ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ಪೋಸ್ಟರ್‌ನಲ್ಲಿ ರೋಹಿತ್‌ಗೆ ಖೊಕ್

Update: 2024-11-10 16:02 GMT

PC : @mufaddal_vohra

ಪರ್ತ್ : ಆಸ್ಟ್ರೇಲಿಯ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಧಿಕೃತ ಪ್ರಸಾರ ಚಾನೆಲ್ ಆಗಿರುವ ಆಸ್ಟ್ರೇಲಿಯದ ‘ಫಾಕ್ಸ್ ಕ್ರಿಕೆಟ್’, ಈ ಸರಣಿಯ ಪೋಸ್ಟರನ್ನು ಕೈಬಿಟ್ಟಿದೆ. ಆಸ್ಟ್ರೇಲಿಯ-ಪಾಕಿಸ್ತಾನ ಏಕದಿನ ಸರಣಿಯ ಪ್ರಸಾರಕನೂ ಆಗಿರುವ ಚಾನೆಲ್, ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದ ನೇರ ಪ್ರಸಾರದ ವೇಳೆ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಪೋಸ್ಟರನ್ನು ಪ್ರದರ್ಶಿಸಿ ಮುಖಭಂಗಕ್ಕೀಡಾಗಿದೆ.

ಈ ಪೋಸ್ಟರ್‌ನಲ್ಲಿ ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾರ ಚಿತ್ರ ಇಲ್ಲದಿರುವುದನ್ನು ಕಂಡ ಭಾರತೀಯ ಅಭಿಮಾನಿಗಳು ಚಾನೆಲ್ ವಿರುದ್ಧ ಕಿಡಿಗಾರಿದ್ದಾರೆ.

ಆಸ್ಟ್ರೇಲಿಯ-ಪಾಕಿಸ್ತಾನ ಸರಣಿ ಮುಗಿಯುತ್ತಿರುವಂತೆಯೇ, ಮನಮೋಹಕ ಆಸ್ಟ್ರೇಲಿಯ- ಭಾರತ ಸರಣಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳನ್ನು ನೆನಪಿಸುವುದಕ್ಕಾಗಿ ಚಾನೆಲ್ ನೇರಪ್ರಸಾರದ ವೇಳೆ ಪೋಸ್ಟರನ್ನು ಪ್ರದರ್ಶಿಸಿತ್ತು. ಆ ಪೋಸ್ಟರ್‌ ನಲ್ಲಿ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್‌ ರ ಚಿತ್ರವಿತ್ತಾದರೂ, ಇನ್ನೊಂದು ಬದಿಯಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾರ ಚಿತ್ರ ಇರಲಿಲ್ಲ. ಬದಲಿಗೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಚಿತ್ರವಿತ್ತು.

ಆಸ್ಟ್ರೇಲಿಯದಲ್ಲಿ ವಿರಾಟ್ ಕೊಹ್ಲಿ ಮಾಡಿರುವ ಉತ್ತಮ ಸಾಧನೆಯ ಹಿನ್ನೆಲೆಯಲ್ಲಿ, ಹೆಚ್ಚಿನ ಭಾರತೀಯ ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಸೆಳೆಯುವುದು ಚಾನೆಲ್‌ ನ ಉದ್ದೇಶವಾಗಿದ್ದಿರಬಹುದು. ಆಸ್ಟ್ರೇಲಿಯದಲ್ಲಿ ಕೊಹ್ಲಿ 13 ಟೆಸ್ಟ್‌ಗಳಲ್ಲಿ ಆಡಿ 54.08ರ ಸರಾಸರಿಯಲ್ಲಿ 1352 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು ಮತ್ತು ನಾಲ್ಕು ಅರ್ಧ ಶತಕಗಳಿವೆ.

ಆ ಪೋಸ್ಟರ್ ತಕ್ಷಣ ವೈರಲ್ ಆಯಿತು. ರೋಹಿತ್ ಶರ್ಮಾ ಹೆಸರನ್ನು ಕೈಬಿಟ್ಟಿರುವುದಕ್ಕಾಗಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚಾನೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಮನಗಂಡ ಚಾನೆಲ್ ಈ ಪೋಸ್ಟರನ್ನು ಕೈಬಿಡುವುದಾಗಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News