೀಜೇಶ್ ಹಾಗೂ ಕ್ರಿಶನ್ ಪಾಠಕ್, ಡಿಫೆಂಡರ್ಗಳಾಗಿ ವರುಣ್ ಕುಮಾರ್, ಅಮಿತ್ ರೋಹಿದಾಸ್, ಜರ್ಮನ್ ಪ್ರೀತ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್ ಹಾಗೂ ಸಂಜಯ್ ಅವರಿದ್ದಾರೆ.
ಮಿಡ್ ಫೀಲ್ಡರ್ ಗಳಾಗಿ ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಮನ್ ಪ್ರೀತ್ ಸಿಂಗ್, ವಿವೇಕ್ ಸಾಗರ ಪ್ರಸಾದ್, ಸುಮಿತ್ ಹಾಗೂ ಶಂಶೇರ್ ಸಿಂಗ್ ಅವರಿದ್ದಾರೆ. ಅಭಿಷೇಕ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ಸುಖಜೀತ್ ಸಿಂಗ್ ಹಾಗೂ ಲಲಿತ್ ಕುಮಾರ್ ಉಪಾಧ್ಯಾಯ ಅವರು ಫಾರ್ವಡರ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಭಾರತವು ಗ್ರೂಪ್ ಹಂತದಲ್ಲಿ ಸಿಂಗಾಪುರ, ಜಪಾನ್ ಹಾಗೂ ಪಾಕಿಸ್ತಾನ ತಂಡಗಳನ್ನು ಕ್ರಮವಾಗಿ ಸೆಪ್ಟಂಬರ್ 26,28 ಹಾಗೂ 30ರಂದು ಎದುರಿಸಲಿದೆ. ಅಕ್ಟೋಬರ್ 2ರಂದು ಬಾಂಗ್ಲಾದೇಶ ವಿರುದ್ಧ ಕೊನೆಯ ಗ್ರೂಪ್ ಪಂದ್ಯವನ್ನಾಡಲಿದೆ. ಹಾಂಗ್ಝೌನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ ನಲ್ಲಿ ಭಾರತವು ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.