ಬ್ಯಾಟಿಂಗ್, ಬೌಲಿಂಗ್ ಕೋಚ್ ನೇಮಿಸಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ
ಢಾಕಾ : ಮಂಬರುವ ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಗಿಂತ ಮೊದಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದಲ್ಲಿ ಮಹತ್ವದ ನೇಮಕವನ್ನು ಮಾಡಿದೆ.
ಡೇವಿಡ್ ಹೆಂಪ್ ರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿಯೂ, ಆ್ಯಂಡ್ರೆ ಆಡಮ್ಸ್ ರನ್ನು ಬೌಲಿಂಗ್ ಕೋಚ್ ಆಗಿಯೂ ನೇಮಕ ಮಾಡಲಾಗಿದ್ದು, ಈ ಇಬ್ಬರು ಬಿಸಿಬಿಯೊಂದಿಗೆ 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಡೇವಿಡ್ ಹೆಂಪ್ ಕಳೆದ ವರ್ಷ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಂಡಿದ್ದ ಬಾಂಗ್ಲಾದೇಶ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿದ್ದರು.
ಬರ್ಮುಡಾದ ಮಾಜಿ ಅಂತರ್ರಾಷ್ಟ್ರೀಯ ಆಟಗಾರ ಹೆಂಪ್ ಅವರು ಗ್ಲಾಮೊರ್ಗನ್, ಫ್ರೀ ಸ್ಟೇಟ್ ಹಾಗೂ ವಾರ್ವಿಕ್ಶೈರ್ ನಂತಹ ತಂಡಗಳನ್ನು ಪ್ರತಿನಿಧಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 15,500ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಲೆವೆಲ್-4 ಕೋಚಿಂಗ್ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಹೆಂಪ್ ಈ ಹಿಂದೆ ಪಾಕಿಸ್ತಾನದ ಮಹಿಳಾ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿ , ವಿಕ್ಟೋರಿಯ ರಾಜ್ಯ ಮಹಿಳಾ ತಂಡ ಹಾಗೂ ಮಹಿಳಾ ಬಿಗ್ ಬ್ಯಾಶ್ ಲೀಗ್ ನಲ್ಲಿ ಮೆಲ್ಬೊರ್ನ್ ಸ್ಟಾರ್ಸ್ನ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯೂಝಿಲ್ಯಾಂಡ್ ನ ಮಾಜಿ ಆಲ್ರೌಂಡರ್ ಆ್ಯಂಡ್ರೆ ಆಡಮ್ಸ್ ಬಾಂಗ್ಲಾದೇಶದ ರಾಷ್ಟ್ರೀಯ ತಂಡದ ಬೌಲಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ಕೋಚಿಂಗ್ ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಡಮ್ಸ್, ಈ ಹಿಂದೆ ವೈಟ್ ಫರ್ನ್ಸ್, ನ್ಯೂಝಿಲ್ಯಾಂಡ್ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ಹಾಗೂ 2022-23ರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯದ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. 2018ರಿಂದ 2023ರ ತನಕ ಆಸ್ಟ್ರೇಲಿಯದ ಶೆಫೀಲ್ಡ್ ಶೀಲ್ಡ್ನಲ್ಲಿ ನ್ಯೂ ಸೌತ್ ವೇಲ್ಸ್ ಬ್ಲೂಸ್ಗೆ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು.
ಹೆಂಪ್ ಹಾಗೂ ಆಡಮ್ಸ್ ತಕ್ಷಣವೇ ತಮ್ಮ ಹುದ್ದೆಯನ್ನು ವಹಿಸಿಕೊಂಡು ಮುಂಬರುವ ಸ್ವದೇಶದಲ್ಲಿ ನಡೆಯುವ ಶ್ರೀಲಂಕಾ ವಿರುದ್ಧ ಸರಣಿಗೆ ತಂಡವನ್ನು ಸಜ್ಜುಗೊಳಿಸಲಿದ್ದಾರೆ.
ಸರಣಿಯು ಮಾರ್ಚ್ 2024ರಂದು ನಿಗದಿಯಾಗಿದೆ.